ನವದೆಹಲಿ: ಹೂಡಿಕೆದಾರರಿಗೆ ಉತ್ತಮ ಗಳಿಕೆ ತಂದುಕೊಡುವ ನಿಟ್ಟಿನಲ್ಲಿ ಉತ್ಪನ್ನ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಲು ಜೀವ ವಿಮಾ ಸಂಸ್ಥೆ ಎಲ್ಐಸಿಗೆ (LIC) ಉತ್ತೇಜನ ನೀಡಲು ಸರ್ಕಾರ ಮುಂದಾಗಿದೆ. ತನ್ನ ಸಂಪೂರ್ಣ ಬೆಳವಣಿಗೆಯ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ಹೂಡಿಕೆದಾರರಿಗೆ ಉತ್ತಮ ಆದಾಯವನ್ನು ತಂದುಕೊಡುವಂತೆ ಮಾಡಲು ಎಲ್ಐಸಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ ಸರ್ಕಾರ ನಿರತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೀವ ವಿಮಾ ನಿಗಮವು ಷೇರು ಮಾರುಕಟ್ಟೆಯಲ್ಲಿ 949 ರೂ. ಆರಂಭಿಕ ಮುಖಬೆಲೆಯೊಂದಿಗೆ ಮೇ 17ರಂದು ಷೇರು ವಹಿವಾಟು (ಐಪಿಒ ಅಥವಾ ಇನೀಷಿಯಲ್ ಪಬ್ಲಿಕ್ ಆಫರಿಂಗ್) ಆರಂಭಿಸಿತ್ತು. ಆ ಬಳಿಕ ಅದಕ್ಕಿಂತ ಕಡಿಮೆ ಬೆಲೆಯಲ್ಲೇ ಟ್ರೇಡಿಂಗ್ ನಡೆಸುತ್ತಿದೆ. 872 ರೂ. ಮುಖಬೆಲೆಯೊಂದಿಗೆ ಎಲ್ಐಸಿ ಷೇರನ್ನು ಎನ್ಎಸ್ಇಯಲ್ಲಿ ಪರಿಚಯಿಸಲಾಗಿತ್ತು.
ಮಂಗಳವಾರದ ವಹಿವಾಟಿನ ಕೊನೆಯಲ್ಲಿ ಎಲ್ಐಸಿ ಷೇರು 595.50 ರೂ. ಮುಖಬೆಲೆಯೊಂದಿಗೆ ವಹಿವಾಟು ನಡೆಸುತ್ತಿದೆ. ಇದು ಸೋಮವಾರದ ವಹಿವಾಟಿನ ಮುಕ್ತಾಯದ ಸಂದರ್ಭದಲ್ಲಿದ್ದ ಮೌಲ್ಯಕ್ಕಿಂತಲೂ ಶೇಕಡಾ 0.72 ಕಡಿಮೆಯಾಗಿದೆ.
ಇದನ್ನೂ ಓದಿ: LIC Pension Plus: ಹೊಸ ಪಿಂಚಣಿ ಯೋಜನೆ ಪರಿಚಯಿಸಿದ ಎಲ್ಐಸಿ; ಅರ್ಹತೆಗಳು ಮತ್ತು ವೈಶಿಷ್ಟ್ಯಗಳು ಇಲ್ಲಿವೆ
ವಿದೇಶಿ ಬ್ರೋಕರೇಜ್ಗಳು ಮುಂದಿನ ವರ್ಷಕ್ಕೆ ಎಲ್ಐಸಿಗೆ ಉತ್ತಮ ದರದ ನಿರೀಕ್ಷೆಯಲ್ಲಿದ್ದು, ವಿಮಾ ಕಂಪನಿಯು ಮಧ್ಯಮ ಅವಧಿಗೆ ಉತ್ತಮ ಮಾರುಕಟ್ಟೆ ಸಾಮರ್ಥ್ಯ ಹೊಂದಿದೆ ಎಂದು ಭಾವಿಸಿದ್ದಾರೆ. ಅತಿ ಹೆಚ್ಚಿನ ರಿಸ್ಕ್ ಅನ್ನು ಕಡೆಗಣಿಸಿ ಉತ್ತಮ ‘ರಿಟರ್ನ್ ಆನ್ ಎಂಬೆಡೆಡ್ ವ್ಯಾಲ್ಯೂ (ಕಂಪನಿಯ ಬಂಡವಾಳ, ಸರ್ಪ್ಲಸ್ಗೆ ಭವಿಷ್ಯದ ಲಾಭಗಳ ಪ್ರಸಕ್ತ ಮೌಲ್ಯವನ್ನು ಲೆಕ್ಕ ಹಾಕುವುದು)’ ನಿರೀಕ್ಷೆಯಲ್ಲಿದ್ದಾರೆ.
ಅಕ್ಟೋಬರ್ 14ಕ್ಕೆ ಪ್ರಕಟವಾದ ಸಿಟಿ ಸಂಶೋಧನಾ ವರದಿಯಲ್ಲಿ ಎಲ್ಐಸಿ ಭವಿಷ್ಯದಲ್ಲಿ ಉತ್ತಮ ಗಳಿಕೆ ತರಬಲ್ಲದು ಎಂದು ಹೇಳಲಾಗಿದ್ದು, 1000 ರೂ. ಟಾರ್ಗೆಟ್ ಪ್ರೈಸ್ ನಿಗದಿಪಡಿಸಲಾಗಿದೆ.
ಹೂಡಿಕೆದಾರರಿಗೆ ಉತ್ತಮ ಸಂಪತ್ತು ಮರಳಿಸಲು ಗಮನಹರಿಸಬೇಕು. ಉತ್ತಮವಾಗಿ ಕಾರ್ಯನಿರ್ವಹಿಸದ ಉತ್ಪನ್ನಗಳ ಲಾಭದಾಯಕತೆಯನ್ನು ಸುಧಾರಿಸುವುದಕ್ಕಾಗಿ ಯೋಜನೆಗಳನ್ನು ರೂಪಿಸಿ ಅವುಗಳ ಮೇಲೆ ಗಮನ ಕೇಂದ್ರೀಕರಿಸುವಂತೆ ಹಣಕಾಸು ಸಚಿವಾಲಯವು ಇತ್ತೀಚೆಗೆ ನಡೆದ ಪರಾಮರ್ಶೆ ಸಭೆಯಲ್ಲಿ ಎಲ್ಐಸಿಗೆ ಸೂಚಿಸಿತ್ತು.
ವರ್ಷ ಹಿಂದಿನ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷ ಎಲ್ಐಸಿ ನಿವ್ವಳ ಲಾಭ 682.88 ಕೋಟಿ ರೂ.ಗೆ ಹೆಚ್ಚಳವಾಗಿತ್ತು. ಕಳೆದ ವರ್ಷ ಇದು 2.94 ಕೋಟಿ ರೂ. ಆಗಿತ್ತು.
ಎಲ್ಐಸಿಯ ಐಪಿಒ 902-949 ರೂ. ಮುಖಬೆಲೆಯೊಂದಿಗೆ ಆರಂಭಗೊಂಡಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 21,000 ಕೋಟಿ ರೂ. ಹರಿದುಬಂದಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ