Indian Economy: ಭಾರತದ ಆರ್ಥಿಕ ಬೆಳವಣಿಗೆ ದರ ಶೇಕಡಾ 7ಕ್ಕೆ ಕಡಿತಗೊಳಿಸಿದ ಎಸ್&ಪಿ ಗ್ಲೋಬಲ್ ರೇಟಿಂಗ್

ದೇಶೀಯ ಬೇಡಿಕೆ ಆಧಾರಿತ ಆರ್ಥಿಕತೆಯಾಗಿರುವ ಭಾರತದಂಥ ದೇಶಗಳ ಆರ್ಥಿಕತೆ ಮೇಲೆ ಜಾಗತಿಕ ಆರ್ಥಿಕ ಹಿಂಜರಿತವು ಹೆಚ್ಚಿನ ಪರಿಣಾಮ ಬೀರದು ಎಸ್ ಆ್ಯಂಡ್ ಪಿ ಗ್ಲೋಬಲ್ ರೇಟಿಂಗ್

Indian Economy: ಭಾರತದ ಆರ್ಥಿಕ ಬೆಳವಣಿಗೆ ದರ ಶೇಕಡಾ 7ಕ್ಕೆ ಕಡಿತಗೊಳಿಸಿದ ಎಸ್&ಪಿ ಗ್ಲೋಬಲ್ ರೇಟಿಂಗ್
ಸಾಂದರ್ಭಿಕ ಚಿತ್ರImage Credit source: PTI
Follow us
TV9 Web
| Updated By: Ganapathi Sharma

Updated on:Nov 28, 2022 | 3:44 PM

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ (Economic Growth) ದರವನ್ನು ಜಾಗತಿಕ ರೇಟಿಂಗ್ಸ್ ಸಂಸ್ಥೆ ಎಸ್ ಆ್ಯಂಡ್ ಪಿ ಗ್ಲೋಬಲ್ ರೇಟಿಂಗ್ (S&P Global Ratings) ಶೇಕಡಾ 7ಕ್ಕೆ ಇಳಿಕೆ ಮಾಡಿದೆ. ಆದರೆ, ಜಾಗತಿಕ ಆರ್ಥಿಕ ಹಿಂಜರಿತವು ದೇಶೀಯ ಬೇಡಿಕೆ ಆಧಾರಿತವಾಗಿರುವ ಭಾರತದ ಆರ್ಥಿಕತೆ (Indian Economy) ಮೇಲೆ ಹೆಚ್ಚಿನ ಪ್ರಭಾವ ಬೀರದು ಎಂದು ಸಂಸ್ಥೆಯ ವರದಿ ತಿಳಿಸಿದೆ. 2022-23ನೇ ಹಣಕಾಸು ವರ್ಷದಲ್ಲಿ ಭಾರತವು ಶೇಕಡಾ 7.3ರ ಆರ್ಥಿಕ ಬೆಳವಣಿಗೆ ಸಾಧಿಸಲಿದೆ. 2023-24ರಲ್ಲಿ ಶೇಕಡಾ 6.5ರ ಬೆಳವಣಿಗೆ ಸಾಧಿಸಲಿದೆ ಎಂದು ಸೆಪ್ಟೆಂಬರ್​ನಲ್ಲಿ ಸಂಸ್ಥೆ ಹೇಳಿತ್ತು. ಇದೀಗ ಬೆಳವಣಿಗೆ ದರ ಅಂದಾಜನ್ನು ಕಡಿತಗೊಳಿಸಿದೆ.

ದೇಶೀಯ ಬೇಡಿಕೆ ಆಧಾರಿತ ಆರ್ಥಿಕತೆಯಾಗಿರುವ ಭಾರತದಂಥ ದೇಶಗಳ ಆರ್ಥಿಕತೆ ಮೇಲೆ ಜಾಗತಿಕ ಆರ್ಥಿಕ ಹಿಂಜರಿತವು ಹೆಚ್ಚಿನ ಪರಿಣಾಮ ಬೀರದು. 2022-23ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇಕಡಾ 7ರಷ್ಟಿದ್ದರೆ, ಮುಂದಿನ ಹಣಕಾಸು ವರ್ಷದಲ್ಲಿ ಶೇಕಡಾ 6ರಷ್ಟಿರಲಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ರೇಟಿಂಗ್​ನ ಏಷ್ಯಾ ಪೆಸಿಫಿಕ್ ವಲಯದ ಮುಖ್ಯ ಅರ್ಥಶಾಸ್ತ್ರಜ್ಞ ಲೂಯಿಸ್ ಕುಇಜ್ಸ್ ತಿಳಿಸಿದ್ದಾರೆ.

ಇದನ್ನೂ ಓದಿ: ಶೇಕಡಾ 7ರ ಆರ್ಥಿಕ ಬೆಳವಣಿಗೆ ಸಾಧಿಸಲಿದೆ ಭಾರತ; ನೀತಿ ಆಯೋಗದ ಮಾಜಿ ಉಪಾಧ್ಯಕ್ಷ

2021ರಲ್ಲಿ ಭಾರತದ ಆರ್ಥಿಕತೆಯು ಶೇಕಡಾ 8.5ರ ಬೆಳವಣಿಗೆ ದಾಖಲಿಸಿತ್ತು. ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಕೋವಿಡ್​ನಿಂದ ಚೇತರಿಸಿಕೊಂಡ ಬಳಿಕ ದೇಶೀಯ ಬೇಡಿಕೆಯಲ್ಲಿ ಹೆಚ್ಚಳವಾಗುತ್ತಿದೆ. ಇದು ಮುಂದುವರಿಯಲಿದ್ದು, ಮುಂದಿನ ವರ್ಷದ ಭಾರತದ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಏಷ್ಯಾ ಪೆಸಿಫಿಕ್​ಗೆ ಸಂಬಂಧಿಸಿದ ವರದಿಯಲ್ಲಿ ಎಸ್ ಆ್ಯಂಡ್ ಪಿ ಗ್ಲೋಬಲ್ ರೇಟಿಂಗ್ ತಿಳಿಸಿದೆ.

ಶೇಕಡಾ 6.8ರಷ್ಟಿರಲಿದೆ ಹಣದುಬ್ಬರ

ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಪ್ರಮಾಣ ಸರಾಸರಿ ಶೇಕಡಾ 6.8ರಷ್ಟಿರಲಿದೆ. ಆರ್​ಬಿಐ ರೆಪೊದರವನ್ನು 2023ರ ಮಾರ್ಚ್ ವೇಳೆಗೆ ಶೇಕಡಾ 6.25ಕ್ಕೆ ಹೆಚ್ಚಿಸಿರಲಿದೆ ಎಂದು ವರದಿ ಅಂದಾಜಿಸಿದೆ. ಆರ್​ಬಿಐ ಈಗಾಗಲೇ 190 ಮೂಲಾಂಶದಷ್ಟು ರೆಪೊ ದರವನ್ನು ಹೆಚ್ಚಿಸಿದ್ದು, ಶೇಕಡಾ 5.9ಕ್ಕೆ ನಿಗದಿಪಡಿಸಿದೆ.

ದೇಶದ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಅಕ್ಟೋಬರ್​ನಲ್ಲಿ ಶೇಕಡಾ 8.39ಕ್ಕೆ ಇಳಿಕೆಯಾಗಿತ್ತು. 2021ರ ಮಾರ್ಚ್​ ನಂತರ ಇದೇ ಮೊದಲ ಬಾರಿಗೆ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರ ಎರಡಂಕಿಯಿಂದ ಕೆಳಗಿಳಿದಿತ್ತು. ಆಹಾರ ಹಣದುಬ್ಬರ ಶೇಕಡಾ 11.03ರಿಂದ ಶೇಕಡಾ 8.33ಕ್ಕೆ ಇಳಿಕೆಯಾಗಿತ್ತು. ಗ್ರಾಹಕ ದರ ಸೂಚ್ಯಂಕ ಆಧಾರಿತ ದೇಶದ ಚಿಲ್ಲರೆ ಹಣದುಬ್ಬರ ಪ್ರಮಾಣ ಮೂರು ತಿಂಗಳ ಕನಿಷ್ಠಕ್ಕೆ, ಅಂದರೆ ಶೇಕಡಾ 6.77ಕ್ಕೆ ಇಳಿಕೆಯಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:14 pm, Mon, 28 November 22