AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rate: ಇನ್ನು 3ರಿಂದ 5 ವರ್ಷದಲ್ಲಿ ಚಿನ್ನ 1 ಗ್ರಾಮ್​ಗೆ 8ರಿಂದ 13 ಸಾವಿರ ರೂಪಾಯಿ ಆಗುತ್ತದೆ ಎನ್ನುತ್ತಿದ್ದಾರೆ ಈ ಫಂಡ್ ಮ್ಯಾನೇಜರ್

ಮುಂದಿನ ಮೂರರಿಂದ 5 ವರ್ಷದಲ್ಲಿ ಒಂದು ಗ್ರಾಮ್ ಚಿನ್ನದ ದರವು 8 ರಿಂದ 13 ಸಾವಿರ ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಫಂಡ್ ಮ್ಯಾನೇಜರ್ ಹಿಂದೆ ನುಡಿದಿದ್ದು ಹಾಗೇ ಆಗಿದೆ.

Gold Rate: ಇನ್ನು 3ರಿಂದ 5 ವರ್ಷದಲ್ಲಿ ಚಿನ್ನ 1 ಗ್ರಾಮ್​ಗೆ 8ರಿಂದ 13 ಸಾವಿರ ರೂಪಾಯಿ ಆಗುತ್ತದೆ ಎನ್ನುತ್ತಿದ್ದಾರೆ ಈ ಫಂಡ್ ಮ್ಯಾನೇಜರ್
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Aug 02, 2021 | 4:49 PM

Share

ಕೇಂದ್ರ ಬ್ಯಾಂಕ್​ಗಳು ಕೊವಿಡ್-19 ಪ್ಯಾಕೇಜ್​ಗಳ (Covid-19 Package) ಘೋಷಣೆ ಕೊನೆ ಮಾಡಿದಂತೆ ಹೂಡಿಕೆದಾರರು ಈ ನಡೆಯ ಕಡೆಗೆ ಅಷ್ಟೇನೂ ಸಂತೃಪ್ತರಾಗಿಲ್ಲ. ಇದು ಆತಂಕದ ಮುನ್ಸೂಚನೆಯಂತೆ ಭಾವಿಸುತ್ತಿರುವ ಕಾರಣಕ್ಕೆ ಚಿನ್ನದ ದರದಲ್ಲಿ (Gold Rate) ಏರಿಕೆ ಕಂಡು, ಹೊಸ ಎತ್ತರಕ್ಕೆ ಏರಬಹುದು ಎಂದು ಫಂಡ್​ ಮ್ಯಾನೇಜರ್ ಒಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಅಂದಹಾಗೆ, ಕಳೆದ ವರ್ಷ ಚಿನ್ನ ದಾಖಲೆಯ ಎತ್ತರವನ್ನು ತಲುಪಿಕೊಳ್ಳುತ್ತದೆ ಎಂದು ಅಂದಾಜು ಮಾಡಿದ್ದ ಅದೇ ಫಂಡ್​ ಮ್ಯಾನೇಜರ್ ಹೇಳಿರುವ ಮಾತಿದು. ಡಿಯೆಗೋ ಪರಿಲ್ಲ ಆ ಫಂಡ ಮ್ಯಾನೇಜರ್ ಹೆಸರು. 25 ಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಕ್ವಾಡ್ರಿಗಾ ಇಗ್ನಿಯೋ ಫಂಡ್ ಅನ್ನು ಅವರು ನಿರ್ವಹಣೆ ಮಾಡುತ್ತಾರೆ. ಅವರು ಮಾತನಾಡಿ, ವಿಪರೀತ ಸಡಿಲ ಆರ್ಥಿಕ ಹಾಗೂ ವಿತ್ತೀಯ ನೀತಿಗಳಿಂದ ಆಗಬಹುದಾದ ದೀರ್ಘಕಾಲೀನ ಹಾನಿ ಬಗ್ಗೆ ವ್ಯಾಪಕವಾದ ಜಾಗೃತಿ ಇಲ್ಲ ಎಂದಿದ್ದಾರೆ.

ಕೃತಕವಾದ ಬಡ್ಡಿ ದರ ಇಳಿಕೆಯಿಂದ ಆಸ್ತಿಗಳ ಬೆಲೆಯ ತಾತ್ಕಾಲಿಕ ಏರಿಕೆಯನ್ನು ಸೃಷ್ಟಿಸಿದ್ದು, ಅದು ಒಡೆಯುವುದಕ್ಕೂ ಸಾಧ್ಯವಿಲ್ಲದಷ್ಟು ದೊಡ್ಡದಾಗಿದೆ. ತಮ್ಮ ಅವನತಿಯನ್ನು ಅಪಾಯಕ್ಕೆ ಒಡ್ಡದ ಹೊರತು ಸಹಜ ಸ್ಥಿತಿಗೆ ಮರಳುವುದು ಕೇಂದ್ರ ಬ್ಯಾಂಕ್​ಗಳಿಗೆ ಬಹಳ ಕಷ್ಟ ಎಂದಿದ್ದಾರೆ. ಇದೇ ಪರಿಲ್ಲ 2016ರಲ್ಲಿ, ಇನ್ನು 5 ವರ್ಷದಲ್ಲಿ ಚಿನ್ನದ ದರವು ದಾಖಲೆಯ ಎತ್ತರವನ್ನು ತಲುಪುತ್ತದೆ ಎಂದಿದ್ದರೆ. ತಮ್ಮ ದೃಷ್ಟಿಕೋನಕ್ಕೆ ಬದ್ಧವಾಗಿರುವುದಾಗಿ ಹೇಳಿರುವ ಫಂಡ್ ಮ್ಯಾನೇಜರ್, ಮುಂದಿನ ಮೂರರಿಂದ ಐದು ವರ್ಷದಲ್ಲಿ ಒಂದು ಔನ್ಸ್​ಗೆ (28.3495 ಗ್ರಾಮ್​) 3ರಿಂದ 5 ಸಾವಿರ ಅಮೆರಿಕನ್ ಡಾಲರ್ ಆಗಬಹುದು ಎಂದಿದ್ದಾರೆ. 2020ನೇ ಇಸವಿಯ ಆಗಸ್ಟ್​ ತಿಂಗಳಲ್ಲಿ ಚಿನ್ನದ ದರವು ಸಾರ್ವಕಾಲಿಕ ಎತ್ತರವಾದ 2075.47 ಯುಎಸ್​ಡಿ (ಒಂದು ಔನ್ಸ್) ತಲುಪಿತ್ತು. ಆ ಸಂದರ್ಭದಲ್ಲಿ ವಿಶ್ವದಾದ್ಯಂತ ಕೊವಿಡ್​-19 ಪ್ರಭಾವ ತೀವ್ರವಾಗಿತ್ತು. ಆದರೆ ಕಳೆದ ಕೆಲವು ವಾರದಿಂದ 1800 ಡಾಲರ್ ಸಮೀಪ ವಹಿವಾಟು ನಡೆಸುತ್ತಿದೆ.

ಜೂನ್​ ತಿಂಗಳಲ್ಲಿ ಅಮೆರಿಕದ ಫೆಡ್ ನೀತಿಯಲ್ಲಿ ಬದಲಾವಣೆ ಆದ ಮೇಲೆ ಚಿನ್ನದ ದರ ಏರಿಕೆ- ಇಳಿಕೆ ಮಧ್ಯೆ ಅಲುಗಾಡುತ್ತಿದೆ. ಇದರ ಜತೆಗೆ ಬಾಂಡ್ ವಾಪಸ್ ಖರೀದಿ ಮಾಡುತ್ತಿದೆ. ಹಣದುಬ್ಬರ ಪ್ರಮಾಣ ಹೆಚ್ಚಾದರೂ ಟ್ರೆಷರಿ ಏರಿಕೆ ಮಾರ್ಚ್​ ತಿಂಗಳಿಂದ ಮುಂದುವರಿದಿದೆ. 10 ವರ್ಷದ ರಿಯಲ್ ಯೀಲ್ಡ್ ದಾಖಲೆ ಪ್ರಮಾಣದಲ್ಲಿ ನೆಲ ಕಚ್ಚಿದೆ. ಇದರಿಂದೆಲ್ಲ ಚಿನ್ನದ ಕಡೆಗೆ ಆಕರ್ಷಣೆ ಹೆಚ್ಚುತ್ತದೆ. ಆದರೆ ಈಗಲೂ ಕಳೆದ ವರ್ಷದ ದಾಖಲೆ ಬೆಲೆಯಿಂದ ಚಿನ್ನದ ದರವು ಕಡಿಮೆಯೇ ಇದೆ. ಪರಿಲ್ಲ ಅವರಿಗೆ ಗೋಲ್ಡ್​ಮ್ಯಾನ್ ಸ್ಯಾಚ್ಸ್ ಇಂಕ್, ಬ್ಯಾಂಕ್ ಆಫ್ ಅಮೆರಿಕ ಮೆರಿಲ್​ ಲಿಂಚ್​ನಲ್ಲಿ ಕಾರ್ಯ ನಿರ್ವಹಿಸಿದ್ದು, ಚಿನ್ನದ ಟ್ರೇಡಿಂಗ್​ನಲ್ಲಿ 25 ವರ್ಷದ ಅನುಭವ ಇದೆ.

ಹಲವು ವಿಶ್ಲೇಷಕರು ಅಭಿಪ್ರಾಯ ಪಡುವಂತೆ ಮುಂಬರುವ ಕೆಲವು ವರ್ಷಗಳಲ್ಲಿ ನಿಧಾನವಾಗಿ ಚಿನ್ನ ಬೆಲೆ ಇಳಿಕೆ ಕಾಣಲಿದೆ. ಕೊರೊನಾ ಚೇತರಿಕೆ ನಂತರ ಫೆಡ್ ನೀತಿ ಹಾಗೂ ಪ್ರಬಲ ಡಾಲರ್​ ಚಿನ್ನದ ದರವನ್ನು ನಿರ್ಧರಿಸುತ್ತವೆ. ಈ ವರ್ಷದ ಕೊನೆಗೆ ಔನ್ಸ್​ಗೆ 1700 ಡಾಲರ್ ಆಗಬಹುದು. 2022ರಲ್ಲಿ ಇನ್ನೂ ಇಳಿಕೆ ಆಗಬಹುದು ಎನ್ನಲಾಗಿದೆ. ಜುಲೈನಲ್ಲಿ ಚಿನ್ನ 1807.01 ಡಾಲರ್ ಇದೆ. 2018ರಲ್ಲಿ ಆರಂಭವಾದ ಕ್ವಾಡ್ರಿಗಾ ಇಗ್ನಿಯೋ ಫಂಡ್ ಈಚೆಗೆ ಹಿನ್ನಡೆ ಅನುಭವಿಸಿದೆ. ಚಿನ್ನದ ಖರೀ ಹಾಗೂ ಈಕ್ವಿಟಿ ಮಾರಾಟದ ಸ್ಟ್ರಾಟೆಜಿಯಿಂದ ಹೀಗಾಗಿದೆ. ಆದರೆ ಕೆಲವು ಗ್ರಾಹಕರ ಒಳಹರಿವಿನಿಂದ ಹಾಗೇ ಸ್ಥಿರವಾಗಿ ಉಳಿದಿದೆ ಎನ್ನುತ್ತಾರೆ ಪರಿಲ್ಲ.

ಇದನ್ನೂ ಓದಿ: Gold Rate Today: ಇಂದು ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಸ್ಥಿರ! ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸಿ

(Gold Rate Likely To Touch Rs 8000 To Rs 13000 Per Gram In Next 3 To 5 Years According To Fund Manager Diego Parrilla)