AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋವು ನಿವಾರಕ ಟ್ಯಾಪೆಂಟಡೋಲ್, ಕ್ಯಾರಿಸೋಪ್ರೊಡೋಲ್ ಸಂಯೋಜನೆಯ ಔಷಧ ನಿಷೇಧ; ಮುಂಬೈನಲ್ಲಿ ಒಂದು ಕೋಟಿಗೂ ಅಧಿಕ ಮಾತ್ರೆಗಳು ವಶಕ್ಕೆ

Govt bans Tapentadol and Carisoprodol combination drugs: ನೋವು ನಿವಾರಣೆಗೆ ನೀಡಲಾಗುವ ಟ್ಯಾಪೆಂಟಡೋಲ್ ಮತ್ತು ಕ್ಯಾರಿಸೋಪ್ರೊಡೋಲ್ ಎಂಬೆರಡು ಔಷಧಗಳ ಸಂಯೋಜನೆಯನ್ನು ನಿಷೇಧಿಸಲಾಗಿದೆ. ಈ ಸಂಯೋಜನೆಗೆ ಯಾವ ದೇಶದಲ್ಲೂ ಅನುಮತಿ ಇಲ್ಲ. ಆದರೂ ಪಶ್ಚಿಮ ಆಫ್ರಿಕನ್ ದೇಶಗಳಿಗೆ ಈ ಔಷಧವನ್ನು ಅಕ್ರಮವಾಗಿ ಸರಬರಾಜು ಮಾಡುತ್ತಿರುವುದು ಕಂಡು ಬಂದಿದೆ. ಮುಂಬೈನ ಫಾರ್ಮಾ ಕಂಪನಿಯಲ್ಲಿ ಕೋಟ್ಯಂತರ ಸಂಖ್ಯೆಯ ಈ ಮಾತ್ರಗಳನ್ನು ಜಫ್ತಿ ಮಾಡಲಾಗಿದೆ.

ನೋವು ನಿವಾರಕ ಟ್ಯಾಪೆಂಟಡೋಲ್, ಕ್ಯಾರಿಸೋಪ್ರೊಡೋಲ್ ಸಂಯೋಜನೆಯ ಔಷಧ ನಿಷೇಧ; ಮುಂಬೈನಲ್ಲಿ ಒಂದು ಕೋಟಿಗೂ ಅಧಿಕ ಮಾತ್ರೆಗಳು ವಶಕ್ಕೆ
ಔಷಧ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 24, 2025 | 12:33 PM

Share

ಮುಂಬೈ, ಫೆಬ್ರುವರಿ 24: ಕೇಂದ್ರ ಸರ್ಕಾರ ಟ್ಯಾಪೆಂಟಡೋಲ್ ಮತ್ತು ಕ್ಯಾರಿಸೋಪ್ರೊಡೋಲ್ ಔಷಧಗಳ ಸಂಯೋಜನೆಯನ್ನು ನಿಷಿದ್ಧಗೊಳಿಸಿದೆ. ಈ ಸಂಯೋಜನೆಯ ಔಷಧವನ್ನು ಅಕ್ರಮವಾಗಿ ಮಾಡುತ್ತಿದ್ದ ಮುಂಬೈ ಮೂಲದ ಏವಿಯೋ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೇಂದ್ರೀಯ ಔಷಧ ಪ್ರಮಾಣ ನಿಯಂತ್ರಣ ಸಂಸ್ಥೆಯಾದ ಸಿಡಿಎಸ್​ಸಿಒ ಮತ್ತು ಮಹಾರಾಷ್ಟ್ರ ಅಧಿಕಾರಿಗಳ ಜಂಟಿ ತಂಡವೊಂದು ಏವಿಯೋ ಫಾರ್ಮಾ ಕಂಪನಿ ತಯಾರಿಸಿದ ಈ ಸಂಯೋಜನೆಯ 1.3 ಕೋಟಿ ಮಾತ್ರ ಹಾಗೂ ಟ್ಯಾಪೆಂಟಡೋಲ್ ಮತ್ತು ಕ್ಯಾರಿಸೋಪ್ರೊಡೋಲ್​ನ 26 ಬ್ಯಾಚ್​ಗಳ ಎಪಿಐ (ಮೂಲ ಔಷಧ) ಮುಟ್ಟುಗೋಲು ಹಾಕಿಕೊಂಡಿದೆ. ಈ ಔಷಧಗಳನ್ನು ಆಫ್ರಿಕಾದ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಅದನ್ನು ತಪ್ಪಿಸಲಾಗಿದೆ.

ಯಾಕೆ ಈ ಔಷಧಗಳ ನಿಷೇಧ?

ಪಶ್ಚಿಮ ಆಫ್ರಿಕನ್ ಪ್ರದೇಶದಲ್ಲಿ ಓಪಿಯಾಯ್ಡ್ ಸಮಸ್ಯೆ ಹರಡಿದ್ದು ಗಮನಕ್ಕೆ ಬಂದಿದೆ. ಇದಕ್ಕೆ ಮೂಲ ಕಾರಣವು ಟ್ಯಾಪೆಂಟಡೋಲ್ ಮತ್ತು ಕ್ಯಾರಿಸೋಪ್ರೊಡೋಲ್ ಔಷಧ ಸಂಯೋಜನೆ ಕಾರಣವೆಂಬುದು ತಿಳಿದುಬಂದಿದೆ. ಈ ಔಷಧವನ್ನು ಭಾರತದಿಂದ ಸರಬರಾಜು ಮಾಡಲಾಗಿದ್ದೂ ಗೊತ್ತಾಗಿದೆ.

ಇದನ್ನೂ ಓದಿ: PM Kisan 19th Instalment: ಇವತ್ತು ಪಿಎಂ ಕಿಸಾನ್ ಹೊಸ ಕಂತು ಬಿಡುಗಡೆ; ಇಕೆವೈಸಿ ಆಗದಿದ್ದರೆ ಹಣ ಸಿಗಲ್ಲ; ಇಲ್ಲಿದೆ ಡೀಟೇಲ್ಸ್

ಟ್ಯಾಪೆಂಟಡೋಲ್ ಮತ್ತು ಕ್ಯಾರಿಸೊಪ್ರೊಡೋಲ್ ಔಷಧಗಳನ್ನು ನೋವು ನಿವಾರಣೆಗೆ ನೀಡಲಾಗುತ್ತದೆ. ಟ್ಯಾಪೆಂಟಡೋಲ್ ಔಷಧವನ್ನು ಓಪಿಯಂ ಪಾಪ್ಪಿ ಅಥವಾ ಅಫೀಮು ಗಿಡದಿಂದ ತಯಾರಿಸಲಾಗುತ್ತದೆ. ಕ್ಯಾರಿಸೋಪ್ರೊಡೋಲ್ ಔಷಧವು ಮಿದುಳು ಮತ್ತು ಸ್ಪೈನಲ್ ಕಾರ್ಡ್​ನಲ್ಲಿ ಸ್ನಾಯು ನೋವಿನ ನಿವಾರಣೆ ಮಾಡುತ್ತದೆ.

ಈ ಎರಡು ಔಷಧದ ಉತ್ಪಾದನೆಗೆ ಅನುಮತಿ ಇದೆಯಾದರೂ ಅದರ ಸಂಯೋಜನೆಗೆ ಅನುಮತಿ ಇಲ್ಲ. ಯಾವ ದೇಶಗಳಲ್ಲೂ ಈ ಸಂಯೋಜನೆಗೆ ಅನುಮತಿ ಇಲ್ಲ. ಆದರೂ ಪಶ್ಚಿಮ ಆಫ್ರಿಕನ್ ದೇಶಗಳಿಗೆ ಅಕ್ರಮವಾಗಿ ಈ ಸಂಯೋಜಿತ ಔಷಧ ಸರಬರಾಜಾಗುತ್ತಿತ್ತು. ಭಾರತದ ಔಷಧ ನಿಯಂತ್ರಕ ಸಂಸ್ಥೆಯಾದ ಡಿಸಿಜಿಐ ಈ ಎರಡು ಔಷಧಗಳ ಸಂಯೋಜನೆಯ ಎಲ್ಲಾ ಔಷಧಗಳನ್ನು ನಿಷೇಧಿಸುವಂತೆ ಆದೇಶಿಸಿದೆ.

ಇದನ್ನೂ ಓದಿ: ಚೀನಾದಲ್ಲಿ ಉಚಿತ ಊಟ ಪಡೆಯಲು ಕೋಡ್ ವರ್ಡ್; ಅವಶ್ಯಕತೆ ಇದ್ದವರ ಸಹಾಯಕ್ಕೆ ನಿಂತ ಸಮುದಾಯ

ಮುಂಬೈನ ಏವಿಯೋ ಫಾರ್ಮಾಸ್ಯೂಟಿಕಲ್ಸ್ ಸಂಸ್ಥೆ ಈ ಡ್ರಗ್ಸ್ ಸಂಯೋಜನೆಯನ್ನು ತಯಾರಿಸಿ ಆಫ್ರಿಕಾಗೆ ರಫ್ತು ಮಾಡುತ್ತದೆ. ಈಗ ಈ ಎರಡು ಔಷಧಗಳೆಲ್ಲವನ್ನೂ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಎಪಿಐಗಳನ್ನೂ ಸೀಜ್ ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ