HDFC Bank: ವಿಲೀನದ ಬಳಿಕ ಎಚ್ಡಿಎಫ್ಸಿ ಬ್ಯಾಂಕ್ ವಿಶ್ವದ 7ನೇ ಅತಿದೊಡ್ಡ ಬ್ಯಾಂಕ್
Post Merger, HDFC Bank Becomes Global Giant: ಎಚ್ಡಿಎಫ್ಸಿಯನ್ನು ಸ್ವಾಧೀನಪಡಿಸಿಕೊಂಡ ಬಳಿಕ ಹೊಸ ಅವತಾರದಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಜುಲೈ 17ರಂದು ಷೇರುಪೇಟೆಗಳಲ್ಲಿ ಲಿಸ್ಟ್ ಆಗಿದೆ. ಈ ಮೂಲಕ ಅದರ ಷೇರುಸಂಪತ್ತು 154 ಬಿಲಿಯನ್ ಡಾಲರ್ಗೆ ಏರಿದೆ.
ನವದೆಹಲಿ, ಜುಲೈ 18: ಎಚ್ಡಿಎಫ್ಸಿ ಲಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ವಿಲೀನಗೊಂಡ (HDFC Merger) ಪರಿಣಾಮ ಭಾರತದ್ದೇ ಸ್ವಂತ ಬ್ಯಾಂಕ್ವೊಂದು ಜಾಗತಿಕ ದೈತ್ಯರ ಸಾಲಿಗೆ ಸೇರಿದಂತಾಗಿದೆ. ಸೋಮವಾರ (ಜುಲೈ 17) ಎಚ್ಡಿಎಫ್ಸಿ ಬ್ಯಾಂಕ್ನ ಷೇರುಮೌಲ್ಯ ಹೆಚ್ಚಾಗಿ ಅದರ ಒಟ್ಟು ಷೇರುಸಂಪತ್ತು (Market Capitalization) 154 ಬಿಲಿಯನ್ ಡಾಲರ್ಗೆ ಏರಿದೆ. ಅಂದರೆ 12.66 ಲಕ್ಷಕೋಟಿ ರೂ ಮೌಲ್ಯದ ಷೇರುಸಂಪತ್ತು ಎಚ್ಡಿಎಫ್ಸಿಯದ್ದಾಗಿದೆ. ಷೇರುಸಂಪತ್ತು ಅಥವಾ ಮಾರ್ಕೆಟ್ ಕ್ಯಾಪಿಟಲ್ನಲ್ಲಿ ಜಾಗತಿಕ ಬ್ಯಾಂಕುಗಳ ಪೈಕಿ ಎಚ್ಡಿಎಫ್ಸಿ ಬ್ಯಾಂಕ್ 7ನೇ ಸ್ಥಾನಕ್ಕೇರಿದೆ. ಚೀನಾ ಕನ್ಸ್ಟ್ರಕ್ಷನ್ ಬ್ಯಾಂಕ್, ಮಾರ್ಗನ್ ಸ್ಟಾನ್ಲೀ, ರಾಯಲ್ ಬ್ಯಾಂಕ್ ಆಫ್ ಕೆನಡಾ ಮೊದಲಾದ ಬ್ಯಾಂಕಿಂಗ್ ದೈತ್ಯರಿಗಿಂತಲೂ ಎತ್ತರಕ್ಕೆ ಎಚ್ಡಿಎಫ್ಸಿ ಹೋಗಿದೆ. ಅಗ್ರಿಕಲ್ಚರಲ್ ಬ್ಯಾಂಕ್ ಆಫ್ ಚೀನಾ ಮತ್ತು ಎಚ್ಎಸ್ಬಿಸಿಯನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರುವ ದಿನಗಳು ಮುಂದಿವೆ ಎಂದು ಹಲವು ಭವಿಷ್ಯ ನುಡಿದಿದ್ದಾರೆ.
ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಎರಡೂ ಸೋದರ ಸಂಸ್ಥೆಗಳು. ಇತ್ತೀಚೆಗೆ ಇವುಗಳ ವಿಲೀನಕ್ಕೆ ನಿರ್ಧರಿಸಲಾಯಿತು. 40 ಬಿಲಿಯನ್ ಡಾಲರ್ ಒಪ್ಪಂದದಲ್ಲಿ ಎಚ್ಡಿಎಫ್ಸಿ ಜುಲೈ 1ರಂದು ಅಧಿಕೃತವಾಗಿ ತನ್ನ ಸೋದರ ಸಂಸ್ಥೆಯೊಂದಿಗೆ ವಿಲೀನಗೊಂಡಿತು. ಎಚ್ಡಿಎಫ್ಸಿಯಲ್ಲಿ ಪ್ರತೀ 25 ಷೇರುಗಳಿಗೆ ಬ್ಯಾಂಕ್ನ 42 ಷೇರುಗಳಂತೆ ಹಂಚಲಾಯಿತು. ಷೇರುಮಾರುಕಟ್ಟೆಗಳಿಂದ ಎಚ್ಡಿಎಫ್ಸಿ ಷೇರುಗಳ ವಹಿವಾಟು ಜುಲೈ 13ಕ್ಕೆ ನಿಂತುಹೋಯಿತು. ವಿಲೀನದ ತರುವಾಯ ಎಚ್ಡಿಎಫ್ಸಿ ಬ್ಯಾಂಕ್ ಜುಲೈ 17ಕ್ಕೆ ಹೊಸದಾಗಿ ಲಿಸ್ಟ್ ಆಯಿತು. ಜುಲೈ 13ಕ್ಕೆ 1,641 ರೂ ಇದ್ದ ಎಚ್ಡಿಎಫ್ಸಿ ಬ್ಯಾಂಕ್ ಷೇರುಬೆಲೆ ಇದೀಗ 1,678 ರೂ ತಲುಪಿದೆ. ಕೆಲ ಬ್ರೋಕರೇಜ್ ಸಂಸ್ಥೆಗಳು ಇದರ ಷೇರುಬೆಲೆ ಒಂದು ವರ್ಷದಲ್ಲಿ 1,900 ರೂಗಿಂತ ಮೇಲೇರಬಹುದು ಎಂದು ಭವಿಷ್ಯ ನುಡಿದಿವೆ.
ಇದನ್ನೂ ಓದಿ: HDFC: ಎಚ್ಡಿಎಫ್ಸಿ ಬ್ಯಾಂಕ್ ಭರ್ಜರಿ ಆದಾಯ; ಷೇರಿಗೆ ಒಳ್ಳೆಯ ಬೇಡಿಕೆ; ಈಗಲೇ ಹೂಡಿಕೆ ಮಾಡಿದರೆ ಭರ್ಜರಿ ಲಾಭದ ನಿರೀಕ್ಷೆ
154 ಬಿಲಿಯನ್ ಡಾಲರ್ ಷೇರುಸಂಪತ್ತಿನೊಂದಿಗೆ ಎಚ್ಡಿಎಫ್ಸಿ ಬ್ಯಾಂಕ್ ಇದೀಗ ಭಾರತದ ನಂಬರ್ ಒನ್ ಬ್ಯಾಂಕಿಂಗ್ ಸಂಸ್ಥೆಯಾಗಿದೆ. ಐಸಿಐಸಿಐ ಬ್ಯಾಂಕ್ 82 ಬಿಲಿಯನ್ ಡಾಲರ್, ಎಸ್ಬಿಐ 64 ಬಿಲಿಯನ್ ಡಾಲರ್ ಷೇರುಸಂಪತ್ತು ಹೊಂದಿವೆ. ಇವೆರಡೂ ಬ್ಯಾಂಕುಗಳ ಷೇರುಸಂಪತ್ತು ಒಟ್ಟು ಸೇರಿಸಿದರೂ ಎಚ್ಡಿಎಫ್ಸಿ ಬ್ಯಾಂಕ್ನದಕ್ಕಿಂತ ಹೆಚ್ಚೇನಿಲ್ಲ.
ಮಾರ್ಕೆಟ್ ಕ್ಯಾಪ್ನಲ್ಲಿ ವಿಶ್ವದ ಟಾಪ್ ಬ್ಯಾಂಕುಗಳು
- ಜೆಪಿ ಮಾರ್ಗನ್ ಚೇಸ್: 448.22 ಬಿಲಿಯನ್ ಡಾಲರ್
- ಬ್ಯಾಂಕ್ ಆಫ್ ಅಮೆರಿಕ: 234.29 ಬಿಲಿಯನ್ ಡಾಲರ್
- ಐಸಿಬಿಸಿ: 219.11 ಬಿಲಿಯನ್ ಡಾಲರ್
- ವೆಲ್ಸ್ ಫಾರ್ಗೋ: 167.87 ಬಿಲಿಯನ್ ಡಾಲರ್
- ಎಚ್ಎಸ್ಬಿಸಿ: 161.08 ಬಿಲಿಯನ್ ಡಾಲರ್
- ಅಗ್ರಿಕಲ್ಚರಲ್ ಬ್ಯಾಂಕ್ ಆಫ್ ಚೀನಾ: 160.43 ಬಿಲಿಯನ್ ಡಾಲರ್
- ಎಚ್ಡಿಎಫ್ಸಿ ಬ್ಯಾಂಕ್: 157.79 ಬಿಲಿಯನ್ ಡಾಲರ್
- ಮಾರ್ಗನ್ ಸ್ಟಾನ್ಲೀ: 144.24 ಬಿಲಿಯನ್ ಡಾಲರ್
- ಚೀನಾ ಕನ್ಸ್ಟ್ರಕ್ಷನ್ ಬ್ಯಾಂಕ್: 139.98 ಬಿಲಿಯನ್ ಡಾಲರ್
- ರಾಯಲ್ ಬ್ಯಾಂಕ್ ಆಫ್ ಕೆನಡಾ: 137.16 ಬಿಲಿಯನ್ ಡಾಲರ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ