ಟೊಮೆಟೋ ಬೆಲೆ ಇನ್ನಷ್ಟು ಇಳಿಸಿದ ಕೇಂದ್ರ; ಕೇವಲ 40 ರುಪಾಯಿಗೆ ಮಾರಾಟಕ್ಕೆ ಸೂಚನೆ
Tomato Price Reduced: ಟೊಮೆಟೋ ಬೆಲೆ ಹೆಚ್ಚು ಇರುವ ಪ್ರದೇಶಗಳಲ್ಲಿ ರಿಯಾಯಿತಿ ದರದಲ್ಲಿ ಟೊಮೆಟೋ ಮಾರುತ್ತಿರುವ ಸರ್ಕಾರ ಇದೀಗ ಟೊಮೆಟೋ ಬೆಲೆಯನ್ನು 50 ರೂನಿಂದ 40 ರೂಗೆ ಇಳಿಸಿದೆ. ಆಗಸ್ಟ್ 20ರಿಂದ ಹೊಸ ದರದಲ್ಲಿ ಟೊಮೆಟೋ ಮಾರಾಟವಾಗಲಿದೆ.
ನವದೆಹಲಿ, ಆಗಸ್ಟ್ 18: ಟೊಮೆಟೋ ಬೆಲೆ ಇಳಿಮುಖವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ತನ್ನ ಮಾರಾಟ ದರವನ್ನು ಸತತವಾಗಿ ಇಳಿಸುತ್ತಿದೆ. ಸದ್ಯ 50 ರುಪಾಯಿಗೆ ಮಾರಾಟ ಮಾಡಲಾಗುತ್ತಿದ್ದು, ಮುಂಬರುವ ಭಾನುವಾರದಿಂದ (ಆಗಸ್ಟ್ 20) ಇನ್ನೂ ಕಡಿಮೆ ಬೆಲೆಗೆ ಮಾರಲು ನಿರ್ಧರಿಸಲಾಗಿದೆ. ಕಿಲೋಗೆ 40 ರೂ ದರದಲ್ಲಿ ಟೊಮೆಟೋವನ್ನು (Tomato) ಮಾರುವಂತೆ ಸರ್ಕಾರಿ ಸ್ವಾಮ್ಯದ ಎನ್ಸಿಸಿಎಫ್ ಮತ್ತು ಎನ್ಎಫ್ಇಡಿ ಸಂಸ್ಥೆಗಳಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸೂಚಿಸಿದೆ. ಇವೆರಡೂ ಸಂಸ್ಥೆಗಳು ತಮ್ಮ ವಿವಿಧ ಮಳಿಗೆಗಳಲ್ಲಿ ಮತ್ತು ಮೊಬೈಲ್ ವಾಹನಗಳಲ್ಲಿ ಟೊಮೆಟೋ ಹಣ್ಣನ್ನು ಜನಸಾಮಾನ್ಯರಿಗೆ ಮಾರಾಟ ಮಾಡುತ್ತಾ ಬಂದಿದೆ.
ಕಳೆದ ತಿಂಗಳು ಭಾರತದಲ್ಲಿ ಟೊಮೆಟೋ ಹಣ್ಣಿನ ಬೆಲೆ 200 ರೂ ದಾಟಿ ಹೋದಾಗ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಟೊಮೆಟೋ ಮಾರಲು ಮುಂದಾಯಿತು. 2023ರ ಜುಲೈ 14ರಂದು ದೆಹಲಿ ಎನ್ಸಿಆರ್ ಪ್ರದೇಶದಲ್ಲಿ ಕಿಲೋಗೆ 90 ರೂ ದರದಲ್ಲಿ ಟೊಮೆಟೋ ಮಾರಾಟ ಆರಂಭವಾಯಿತು.
ಎನ್ಸಿಸಿಎಫ್ ಮತ್ತು ಎನ್ಎಎಫ್ಇಡಿ ಸಂಸ್ಥೆಗಳು ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ಟೊಮೆಟೋ ಖರೀದಿಸಿ, ಅತಿಹೆಚ್ಚು ಬೆಲೆ ಇರುವ ಪ್ರದೇಶಗಳಲ್ಲಿ ರಿಯಾಯಿತಿ ದರದಲ್ಲಿ ಅದನ್ನು ಮಾರಾಟ ಮಾಡುತ್ತಿದೆ. ಸುಮಾರು 15 ಲಕ್ಷ ಕಿಲೋನಷ್ಟು ಟೊಮೆಟೋವನ್ನು ವಿವಿಧ ಮಂಡಿಗಳಿಂದ ಇವು ಸಂಗ್ರಹಿಸಿ ದೇಶಾದ್ಯಂತ ಅಗತ್ಯ ಪ್ರದೇಶಗಳಲ್ಲಿ ವಿತರಿಸುತ್ತಿದೆ.
ಈಗ ಟೊಮೆಟೋ ಬೆಲೆ ಸತತವಾಗಿ ಇಳಿಕೆಯಾಗುತ್ತಿರುವುದರಿಂದ ಅದಕ್ಕೆ ಅನುಗುಣವಾಗಿ ಸರ್ಕಾರವೂ ಬೆಲೆ ಕಡಿಮೆ ಮಾಡುತ್ತಿದೆ. ಆದರೆ, ಈಗಲೂ ಕೆಲವೆಡೆ ಟೊಮೆಟೋ ಬೆಲೆ 100 ರೂ ಮೇಲೆಯೇ ಇದೆ. ಇಂಥ ಪ್ರದೇಶಗಳಲ್ಲಿ ಸರ್ಕಾರಿ ಸಹಕಾರಿ ಸಂಸ್ಥೆಗಳು ರಿಯಾಯಿತಿ ದರದಲ್ಲಿ ಟೊಮೆಟೋ ನೀಡುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ