ನವದೆಹಲಿ: ಐಟಿ ಕಂಪನಿಗಳ ಉದ್ಯೋಗ ಕಡಿತದ ಸುದ್ದಿಗಳ ನಡುವೆಯೇ ಇದೀಗ ಗೋಲ್ಡ್ಮನ್ ಸ್ಯಾಕ್ಸ್ ಸಮೂಹ (Goldman Sachs Group) ವಿವಿಧ ಅಂಗಸಂಸ್ಥೆಗಳಿಂದ ಈ ವಾರ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಕಂಪನಿಯು ಕಠಿಣ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿದ್ದು, ಈ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ಸುಮಾರು 3,000 ಉದ್ಯೋಗಿಗಳನ್ನು ಈ ವಾರ ಕಂಪನಿ ವಜಾಗೊಳಿಸಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಅಂತಿಮ ಲೆಕ್ಕಾಚಾರ ಇನ್ನಷ್ಟೇ ಗೊತ್ತಾಗಬೇಕಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ‘ರಾಯಿಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ವಿಚಾರವಾಗಿ ತಕ್ಷಣಕ್ಕೆ ಪ್ರತಿಕ್ರಿಯಿಸಲು ಗೋಲ್ಡ್ಮನ್ ಸ್ಯಾಕ್ಸ್ ಸಮೂಹ ನಿರಾಕರಿಸಿದೆ.
ಒಟ್ಟಾರೆ 49,100 ಉದ್ಯೋಗಿಗಳ ಪೈಕಿ 3,200 ಮಂದಿಯನ್ನು ಮೂರನೇ ತ್ರೈಮಾಸಿಕ ಅವಧಿಯ ಒಳಗೆ ಗೋಲ್ಡ್ಮನ್ ಸ್ಯಾಕ್ಸ್ ವಜಾಗೊಳಿಸಲಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಕೊವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಾಗಿ ನೇಮಕಾತಿ ಮಾಡಿಕೊಂಡಿದ್ದರ ಪರಿಣಾಮವಿದು ಎಂದು ಮೂಲಗಳು ಹೇಳಿವೆ.
ಗೋಲ್ಡ್ಮನ್ ಸ್ಯಾಕ್ಸ್ ಸಮೂಹದ ಹೂಡಿಕೆ ಬ್ಯಾಂಕಿಂಗ್ ವಿಭಾಗದಿಂದಲೇ ಹೆಚ್ಚಿನ ಉದ್ಯೋಗ ಕಡಿತವಾಗಲಿದೆ. ಇತರ ವಿಭಾಗಗಳಲ್ಲಿಯೂ ಉದ್ಯೋಗ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಇದನ್ನು ಓದಿ: layoffs 2022 – 2023: ಕೆಲಸ ಕೆಲಸ… 2022ಕ್ಕಿಂತಲೂ ಈ ವರ್ಷ ಮಹಾಸಂಕಷ್ಟ?
ಹೂಡಿಕೆ ಬ್ಯಾಂಕಿಂಗ್ ಶುಲ್ಕದಲ್ಲಿ ಭಾರೀ ಇಳಿಕೆಯಾಗಿರುವುದು ಕಂಪನಿಯ ಆದಾಯಕ್ಕೆ ಹೊಡೆತ ನೀಡಿದೆ. 2022ರಲ್ಲಿ ಹೂಡಿಕೆ ಬ್ಯಾಂಕಿಂಗ್ ಶುಲ್ಕ 132.3 ಶತಕೋಟಿ ಡಾಲರ್ನಿಂದ 77 ಶತಕೋಟಿ ಡಾಲರ್ಗೆ ಕುಸಿದಿತ್ತು. ವಿಲೀನ ಮತ್ತು ಸ್ವಾಧೀನದ ಮೌಲ್ಯದಲ್ಲಿ 2020ರ ಡಿಸೆಂಬರ್ ವೇಳೆಗೇ 3.66 ಟ್ರಿಲಿಯನ್ ಡಾಲರ್ಗೆ, ಅಂದರೆ ಶೇಕಡಾ 37ರಷ್ಟು ಕುಸಿತವಾಗಿತ್ತು ಎಂದು ವರದಿ ತಿಳಿಸಿದೆ.
ಮೆಕ್ಡೊನಾಲ್ಡ್, ವಿಮಿಯೊ, ಸೇಲ್ಸ್ಫೋರ್ಸ್, ಮೆಟಾ, ಟ್ವಿಟರ್, ಅಮೆಜಾನ್ ಮತ್ತಿತರ ಕಂಪನಿಗಳ ಉದ್ಯೋಗ ಕಡಿತದ ನಡುವೆಯೇ ಗೋಲ್ಡ್ಮನ್ ಸ್ಯಾಕ್ಸ್ ಕೂಡ ಉದ್ಯೋಗ ಕಡಿತದ ಮೊರೆ ಹೋಗಲು ಮುಂದಾಗಿದೆ. ಅಮೆಜಾನ್ ಮತ್ತು ಸೇಲ್ಸ್ಫೋರ್ಸ್ ಕಂಪನಿಗಳು 2023ರಲ್ಲಿ ತಲಾ 8 ಸಾವಿರ ಸಿಬ್ಬಂದಿ ಕಡಿತ ಮಾಡುತ್ತಿರುವ ಬಗ್ಗೆ ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಈ ವರ್ಷ ಜನವರಿ 1ರಿಂದ 5ರವರೆಗೆ ಜಾಗತಿಕವಾಗಿ ಟೆಕ್ ಕಂಪನಿಗಳ 28 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದಕೊಂಡಿದ್ದಾರೆ ಎಂದು ಲೇ ಆಫ್ಸ್ ಎನ್ನುವ ಸ್ಟಾರ್ಟಪ್ ಕಂಪನಿಯ ವೆಬ್ಸೈಟ್ ಟ್ರ್ಯಾಕರ್ ಅಂಕಿಅಂಶಗಳಿಂದ ತಿಳಿದುಬಂದಿತ್ತು.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 am, Mon, 9 January 23