ಕೋವಿಡ್ 19 ಚಿಕಿತ್ಸೆಗೆ 2 ಲಕ್ಷ ರೂಪಾಯಿ ಮೇಲ್ಪಟ್ಟ ನಗದು ಪಾವತಿಸಲು ಸರ್ಕಾರದಿಂದ ಅವಕಾಶ

ಕೋವಿಡ್ 19 ಚಿಕಿತ್ಸೆಗೆ ರೂ. 2 ಲಕ್ಷ ಮೇಲ್ಪಟ್ಟು ಮೊತ್ತಕ್ಕೆ ನಗದು ಪಾವತಿಸುವುದಕ್ಕೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಸಿಬಿಡಿಟಿಯಿಂದ ಹೊಸ ನಿಯಮವನ್ನು ತರಲಾಗಿದೆ.

ಕೋವಿಡ್ 19 ಚಿಕಿತ್ಸೆಗೆ 2 ಲಕ್ಷ ರೂಪಾಯಿ ಮೇಲ್ಪಟ್ಟ ನಗದು ಪಾವತಿಸಲು ಸರ್ಕಾರದಿಂದ ಅವಕಾಶ
ಪ್ರಾತಿನಿಧಿಕ ಚಿತ್ರ


ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಕೋವಿಡ್- 19 ಕೇರ್​ ಸೆಂಟರ್​ಗಳಲ್ಲಿ ಮೇ 31ನೇ ತಾರೀಕಿನ ತನಕ 2 ಲಕ್ಷ ರೂಪಾಯಿ ಮತ್ತು ಅದಕ್ಕೆ ಮೇಲ್ಪಟ್ಟ ಮೊತ್ತವನ್ನು ರೋಗಿಗಳು ಅಥವಾ ಅವರ ಹತ್ತಿರದ ಸಂಬಂಧಿಕರಿಂದ ನಗದಾಗಿ ಪಾವತಿಸಲು ಸರ್ಕಾರವು ಶುಕ್ರವಾರ ಅವಕಾಶ ಮಾಡಿಕೊಟ್ಟಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದು, ಅಂಥ ಸಂಸ್ಥೆಗಳು ರೋಗಿಯ ಅಥವಾ ಹಣ ಪಾವತಿಸಿದವರ PAN ಅಥವಾ ಆಧಾರ್​ ಹಾಗೂ ಸಂಬಂಧದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು.

“ಕೇಂದ್ರ ಸರ್ಕಾರವು ಈ ಮೂಲಕ ತಿಳಿಸುವಂತೆ ಆಸ್ಪತ್ರೆಗಳು, ಔಷಧಾಲಯಗಳು, ನರ್ಸಿಂಗ್​ಹೋಮ್​ಗಳು, ಕೋವಿಡ್​ ಕೇರ್ ಕೇಂದ್ರಗಳು ಅಥವಾ ಆ ರೀತಿಯಲ್ಲಿ ರೋಗಿಗಳಿಗೆ ಕೋವಿಡ್ ಚಿಕಿತ್ಸೆಗಳನ್ನು ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 269ST ಅಡಿಯಲ್ಲಿ ಏಪ್ರಿಲ್ 1ರಿಂದ ಮೇ 31, 2021ರ ಮಧ್ಯೆ ನಗದು ಪಡೆದಿದ್ದಲ್ಲಿ ರೋಗಿಯ ಮತ್ತು ಹಣ ಪಾವತಿಸಿದವರ ಮಧ್ಯದ ಸಂಬಂಧ ಹಾಗೂ ಪ್ಯಾನ್ ಅಥವಾ ಆಧಾರ್ ಮಾಹಿತಿ ಪಡೆದುಕೊಳ್ಳಬೇಕು,” ಎಂದು ಸಿಬಿಡಿಟಿ ಹೇಳಿದೆ.

ನಂಗಿಯಾ ಅಂಡ್ ಕೋ ಎಲ್​ಎಲ್​ಪಿ ಪಾರ್ಟನರ್ ಶೈಲೇಶ್ ಕುಮಾರ್ ಮಾತನಾಡಿ, ಸದ್ಯದ ಸ್ಥಿತಿಯಲ್ಲಿ ವಿವಿಧ ಆಸ್ಪತ್ರೆಗಳು/ನರ್ಸಿಂಗ್ ಹೋಮ್​ಗಳು ಕೋವಿಡ್​- 19 ಚಿಕಿತ್ಸೆಗೆ ನಗದಿಗಾಗಿ ಬೇಡಿಕೆ ಸಲ್ಲಿಸುತ್ತಿದ್ದಾರೆ. 269ST ಸೆಕ್ಷನ್ ಅಡಿಯಲ್ಲಿ ಆದಾಯ ತೆರಿಗೆ ಕಾನೂನು 2 ಲಕ್ಷ ರೂಪಾಯಿ ಮೇಲೆ ನಗದು ಪಾವತಿಸಲು ಅನುಮತಿ ನೀಡುವುದಿಲ್ಲ ಎಂದಿದ್ದಾರೆ.

“ಈಗಿನ ಜಾಗತಿಕ ಬಿಕ್ಕಟ್ಟಿನ ಸನ್ನಿವೇಶವನ್ನು ಗಣನೆಗೆ ತೆಗೆದುಕೊಂಡು, ಜನರ ಜೀವನವನ್ನು ಉಳಿಸುವುದು ಬಹಳ ಮುಖ್ಯವಾದ್ದದ್ದು. ಈಗಿನ ಮಿತಿಯನ್ನೂ ಮೀರಿ ಕೋವಿಡ್​- 19 ಚಿಕಿತ್ಸೆಗೆ ನಗದು ಪಾವತಿಗೆ ಅವಕಾಶ ಮಾಡಿಕೊಟ್ಟಿದೆ,” ಎನ್ನಲಾಗಿದೆ. ಈಗಿನ ಅಧಿಸೂಚನೆಯು ಎಲ್ಲ ನಗದು ಪಾವತಿಗೆ ಅನ್ವಯ ಆಗಲಿದ್ದು, ಏಪ್ರಿಲ್ 1, 2021ರಿಂದ ಮೇ 31, 2021ರವರೆಗೂ ಅನ್ವಯ ಆಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೊವಿಡ್-19 ಸಂಕಷ್ಟ: ಆದಾಯ ತೆರಿಗೆ ಪಾವತಿದಾರರಿಗೆ ರಿಲ್ಯಾಕ್ಸ್ ನೀಡಿದ ಕೇಂದ್ರ ಸರ್ಕಾರ

(Central government allows payment above Rs 2 lakh for Covid 19 treatment between April 1 to May 31, 2021)