Best Investments: ಚಿನ್ನ, ಬೆಳ್ಳಿ ಮತ್ತು ಷೇರು- ಹೂಡಿಕೆಗೆ ಈ ಮೂರರಲ್ಲಿ ಯಾವುದು ಉತ್ತಮ?

Investment specialist Rudra Murthy speaks in TV9 Podcast: ಚಿನ್ನದ ಬೆಲೆ ಕಳೆದ ನಾಲ್ಕು ದಶಕಗಳಲ್ಲಿ ಶೇ 7,000 ದಷ್ಟು ರಿಟರ್ನ್ಸ್ ಕೊಟ್ಟಿದೆ. ಬೆಳ್ಳಿ ಈ ಅವಧಿಯಲ್ಲಿ ಶೇ 8,000 ದಷ್ಟು ಲಾಭ ತಂದಿದೆ. ಇದೇ ವೇಳೆ ಸೆನ್ಸೆಕ್ಸ್ ಇಂಡೆಕ್ಸ್ 1986ರಿಂದ ಇಲ್ಲಿಯವರೆಗೆ ಶೇ. 82,000ದಷ್ಟು ರಿಟರ್ನ್ಸ್ ಕೊಟ್ಟಿದೆ ಎಂದು ಹೂಡಿಕೆ ತಜ್ಞ ರುದ್ರಮೂರ್ತಿ ಹೇಳುತ್ತಾರೆ. ಹೂಡಿಕೆ ಮಾಡುವವರು ದೀರ್ಘಾವಧಿಯಲ್ಲಿ ಯಾವ ಸರಕು ಹೇಗೆ ಸಾಧನೆ ಮಾಡಿದೆ ಎಂದು ಅವಲೋಕಿಸಬೇಕು ಎಂಬುದು ಅವರ ಸಲಹೆ.

Best Investments: ಚಿನ್ನ, ಬೆಳ್ಳಿ ಮತ್ತು ಷೇರು- ಹೂಡಿಕೆಗೆ ಈ ಮೂರರಲ್ಲಿ ಯಾವುದು ಉತ್ತಮ?
ರುದ್ರಮೂರ್ತಿ

Updated on: Jan 23, 2026 | 6:10 PM

ಬೆಂಗಳೂರು, ಜನವರಿ 23: ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ರಿಟರ್ನ್ಸ್ ಸಿಗುತ್ತದೆ? ಚಿನ್ನವೋ, ಬೆಳ್ಳಿಯೋ ಅಥವಾ ಷೇರುಗಳೋ ಎಂದು ಯಾರಾದರೂ ಕೇಳಿದರೆ ಏನು ಹೇಳಬಹುದು? ಕಳೆದ ಒಂದು ವರ್ಷದಿಂದ ಮಾತ್ರವೇ ಮಾರುಕಟ್ಟೆಯನ್ನು ಗಮನಿಸುತ್ತಿರುವವರು ಯಾರಾದರೂ ಇದ್ದರೆ ಅವರು ಥಟ್ಟನೆ ಹೇಳುವ ಹೆಸರು ಬೆಳ್ಳಿ ಅಥವಾ ಚಿನ್ನ. ಆದರೆ, ದೀರ್ಘಾವಧಿಯಲ್ಲಿ, ಅಂದರೆ ಐದಾರು ದಶಕಗಳಿಂದ ಮಾರುಕಟ್ಟೆಗಳಲ್ಲಿ ಇನ್ವೆಸ್ಟ್​ಮೆಂಟ್ ಮಾಡುತ್ತಿರುವವರನ್ನು ಕೇಳಿದಾಗ ಷೇರುಪೇಟೆಯ ಹೆಸರು ಸೂಚಿಸುತ್ತಾರೆ. ಟಿವಿ9 ಪಾಡ್​ಕ್ಯಾಸ್ಟ್​ವೊಂದರಲ್ಲಿ ಮಾತನಾಡುತ್ತಿದ್ದ ಹೂಡಿಕೆ ತಜ್ಞ ರುದ್ರಮೂರ್ತಿ (Rudra Murthy) ಅವರು ಅಂಕಿ ಅಂಶ ಸಮೇತ ಯಾವ್ಯಾವ ಹೂಡಿಕೆಗೆ ಎಷ್ಟು ರಿಟರ್ನ್ ಬಂದಿದೆ ಎಂಬುದರ ಮಾಹಿತಿ ನೀಡಿದ್ದಾರೆ.

1986ರಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಸೂಚ್ಯಂಕ 100 ಅಂಕಗಳೊಂದಿಗೆ ಆರಂಭವಾಯಿತು. ಇವತ್ತು ಅದು 88,000 ಅಂಕಗಳನ್ನು ದಾಟಿದೆ. ಈ 40 ವರ್ಷದಲ್ಲಿ ಅದು ಕೊಟ್ಟಿರುವ ರಿಟರ್ನ್ ಶೇ. 82,000. ಇದೇ ವೇಳೆ, ಚಿನ್ನದ ಬೆಲೆ 1986ರಲ್ಲಿ 10 ಗ್ರಾಮ್​ಗೆ 2,150 ರೂ ಇತ್ತು. ಇವತ್ತು ಅದು 1,50,000 ರೂ ದಾಟಿದೆ. ಬೆಳ್ಳಿ 1986ರಲ್ಲಿ ಒಂದು ಕಿಲೋಗೆ 4,000 ರೂ ಇತ್ತು. ಇವತ್ತು ಅದರ ಬೆಲೆ 3.60 ಲಕ್ಷ ರೂ ಆಗಿದೆ. ಚಿನ್ನ ಮತ್ತು ಬೆಳ್ಳಿ ಕ್ರಮವಾಗಿ ಶೇ. 7,000 ಮತ್ತು ಶೇ. 8,000 ರಿಟರ್ನ್ಸ್ ಕೊಟ್ಟಿವೆ. ಅಂದರೆ ಚಿನ್ನ ಮತ್ತು ಬೆಳ್ಳಿ ಕೊಟ್ಟಿರುವುದಕ್ಕಿಂತ ಸೆನ್ಸೆಕ್ಸ್ ಹತ್ತು ಪಟ್ಟು ಹೆಚ್ಚು ಲಾಭ ಕೊಟ್ಟಿದೆ ಎನ್ನುವ ಅಂಶವನ್ನು ರುದ್ರಮೂರ್ತಿ ತಿಳಿಸಿದ್ದಾರೆ.

ಹೂಡಿಕೆ ಮಾಡಬೇಕೆನ್ನುವವರು ದೀರ್ಘಾವಧಿಯಲ್ಲಿ ಯಾವ ಸರಕು ಎಷ್ಟು ಉತ್ತಮ ಸಾಧನೆ ತೋರಿದೆ ಎಂಬುದನ್ನು ಗಮನಿಸಿ ಹೂಡಿಕೆ ಮಾಡಬೇಕು ಎಂಬುದು ರುದ್ರ ಮೂರ್ತಿ ಅವರ ಸಲಹೆ.

ಇದನ್ನೂ ಓದಿ: Gold Rate Today Bangalore: 10 ಗ್ರಾಮ್ ಚಿನ್ನದ ಬೆಲೆ 5,400 ರೂ ಏರಿಕೆ

ಚಿನ್ನ, ಬೆಳ್ಳಿ ಬೆಲೆ ಏರಲು ಏನು ಕಾರಣ?

ರುದ್ರಮೂರ್ತಿ ಅವರ ಪ್ರಕಾರ ಚಿನ್ನದ ಬೆಲೆ ಏರಲು ಪ್ರಮುಖ ಕಾರಣಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ನೀತಿ ಒಂದು. ಜಾಗತಿಕ ಅನಿಶ್ಚಿತ ಸ್ಥಿತಿ ಮತ್ತೊಂದು ಕಾರಣ. ಸೆಂಟ್ರಲ್ ಬ್ಯಾಂಕುಗಳು ಹೆಚ್ಚೆಚ್ಚು ಚಿನ್ನ ಖರೀದಿಸುತ್ತಿರುವುದೂ ಮಗದೊಂದು ಕಾರಣ.

ಬೆಳ್ಳಿ ಬೆಲೆ ಇನ್ನೂ ಹೆಚ್ಚಿನ ವೇಗದಲ್ಲಿ ಏರಲು ಕಾರಣ ಎಂದರೆ ಅದರ ಕೈಗಾರಿಕೆ ಬಳಕೆ. ಎಐ ಪೋಷಿಸಲು ಬೇಕಾದ ಸರ್ವರ್, ಇವಿ ವಾಹನ, ಸೋಲಾರ್ ಪ್ಯಾನಲ್ ಇತ್ಯಾದಿಗಳ ತಯಾರಿಕೆಗೆ ಸಿಲ್ವರ್ ಅಗತ್ಯ. ಹೀಗಾಗಿ, ಬೆಳ್ಳಿ ಬೆಲೆ ಒಂದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಾಗಿದೆ ಎನ್ನುತ್ತಾರೆ ರುದ್ರಮೂರ್ತಿ.

ದೇಶದ ಜಿಡಿಪಿಗಿಂತ ಹೆಚ್ಚಿನ ಮೌಲ್ಯದ ಚಿನ್ನ ಹೊಂದಿದ್ದಾರೆ ಸಾಮಾನ್ಯ ಜನರು

ರುದ್ರಮೂರ್ತಿ ಮತ್ತೊಂದು ಕುತೂಹಲಕಾರಿ ಅಂಶವನ್ನು ಎತ್ತಿ ತೋರಿಸಿದ್ದಾರೆ. ಭಾರತದ ಸೆಂಟ್ರಲ್ ಬ್ಯಾಂಕ್ ಆದ ಆರ್​ಬಿಐ ಬಳಿ 880 ಟನ್ ಚಿನ್ನ ಇದೆ. ಆದರೆ, ಸಾಮಾನ್ಯ ಭಾರತೀಯ ಜನರ ಬಳಿ 34,500 ಟನ್ ಚಿನ್ನ ಇದೆ. ಇದನ್ನು ಇವತ್ತಿನ ಬೆಲೆಗೆ ಹೋಲಿಸಿದರೆ ಇವುಗಳ ಒಟ್ಟು ಮೌಲ್ಯ 5.7 ಟ್ರಿಲಿಯನ್ ಡಾಲರ್ ಆಗುತ್ತದೆ. ಭಾರತದ ಷೇರು ಮಾರುಕಟ್ಟೆಯ ಒಟ್ಟು ಗಾತ್ರ ಸುಮಾರು 4 ಟ್ರಿಲಿಯನ್ ಡಾಲರ್​ಗಿಂತ ತುಸು ಹೆಚ್ಚಿರಬಹುದು. ಜನರ ಬಳಿ ಇದಕ್ಕೂ ಹೆಚ್ಚಿನ ಮೌಲ್ಯದ ಚಿನ್ನ ಇದೆ.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆಗೆ 11 ವರ್ಷ; ಈವರೆಗೆ ಶುರುವಾಗಿದ್ದು ನಾಲ್ಕೂವರೆ ಕೋಟಿ ಅಕೌಂಟ್; ಸ್ಕೀಮ್ ಲಾಭಗಳೇನು?

ಕಾಪರ್, ಅಲೂಮಿನಿಯಮ್ ಮೇಲೆ ಹೂಡಿಕೆ ಮಾಡಬಹುದಾ?

ಕಾಪರ್ ಮತ್ತು ಅಲೂಮಿಯಮ್​ಗಳು ಭವಿಷ್ಯದ ಬೆಳ್ಳಿ ಎಂದು ರುದ್ರಮೂರ್ತಿ ಬಣ್ಣಿಸುತ್ತಾರೆ. ಚಿನ್ನ ಮತ್ತು ಸಿಲ್ವರ್​ಗಳಲ್ಲಿ ಇಟಿಎಫ್ ಮೂಲಕ ಹೂಡಿಕೆ ಮಾಡಬಹುದು. ಆದರೆ, ಕಾಪರ್ ಮತ್ತು ಅಲೂಮಿನಿಯಮ್​ಗೆ ಇಟಿಎಫ್​ಗಳಿಲ್ಲ. ತಾಮ್ರದ ಮೇಲೆ ಹೂಡಿಕೆ ಮಾಡಬೇಕೆನ್ನುವವರು ಹಿಂದೂಸ್ತಾನ್ ಕಾಪರ್ ಎನ್ನುವ ತಾಮ್ರ ತಯಾರಕ ಕಂಪನಿಯ ಷೇರಿನ ಮೇಲೆ ಹೂಡಿಕೆ ಮಾಡಬಹುದು. ನಾಲ್ಕೋ, ಹಿಂಡಾಲ್ಕೋ ಇತ್ಯಾದಿ ಅಲೂಮಿನಿಯಂ ತಯಾರಕ ಕಂಪನಿಗಳ ಷೇರುಗಳ ಮೇಲೆ ಬೇಕಾದರೆ ಹೂಡಿಕೆ ಮಾಡಬಹುದು. ಅಥವಾ ನಿಫ್ಟಿ ಮೆಟಲ್ ಇಂಡೆಕ್ಸ್​ನಲ್ಲಿ ಹೂಡಿಕೆ ಮಾಡಬಹುದು ಎಂದು ರುದ್ರ ಮೂರ್ತಿ ಅವರು ಟಿವಿ9 ಪಾಡ್​ಕ್ಯಾಸ್ಟ್​ನಲ್ಲಿ ಸಲಹೆ ಕೊಡುತ್ತಾರೆ.

ಮಾಲತೇಶ್ ಅವರೊಂದಿಗಿನ ಪಾಡ್​ಕ್ಯಾಸ್ಟ್​ನ ವಿಡಿಯೋ ಲಿಂಕ್ ಇಲ್ಲಿದೆ:

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:05 pm, Fri, 23 January 26