ನವದೆಹಲಿ, ನವೆಂಬರ್ 20: ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿತ್ತು. ನಂತರ ಎರಡು ವಾರ ಬೆಲೆ ಸತತವಾಗಿ ಇಳಿದುಹೋಗಿತ್ತು. ಕಳೆದ ಎರಡು ದಿನಗಳಿಂದ ಮತ್ತೆ ಏರುಗತಿಯಲ್ಲಿದೆ. ಇದೇ ವೇಳೆ, ಗೋಲ್ಡ್ಮನ್ ಸ್ಯಾಕ್ಸ್ ಗ್ರೂಪ್ ಸಂಸ್ಥೆ ಮಾಡಿರುವ ಅಂದಾಜು ಪ್ರಕಾರ ಚಿನ್ನದ ಬೆಲೆ ಮುಂದಿನ ವರ್ಷ ಸಿಕ್ಕಾಪಟ್ಟೆ ಏರಲಿದೆ. ಹೊಸ ದಾಖಲೆ ಬೆಲೆಯನ್ನು ಚಿನ್ನ ಗಳಿಸುವ ಸಾಧ್ಯತೆ ಇದೆ.
ಮುಂದಿನ ವರ್ಷಾಂತ್ಯದೊಳಗೆ, ಅಂದರೆ 2025ರ ಡಿಸೆಂಬರ್ನೊಳಗೆ ಚಿನ್ನದ ಬೆಲೆ ಒಂದು ಔನ್ಸ್ಗೆ 3,000 ಡಾಲರ್ ಆಗಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ. ಇಲ್ಲಿ ಒಂದು ಔನ್ಸ್ ಎಂದರೆ 28.35 ಗ್ರಾಮ್. ಒಂದು ಗ್ರಾಮ್ ಚಿನ್ನಕ್ಕೆ 105.82 ಯುಎಸ್ ಡಾಲರ್ ಆಗುತ್ತದೆ. ಅಂದರೆ, ಸುಮಾರು 8,877 ರೂ. ಭಾರತದಲ್ಲಿ ಇದರ ಬೆಲೆ 9,000 ರೂ ದಾಟಬಹುದು.
ಜಾಗತಿಕವಾಗಿ ಚಿನ್ನದ ಬೆಲೆ ಏರಿಕೆ ಆಗಲು ಹಲವು ಕಾರಣಗಳಿರಬಹುದು. ಅದರಲ್ಲಿ ಪ್ರಮುಖವಾದುವು ಸೆಂಟ್ರಲ್ ಬ್ಯಾಂಕುಗಳಿಂದ ಚಿನ್ನದ ಖರೀದಿ ಮತ್ತು ಬಡ್ಡಿದರ ಕಡಿತ ಸಾಧ್ಯತೆ ಎನ್ನಲಾಗಿದೆ.
ಆರ್ಬಿಐ ಸೇರಿದಂತೆ ಜಗತ್ತಿನ ಹಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿಯ ಭರಾಟೆಯಲ್ಲಿವೆ. ಅನಿಶ್ಚಿತ ಸಂದರ್ಭಗಳಿಗೆ ಚಿನ್ನವನ್ನು ಶೇಖರಿಸಿಡುವ ಪರಿಪಾಟ ಇರುವುದರಿಂದ ಇದು ನಿರೀಕ್ಷಿತವೇ. ಹಾಗೆಯೇ, ಮುಂಬರುವ ಕೆಲ ತಿಂಗಳುಗಳಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರಗಳನ್ನು ಕಡಿಮೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಇದು ಚಿನ್ನಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಿಸಲಿದೆ.
ಇದನ್ನೂ ಓದಿ: ಕೆನಡಾದಲ್ಲಿ ಭಾರತ ಹಾಗೂ ಇತರ ವಿದೇಶೀ ವಿದ್ಯಾರ್ಥಿಗಳಿಗೆ ಕೆಲಸದ ಮಿತಿ 24 ಗಂಟೆಗಳಿಗೆ ಏರಿಕೆ
ಭಾರತದಲ್ಲಿ ಜಾಗತಿಕ ಬೆಲೆಗಳ ಜೊತೆಗೆ ಸ್ಥಳೀಯವಾಗಿ ಆಭರಣಗಳಿಗೆ ಬೇಡಿಕೆ ಹೆಚ್ಚುತ್ತಿರುವುದೂ ಕೂಡ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಚಿನ್ನದ ಬೆಲೆ ಮುಂದಿನ ವರ್ಷಾಂತ್ಯದಲ್ಲಿ ಭಾರತದಲ್ಲಿ 9,500 ರೂ ಗಡಿ ದಾಟಿದರೂ ಅಚ್ಚರಿ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ