ಹಿಂದೂಜಾ ಗ್ರೂಪ್ ಮುಖ್ಯಸ್ಥ ಗೋಪಿಚಂದ್ ಹಿಂದೂಜಾ ನಿಧನ; ಬ್ರಿಟನ್‌ನ ಅತ್ಯಂತ ಶ್ರೀಮಂತ ಮನೆತನ ಅವರದ್ದು
G.P. Hinduja, Hinduja Group Chairman, Passes Away at 85: ಹಿಂದೂಜಾ ಗ್ರೂಪ್ನ ಅಧ್ಯಕ್ಷ ಗೋಪಿಚಂದ್ ಹಿಂದೂಜಾ (85) ಲಂಡನ್ನಲ್ಲಿ ನಿಧನರಾಗಿದ್ದಾರೆ. ಕೆಲ ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬ್ರಿಟನ್‌ನ ಶ್ರೀಮಂತರಲ್ಲಿ ಒಬ್ಬರಾಗಿದ್ದರು. ಅವರ ನಿಧನವು ಹಿಂದೂಜಾ ಗ್ರೂಪ್ನ 20ಕ್ಕೂ ಹೆಚ್ಚು ಕಂಪನಿಗಳ ವಿಸ್ತಾರವಾದ ವ್ಯಾಪಾರ ಸಾಮ್ರಾಜ್ಯದ ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಹಾಗೆಯೇ, ಮುಂದಿನ ಮುಖ್ಯಸ್ಥರು ಯಾರು ಎಂಬ ಬಗ್ಗೆ ಕುತೂಹಲ ಮೂಡಿಸಿದೆ.

ಲಂಡನ್, ನವೆಂಬರ್ 4: ಹಲವಾರು ಕಂಪನಿಗಳ ಸಮೂಹವಾದ ಹಿಂದೂಜಾ ಗ್ರೂಪ್ನ ಛೇರ್ಮನ್ ಆಗಿದ್ದ ಗೋಪಿಚಂದ್ ಹಿಂದೂಜಾ (85 ವರ್ಷ) ಇಹಲೋಕ ತ್ಯಜಿಸಿದ್ದಾರೆ. ಕೆಲ ವಾರಗಳಿಂದ ಅವರು ಅನಾರೋಗ್ಯದಿಂದ ಬಳಸುತ್ತಿದ್ದರು. ಪತ್ನಿ ಸುನೀತಾ ಹಾಗು ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ. ಲಂಡನ್ನ ನಿವಾಸಿಯಾಗಿದ್ದ ಜಿ.ಪಿ. ಹಿಂದೂಜಾ (Gopichand Hinduja) ಅವರು ಬ್ರಿಟನ್ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರೆನಿಸಿದ್ದರು. ಮೂರು ವರ್ಷಗಳ ಹಿಂದೆ 2023ರ ಮೇ ತಿಂಗಳಲ್ಲಿ ಅವರ ಹಿರಿಯಣ್ಣ ಶ್ರೀಚಂದ್ ಹಿಂದೂಜಾ ಮೃತಪಟ್ಟಿದ್ದರು.
ಯಾರು ಇವರು ಗೋಪಿಚಂದ್ ಹಿಂದೂಜಾ?
ಹಿಂದೂಜಾ ಗ್ರೂಪ್ನ ಮೂಲ ಸಂಸ್ಥಾಪಕರಾಗಿದ್ದ ಪರಮಾನಂದ್ ದೀಪ್ಚಂದ್ ಹಿಂದೂಜಾ ಅವರ ಎರಡನೇ ಮಗ ಗೋಪಿಚಂದ್. ಮೊದಲನೆಯ ಮಗ ಶ್ರೀಚಂದ್. ಪಿ.ಡಿ. ಹಿಂದೂಜಾ (ಪರಮಾನಂದ್) ಅವರು ಸ್ವಾತಂತ್ರ್ಯಪೂರ್ವದ ಭಾರತದ ಭಾಗವಾಗಿದ್ದ ಸಿಂಧ್ ಪ್ರಾಂತ್ಯದ ಮೂಲದವರು. 1914ರಲ್ಲಿ ಇವರು ಬ್ಯುಸಿನೆಸ್ ಆರಂಭಿಸಿದರು. ಮೊದಲಿಗೆ ಬಾಂಬೆ ಮತ್ತು ಶಿಖರ್ಪುರ್ (ಈಗಿನ ಪಾಕಿಸ್ತಾನದಲ್ಲಿದೆ) ನಗರಗಳಲ್ಲಿ ಇವರ ಬ್ಯುಸಿನೆಸ್ ಇತ್ತು.
1919ರಲ್ಲಿ ಇರಾನ್ಗೆ ಇವರ ಬ್ಯುಸಿನೆಸ್ ವಿಸ್ತಾರಗೊಂಡಿತು. 1919ರಿಂದ 1979ರವರೆಗೂ ಇರಾನ್ ದೇಶದಲ್ಲೇ ಇವರ ಹೆಡ್ಕ್ವಾರ್ಟರ್ಸ್ ಇತ್ತು. ನಂತರ ಐರೋಪ್ಯ ಪ್ರದೇಶಕ್ಕೆ ಮುಖ್ಯಕಚೇರಿ ವರ್ಗವಾಯಿತು. ಈಗ ಅದರ ಮುಖ್ಯ ಕಚೇರಿ ಯುಕೆಯಲ್ಲಿದೆ.
ಇದನ್ನೂ ಓದಿ: ಅಮೆರಿಕ, ಸಿಂಗಾಪುರ್ ಮಾದರಿಯಲ್ಲಿ ಭಾರತದಲ್ಲಿ ಶಾಲಾ ಮಕ್ಕಳ ಸುರಕ್ಷತೆಗೆ ಆರ್ಎಫ್ಐಡಿ ಟ್ರ್ಯಾಕಿಂಗ್ ಸಿಸ್ಟಂ?
ಪರಮಾನಂದ್ ಹಿಂದೂಜಾ ಅವರು 1971ರಲ್ಲಿ ಮೃತಪಟ್ಟ ಬಳಿಕ ಎರಡನೇ ಮಗ ಶ್ರೀಚಂದ್ ಹಿಂದೂಜಾ ಅವರು ಛೇರ್ಮನ್ ಆದರು. ಮೂರನೇ ಮಗ ಗೋಪಿಚಂದ್ ಅವರು ಕೋ-ಛೇರ್ಮನ್ ಆದರು. 2023ರಲ್ಲಿ ಶ್ರೀಚಂದ್ ನಿಧನದ ನಂತರ ಗೋಪಿಚಂದ್ ಅವರು ಹಿಂದೂಜಾ ಗ್ರೂಪ್ನ ಮುಖ್ಯಸ್ಥರಾದರು.
ಹಿಂದೂಜಾ ಗ್ರೂಪ್ನಲ್ಲಿ ಇರುವ ಕಂಪನಿಗಳ ಸಂಖ್ಯೆ 20ಕ್ಕೂ ಹೆಚ್ಚು. ಅಶೋಕ್ ಲೇಲ್ಯಾಂಡ್, ಇಂಡಸ್ಇಂಡ್ ಬ್ಯಾಂಕ್, ಗಲ್ಫ್ ಆಯಿಲ್, ಜಿಒಸಿಎಲ್ ಇತ್ಯಾದಿ ಹಲವು ಕಂಪನಿಗಳಿವೆ. ವಾಹನ, ಲೂಬ್ರಿಕೆಂಟ್, ರಿಯಲ್ ಎಸ್ಟೇಟ್, ಬ್ಯಾಂಕಿಂಗ್ ಹೀಗೆ 11 ಸೆಕ್ಟರ್ಗಳಲ್ಲಿ ಇವರ ಕಂಪನಿಗಳ ಬ್ಯುಸಿನೆಸ್ ಇದೆ.
ಹಿಂದೂಜಾ ಗ್ರೂಪ್ನ ವ್ಯಾಪಕ ಬ್ಯುಸಿನೆಸ್ನಂತೆ ಹಿಂದೂಜಾ ಕುಟುಂಬವೂ ವಿಶಾಲವಾಗಿದೆ. ಪರಮಾನಂದ್ ದೀಪ್ಚಂದ್ ಹಿಂದೂಜಾ ಅವರಿಗೆ ಶ್ರೀಚಂದ್, ಗೋಪಿಚಂದ್ ಮಾತ್ರವಲ್ಲ, ಗಿರಧರ್, ಪ್ರಕಾಶ್ ಮತ್ತು ಅಶೋಕ್ ಹಿಂದೂಜಾ ಹೀಗೆ ಐವರು ಮಕ್ಕಳಿದ್ದಾರೆ. ಈ ಪೈಕಿ ಪ್ರಕಾಶ್ ಹಿಂದೂಜಾ ಮತ್ತು ಅಶೋಕ್ ಹಿಂದೂಜಾ ಅವರು ಜೀವಂತ ಇದ್ದಾರೆ.
ಇದನ್ನೂ ಓದಿ: ವಂದೇ ಭಾರತ್ ಸ್ಲೀಪರ್ ಟ್ರೈನುಗಳ ಬಿಡುಗಡೆ ಮತ್ತಷ್ಟು ವಿಳಂಬ; ಕೆಲ ಸಮಸ್ಯೆಗಳು ಪತ್ತೆ
ಈ ಐವರು ಮಕ್ಕಳಿಗೂ ಹಲವು ಮಕ್ಕಳಿದ್ದಾರೆ. ಸದ್ಯ ಗೋಪಿಚಂದ್ ಹಿಂದೂಜಾ ಮೃತಪಟ್ಟ ಬಳಿಕ ಹಿಂದೂಜಾ ಗ್ರೂಪ್ನ ಮುಂದಿನ ಛೇರ್ಮನ್ ಯಾರು ಆಗಲಿದ್ದಾರೆ ಎಂಬುದು ಕುತೂಹಲ ಮೂಡಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




