HDFC: ಎಚ್ಡಿಎಫ್ಸಿ ಬ್ಯಾಂಕ್ ಭರ್ಜರಿ ಆದಾಯ; ಷೇರಿಗೆ ಒಳ್ಳೆಯ ಬೇಡಿಕೆ; ಈಗಲೇ ಹೂಡಿಕೆ ಮಾಡಿದರೆ ಭರ್ಜರಿ ಲಾಭದ ನಿರೀಕ್ಷೆ
Q1 Results of HDFC Bank: ಎಚ್ಡಿಎಫ್ಸಿ ಬ್ಯಾಂಕ್ ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ನಲ್ಲಿ 11,951 ಕೋಟಿ ರೂ ನಿವ್ವಳ ಲಾಭ ಗಳಿಸಿರುವುದು ವರದಿಯಾಗಿದೆ. ಅದರ ಕೆಟ್ಟ ಸಾಲಗಳ ಪ್ರಮಾಣವೂ ಕಡಿಮೆ ಆಗಿದೆ.
ನವದೆಹಲಿ, ಜುಲೈ 18: ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್ ಎಚ್ಡಿಎಫ್ಸಿ (HDFC Bank) 2023ರ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭರ್ಜರಿ ಆದಾಯ ತೋರಿಸಿದೆ. ಜುಲೈ 17ರಂದು ಬಿಡುಗಡೆ ಆದ ಅದರ ಹಣಕಾಸು ವರದಿ ಪ್ರಕಾರ, 2023-24ರ ಸಾಲಿನ ಮೊದಲ ಕ್ವಾರ್ಟರ್ನಲ್ಲಿ (Q1) 11,951 ಕೋಟಿ ರೂ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ನಿವ್ವಳ ಲಾಭ (Net Profit) 9,196 ಕೋಟಿ ರೂ ಇತ್ತು. ಈ ಬಾರಿ ಶೇ. 10ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಲಾಭ ಹೆಚ್ಚಳವಾಗಿದೆ. ಎಚ್ಡಿಎಫ್ಸಿ ಬ್ಯಾಂಕ್ ಹಣಕಾಸು ವರದಿ ಪ್ರಕಟವಾಗುವ ಮುನ್ನ ಕೆಲವಾರು ಬ್ರೋಕರೇಜ್ ಸಂಸ್ಥೆಗಳು ಲೆಕ್ಕ ಹಾಕಿದ ಪ್ರಕಾರ ಬ್ಯಾಂಕು 11,581 ಕೋಟಿ ರೂ ಗಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ನಿರೀಕ್ಷೆಗಿಂತಲೂ ಹೆಚ್ಚೇ ಲಾಭ ಬಂದಿರುವುದು ಗಮನಾರ್ಹ.
ಎಚ್ಡಿಎಫ್ಸಿ ಬ್ಯಾಂಕ್ ಉತ್ತಮ ಲಾಭ ಪಡೆದಿರುವುದು ಮಾತ್ರವಲ್ಲ, ಅದರ ನಷ್ಟ ಸಾಧ್ಯತೆಯೂ ಕಡಿಮೆ ಆಗಿದೆ. ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಿಗೆ ತಲೆಬೇನೆಯಾಗುವ ಎನ್ಪಿಎ ಅಥವಾ ಅನುತ್ಪಾದಕ ಸಾಲದ ಪ್ರಮಾಣ ಎಚ್ಡಿಎಫ್ಸಿಯಲ್ಲಿ ಬಹಳ ಕಡಿಮೆ ಇದೆ. ಇದರ ಜಿಎನ್ಪಿಎ ಅಥವಾ ಸಮಗ್ರ ಅನುತ್ಪಾದಕ ಸಾಲದ ಪ್ರಮಾಣ ಶೇ. 1.17ರಷ್ಟಿದೆ. ಕಳೆದ ವರ್ಷ ಶೇ. 1.28ರಷ್ಟು ಜಿಎನ್ಪಿಎ ಇತ್ತು. ಈ ಬಾರಿ ತುಸು ಉತ್ತಮಗೊಂಡಿದೆ. ಜಿಎನ್ಪಿಎ ಇಷ್ಟಿದ್ದರೂ ಅದರ ನಿವ್ವಳ ಎನ್ಪಿಎ ಅಥವಾ ಎನ್ಎನ್ಪಿಎ ಕೇವಲ 0.30ರಷ್ಟು ಮಾತ್ರ ಇದೆ.
ಇದನ್ನೂ ಓದಿ: Poverty: ಭಾರತದಲ್ಲಿ 13.5 ಕೋಟಿ ಮಂದಿ ಬಡತನದಿಂದ ಹೊರಕ್ಕೆ, ಉತ್ತರಪ್ರದೇಶದಲ್ಲಿ ಅತಿಹೆಚ್ಚು: ನೀತಿ ಆಯೋಗ್ ವರದಿ
ಎಚ್ಡಿಎಫ್ಸಿ ಬ್ಯಾಂಕ್ ಹೊಂದಿರುವ ಜಿಎನ್ಪಿಎನಲ್ಲಿ ಹೆಚ್ಚಿನ ಪಾಲು ಕೃಷಿ ಸಾಲಗಳೇ. ಕೃಷಿ ವಲಯದಲ್ಲಿ ನೀಡಲಾದ ಸಾಲವನ್ನು ಹೊರಗಿಟ್ಟು ನೋಡಿದರೆ ಜಿಎನ್ಪಿಎ ಪ್ರಮಾಣ ಶೇ. 0.94ರಷ್ಟು ಮಾತ್ರ ಇರುತ್ತಿತ್ತು ಎಂದು ಎಚ್ಡಿಎಫ್ಸಿ ಬ್ಯಾಂಕ್ ಹೇಳಿದೆ.
ಇನ್ನು, ಎಚ್ಡಿಎಫ್ಸಿ ಬ್ಯಾಂಕ್ಗೆ ಬಡ್ಡಿಯಿಂದ ಬರುವ ಆದಾಯದಲ್ಲಿ ಒಳ್ಳೆಯ ಹೆಚ್ಚಳವಾಗಿದೆ. ಜೂನ್ ಅಂತ್ಯದ ಕ್ವಾರ್ಟರ್ನಲ್ಲಿ ಅದರ ನಿವ್ವಳ ಬಡ್ಡಿ ಆದಾಯ (ಎನ್ಐಐ) ಶೇ. 21.1ರಷ್ಟು ಹೆಚ್ಚಾಗಿ 23,599 ಕೋಟಿ ರೂ ತಲುಪಿದೆ. ಅದರ ಠೇವಣಿಗಳೂ ಕೂಡ 19.1 ಲಕ್ಷ ಕೋಟಿ ರೂಗೆ ಏರಿದೆ.
ಇದನ್ನೂ ಓದಿ: Forex Jump: ಭಾರತದ ಫಾರೆಕ್ಸ್ ರಿಸರ್ವ್ಸ್ 2023ರಲ್ಲಿ ಅತಿಹೆಚ್ಚಳ; ಅಮೆರಿಕಕ್ಕಿಂತ ಎರಡು ಪಟ್ಟು ಹೆಚ್ಚು
ಎಚ್ಡಿಎಫ್ಸಿ ಬ್ಯಾಂಕ್ ಷೇರಿಗೆ ಒಳ್ಳೆಯ ಬೇಡಿಕೆ
ಎಚ್ಡಿಎಫ್ಸಿ ಬ್ಯಾಂಕ್ ಮೊದಲ ಕ್ವಾರ್ಟರ್ನಲ್ಲಿ ಉತ್ತಮ ಲಾಭ ತೋರಿದ ಬೆನ್ನಲ್ಲೇ ಈಗ ಅದರ ಷೇರಿನತ್ತ ಎಲ್ಲರ ಚಿತ್ತ ನೆಟ್ಟಿದೆ. ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ವಿಲೀನವೂ ಸೇರಿದಂತೆ ಈ ಖಾಸಗಿ ಬ್ಯಾಂಕ್ ಉತ್ತಮ ಬೆಳವಣಿಗೆ ಹಳಿಯಲ್ಲಿ ಸಾಗುತ್ತಿದೆ. ಬ್ರೋಕರೇಜ್ ಸಂಸ್ಥೆಗಳ ಅಂದಾಜು ಪ್ರಕಾರ ಮುಂದಿನ ದಿನಗಳಲ್ಲಿ ಎಚ್ಡಿಎಫ್ಸಿಯ ಷೇರುಬೆಲೆ ಶೇ. 28ರಷ್ಟು ಹೆಚ್ಚಬಹುದು. ಅಚ್ಚರಿ ಎಂದರೆ ಎಚ್ಡಿಎಫ್ಸಿ ಬ್ಯಾಂಕ್ ಲಾಭದ ವರದಿ ಬಂದ ಮರುದಿನ (ಜುಲೈ 18) ಅದರ ಷೇರುಬೆಲೆ ಸಂಜೆಯ ವೇಳೆಗೆ ದಿಢೀರ್ ಕುಸಿದಿದೆ. ಮಂಗಳವಾರ ಬೆಳಗ್ಗೆ 1,700 ರೂ ಬೆಲೆ ಕಂಡಿದ್ದ ಅದು ಈಗ 1,671 ರುಪಾಯಿಗೆ ಇಳಿದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Tue, 18 July 23