Hero Motocorp: ದೇಶದ ಎಲ್ಲ ಘಟಕಗಳಲ್ಲಿ ತಾತ್ಕಾಲಿಕವಾಗಿ ಉತ್ಪಾದನೆ ನಿಲ್ಲಿಸಲಿದೆ ಹೀರೋ ಮೋಟೋಕಾರ್ಪ್
ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣಕ್ಕೆ ದೇಶದ ಪ್ರಮುಖ ದ್ವಿಚಕ್ರ ವಾಹನ ಕಂಪೆನಿ ಹೀರೋ ಮೋಟೋಕಾರ್ಪ್ ಎಲ್ಲ ಉತ್ಪಾದನಾ ಘಟಕಗಳಲ್ಲಿ ಉತ್ಫಾದನೆ ನಿಲ್ಲಿಸಿದೆ.
ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್- 19 ಪ್ರಕರಣಗಳ ಹಿನ್ನೆಲೆಯಲ್ಲಿ ದೇಶದ ಅತಿದೊಡ್ಡ ದ್ವಿಚಕ್ರ ವಾಹನಗಳ ಉತ್ಪಾದಕ ಮತ್ತು ಉತ್ಪಾದನೆ ಪ್ರಮಾಣದ ದೃಷ್ಟಿಯಿಂದ ವಿಶ್ವದಲ್ಲೇ ಅತಿ ದೊಡ್ಡ ಕಂಪೆನಿಯಾದ ಹೀರೋ ಮೋಟೋಕಾರ್ಪ್ ಭಾರತದಲ್ಲಿ ತಾತ್ಕಾಲಿಕವಾಗಿ ಉತ್ಪಾದನೆ ಕಾರ್ಯಾಚರಣೆಯನ್ನು ನಿಲ್ಲಿಸಲು ನಿರ್ಧರಿಸಿದೆ. ಈ ಬಗ್ಗೆ ಕಂಪೆನಿಯಿಂದ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದ್ದು, ದೇಶದಾದ್ಯಂತ ಇರುವ ಉತ್ಪಾದನಾ ಘಟಕಗಳಲ್ಲಿ ಸ್ವಯಂಪ್ರೇರಿತವಾಗಿ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಕ್ಕೆ ನಿರ್ಧರಿಸಲಾಗಿದೆ. ಅದರಲ್ಲಿ ಗ್ಲೋಬಲ್ ಪಾರ್ಟ್ಸ್ ಸೆಂಟರ್ (ಜಿಪಿಸಿ) ಕೂಡ ಒಳಗೊಂಡಿದೆ ಎಂದು ಮಾಹಿತಿ ನೀಡಲಾಗಿದೆ. ಅಂದ ಹಾಗೆ ಭಾರತದಲ್ಲಿ ಅಧಿಕೃತವಾಗಿ 20 ಲಕ್ಷಕ್ಕೂ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇಂಥ ಸನ್ನಿವೇಶದಲ್ಲಿ ಕಂಪೆನಿಯಿಂದ ಈ ಹೇಳಿಕೆ ಬಂದಿದೆ.
ತಾತ್ಕಾಲಿಕವಾಗಿ ಮುಚ್ಚುವ ಈ ದಿನಗಳನ್ನು ಕಂಪೆನಿಯು ಉತ್ಪಾದನಾ ಘಟಕಗಳ ಅಗತ್ಯ ನಿರ್ವಹಣೆ ಕೆಲಸಗಳಿಗಾಗಿ ಬಳಸಿಕೊಳ್ಳಲಿದೆ ಎಂದು ಹೀರೋ ಮೋಟೋಕಾರ್ಪ್ ಹೇಳಿದೆ. ಈ ನಿರ್ಧಾರದಿಂದ ಬೇಡಿಕೆಯನ್ನು ಪೂರೈಸುವುದರಲ್ಲಿ ಕಂಪೆನಿಗೆ ಯಾವುದೇ ಹಿನ್ನಡೆ ಆಗುವುದಿಲ್ಲ. ಸ್ಥಳೀಯ ಲಾಕ್ಡೌನ್ ಕಾರಣಕ್ಕೆ ಆಗುವುದು ಮತ್ತು ಉತ್ಪಾದನಾ ನಷ್ಟವನ್ನು ಸರಿದೂಗಿಸುವುದಕ್ಕೆ ತ್ರೈಮಾಸಿಕದ ಬಾಕಿ ಅವಧಿಯಲ್ಲಿ ಪ್ರಯತ್ನಿಸಲಾಗುತ್ತದೆ ಎನ್ನಲಾಗಿದೆ. ಅಲ್ಪಾವಧಿಯ ಈ ಸ್ಥಗಿತವನ್ನು ಶೀಘ್ರದಲ್ಲೇ ತೆರವು ಮಾಡಲಾಗುತ್ತದೆ. ಪ್ರತಿ ಘಟಕ ಮತ್ತು ಜಿಪಿಸಿಯನ್ನು ನಾಲ್ಕು ದಿನಗಳ ಕಾಲ ಮುಚ್ಚಲಾಗುತ್ತದೆ. ಏಪ್ರಿಲ್ 22ರಿಂದ ಮೇ 1ರ ಮಧ್ಯೆ ಹಂತಹಂತವಾಗಿ ಸ್ಥಳೀಯ ಪರಿಸ್ಥಿತಿ ಮೇಲೆ ನಿರ್ಧರಿಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಂಪೆನಿಯ ಎಲ್ಲ ಕಾರ್ಪೊರೇಟ್ ಕಚೇರಿಯಲ್ಲಿ ಈಗಾಗಲೇ ವರ್ಕ್ ಫ್ರಮ್ ಹೋಮ್ ನೀಡಲಾಗಿದೆ. ಅಗತ್ಯ ಕೆಲಸಗಳಿಗಾಗಿ ಮಾತ್ರ ಸೀಮಿತ ಸಂಖ್ಯೆಯ ಉದ್ಯೋಗಿಗಳು ಪಾಳಿ ಮೇಲೆ ಕಚೇರಿಗೆ ತೆರಳುತ್ತಿದ್ದಾರೆ.
2020ರಲ್ಲಿ ಆರು ವಾರಗಳ ಕಾಲ ಲಾಕ್ಡೌನ್ ಮಾಡಿದ್ದಾಗ ಕಾರ್ಖಾನೆ ಮುಚ್ಚಲಾಗಿತ್ತು. ವಾಹನ ವಲಯಗಳಿಗೆ ಯಾವುದೇ ಮಾರಾಟ ಆಗಿರಲಿಲ್ಲ. ವಾಹನ ವಲಯವು ಶೀಘ್ರವಾಗಿ ಚೇತರಿಸಿಕೊಂಡು ಹಳಿಗೆ ಮರಳಿದ್ದರೂ ಹಲವು ಬ್ರ್ಯಾಂಡ್ಗಳು ಮಾರಾಟ ಸಂಖ್ಯೆಯಲ್ಲಿ ಹಿಂದೆ ಉಳಿದಿವೆ. ಹಲವು ರಾಜ್ಯಗಳಲ್ಲಿ ಈಗ ಮತ್ತೆ ನಿರ್ಬಂಧ, ಲಾಕ್ಡೌನ್ ಘೋಷಣೆಗೆ ಮುಂದಾಗಿರುವುದರಿಂದ ಭಾರತದ ಆರ್ಥಿಕತೆಯಂತೆಯೇ ವಾಹನ ವಲಯಕ್ಕೆ ಪೆಟ್ಟು ಬೀಳಬಹುದು ಎನ್ನಲಾಗುತ್ತಿದೆ. FY21 ನಾಲ್ಕನೇ ತ್ರೈಮಾಸಿಕ (ಜನವರಿಯಿಂದ ಮಾರ್ಚ್) ಮಾರಾಟ ಫಲಿತಾಂಶ ನಿರೀಕ್ಷೆಗಿಂತ ಉತ್ತಮವಾಗಿರುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಆದರೆ ಕೊರೊನಾ ಎರಡನೇ ಅಲೆ ಮತ್ತೆ ವಾಹನೋದ್ಯಮಕ್ಕೆ ಪೆಟ್ಟು ನೀಡುವಂತಿದೆ.
ಇದನ್ನೂ ಓದಿ: ಒಂದು ತಿಂಗಳು ರಾಷ್ಟ್ರವ್ಯಾಪಿ ಲಾಕ್ಡೌನ್ ಮಾಡಿದರೆ ಅಂದಾಜು 2.68 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ನಷ್ಟ
(Hero MotoCorp announced to stop manufacturing in India temporarily due to increase number of covid- 19)
Published On - 8:02 pm, Wed, 21 April 21