HDFC: ಎಚ್​ಡಿಎಫ್​ಸಿ ಬ್ಯಾಂಕ್ ಭರ್ಜರಿ ಆದಾಯ; ಷೇರಿಗೆ ಒಳ್ಳೆಯ ಬೇಡಿಕೆ; ಈಗಲೇ ಹೂಡಿಕೆ ಮಾಡಿದರೆ ಭರ್ಜರಿ ಲಾಭದ ನಿರೀಕ್ಷೆ

|

Updated on: Jul 18, 2023 | 3:03 PM

Q1 Results of HDFC Bank: ಎಚ್​ಡಿಎಫ್​ಸಿ ಬ್ಯಾಂಕ್ ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ 11,951 ಕೋಟಿ ರೂ ನಿವ್ವಳ ಲಾಭ ಗಳಿಸಿರುವುದು ವರದಿಯಾಗಿದೆ. ಅದರ ಕೆಟ್ಟ ಸಾಲಗಳ ಪ್ರಮಾಣವೂ ಕಡಿಮೆ ಆಗಿದೆ.

HDFC: ಎಚ್​ಡಿಎಫ್​ಸಿ ಬ್ಯಾಂಕ್ ಭರ್ಜರಿ ಆದಾಯ; ಷೇರಿಗೆ ಒಳ್ಳೆಯ ಬೇಡಿಕೆ; ಈಗಲೇ ಹೂಡಿಕೆ ಮಾಡಿದರೆ ಭರ್ಜರಿ ಲಾಭದ ನಿರೀಕ್ಷೆ
ಎಚ್​ಡಿಎಫ್​ಸಿ ಬ್ಯಾಂಕ್
Follow us on

ನವದೆಹಲಿ, ಜುಲೈ 18: ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್​ಡಿಎಫ್​ಸಿ (HDFC Bank) 2023ರ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭರ್ಜರಿ ಆದಾಯ ತೋರಿಸಿದೆ. ಜುಲೈ 17ರಂದು ಬಿಡುಗಡೆ ಆದ ಅದರ ಹಣಕಾಸು ವರದಿ ಪ್ರಕಾರ, 2023-24ರ ಸಾಲಿನ ಮೊದಲ ಕ್ವಾರ್ಟರ್​ನಲ್ಲಿ (Q1) 11,951 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ನಿವ್ವಳ ಲಾಭ (Net Profit) 9,196 ಕೋಟಿ ರೂ ಇತ್ತು. ಈ ಬಾರಿ ಶೇ. 10ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಲಾಭ ಹೆಚ್ಚಳವಾಗಿದೆ. ಎಚ್​ಡಿಎಫ್​ಸಿ ಬ್ಯಾಂಕ್ ಹಣಕಾಸು ವರದಿ ಪ್ರಕಟವಾಗುವ ಮುನ್ನ ಕೆಲವಾರು ಬ್ರೋಕರೇಜ್ ಸಂಸ್ಥೆಗಳು ಲೆಕ್ಕ ಹಾಕಿದ ಪ್ರಕಾರ ಬ್ಯಾಂಕು 11,581 ಕೋಟಿ ರೂ ಗಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ನಿರೀಕ್ಷೆಗಿಂತಲೂ ಹೆಚ್ಚೇ ಲಾಭ ಬಂದಿರುವುದು ಗಮನಾರ್ಹ.

ಎಚ್​ಡಿಎಫ್​ಸಿ ಬ್ಯಾಂಕ್ ಉತ್ತಮ ಲಾಭ ಪಡೆದಿರುವುದು ಮಾತ್ರವಲ್ಲ, ಅದರ ನಷ್ಟ ಸಾಧ್ಯತೆಯೂ ಕಡಿಮೆ ಆಗಿದೆ. ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಿಗೆ ತಲೆಬೇನೆಯಾಗುವ ಎನ್​ಪಿಎ ಅಥವಾ ಅನುತ್ಪಾದಕ ಸಾಲದ ಪ್ರಮಾಣ ಎಚ್​ಡಿಎಫ್​ಸಿಯಲ್ಲಿ ಬಹಳ ಕಡಿಮೆ ಇದೆ. ಇದರ ಜಿಎನ್​ಪಿಎ ಅಥವಾ ಸಮಗ್ರ ಅನುತ್ಪಾದಕ ಸಾಲದ ಪ್ರಮಾಣ ಶೇ. 1.17ರಷ್ಟಿದೆ. ಕಳೆದ ವರ್ಷ ಶೇ. 1.28ರಷ್ಟು ಜಿಎನ್​ಪಿಎ ಇತ್ತು. ಈ ಬಾರಿ ತುಸು ಉತ್ತಮಗೊಂಡಿದೆ. ಜಿಎನ್​ಪಿಎ ಇಷ್ಟಿದ್ದರೂ ಅದರ ನಿವ್ವಳ ಎನ್​ಪಿಎ ಅಥವಾ ಎನ್​ಎನ್​ಪಿಎ ಕೇವಲ 0.30ರಷ್ಟು ಮಾತ್ರ ಇದೆ.

ಇದನ್ನೂ ಓದಿPoverty: ಭಾರತದಲ್ಲಿ 13.5 ಕೋಟಿ ಮಂದಿ ಬಡತನದಿಂದ ಹೊರಕ್ಕೆ, ಉತ್ತರಪ್ರದೇಶದಲ್ಲಿ ಅತಿಹೆಚ್ಚು: ನೀತಿ ಆಯೋಗ್ ವರದಿ

ಎಚ್​ಡಿಎಫ್​ಸಿ ಬ್ಯಾಂಕ್ ಹೊಂದಿರುವ ಜಿಎನ್​ಪಿಎನಲ್ಲಿ ಹೆಚ್ಚಿನ ಪಾಲು ಕೃಷಿ ಸಾಲಗಳೇ. ಕೃಷಿ ವಲಯದಲ್ಲಿ ನೀಡಲಾದ ಸಾಲವನ್ನು ಹೊರಗಿಟ್ಟು ನೋಡಿದರೆ ಜಿಎನ್​ಪಿಎ ಪ್ರಮಾಣ ಶೇ. 0.94ರಷ್ಟು ಮಾತ್ರ ಇರುತ್ತಿತ್ತು ಎಂದು ಎಚ್​ಡಿಎಫ್​ಸಿ ಬ್ಯಾಂಕ್ ಹೇಳಿದೆ.

ಇನ್ನು, ಎಚ್​ಡಿಎಫ್​ಸಿ ಬ್ಯಾಂಕ್​ಗೆ ಬಡ್ಡಿಯಿಂದ ಬರುವ ಆದಾಯದಲ್ಲಿ ಒಳ್ಳೆಯ ಹೆಚ್ಚಳವಾಗಿದೆ. ಜೂನ್ ಅಂತ್ಯದ ಕ್ವಾರ್ಟರ್​ನಲ್ಲಿ ಅದರ ನಿವ್ವಳ ಬಡ್ಡಿ ಆದಾಯ (ಎನ್​ಐಐ) ಶೇ. 21.1ರಷ್ಟು ಹೆಚ್ಚಾಗಿ 23,599 ಕೋಟಿ ರೂ ತಲುಪಿದೆ. ಅದರ ಠೇವಣಿಗಳೂ ಕೂಡ 19.1 ಲಕ್ಷ ಕೋಟಿ ರೂಗೆ ಏರಿದೆ.

ಇದನ್ನೂ ಓದಿForex Jump: ಭಾರತದ ಫಾರೆಕ್ಸ್ ರಿಸರ್ವ್ಸ್ 2023ರಲ್ಲಿ ಅತಿಹೆಚ್ಚಳ; ಅಮೆರಿಕಕ್ಕಿಂತ ಎರಡು ಪಟ್ಟು ಹೆಚ್ಚು

ಎಚ್​ಡಿಎಫ್​ಸಿ ಬ್ಯಾಂಕ್ ಷೇರಿಗೆ ಒಳ್ಳೆಯ ಬೇಡಿಕೆ

ಎಚ್​ಡಿಎಫ್​ಸಿ ಬ್ಯಾಂಕ್ ಮೊದಲ ಕ್ವಾರ್ಟರ್​ನಲ್ಲಿ ಉತ್ತಮ ಲಾಭ ತೋರಿದ ಬೆನ್ನಲ್ಲೇ ಈಗ ಅದರ ಷೇರಿನತ್ತ ಎಲ್ಲರ ಚಿತ್ತ ನೆಟ್ಟಿದೆ. ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ವಿಲೀನವೂ ಸೇರಿದಂತೆ ಈ ಖಾಸಗಿ ಬ್ಯಾಂಕ್ ಉತ್ತಮ ಬೆಳವಣಿಗೆ ಹಳಿಯಲ್ಲಿ ಸಾಗುತ್ತಿದೆ. ಬ್ರೋಕರೇಜ್ ಸಂಸ್ಥೆಗಳ ಅಂದಾಜು ಪ್ರಕಾರ ಮುಂದಿನ ದಿನಗಳಲ್ಲಿ ಎಚ್​ಡಿಎಫ್​ಸಿಯ ಷೇರುಬೆಲೆ ಶೇ. 28ರಷ್ಟು ಹೆಚ್ಚಬಹುದು. ಅಚ್ಚರಿ ಎಂದರೆ ಎಚ್​ಡಿಎಫ್​ಸಿ ಬ್ಯಾಂಕ್ ಲಾಭದ ವರದಿ ಬಂದ ಮರುದಿನ (ಜುಲೈ 18) ಅದರ ಷೇರುಬೆಲೆ ಸಂಜೆಯ ವೇಳೆಗೆ ದಿಢೀರ್ ಕುಸಿದಿದೆ. ಮಂಗಳವಾರ ಬೆಳಗ್ಗೆ 1,700 ರೂ ಬೆಲೆ ಕಂಡಿದ್ದ ಅದು ಈಗ 1,671 ರುಪಾಯಿಗೆ ಇಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:02 pm, Tue, 18 July 23