PPF: ಒಂದು ಕೋಟಿ ಗಳಿಸಲು ನೀವು ತಿಂಗಳಿಗೆ ಇಷ್ಟು ಪಾವತಿಸಿ
ನೀವು 15 ವರ್ಷಗಳವರೆಗೆ ಪಿಪಿಎಫ್ ಖಾತೆಯಲ್ಲಿ ಹಣವನ್ನು ಹೂಡಿಕೆ ಮಾಡಿ ಕೊನೆಯಲ್ಲಿ ಹಣದ ಅಗತ್ಯವಿಲ್ಲದಿದ್ದರೆ ಅದೇ ಖಾತೆಯನ್ನು ಮುಕ್ತಾಯದ ಒಂದು ವರ್ಷದೊಳಗೆ ಇನ್ನೊಂದು ಐದು ವರ್ಷಗಳವರೆಗೆ ವಿಸ್ತರಿಸಬಹುದು. ಇದರಿಂದಾಗಿ ನೀವು ಗಳಿಕೆ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬಹುದು.
ಸಾರ್ವಜನಿಕ ಭವಿಷ್ಯ ನಿಧಿ (PPF) ವಿನಾಯಿತಿ ವರ್ಗದಲ್ಲಿ ಬೀಳುವ ಕೆಲವೇ ಯೋಜನೆಗಳಲ್ಲಿ ಒಂದಾಗಿದೆ. ಇದೊಂದು ತೆರಿಗೆ ಮುಕ್ತ ಸಾಧನವೂ ಆಗಿದೆ. ಪ್ರಸ್ತುತ ಪಿಪಿಎಫ್ ವಾರ್ಷಿಕವಾಗಿ 7.1 ಶೇಕಡಾ ಬಡ್ಡಿದರವನ್ನು ಹೊಂದಿದ್ದು, ಇದನ್ನು ಮಾಸಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಇದರ ಬಡ್ಡಿ ದರವನ್ನು ಸರ್ಕಾರವು ತ್ರೈಮಾಸಿಕ ಆಧಾರದ ಮೇಲೆ ಪರಿಶೀಲಿಸುತ್ತದೆ. ಮಾರ್ಗಸೂಚಿಯ ಪ್ರಕಾರ ಒಬ್ಬರು, 15 ವರ್ಷಗಳವರೆಗೆ ಪಿಪಿಎಫ್ ಖಾತೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಆದಾಗ್ಯೂ ಹೂಡಿಕೆ ಮಾಡಿದ ವ್ಯಕ್ತಿ 15 ವರ್ಷಗಳ ಕೊನೆಯಲ್ಲಿ ಹಣದ ಅವಶ್ಯಕತೆ ಇಲ್ಲ ಎಂದು ಯೋಚಿಸಿದರೆ ಇನ್ನೂ ಐದು ವರ್ಷಗಳ ಅವಧಿಗೆ ವಿಸ್ತರಿಸಬಹುದು. ಇದನ್ನು ಖಾತೆ ಮುಕ್ತಾಯದ ಒಂದು ವರ್ಷದ ಒಳಗಾಗಿ ವಿಸ್ತರಿಸಬೇಕು. ಇದರಿಂದ ಹೆಚ್ಚಿನ ಗಳಿಕೆಯನ್ನು ಮಾಡಬಹುದು. ಹಾಗಿದ್ದರೆ ನೀವು 1 ಕೋಟಿ ಗಳಿಕೆ ಮಾಡಬೇಕಾದರೆ ಎಷ್ಟು ವರ್ಷ ಹೂಡಿಕೆ ಮಾಡಬೇಕು? ಮತ್ತು ತಿಂಗಳಿಗೆ ಎಷ್ಟು ಪಾವತಿಸಬೇಕು? ಈ ಬಗ್ಗೆ ತಿಳಿದುಕೊಳ್ಳೋಣ.
ಪಿಪಿಎಫ್‌ನಲ್ಲಿ ಮಾಡಬಹುದಾದ ಗರಿಷ್ಠ ಮಾಸಿಕ ಹೂಡಿಕೆ 12,500 ರೂಪಾಯಿಯನ್ನು 15 ವರ್ಷಗಳವರೆಗೆ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಪ್ರಸ್ತುತ ಇರುವ ಶೇ.7.1 ಬಡ್ಡಿಯ ಲೆಕ್ಕಾಚಾರ ಮುಂದುವರೆದರೆ ಮೆಚ್ಯೂರಿಟಿ ಸಮಯದಲ್ಲಿ 43 ಲಕ್ಷಕ್ಕೂ ಹೆಚ್ಚಿನ ಕಾರ್ಪಸ್ ಅನ್ನು ನಿರ್ವಹಿಸಬಹುದು.
ನೀವು 12,500 ರೂ. ಮಾಸಿಕವಾಗಿ ಪ್ರತಿ ತಿಂಗಳು ಪಾವತಿಸುತ್ತಿದ್ದರೆ 15ನೇ ವರ್ಷದಲ್ಲಿ ನಿಮಗೆ ಹಣದ ಅವಶ್ಯಕತೆ ಇಲ್ಲವೆಂದಾದರೆ ಖಾತೆಯನ್ನು ವಿಸ್ತರಿಸುವ ಅವಕಾಶವೂ ಇದೆ. 15ವರ್ಷಗಳಲ್ಲಿ ಗಳಿಸಿದ ಹಣವನ್ನು ಹಿಂತೆಗೆಯದಿದ್ದರೆ ಖಾತೆಯನ್ನು ಮೊದಲ ವಿಸ್ತರಣೆಯಂತೆ ಐದು ವರ್ಷಗಳಿಗೆ ವಿಸ್ತರಿಸಬಹುದು. ಒಟ್ಟಾರೆ ಇಪ್ಪತ್ತು ವರ್ಷಗಳಲ್ಲಿ ನಿಮ್ಮ ಗಳಿಕೆಯು 73 ಲಕ್ಷಕ್ಕೆ ತಲುಪಲಿದೆ.
ಈಗಲೂ ನೀವು ಹಣವನ್ನು ಪಡೆಯದೆ ಮತ್ತೆ ಖಾತೆಯನ್ನು ವಿಸ್ತರೆಣೆ ಮಾಡುತ್ತೀರಿ ಎಂದಾದರೆ ಎರಡನೇ ಬಾರಿ ವಿಸ್ತರಣೆಗೂ ಅವಕಾಶ ಇದೆ. 20 ವರ್ಷಗಳ ಅವಧಿಯ ಖಾತೆಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಬಹುದು. ಇದರಿಂದಾಗಿ 25 ವರ್ಷಗಳಲ್ಲಿ 7.1 ಪ್ರತಿಶತ ಬಡ್ಡಿಯ ಲೆಕ್ಕಾಚಾರವನ್ನು ಹಾಕಿದಾಗ ವಾರ್ಷಿಕ 1.5 ಲಕ್ಷ ರೂಪಾಯಿ ಹೂಡಿಕೆಯನ್ನು 1 ಕೋಟಿ ರೂಪಾಯಿಗಳ ಕಾರ್ಪಸ್ ಆಗಿ ಪರಿವರ್ತಿಸಬಹುದು. ಒಟ್ಟಾರೆಯಾಗಿ ಪಿಪಿಎಫ್ ಖಾತೆಯ ಬ್ಯಾಲೆನ್ಸ್ 1,16,60,769 ರೂ. ಆಗಿರುತ್ತದೆ.
ಪಿಪಿಎಫ್ ಹೂಡಿಕೆಯು ಅಪಾಯಗಳನ್ನು ತೆಗೆದುಕೊಳ್ಳಲು ಇಷ್ಟಪಡದ, ಸಾಮಾನ್ಯವಾಗಿ ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಗಳೊಂದಿಗೆ ಸಂಬಂಧಿಸಿದ ಮತ್ತು ಸ್ಥಿರ ಆದಾಯವನ್ನು ಬಯಸುವ ಸಂಪ್ರದಾಯವಾದಿ ಹೂಡಿಕೆದಾರರಿಗೆ ಸೂಕ್ತವಾಗಿರುತ್ತದೆ. ಹೂಡಿಕೆಯು 80C ಯ ಪ್ರಯೋಜನವನ್ನು ಹೊಂದಿದ್ದು, ಇದರ ಅಡಿಯಲ್ಲಿ ಹೂಡಿಕೆದಾರರು 1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ