
ನವದೆಹಲಿ, ಆಗಸ್ಟ್ 30: ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್‌ನ (HDFC Bank) ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಶಶಿಧರ್ ಜಗದೀಶನ್ (Sashidhar Jagdishan) ಅವರು ಸೇವೆಯಿಂದ ನಿವೃತ್ತರಾಗಲು ನಿರ್ಧರಿಸಿದ್ದಾರೆ. ಅಕ್ಟೋಬರ್ 26, ಅವರ ಸೇವೆಯ ಕೊನೆಯ ದಿನವಾಗಿರಲಿದೆ. ನಿವೃತ್ತರಾಗಲು ದೃಢವಾಗಿ ನಿಶ್ಚಯಿಸಿದಂತಿರುವ ಅವರು ಮತ್ತೆ ಅದೇ ಸಿಇಒ ಸ್ಥಾನಕ್ಕೆ ಮರುನೇಮಕ (Reappointment) ಆಗಲು ಇಚ್ಛಿಸುವುದಿಲ್ಲ ಎಂದು ಬ್ಯಾಂಕ್ ಮಂಡಳಿಗೆ ತಿಳಿಸಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಇತ್ತೀಚಿನ ಆಡಳಿತಾತ್ಮಕ ವಿವಾದಗಳ (HDFC controversies) ಹಿನ್ನೆಲೆಯಲ್ಲಿ ಜಗದೀಶನ್ ಅವರ ನಿರ್ಗಮನವು ಕುತೂಹಲ ಮೂಡಿಸುತ್ತದೆ.
ಶಶಿಧರ್ ಜಗದೀಶನ್ ಅವರು 2020ರ ಅಕ್ಟೋಬರ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ದೀರ್ಘಾವಧಿಯ ಸಿಇಒ ಆದಿತ್ಯ ಪುರಿ ಅವರಿಂದ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಕಳೆದ ಮೂರು ದಶಕಗಳಿಂದ ಎಚ್ಡಿಎಫ್ಸಿಯಲ್ಲಿರುವ ಜಗದೀಶನ್ ಅವರು 2020ರಿಂದ ಎರಡು ಅವಧಿಗೆ ಸಿಇಒ ಮತ್ತು ಎಂಡಿಯಾಗಿದ್ದಾರೆ. ಮೂರನೇ ಅವಧಿಗೂ ಅವರೇ ಮುಂದುವರಿಯುವ ನಿರೀಕ್ಷೆ ಇತ್ತು. ಆದರೆ, ಅವರು ನಿವೃತ್ತರಾಗಲು ದೃಢವಾಗಿ ನಿರ್ಧರಿಸಿದ್ದಾರೆ. ಅಕ್ಟೋಬರ್ 26ಕ್ಕೆ ಅವರ ಸೇವಾವಧಿ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: 4.5 ಸೆಕೆಂಡ್ಸ್ನಲ್ಲಿ 100 ಕಿ.ಮೀ. ವೇಗ: 1.90 ಕೋಟಿಯ ರೇಂಜ್ ರೋವರ್ ಸ್ಪೋರ್ಟ್ ಟ್ವೆಂಟಿ ಬಿಡುಗಡೆ
61 ವರ್ಷದ ಶಶಿಧರ್ ಜಗದೀಶನ್ ಅವರ ಅಧಿಕಾರಾವಧಿಯಲ್ಲಿ ಎಚ್‌ಡಿಎಫ್‌ಸಿ ಲಿಮಿಟೆಡ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಐತಿಹಾಸಿಕ ವಿಲೀನ (Mega-Merger) ಯಶಸ್ವಿಯಾಗಿ ನೆರವೇರಿದೆ. ಇದು ಬ್ಯಾಂಕ್ ಅನ್ನು ಜಾಗತಿಕವಾಗಿ ಅತಿದೊಡ್ಡ ಹಣಕಾಸು ಸಂಸ್ಥೆಗಳ ಸಾಲಿನಲ್ಲಿ ನಿಲ್ಲಿಸಿತು.
ಮುಂದಿನ ಉತ್ತರಾಧಿಕಾರಿಯ ಹುಡುಕಾಟ: ಬ್ಯಾಂಕ್‌ನ ಆಡಳಿತ ಮಂಡಳಿಯು ನೂತನ ಸಿಇಒ ಆಯ್ಕೆಗಾಗಿ ಶೋಧನಾ ಸಮಿತಿಯನ್ನು (Search Committee) ರಚಿಸಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮೋದನೆಯೊಂದಿಗೆ ಮುಂದಿನ ಮುಖ್ಯಸ್ಥರನ್ನು ನೇಮಕ ಮಾಡಲಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಇತ್ತೀಚೆಗೆ ಕೆಲವು ಪ್ರಮುಖ ವಿವಾದಗಳು ಮತ್ತು ಕಾನೂನು ಸವಾಲುಗಳನ್ನು ಎದುರಿಸುತ್ತಿದೆ. ಬ್ಯಾಂಕ್ ಮತ್ತು ಅದರ ಉನ್ನತ ಅಧಿಕಾರಿಗಳ (ಎಂಡಿ & ಸಿಇಒ ಶಶಿಧರ್ ಜಗದೀಶನ್ ಹಾಗೂ ಸಿಎಫ್‌ಒ ಶ್ರೀನಿವಾಸನ್ ವೈದ್ಯನಾಥನ್) ವಿರುದ್ಧ ಅಮೆರಿಕದ ಹೂಡಿಕೆದಾರರು ಅಮೆರಿಕನ್ ಡೆಪಾಸಿಟರಿ ಷೇರುಗಳ (ADS) ವಂಚನೆ ಆರೋಪದ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆ (Class Action Lawsuit) ಹೂಡಿದ್ದಾರೆ.
ಇದನ್ನೂ ಓದಿ: ಭಾರತದ ಫಾರೆಕ್ಸ್ ರಿಸರ್ವ್ಸ್ 729 ಬಿಲಿಯನ್ ಡಾಲರ್ಗೆ ಏರಿಕೆ; ಸಾರ್ವಕಾಲಿಕ ದಾಖಲೆ
ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ (MSRDC) ಭಾರಿ ಪ್ರಮಾಣದ ಠೇವಣಿ ಪಡೆಯಲು, ಬ್ಯಾಂಕ್ ನಿಯಮ ಮೀರಿ ಶೇ. 6.01 ರಷ್ಟು ಬಡ್ಡಿ ದರ ನೀಡಿತ್ತು. ಹೆಚ್ಚುವರಿಯಾಗಿ ನೀಡಿದ ಈ ಬಡ್ಡಿ ಮೊತ್ತವನ್ನು (ಸುಮಾರು ₹45 ಕೋಟಿ) ಬಡ್ಡಿ ಪಾವತಿ ಎಂದು ತೋರಿಸುವ ಬದಲು, MSRDCಯ ‘ರಸ್ತೆ ಸುರಕ್ಷತೆ ಜಾಗೃತಿ’ ಕಾರ್ಯಕ್ರಮದ ಮಾರ್ಕೆಟಿಂಗ್ ಮತ್ತು ಸ್ಪಾನ್ಸರ್‌ಶಿಪ್ ವೆಚ್ಚ ಎಂದು ತೋರಿಸಿ ವರದಿಗಳಲ್ಲಿ ಮುಚ್ಚಿಡಲಾಗಿತ್ತು ಎಂಬ ಆರೋಪವಿದೆ.
ಈ ಮೊಕದ್ದಮೆಯಲ್ಲಿ ಯಾವುದೇ ಆಧಾರವಿಲ್ಲ, ಷೇರು ಬೆಲೆ ಕುಸಿದಾಗ ಇಂತಹ ಹೂಡಿಕೆದಾರರ ದೂರುಗಳು ಸಾಮಾನ್ಯವಾಗಿದ್ದು, ಇದನ್ನು ಕಾನೂನಾತ್ಮಕವಾಗಿ ಎದುರಿಸುವುದಾಗಿ ಬ್ಯಾಂಕ್ ತಿಳಿಸಿದೆ. ಇದೀಗ ಸಿಇಒ ಮತ್ತು ಎಂಡಿಯಾಗಿರುವ ಶಶಿಧರ್ ಜಗದೀಶನ್ ಅವರು ನಿರ್ಗಮಿಸಲಿದ್ದು, ಮುಂದಿನ ಸಿಇಒ ಯಾರು ಎನ್ನುವ ಕುತೂಹಲವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ