ಹಣ
ಇನ್ಷೂರೆನ್ಸ್ ಏಜೆಂಟ್‌ಗಳು ಸಾಮಾನ್ಯವಾಗಿ ಹೆಚ್ಚಿನ ಕಮಿಷನ್ (Commission) ತಂದುಕೊಡುವ ಉತ್ಪನ್ನಗಳನ್ನು ಮಾರಾಟ ಮಾಡಲು ಆಸಕ್ತಿ ತೋರಿಸುವುದುಂಟು. ಇದಕ್ಕೆ ಉದಾಹರಣೆ, ಟರ್ಮ್ ಇನ್ಷೂರೆನ್ಸ್ ಉತ್ಪನ್ನಗಳು. ಟರ್ಮ್ ಲೈಫ್ ಇನ್ಷೂರೆನ್ಸ್ನಲ್ಲಿ ವಿಮೆ ಮೊತ್ತ ದೊಡ್ಡದಿದ್ದರೂ ಪ್ರೀಮಿಯಮ್ ಬಹಳ ಕಡಿಮೆ. ಇದರಿಂದ ಏಜೆಂಟ್ಸ್ಗೆ ಸಿಗುವ ಕಮಿಷನ್ ಬಹಳ ಅಲ್ಪ. ಹೀಗಾಗಿ, ಇನ್ಷೂರೆನ್ಸ್ ಏಜೆಂಟ್‌ಗಳು ಎಂಡೋಮೆಂಟ್ ಪ್ಲಾನ್ಗಳನ್ನು ಹೆಚ್ಚಾಗಿ ಶಿಫಾರಸು ಮಾಡುತ್ತಾರೆ ಹೊರತು ಟರ್ಮ್ ಇನ್ಷೂರೆನ್ಸ್ನಲ್ಲ. ಇದು ಇನ್ಷೂರೆನ್ಸ್ ಮಾತ್ರವಲ್ಲ, ಮ್ಯೂಚುವಲ್ ಫಂಡ್ ಸೇರಿ ಅನೇಕ ಹೂಡಿಕೆ ಉತ್ಪನ್ನಗಳಿಗೆ ಇದು ಅನ್ವಯ ಆಗುತ್ತದೆ. ಏಜೆಂಟ್ಗಳೋ ಅಥವಾ ಹಣಕಾಸು ಸಲಹೆಗಾರರೆನಿಸಿಕೊಂಡವರೋ ನೀಡುವ ಶಿಫಾರಸುಗಳಲ್ಲಿ ಅವರಿಗೆ ಕಮಿಷನ್ ಅಥವಾ ಲಾಭದ ಉಮೇದು ಹೆಚ್ಚಿರಬಹುದು. ಅಧಿಕ ರಿಟರ್ನ್ಸ್ ಸಿಗುತ್ತದೆ ಎಂದು ಅವರು ಹೇಳುವ ಹಣಕಾಸು ಉತ್ಪನ್ನಗಳಲ್ಲಿ ಹೂಡಿಕೆ ಮಾಡಿದರೆ, ಒಳ ವೆಚ್ಚಗಳು, ನಿಯಮಗಳು ಬೇರೆಯೇ ಇರುತ್ತವೆ. ಇವು ನಿರೀಕ್ಷಿತ ರಿಟರ್ನ್ಸ್ ತರದೇ ಹೋಗಬಹುದು. ಆದರೆ, ಏಜೆಂಟ್‌ಗಳು ಹೆಚ್ಚಾಗಿ ಶಿಫಾರಸು ಮಾಡದ ಮತ್ತು ಉತ್ತಮ ಆದಾಯ ತರುವ ಕೆಲ ಹೂಡಿಕೆ ಮಾರ್ಗಗಳು ಈ ಕೆಳಕಂಡಂತಿವೆ:
- ಡೈರೆಕ್ಟ್ ಮ್ಯೂಚುಯಲ್ ಫಂಡ್ಸ್: ರೆಗ್ಯುಲರ್ ಫಂಡ್‌ಗಳಲ್ಲಿ ಏಜೆಂಟ್‌ಗಳಿಗೆ ವಾರ್ಷಿಕ ಟ್ರೇಲ್ ಕಮಿಷನ್ ಸಿಗುತ್ತದೆ. ಆದರೆ ಡೈರೆಕ್ಟ್ ಪ್ಲಾನ್‌ಗಳಲ್ಲಿ (Direct Mutual Funds) ಮಧ್ಯವರ್ತಿಗಳೇ ಇಲ್ಲದಿರುವುದರಿಂದ ಎಕ್ಸ್‌ಪೆನ್ಸ್ ರೇಷಿಯೋ (Expense Ratio) ಕಡಿಮೆಯಿದ್ದು, ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಹೆಚ್ಚಿನ ಲಾಭ ಸಿಗುತ್ತದೆ.
- ಪ್ಯೂರ್ ಟರ್ಮ್ ಇನ್ಶೂರೆನ್ಸ್: ಎಂಡೋಮೆಂಟ್ ಅಥವಾ ಯುಲಿಪ್ (ULIP) ಯೋಜನೆಗಳಿಗೆ ಹೋಲಿಸಿದರೆ ಟರ್ಮ್ ಪ್ಲಾನ್‌ಗಳಲ್ಲಿ (Pure Term Insurance) ಕಮಿಷನ್ ಪ್ರಮಾಣ ತೀರಾ ಕಡಿಮೆ. ಕಡಿಮೆ ಪ್ರೀಮಿಯಂನಲ್ಲಿ ಗರಿಷ್ಠ ಜೀವ ರಕ್ಷಣೆ ನೀಡುವುದರಿಂದ ಏಜೆಂಟ್‌ಗಳು ಇದನ್ನು ಶಿಫಾರಸು ಮಾಡಲು ಹೋಗುವುದಿಲ್ಲ.
- ಸೋವರನ್ ಗೋಲ್ಡ್ ಬಾಂಡ್: ಭೌತಿಕ ಚಿನ್ನ ಅಥವಾ ಗೋಲ್ಡ್ ಫಂಡ್‌ಗಳಿಗೆ ಹೋಲಿಸಿದರೆ ಆರ್‌ಬಿಐ (RBI) ಜಾರಿಗೊಳಿಸುವ ಎಸ್‌ಜಿಬಿಗಳಲ್ಲಿ (Sovereign Gold Bonds – SGB) ಕಮಿಷನ್ ತೀರಾ ಕಡಿಮೆ. ಸಾಲದ್ದಕ್ಕೆ ವಾರ್ಷಿಕ 2.5% ಬಡ್ಡಿ ಮತ್ತು ತೆರಿಗೆ ರಹಿತ ಬಂಡವಾಳ ಲಾಭ ದೊರೆಯುತ್ತದೆ.
- ಪಿಪಿಎಫ್: ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund – PPF) ಕೇಂದ್ರ ಸರ್ಕಾರದ ಸಂಪೂರ್ಣ ಸುರಕ್ಷಿತ ಹೂಡಿಕೆ ಯೋಜನೆಯಾಗಿದ್ದರೂ, ಏಜೆಂಟ್‌ಗಳಿಗೆ ಇದರಲ್ಲಿ ಯಾವುದೇ ಕಮಿಷನ್ ಸಿಗುವುದಿಲ್ಲ.
- ಎನ್‌ಪಿಎಸ್ ಡೈರೆಕ್ಟ್: ನಿವೃತ್ತಿ ಜೀವನಕ್ಕಾಗಿ ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಎನ್‌ಪಿಎಸ್ (National Pension System – NPS) ಯೋಜನೆಯಲ್ಲಿ ಕಮಿಷನ್ ಮಾರ್ಜಿನ್ ಅತ್ಯಲ್ಪ.
- ಇಟಿಎಫ್: ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಖರೀದಿಸಬಹುದಾದ ಇಂಡೆಕ್ಸ್ ಇಟಿಎಫ್‌ಗಳಲ್ಲಿ (Exchange Traded Funds – ETFs) ಮಧ್ಯವರ್ತಿಗಳಿಗೆ ಕಮಿಷನ್ ಸಿಗುವುದಿಲ್ಲ.
- ಆರ್‌ಬಿಐ ಬಾಂಡ್‌ಗಳು: ಸುರಕ್ಷಿತ ಸ್ಥಿರ ಆದಾಯ ತಂದುಕೊಡುವ ಸರ್ಕಾರಿ ಬಾಂಡ್‌ಗಳಲ್ಲಿ ಕಮಿಷನ್ ಇಲ್ಲದಿರುವುದರಿಂದ ಏಜೆಂಟ್‌ಗಳು ಖಾಸಗಿ ಫಿಕ್ಸ್ಡ್ ಡೆಪಾಸಿಟ್‌ಗಳತ್ತ ಗಮನ ಹರಿಸುತ್ತಾರೆ.
- ಟ್ರೆಶರಿ ಬಿಲ್‌ಗಳು ಮತ್ತು ಜಿ-ಸೆಕ್ಯೂರಿಟಿಸ್: ಆರ್‌ಬಿಐ ರಿಟೇಲ್ ಡೈರೆಕ್ಟ್ ಪೋರ್ಟಲ್ ಮೂಲಕ ಉಚಿತವಾಗಿ ಖರೀದಿಸಬಹುದಾದ ಸರ್ಕಾರಿ ಸೆಕ್ಯೂರಿಟಿಗಳಲ್ಲಿ (T-Bills & G-Secs) ಏಜೆಂಟ್‌ಗಳ ಪಾತ್ರವಿರುವುದಿಲ್ಲ.
- ಕಡಿಮೆ ವೆಚ್ಚದ ಇಂಡೆಕ್ಸ್ ಫಂಡ್‌ಗಳು: ಆಕ್ಟಿವ್ ಫಂಡ್‌ಗಳಿಗೆ ಹೋಲಿಸಿದರೆ ಪ್ಯಾಸಿವ್ ಇಂಡೆಕ್ಸ್ ಫಂಡ್‌ಗಳಲ್ಲಿ (Index Funds) ಫಂಡ್ ಮ್ಯಾನೇಜ್‌ಮೆಂಟ್ ಫೀಸ್ ಮತ್ತು ಕಮಿಷನ್ ಎರಡೂ ತೀರಾ ಕಡಿಮೆ.
ಇದನ್ನೂ ಓದಿ: ಮಾನವರನ್ನು ನುಂಗಿ ನೀರು ಕುಡಿಯುತ್ತದಾ ಎಐ? ಓಪನ್ಎಐ, ಆಂಥ್ರೋಪಿಕ್ ರಿಸರ್ಚರ್ನಿಂದ ಭಯಾನಕ ಸತ್ಯ ಬೆಳಕಿಗೆ
ಹೂಡಿಕೆದಾರರು ಗಮನಿಸಬೇಕಾದ ಅಂಶ
ಹಣಕಾಸು ಯೋಜನೆಯನ್ನು ರೂಪಿಸಿಕೊಳ್ಳುವಾಗ ಕೇವಲ ಏಜೆಂಟ್‌ಗಳ ಸಲಹೆಯನ್ನಷ್ಟೇ ನೆಚ್ಚಿಕೊಳ್ಳದೆ, ಡೈರೆಕ್ಟ್ ಪ್ಲಾನ್‌ಗಳು ಹಾಗೂ ಸರ್ಕಾರಿ ಬೆಂಬಲಿತ ಆಸ್ತಿಗಳ (Assets) ಕುರಿತು ಸ್ವತಃ ಸಂಶೋಧನೆ ನಡೆಸಿ ನಿರ್ಧಾರ ಕೈಗೊಳ್ಳುವುದು ಸೂಕ್ತ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ