ONGC Dividend: ಕೇಂದ್ರ ಸರ್ಕಾರಕ್ಕೆ ಒಎನ್ಜಿಸಿಯಿಂದ ಈ ವರ್ಷ ದೊರೆತ ಲಾಭ ಬರೋಬ್ಬರಿ 5,001 ಕೋಟಿ ರೂ.
ಈ ಹಣಕಾಸು ವರ್ಷದಲ್ಲಿ ಒಟ್ಟು 23,796.55 ಕೋಟಿ ರೂ. ಡಿವಿಡೆಂಟ್ ಪಡೆಯಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.
ನವದೆಹಲಿ: ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ (ONGC) 5,001 ಕೋಟಿ ರೂ. ಡಿವಿಡೆಂಡ್ (Dividend) ಅಥವಾ ಲಾಭಾಂಶ ನೀಡಿದೆ. ಇದಲ್ಲದೆ, ಸರ್ಕಾರಿ ಸ್ವಾಮ್ಯದ ಕಂಪನಿಗಳು ಒಟ್ಟು 23,797 ಕೋಟಿ ರೂ. ಡಿವಿಡೆಂಡ್ ನೀಡಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ವಿಚಾರವಾಗಿ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ (DIPAM) ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಮಾಹಿತಿ ನೀಡಿದ್ದಾರೆ. ಹೆಚ್ಚು ಲಾಭಾಂಶವನ್ನು ಸರ್ಕಾರಕ್ಕೆ ನೀಡುವ ಸಲುವಾಗಿ ನೀತಿ ರೂಪಿಸಿಕೊಳ್ಳುವಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ 2020ರಲ್ಲಿ ಸೂಚಿಸಿತ್ತು. ಲಾಭ, ನಗದು ಮೀಸಲು, ನಿವ್ವಳ ಮೌಲ್ಯ ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಇಲಾಖೆ ಸೂಚಿಸಿತ್ತು.
ನಿಯಮಗಳ ಪ್ರಕಾರ, ತೆರಿಗೆ ಹೊರತುಪಡಿಸಿ ಕನಿಷ್ಠ ಶೇಕಡಾ 30ರಷ್ಟು ಅಥವಾ ನಿವ್ವಳ ಮೌಲ್ಯದ ಶೇಕಡಾ 5ರಷ್ಟು (ಈ ಎರಡರಲ್ಲಿ ಯಾವುದು ಹೆಚ್ಚೋ ಅದನ್ನು) ವಾರ್ಷಿಕ ಡಿವಿಡೆಂಡ್ ಅನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳು ಸರ್ಕಾರಕ್ಕೆ ನೀಡಬೇಕು. ಈ ಹಣಕಾಸು ವರ್ಷದಲ್ಲಿ ಒಟ್ಟು 23,796.55 ಕೋಟಿ ರೂ. ಡಿವಿಡೆಂಟ್ ಪಡೆಯಲಾಗಿದೆ ಎಂದು ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ONGC Recruitment 2022: ಒಎನ್ಜಿಸಿಯ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಕಂಪನಿಯಾಗಿದೆ.
ಮೂಲಗಳ ಪ್ರಕಾರ, ದೇಶದ ಒಟ್ಟು ಕಚ್ಚಾ ತೈಲ ಉತ್ಪಾದನೆಯ ಶೇಕಡಾ 77ರಷ್ಟು ಹಾಗೂ ನೈಸರ್ಗಿಕ ಅನಿಲ ಉತ್ಪಾದನೆಯ ಶೇಕಡಾ 81ರಷ್ಟು ಒಎನ್ಜಿಸಿ ಕೊಡುಗಡೆಯಾಗಿದೆ. ದೇಶದಲ್ಲಿ ಅತಿ ಹೆಚ್ಚು ಲಾಭವನ್ನು ಗಳಿಸುತ್ತಿರುವ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿಯೂ ಒಎನ್ಜಿಸಿ ಗುರುತಿಸಲ್ಪಟ್ಟಿದೆ. 1956ರ ಆಗಸ್ಟ್ 14ರಂದು ಆಯೋಗವೊಂದರ ಮಾದರಿಯಲ್ಲಿ ರಚನೆಯಾದ ಈ ಸಂಸ್ಥೆ ನಂತರ ದೊಡ್ಡ ಮಟ್ಟದ ಕಂಪನಿಯಾಗಿ ಬೆಳೆಯಿತು. 1990ರಲ್ಲಿ ಉದಾರೀಕರಣ ನೀತಿಯ ನಂತರ ಹೂಡಿಕೆ ಹಿಂಪಡೆಯುವ ಪ್ರಕ್ರಿಯೆ ಮೂಲಕ ಸರ್ಕಾರವು ಒಎನ್ಜಿಸಿಯಿಂದ ಭಾಗಶಃ ಬಂಡವಾಳ ಹಿಂಪಡೆಯಿತು. ಪರಿಣಾಮವಾಗಿ ಒಎನ್ಜಿಸಿ ಕಂಪನಿಯ ರೂಪ ತಾಳಿತು. ಸದ್ಯ ಕೇಂದ್ರ ಸರ್ಕಾರವು ಶೇಕಡಾ 74ಕ್ಕೂ ಹೆಚ್ಚು ಪ್ರಮಾಣದ ಷೇರುಗಳನ್ನು ಹೊಂದಿದೆ. ಹೀಗಾಗಿ ಕಂಪನಿಯ ಲಾಭಾಂಶದಲ್ಲಿ ಹೆಚ್ಚಿನ ಪ್ರಮಾಣ ಸರ್ಕಾರಕ್ಕೆ ಸಂದಾಯವಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ