Electricity cost: ಸರ್ಕಾರದಿಂದ ಎಫ್​​ಜಿಡಿ ನಿಯಮದಲ್ಲಿ ಸಡಿಲಿಕೆ; ವಿದ್ಯುತ್ ದರ ಯುನಿಟ್​​ಗೆ 25 ಪೈಸೆ ಇಳಿಕೆ ಸಾಧ್ಯತೆ

Flue-Gas Desulphurization rule on coal based power plants: ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಫ್ಲ್ಯೂ ಗ್ಯಾಸ್ ಡೀಸಲ್ಫರೈಸೇಶನ್ ಸಿಸ್ಟಂ ಅಳವಡಿಕೆ ವಿಚಾರದಲ್ಲಿ ಸರ್ಕಾರ ನಿಮಯ ಸಡಿಲಿಕೆ ಮಾಡಿದೆ. 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ನಗರಗಳಿಂದ 10 ಕಿಮೀ ವ್ಯಾಪ್ತಿಯ ಹೊರಗೆ ಇರುವ ಘಟಕಗಳು ಎಫ್​ಜಿಡಿ ಅಳವಡಿಸುವ ಅಗತ್ಯ ಇಲ್ಲ. ಹೆಚ್ಚಿನ ವಿದ್ಯುತ್ ಘಟಕಗಳಿಗೆ ಇದರಿಂದ ಅನುಕೂಲವಾಗುತ್ತದೆ. ಪರಿಣಾಮವಾಗಿ ವಿದ್ಯುತ್ ಉತ್ಪಾದನಾ ವೆಚ್ಚ ಕಡಿಮೆ ಆಗುತ್ತದೆ.

Electricity cost: ಸರ್ಕಾರದಿಂದ ಎಫ್​​ಜಿಡಿ ನಿಯಮದಲ್ಲಿ ಸಡಿಲಿಕೆ; ವಿದ್ಯುತ್ ದರ ಯುನಿಟ್​​ಗೆ 25 ಪೈಸೆ ಇಳಿಕೆ ಸಾಧ್ಯತೆ
ವಿದ್ಯುತ್

Updated on: Jul 14, 2025 | 12:04 PM

ನವದೆಹಲಿ, ಜುಲೈ 14: ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ (coal based power plants) ಸಲ್ಫರ್ ಹೊರಸೂಸುವಿಕೆಯ (sulphur emission) ನಿಯಮಗಳಲ್ಲಿ ಸರ್ಕಾರ ಸಡಿಲಿಕೆ ಮಾಡಿದೆ. ಈ ಕ್ರಮದಿಂದಾಗಿ ಗ್ರಾಹಕರಿಗೆ ಒಂದು ಯುನಿಟ್ ವಿದ್ಯುತ್ ದರ 25-30 ಪೈಸೆಯಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಐಐಟಿ ದೆಹಲಿ, ಸಿಎಸ್​ಐಆರ್-ಎನ್​ಇಇಆರ್​ಇ, ಎನ್​ಐಎಎಸ್ ಸಂಸ್ಥೆಗಳಿಂದ ನಡೆದ ವಿವಿಧ ಅಧ್ಯಯನಗಳನ್ನು ಗಮನಿಸಿ ಮಾಲಿನ್ಯ ವಿಚಾರವನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರದ ಸಲ್ಫರ್ ಎಮಿಷನ್ ನಿಯಮದಲ್ಲಿ ಬದಲಾವಣೆ ಏನು?

ಕಲ್ಲಿದ್ದಲು ಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಫ್ಲ್ಯೂ ಗ್ಯಾಸ್ ಡೀಸಲ್ಫರೈಸೇಶನ್ (ಎಫ್​ಜಿಡಿ) ವ್ಯವಸ್ಥೆ ಅಳವಡಿಸಬೇಕೆಂದು 2015ರಲ್ಲಿ ಸರ್ಕಾರವು ನಿರ್ಬಂಧ ಹಾಕಿತ್ತು. ಈಗ ಆ ನಿಯಮದಲ್ಲಿ ಒಂದಷ್ಟು ಬದಲಾವಣೆ ಮಾಡಿದೆ. ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳಿಂದ 10 ಕಿಮೀ ವ್ಯಾಪ್ತಿಯೊಳಗೆ ಇರುವ ವಿದ್ಯುತ್ ಘಟಕಗಳು ಮಾತ್ರವೇ ಕಡ್ಡಾಯವಾಗಿ ಎಫ್​ಜಿಡಿ ಸಿಸ್ಟಂ ಹಾಕಿರಬೇಕು ಎಂದು ಗೆಜೆಟ್ ನೋಟಿಫಿಕೇಶನ್​​ನಲ್ಲಿ ತಿಳಿಸಲಾಗಿದೆ.

ಏನಿದು ಫ್ಲ್ಯೂ ಗ್ಯಾಸ್ ಡೀಸಲ್ಫರೈಸೇಶನ್?

ಕಲ್ಲಿದ್ದಲನ್ನು ಸುಡುವಾಗ ಫ್ಲ್ಯೂ ಗ್ಯಾಸ್ ಅಥವಾ ಧೂಮನಾಳ ಅನಿಲ ಹೊರಬರುತ್ತದೆ. ಈ ಫ್ಲ್ಯೂ ಗ್ಯಾಸ್​​ನಲ್ಲಿ ಮಾಲಿನ್ಯಕಾರಕ ಸಲ್ಫರ್ ಡೈ ಆಕ್ಸೈಡ್ ಅಥವಾ ಗಂಧಕ ಡೈ ಆಕ್ಸೈಡ್ ಅನಿಲ ಇರುತ್ತದೆ. ಫ್ಲ್ಯೂ ಗ್ಯಾಸ್​ನಿಂದ ಈ ಸಲ್ಫರ್ ಡೈ ಆಕ್ಸೈಡ್ ಅನ್ನು ತೆಗೆಯಲು ಎಫ್​ಜಿಡಿ ಬಳಸಲಾಗುತ್ತದೆ.

ಇದನ್ನೂ ಓದಿ: ಭಾರತದ ಐಫೋನ್ ಫ್ಯಾಕ್ಟರಿಗಳಿಂದ ಚೀನೀಯರ ಗೋಬ್ಯಾಕ್; ಆ್ಯಪಲ್ ಬಳಿ ಪ್ಲಾನ್ ಬಿ?

ಫ್ಲ್ಯೂ ಗ್ಯಾಸ್​ಗೆ ಲೈಮ್​ಸ್ಟೋನ್ ಕೆಸರನ್ನು ಎರಚಿದಾಗ ಅದು ಗ್ಯಾಸ್​ನಲ್ಲಿ ಬೆರೆತಿರುವ ಗಂಧಕ ಡೈ ಆಕ್ಸೈಡ್ ಅನ್ನು ಪ್ರಭಾವಗೊಳಿಸುತ್ತದೆ. ಅದನ್ನು ಜಿಪ್ಸಮ್ ಆಗಿ ಪರಿವರ್ತಿಸುತ್ತದೆ. ಈ ಜಿಪ್ಸಮ್ ಅನ್ನು ಸಿಮೆಂಟ್ ಇತ್ಯಾದಿ ತಯಾರಿಕೆಗೆ ಬಳಸಲಾಗುತ್ತದೆ.

ಎಫ್​ಜಿಡಿ ನಿಯಮ ಸಡಿಲಿಕೆಯಿಂದ ಪರಿಸರಕ್ಕೆ ಮಾರಕವಾಗುವುದಿಲ್ಲವಾ?

ವಿವಿಧ ಅಧ್ಯಯನದ ಪ್ರಕಾರ ಭಾರತದ ಹೆಚ್ಚಿನ ನಗರಗಳಲ್ಲಿ ಸಲ್ಫರ್ ಡೈ ಆಕ್ಸೈಡ್ ಮಟ್ಟವು ನ್ಯಾಕ್ಸ್ (NAAQS- National Ambient Air Quality Standards) ಪ್ರಮಾಣಿತ ಮಟ್ಟಕ್ಕಿಂತ ಕಡಿಮೆ ಇದೆ. ಗಂಧಕ ಡೈ ಆಕ್ಸೈಡ್ ಪ್ರಮಾಣವು ವಾತಾವರಣದಲ್ಲಿ ಪ್ರತಿ ಕ್ಯೂಬಿಕ್ ಮೀಟರ್​ಗೆ 80 ಮೈಕ್ರೋಗ್ರಾಮ್ ಮಟ್ಟ ದಾಟಬಾರದು ಎಂದು NAAQS ಹೇಳುತ್ತದೆ. ಆದರೆ, ವಿವಿಧ ನಗರಗಳಲ್ಲಿ ಇದು 3ರಿಂದ 20 ಮೈಕ್ರೋಗ್ರಾಮ್ ಮಾತ್ರವೇ ಇರುವುದು ಗೊತ್ತಾಗಿದೆ. ಇದರಿಂದಾಗಿ ಎಫ್​ಜಿಡಿ ನಿಯಮವನ್ನು ಸರ್ಕಾರ ಸಡಿಲಿಸಲು ನಿರ್ಧರಿಸಿದೆ.

ಹಾಗೆಯೇ, ಭಾರತದಲ್ಲಿರುವ ಕಲ್ಲಿದ್ದಲಿನಲ್ಲಿ ಗಂಧಕದ ಅಂಶ ಶೇ. 0.5ಕ್ಕಿಂತ ಕಡಿಮೆ ಇದೆ. ಇದರಿಂದಾಗಿ ಕಲ್ಲಿದ್ದಲು ಸುಟ್ಟಾಗ ಹೊರಬರುವ ಸಲ್ಫರ್ ಡೈ ಆಕ್ಸೈಡ್ ಕೂಡ ಕಡಿಮೆ ಇರುತ್ತದೆ.

ಇದನ್ನೂ ಓದಿ: ಎಟಿಎಂಗಳಲ್ಲಿ 500 ರೂ ನೋಟು ವಿತರಿಸದಂತೆ ಆರ್​ಬಿಐ ಸೂಚಿಸಿದೆಯಾ? ವೈರಲ್ ಸುದ್ದಿ ಬಗ್ಗೆ ಸರ್ಕಾರದ ಸ್ಪಷ್ಟನೆ ಇದು

ಎಫ್​ಜಿಡಿ ನಿಯಮ ಸಡಿಲಿಕೆಯಿಂದ ವಿದ್ಯುತ್ ದರ ಹೇಗೆ ಕಡಿಮೆ ಆಗುತ್ತದೆ?

ಸರ್ಕಾರವು 10 ಲಕ್ಷ ಜನಸಂಖ್ಯೆ ಇರುವ ನಗರಗಳಿಂದ 10 ಕಿಮೀ ವ್ಯಾಪ್ತಿಯಲ್ಲಿರುವ ಕಲ್ಲಿದ್ದಲು ಘಟಕಗಳಿಗೆ ಮಾತ್ರವೇ ಎಫ್​ಜಿಡಿ ಸಿಸ್ಟಂ ಕಡ್ಡಾಯಪಡಿಸಿರುವುದು. ದೇಶದ ಶೇ 79ರಷ್ಟು ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳು ಈ ವ್ಯಾಪ್ತಿಗೆ ಬರುವುದಿಲ್ಲ. ಈ ಘಟಕಗಳು ಎಫ್​ಜಿಡಿ ಸಿಸ್ಟಂ ಅಳವಡಿಸುವುದು ಕಡ್ಡಾಯವೇನಿಲ್ಲ.

ಇದರಿಂದಾಗಿ ಈ ವಿದ್ಯುತ್ ಘಟಕಗಳಿಗೆ ಸಾಕಷ್ಟು ವೆಚ್ಚ ಕಡಿಮೆ ಆಗುತ್ತದೆ. ಇದರಿಂದ ವಿದ್ಯುತ್ ಉತ್ಪಾದನಾ ವೆಚ್ಚವೂ ತಗ್ಗುತ್ತದೆ. ಇದರಿಂದ ಅಂತಿಮ ಗ್ರಾಹಕರಿಗೆ ಲಾಭ ವರ್ಗಾವಣೆ ಆಗುತ್ತದೆ. ಅಂದಾಜು ಲೆಕ್ಕ ಹಾಕಿದಾಗ ಪ್ರತೀ ಯುನಿಟ್​​ಗೆ 25-30 ಪೈಸೆ ತಗ್ಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ