
ಮುಂಬೈ, ಮೇ 27: ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ (MSRDC) ಸಂಬಂಧಿಸಿದ 45 ಕೋಟಿ ರೂ ಬಡ್ಡಿ ಪಾವತಿಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ವರದಿಗಳು ಹರಿದಾಡಿದ ಬೆನ್ನಲ್ಲೇ, ಭಾರತದ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಇಂದು ಷೇರು ಬಜಾರಿನಲ್ಲಿ ಶೇ. 2.54ರಷ್ಟು (19 ರೂ) ಹಿನ್ನಡೆ ಅನುಭವಿಸಿದೆ. ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಬ್ಯಾಂಕು ತಳ್ಳಿಹಾಕಿದರೂ, ಷೇರು ಕುಸಿತ ತಡೆಯಲು ಆಗಲಿಲ್ಲ. ಮಂಗಳವಾರ ವಹಿವಾಟಿನಲ್ಲಿ ಈ ಬ್ಯಾಂಕ್ನ ಷೇರು ಸಂಪತ್ತು 24,000 ಕೋಟಿ ರೂಗೂ ಅಧಿಕ ಮೊತ್ತದಷ್ಟು ಕರಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ನ ಸ್ಪಷ್ಟನೆಗಳು ಹೂಡಿಕೆದಾರರಿಗೆ ಸಮಾಧಾನ ಎನಿಸಿದಲ್ಲಿ ನಾಳೆ ಗುರುವಾರ ಅದರ ಷೇರುಬೆಲೆ ಚೇತರಿಕೆ ಕಾಣಬಹುದು.
ಮಹಾರಾಷ್ಟ್ರ ಸರ್ಕಾರಿ ಸ್ವಾಮ್ಯದ ಎಂಎಸ್‌ಆರ್‌ಡಿಸಿ (MSRDC) ಸಂಸ್ಥೆಯ ನಿಧಿ ನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ಸುಮಾರು 45 ಕೋಟಿ ರೂಪಾಯಿಗಳ ಬಡ್ಡಿ ಪಾವತಿಯ ಪ್ರಕ್ರಿಯೆಯಲ್ಲಿ ಕೆಲವು ನಿಯಮ ಬಾಹಿರ ಚಟುವಟಿಕೆಗಳು ನಡೆದಿವೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ವರದಿಯಾಗಿತ್ತು. ಈ ವರದಿ ಹೂಡಿಕೆದಾರರು ಮತ್ತು ಬ್ಯಾಂಕಿಂಗ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ವರದಿ ಪ್ರಕಾರ, ಮಹಾರಾಷ್ಟ್ರ ರಸ್ತೆ ಅಭಿವೃದ್ಧಿ ನಿಗಮವು ಎಚ್‌ಡಿಎಫ್‌ಸಿ ಬ್ಯಾಂಕ್ನಲ್ಲಿ ಠೇವಣಿಗಳನ್ನು ಇಟ್ಟಿತ್ತು. ಇದಕ್ಕೆ ಪೂರ್ವದಲ್ಲೇ ನಿಗದಿಯಾದ ಬಡ್ಡಿದರಕ್ಕಿಂತಲೂ ಹೆಚ್ಚಿನ ಬಡ್ಡಿಯನ್ನು ಬ್ಯಾಂಕ್ ನೀಡಿತ್ತು. ಈ ಹೆಚ್ಚುವರಿ ಬಡ್ಡಿ ಮೊತ್ತ 45 ಕೋಟಿ ರೂ. ಸ್ಥಳೀಯ ಕಂಪನಿಗಳ ಮೂಲಕ ರಸ್ತೆ ಸುರಕ್ಷತೆ ಅಭಿಯಾನ ಇತ್ಯಾದಿ ಹೆಸರಿನಲ್ಲಿ ಬ್ಯಾಂಕ್ನ ಮಾರ್ಕೆಟಿಂಗ್ ವಿಭಾಗದ ಮೂಲಕ ನಿಗಮದ ಅಕೌಂಟ್ಗೆ ಹಣವನ್ನು ಹಾಕಲಾಗಿತ್ತು.
ಮಾರ್ಚ್ 12ರಂದು ಎಂಡಿ ರಂಗನಾಥ್ ಅಧ್ಯಕ್ಷತೆಯ ಆಡಿಟ್ ಕಮಿಟಿ ಬೋರ್ಡ್ (ಎಸಿಬಿ) ಈ ಹೆಚ್ಚುವರಿ ಪಾವತಿ ವಿಚಾರವಾಗಿ ಆಂತರಿಕ ವಿಚಕ್ಷಣಾ ತನಿಖೆಗೆ (Internal Vigilance Investigation) ಆದೇಶ ನೀಡಿತ್ತು. ಈ ವಿಚಾರವನ್ನು ಬ್ಯಾಂಕ್ ತನ್ನ ಷೇರುದಾರರಿಗೆ ತಿಳಿಸದೆ ಮುಚ್ಚಿಟ್ಟಿತು ಎನ್ನುವ ಆರೋಪವೂ ಇದೆ.
ಇದನ್ನೂ ಓದಿ: ಷೇರುಬಜಾರಲ್ಲಿ ಅದಾನಿ ಪವರ್ ಅಬ್ಬರ; ಮಾರುಕಟ್ಟೆ ಮೌಲ್ಯದಲ್ಲಿ ಇನ್ಫೋಸಿಸ್ ಹಿಂದಿಕ್ಕಿದ್ದು ಹೇಗೆ?
ಮಾಧ್ಯಮಗಳ ವರದಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್, “ನಮ್ಮ ಬ್ಯಾಂಕಿಂಗ್ ವಹಿವಾಟುಗಳು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ವಿಧಿಸಿರುವ ಎಲ್ಲಾ ನಿಯಂತ್ರಕ ಮಾರ್ಗಸೂಚಿಗಳು ಮತ್ತು ಆಡಳಿತಾತ್ಮಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ” ಎಂದು ಹೇಳಿದೆ.
ಎಂಎಸ್‌ಆರ್‌ಡಿಸಿ ನಿಧಿಗೆ ಸಂಬಂಧಿಸಿದ ಬಡ್ಡಿ ಲೆಕ್ಕಾಚಾರ ಅಥವಾ ಪಾವತಿಯಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ತಪ್ಪು ನಡೆದಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ಬ್ಯಾಂಕ್ ತನ್ನ ಕಾರ್ಪೊರೇಟ್ ಗ್ರಾಹಕರೊಂದಿಗೆ ಮಾಡಿಕೊಂಡಿರುವ ಒಪ್ಪಂದದ ನಿಯಮಗಳ ಅಡಿಯಲ್ಲೇ ಎಲ್ಲಾ ಹಣಕಾಸು ಪ್ರಕ್ರಿಯೆಗಳನ್ನು ನಡೆಸಿದೆ ಎಂದು ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ: ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ ಸುಪ್ರೀಂ ಶಾಕ್; ಶೇ 28 ಜಿಎಸ್ಟಿ ಪೂರ್ವಾನ್ವಯ ತೆರಿಗೆ ಸಿಂಧು ಎಂದು ಕೋರ್ಟ್ ತೀರ್ಪು
ಇಂತಹ ದೊಡ್ಡ ಮೊತ್ತದ ವಿವಾದಗಳು ಮುಂಚೂಣಿಗೆ ಬಂದಾಗ ಬ್ಯಾಂಕ್‌ಗಳ ಷೇರುಗಳ ಮೇಲೆ ಪ್ರಭಾವ ಬೀರುವುದು ಸಹಜ. ಆದರೆ ಎಚ್‌ಡಿಎಫ್‌ಸಿ ಬ್ಯಾಂಕ್ ತಕ್ಷಣವೇ ಅಧಿಕೃತ ಸ್ಪಷ್ಟನೆ ನೀಡಿ ಆರೋಪಗಳನ್ನು ತಳ್ಳಿಹಾಕಿರುವುದರಿಂದ, ಹೂಡಿಕೆದಾರರಲ್ಲಿ ಉಂಟಾಗಬಹುದಾಗಿದ್ದ ಆತಂಕ ನಿವಾರಣೆಯಾದಂತಾಗಿದೆ.
ದೇಶದ ಅತ್ಯಂತ ನಂಬಿಕಸ್ಥ ಮತ್ತು ಬಲಿಷ್ಠ ಬ್ಯಾಂಕಿಂಗ್ ವ್ಯವಸ್ಥೆ ಹೊಂದಿರುವ ಎಚ್‌ಡಿಎಫ್‌ಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಬಿದ್ದರೆ ನಿಯಂತ್ರಕ ಸಂಸ್ಥೆಗಳಿಗೆ ಸಂಪೂರ್ಣ ದಾಖಲೆಗಳನ್ನು ಒದಗಿಸಲು ಸಿದ್ಧವಿರುವುದಾಗಿ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ