
ನವದೆಹಲಿ, ಜುಲೈ 9: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಹರಡುವಿಕೆಯಿಂದಾಗಿ ಭಾರತದ ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ (Global Capability Centres – GCCs) ಉದ್ಯೋಗಗಳು ನಶಿಸಿಹೋಗುತ್ತವೆ ಎನ್ನುವ ಆತಂಕವನ್ನು ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ತಳ್ಳಿಹಾಕಿದ್ದಾರೆ. ಅದೇ ವೇಳೆ, ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ. “ಎಐ ತಂತ್ರಜ್ಞಾನವು ಭಾರತದ ಜಿಸಿಸಿ ಉದ್ಯೋಗಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ, ಆದರೆ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳದೆ ಹಿಂದುಳಿಯುವ ಕಂಪನಿಗಳು ಭವಿಷ್ಯದಲ್ಲಿ ತೊಂದರೆ ಅನುಭವಿಸಲಿವೆ” ಎಂದು ಅವರು ಎಚ್ಚರಿಸಿದ್ದಾರೆ. ರಾಷ್ಟ್ರರಾಜಧಾನಿಯಲ್ಲಿ ಗುರುವಾರ ನಡೆದ ‘CII ಜಿಸಿಸಿ ಬಿಸಿನೆಸ್ ಶೃಂಗಸಭೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಜಾಗತಿಕ ಕಂಪನಿಗಳು ಆರಂಭದಲ್ಲಿ ಕಡಿಮೆ ವೆಚ್ಚದ (Low-cost back offices) ಕೆಲಸಗಳಿಗಾಗಿ ಭಾರತದಲ್ಲಿ ಸಾಮರ್ಥ್ಯ ಕೇಂದ್ರಗಳನ್ನು ಸ್ಥಾಪಿಸಿದ್ದವು. ಆದರೆ ಇಂದು ಕೇವಲ ವೆಚ್ಚದ ಕಾರಣಕ್ಕಲ್ಲ, ಭಾರತೀಯರ ತಾಂತ್ರಿಕ “ಸಾಮರ್ಥ್ಯ” (Capability) ನೋಡಿ ಇಲ್ಲಿಯೇ ಉಳಿದುಕೊಂಡಿವೆ. ಪ್ರಸ್ತುತ ಜಗತ್ತಿನ ಒಟ್ಟು ಜಿಸಿಸಿ ಕೇಂದ್ರಗಳ ಪೈಕಿ ಅರ್ಧದಷ್ಟು (ಸುಮಾರು 2,000ಕ್ಕೂ ಹೆಚ್ಚು ಕೇಂದ್ರಗಳು) ಭಾರತದಲ್ಲೇ ಇವೆ. ಭಾರತದಲ್ಲಿ ಗ್ಲೋಬಲ್ ಕೇಪಬಿಲಿಸಿ ಸೆಂಟರ್ಗಳು ದೊಡ್ಡ ಸದ್ದಿನೊಂದಿಗೆ ಬಂದದ್ದಲ್ಲ. ಒಂದೊಂದಾಗಿ ಬಂದು ಹಂತ ಹಂತವಾಗಿ ಸಂಖ್ಯೆ ಹೆಚ್ಚಿವೆ. ಇವತ್ತು ಇವು ಇನ್ನೋವೇಶನ್ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂಬುದನ್ನು ಅನಂತ ನಾಗೇಶ್ವರನ್ ಎತ್ತಿ ತೋರಿಸಿದ್ದಾರೆ.
ಇದನ್ನೂ ಓದಿ: ಟಿಸಿಎಸ್ನಲ್ಲಿ ಭರ್ಜರಿ ನೇಮಕಾತಿ; ಮೊದಲ ತ್ರೈಮಾಸಿಕದಲ್ಲಿ 9,200 ಉದ್ಯೋಗಿಗಳ ಸೇರ್ಪಡೆ; ಕಂಪನಿಯ ಆದಾಯವೂ ನಿರೀಕ್ಷೆಗಿಂತ ಹೆಚ್ಚು
ದಿನನಿತ್ಯದ ಒಂದೇ ರೀತಿಯ, ನಿಯಮಬದ್ಧವಾದ ಮತ್ತು ಪುನರಾವರ್ತಿತ ಕೆಲಸಗಳನ್ನು (Routine & Repetitive tasks) ಎಐ ಅತ್ಯಂತ ಸುಲಭವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ಮಾಡಬಲ್ಲದು. ಆದ್ದರಿಂದ, ಕೇವಲ ಇಂತಹ ಸರಳ ಕೆಲಸಗಳನ್ನೇ ನಂಬಿಕೊಂಡಿರುವ ಜಿಸಿಸಿ ಕೇಂದ್ರಗಳ ಮೌಲ್ಯಕ್ಕೆ ಖಂಡಿತವಾಗಿಯೂ ಎಐನಿಂದ ನಿಜವಾದ ಭೀತಿ ಇದೆ ಎಂದು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರು ಅಭಿಪ್ರಾಯಪಟ್ಟಿದ್ದಾರೆ.
“ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ತನ್ನಷ್ಟಕ್ಕೆ ತಾನೇ ಸೃಷ್ಟಿಯಾಗುವುದಿಲ್ಲ, ನಿಯೋಜನೆಗೊಳ್ಳುವುದಿಲ್ಲ ಅಥವಾ ಆಡಳಿತ ನಡೆಸುವುದಿಲ್ಲ. ಈ ಎಐ ಸಿಸ್ಟಂಗಳನ್ನು ಡಿಸೈನ್ ಮಾಡಲು, ಟ್ರೈನ್ ಮಾಡಲು, ಟೆಸ್ಟಿಂಗ್ ಕೈಗೊಳ್ಳಲು ಮತ್ತು ದೋಷಗಳನ್ನು ಸರಿಪಡಿಸಲು ಮತ್ತು ಅವುಗಳ ಜವಾಬ್ದಾರಿ ಹೊರಲು ಮನುಷ್ಯರ ಅಗತ್ಯವಿದೆ. ಈ ರೀತಿಯ ಉನ್ನತ ಮಟ್ಟದ ಕೆಲಸಗಳು ಭಾರತದಲ್ಲಿ ವೇಗವಾಗಿ ವಿಸ್ತರಿಸುತ್ತಿವೆ” ಎಂದು ನಾಗೇಶ್ವರನ್ ವಿವರಿಸಿದ್ದಾರೆ.
ಭಾರತೀಯ ಐಟಿ ಕ್ಷೇತ್ರವು ಸದ್ಯ ಉನ್ನತ ಸ್ಥಾನದಲ್ಲಿದೆ ಎಂದು ಬೀಗುವಂತಿಲ್ಲ. ಇತರ ದೇಶಗಳು ನಮ್ಮನ್ನು ಗಮನಿಸುತ್ತಿವೆ ಮತ್ತು ನಮ್ಮ ಮಾದರಿಯನ್ನು ನಕಲು ಮಾಡುತ್ತಿವೆ. ಜೊತೆಗೆ ದೇಶದಲ್ಲಿ ತಾಂತ್ರಿಕ ವೆಚ್ಚಗಳು ಹೆಚ್ಚುತ್ತಿದ್ದು, ನೈಪುಣ್ಯತೆ ಹೊಂದಿದ ಉದ್ಯೋಗಿಗಳ ಕೊರತೆಯೂ ಕಾಣಿಸುತ್ತಿದೆ ಎಂದು ವಿ. ಅನಂತ ನಾಗೇಶ್ವರನ್ ತಿಳಿಸಿದ್ದಾರೆ.
ಇದನ್ನೂ ಓದಿ: ವಿಕಿಪೀಡಿಯಾ ಸಹ-ಸ್ಥಾಪಕನಿಗೇ ನಿಷೇಧ: ‘ಅನಾಮಧೇಯ ಗುಂಪುಗಳ’ ಕೈಯಲ್ಲಿದೆ ಜಗತ್ತಿನ ಅತಿ ದೊಡ್ಡ ಜ್ಞಾನಕೋಶ
ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಪದವೀಧರರು ಹೊರಬರುತ್ತಿದ್ದರೂ, ಅವರಲ್ಲಿ ಅರ್ಧಕ್ಕಿಂತ ಕಡಿಮೆ ಜನ ಮಾತ್ರ ಕೆಲಸಕ್ಕೆ ನೇರ ಸಿದ್ಧರಿರುತ್ತಾರೆ (Job-ready). ಈ ಕೌಶಲ್ಯದ ಕಂದಕವನ್ನು (Skills Gap) ಮುಚ್ಚಲು ವಿಶ್ವವಿದ್ಯಾಲಯಗಳು, ಉದ್ಯಮ ರಂಗ ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದಿದ್ದಾರೆ ಮುಖ್ಯ ಆರ್ಥಿಕ ಸಲಹೆಗಾರರು.
ಎಐ ತಂತ್ರಜ್ಞಾನವನ್ನು ಒಂದು ಭೀತಿಯನ್ನಾಗಿ ನೋಡದೆ, ಮನುಷ್ಯರ ಮೌಲ್ಯವನ್ನು ಹೆಚ್ಚಿಸುವ ಉಪಕರಣವನ್ನಾಗಿ ಬಳಸಿಕೊಂಡರೆ ಭಾರತದ ಜಿಸಿಸಿ ಕೇಂದ್ರಗಳು ಕೇವಲ ಉಳಿಯುವುದಷ್ಟೇ ಅಲ್ಲ, ಜಾಗತಿಕವಾಗಿ ಎಐ ಯುಗವನ್ನು ಮುನ್ನಡೆಸಲಿವೆ ಎಂದು ನಾಗೇಶ್ವರನ್ ಆಶಯ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ