Rural Development: ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರದಿಂದ 1,046 ಕೋಟಿ ರೂ. ಬಿಡುಗಡೆ

| Updated By: Digi Tech Desk

Updated on: Sep 01, 2022 | 12:12 PM

ಈ ಹಣದ ಒಟ್ಟು ಮೌಲ್ಯದಲ್ಲಿ ಶೇ 60ರಷ್ಟು ಪ್ರಮಾಣವನ್ನು ಸ್ವಚ್ಛತೆ, ಬಯಲು ಶೌಚಾಲಯ ಮುಕ್ತ ಯೋಜನೆಗಳ ಅನುಷ್ಠಾನಕ್ಕೆ ಬಳಸಬೇಕು ಎಂದು ಸೂಚಿಸಲಾಗಿದೆ.

Rural Development: ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರದಿಂದ 1,046 ಕೋಟಿ ರೂ. ಬಿಡುಗಡೆ
ಗ್ರಾಮೀಣ ಕುಡಿಯುವ ನೀರು ಯೋಜನೆಗೆ ಕೇಂದ್ರ ಸರ್ಕಾರವು ಹಣ ಬಿಡುಗಡೆ ಮಾಡಿದೆ
Image Credit source: www.indiawaterportal.org
Follow us on

ದೆಹಲಿ: ಕರ್ನಾಟಕದ ಗ್ರಾಮೀಣ ಅಭಿವೃದ್ಧಿಗಾಗಿ (Rural Development) ಸ್ಥಳೀಯ ಸಂಸ್ಥೆಗಳಿಗೆ (Rural Local Bodies) ಕೇಂದ್ರ ಹಣಕಾಸು ಇಲಾಖೆಯು (Union Finance Ministry) ₹ 1,046 ಕೋಟಿ ಬಿಡುಗಡೆ ಮಾಡಿದೆ. ದೇಶದ ವಿವಿಧ ರಾಜ್ಯಗಳಿಗೆ ಒಟ್ಟು ₹ 4,190 ಕೋಟಿ ನೀಡಲಾಗಿದೆ. 15ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ ಈ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಹಣದ ಒಟ್ಟು ಮೌಲ್ಯದಲ್ಲಿ ಶೇ 60ರಷ್ಟು ಪ್ರಮಾಣವನ್ನು ಸ್ವಚ್ಛತೆ, ಬಯಲು ಶೌಚಾಲಯ ಮುಕ್ತ ಯೋಜನೆಗಳ ಅನುಷ್ಠಾನಕ್ಕೆ ಬಳಸಬೇಕು. ಕುಡಿಯುವ ನೀರು, ಮಳೆ ನೀರು ಕೊಯ್ಲು ಮತ್ತು ನೀರು ಮರುಬಳಕೆಯ ಸೌಕರ್ಯ ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಮೊದಲು ಘೋಷಣೆ ಮಾಡಿರುವ ಅನುದಾನಕ್ಕೆ ಹೆಚ್ಚುವರಿಯಾಗಿ ಈ ಹಣವು ಸ್ಥಳೀಯ ಸಂಸ್ಥೆಗಳಿಗೆ ಲಭ್ಯವಾಗಲಿದೆ. ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಕೇಂದ್ರ ಸರ್ಕಾರವು ಘೋಷಿಸಿದೆ. ಹೀಗಾಗಿ ಈ ಎರಡೂ ಯೋಜನೆಗಳಿಗೆ ಪೂರಕವಾಗಿಯೇ ಹೆಚ್ಚುವರಿ ಅನುದಾನ ಖರ್ಚು ಮಾಡಬೇಕು ಎಂದು ಕೇಂದ್ರ ಸೂಚಿಸಿದೆ.

ಈ ಅನುದಾನ ಪಡೆದುಕೊಳ್ಳಲು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಒಂದಿಷ್ಟು ಷರತ್ತುಗಳನ್ನು ಪೂರೈಸಬೇಕಾಗುತ್ತದೆ. ಪಾರದರ್ಶಕತೆ ನಿಯಮಗಳು, ನಿಯಮಿತವಾಗಿ ಚುನಾವಣೆಗಳನ್ನು ನಡೆಸಬೇಕು, ಪ್ರತಿ ವರ್ಷವೂ ನಿಗದಿತ ಪ್ರಮಾಣದ ಅಭಿವೃದ್ಧಿ ಸಾಧಿಸಬೇಕು ಎಂದು ಕೇಂದ್ರ ಸರ್ಕಾರವು ಹೇಳಿದೆ. ಕಳೆದ ವರ್ಷದ ಆದಾಯ ಮತ್ತು ವೆಚ್ಚದ ವಿವರಗಳನ್ನು ಸಾರ್ವಜನಿಕರಿಗೆ ಸಿಗುವಂತೆ ಆನ್​ಲೈನ್​ನಲಲ್ಲಿ ಪ್ರಕಟಿಸಬೇಕು. ಇದರ ಜೊತೆಗೆ ಇ-ಗ್ರಾಮ್​ಸ್ವರಾಜ್ ಮತ್ತು ಆಡಿಟ್ ಆನ್​ಲೈನ್ ಪೋರ್ಟಲ್​ಗಳಲ್ಲಿಯೂ ಮಾಹಿತಿ ಲಭ್ಯವಿರುವಂತೆ ಗಮನ ಹರಿಸಬೇಕು. ಸಂಪೂರ್ಣ ಚುನಾಯಿತ ಪ್ರತಿನಿಧಿಗಳು ಆಡಳಿತ ನಿರ್ವಹಿಸುವ ಸಂಸ್ಥೆಗಳಿಗೆ ಮಾತ್ರವೇ ಕೇಂದ್ರದ ಹೆಚ್ಚುವರಿ ಅನುದಾನ ಲಭ್ಯವಾಗಲಿದೆ.

ಕೇಂದ್ರದ ಅನುದಾನ ಬಳಸಲು ಇಚ್ಛಿಸುವ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಇ-ಗ್ರಾಮ್​ಸ್ವರಾಜ್​ ಪೋರ್ಟಲ್​ಗೆ ವಾರ್ಷಿಕ ಕಾರ್ಯಯೋಜನೆ ವಿವರಗಳನ್ನು ಅಪ್​ಲೋಡ್ ಮಾಡಬೇಕು. 15ನೇ ಹಣಕಾಸು ಆಯೋಗದಿಂದ ಬಂದ ಹಣವನ್ನು ಹೇಗೆ ಖರ್ಚು ಮಾಡಲಾಗಿದೆ ಎಂಬ ವಿವರವನ್ನೂ ಗ್ರಾಮ ಪಂಚಾಯಿತಿಗಳು ಒದಗಿಸಬೇಕು. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಹಣ ಬಿಡುಗಡೆ ಮಾಡಿದ 10 ದಿನಗಳ ಒಳಗೆ ಅದು ಗ್ರಾಮ ಪಂಚಾಯಿತಿಗಳಿಗೆ ತಲುಪಬೇಕು. ತಡವಾದರೆ ರಾಜ್ಯ ಸರ್ಕಾರಗಳು ಬಡ್ಡಿ ಕಟ್ಟಿಕೊಡಬೇಕಾಗುತ್ತದೆ ಎಂದು ಕೇಂದ್ರ ಹಣಕಾಸು ಇಲಾಖೆಯು ಎಚ್ಚರಿಸಿದೆ.

Published On - 12:02 pm, Thu, 1 September 22