ತರಕಾರಿ, ಹಾಲು ಇತ್ಯಾದಿ ದುಬಾರಿ; ಆಗಸ್ಟ್ನಿಂದ ಬೆಲೆ ಹೆಚ್ಚಳ ಕಾಣುವ ವಸ್ತುಗಳ ಪಟ್ಟಿ
Costlier From August 1: ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರಕ್ಕೆ ಈಗ ಈ ಸ್ಕೀಮ್ಗಳಿಗೆ ಹಣ ಹೊಂದಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವಾರು ಪ್ರಮುಖ ವಸ್ತು ಮತ್ತು ಸೇವೆಗಳು ಜನಸಾಮಾನ್ಯರ ಜೇಬಿಗೆ ಹೆಚ್ಚು ಕತ್ತರಿ ಹಾಕಲಿವೆ.

ಬೆಂಗಳೂರು, ಜುಲೈ 31: ಅಲ್ಲಿ ಬಂತು, ಇಲ್ಲಿ ಹೋಯ್ತು ಎಂಬಂತೆ, ಆಗಸ್ಟ್ ತಿಂಗಳಿಂದ ಇನ್ನೂರು ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಸೇರಿದಂತೆ 5 ಗ್ಯಾರಂಟಿ ಯೋಜನೆಗಳ (Guarantee Scheme) ಲಾಭ ಪಡೆಯಲಿರುವ ಕರ್ನಾಟಕದ ಜನರಿಗೆ ಈ ತಿಂಗಳಿಂದ ಬೇರೆ ಬೆಲೆ ಏರಿಕೆಗಳ ಬಿಸಿ ತಾಕಲಿದೆ. ಆಗಸ್ಟ್ 1ರಿಂದ ಹಾಲು, ತರಕಾರಿ ಇತ್ಯಾದಿ ವಸ್ತುಗಳು ದುಬಾರಿಯಾಗಲಿವೆ. ಕೆಲವೊಂದು ವಲಯದ ಬೆಲೆ ಏರಿಕೆಯು (Price Rise) ಬೇರೆ ಬೇರೆ ಕ್ಷೇತ್ರಗಳಲ್ಲಿ ಬೆಲೆ ಏರಿಕೆಗೆ ಪರೋಕ್ಷವಾಗಿ ಎಡೆ ಮಾಡಿಕೊಡುತ್ತದೆ. ಯಾವ್ಯಾವ ವಸ್ತುಗಳು ಮತ್ತು ಸೇವೆಗಳು ಕರ್ನಾಟಕದಲ್ಲಿ ಆಗಸ್ಟ್ 1ರಿಂದ ದುಬಾರಿಯಾಗಬಹುದು, ಇಲ್ಲಿದೆ ವಿವರ.
ಕೆಎಂಎಫ್ ಹಾಲು ಲೀಟರ್ಗೆ 3 ರೂ ಹೆಚ್ಚಳ
ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ನ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಲು ನಿರ್ದರಿಸಿದೆ. ಆಗಸ್ಟ್ 1ರಿಂದ ನಂದಿನಿ ಹಾಲು ಲೀಟರ್ಗೆ 3 ರೂನಷ್ಟು ದುಬಾರಿ ಆಗಲಿದೆ. ಕೆಎಂಫ್ ಸಂಸ್ಥೆ 5 ರೂನಷ್ಟು ದರ ಹೆಚ್ಚಳ ಮಾಡುವ ಪ್ರಸ್ತಾಪ ಮುಂದಿಟ್ಟಿತ್ತು. ಸರ್ಕಾರ ಬೆಲೆ ಏರಿಕೆಯನ್ನು 3 ರುಪಾಯಿಗೆ ಇಳಿಸಿದೆ. ಈ ಬೆಲೆ ಏರಿಕೆಯ ಲಾಭವನ್ನು ಸಂಪೂರ್ಣವಾಗಿ ಉತ್ಪಾದಕರಿಗೆ (ರೈತರು) ವರ್ಗಾಯಿಸುವುದಾಗಿ ಕೆಎಂಎಫ್ ಹೇಳಿದೆ.
ತರಕಾರಿ ಬೆಲೆ ಹೆಚ್ಚಳ
ಟೊಮೆಟೋ ಬೆಲೆ ಏರಿದ್ದರಿಂದ ಕನ್ನಡಿಗರನ್ನು ಕಂಗಾಲಾಗಿರುವುದು ಹೌದು. ಪಕ್ಕದ ಕೋಲಾರದಲ್ಲಿ ಭರ್ಜರಿಯಾಗಿ ಟೊಮೆಟೋ ಬೆಳೆಯಲಾಗಿದ್ದರೂ ಬೆಂಗಳೂರಿನಲ್ಲಿ ಟೊಮೆಟೋ ಬೆಲೆ 200 ರೂವರೆಗೂ ಹೋಗಿತ್ತು. ಈಗಲೂ ಕೂಡ 150 ರೂ ಆಸುಪಾಸಿನಲ್ಲಿ ಟೊಮೆಟೋ ಬೆಲೆ ಇದೆ. ಹಸಿರು ಮೆಣಸಿನಕಾಯಿ, ಶುಂಠಿ, ಕ್ಯಾರಟ್, ಬೀನ್ಸ್, ಬಟಾಣಿ ಇತ್ಯಾದಿ ತರಕಾರಿಗಳ ಬೆಲೆಗಳೂ ಕೂಡ ಎರಡು ಪಟ್ಟು ಹೆಚ್ಚಾಗಿವೆ.
ಇದನ್ನೂ ಓದಿ: ಷೇರುಪೇಟೆಯಲ್ಲಿ ನಿಮ್ಮ ಲಾಭದ ಬಾಲ ಕತ್ತರಿಸುವ ಬಂಡವಾಳ ಲಾಭ ತೆರಿಗೆಗಳ ಬಗ್ಗೆ ತಿಳಿಯಿರಿ
ಮದ್ಯ ಇನ್ನಷ್ಟು ದುಬಾರಿ
ಕರ್ನಾಟಕ ಸರ್ಕಾರ ಮದ್ಯದ ಮೇಲೆ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಭಾರತದಲ್ಲಿ ನಿರ್ಮಿಸಲಾದ ವಿದೇಶೀ ಮದ್ಯದ ಮೇಲೆ ಶೇ. 20ರಷ್ಟು ಸುಂಕ ಹೆಚ್ಚಿಸಲಾಗಿದೆ. ಇನ್ನು, ಬಿಯರ್ ಮೇಲಿನ ಅಬಕಅರಿ ಸುಂಕ ಶೇ. 175ರಿಂದ ಶೇ. 185ಕ್ಕೆ ಹೆಚ್ಚಾಗುತ್ತಿದೆ. ಆಗಸ್ಟ್ 1ರಿಂದ ಬಿಯರ್ ಸೇರಿ ವಿವಿಧ ಮದ್ಯ ಪೇಯಗಳ ಬೆಲೆ ಹೆಚ್ಚಾಗಲಿದೆ.
ಹೋಟೆಲ್ ಊಟವೂ ದುಬಾರಿ
ಹಾಲು, ತರಕಾರಿ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿರುವ ಹಿನ್ನೆಲೆಯಲ್ಲಿ ಹೋಟೆಲ್ ಊಟವೂ ದುಬಾರಿಯಾಗಲಿವೆ. ಬೆಂಗಳೂರಿನ ಹೋಟೆಲ್ಗಳು ಊಟದ ಬೆಲೆಯನ್ನು ಶೇ. 10ರಷ್ಟು ಹೆಚ್ಚಿಸಲು ನಿರ್ಧರಿಸಿರುವುದು ತಿಳಿದುಬಂದಿದೆ.
ಸ್ಥಿರಾಸ್ತಿ ಮಾರ್ಗಸೂಚಿ ದರ ಏರಿಕೆ
ಕಳೆದ ಬಜೆಟ್ನಲ್ಲಿ ಸರ್ಕಾರ ಸ್ಥಿರಾಸ್ತಿಗಳಿಗೆ ಮಾರ್ಗಸೂಚಿ ದರವನ್ನು (Guidance Value) ಶೇ. 14ರವರೆಗೆ ಏರಿಸುವುದಾಗಿ ತಿಳಿಸಲಾಗಿತ್ತು. ಆಗಸ್ಟ್ 1ರಿಂದ ಇದು ಚಾಲನೆಗೆ ಬರಲಿದೆ.
ಮಾರ್ಗಸೂಚಿ ದರ ಅಥವಾ ಗೈಡೆನ್ಸ್ ವ್ಯಾಲ್ಯೂ ಎಂಬುದು ಸ್ಥಿರಾಸ್ತಿಯನ್ನು ನೊಂದಾಯಿಸಲು ಇರುವ ಕನಿಷ್ಠ ಮೌಲ್ಯ ಎನ್ನಲಾಗಿದೆ. ಕಳೆದ ವರ್ಷ ಅಂದಿನ ಸರ್ಕಾರ ಗೈಡೆನ್ಸ್ ವ್ಯಾಲ್ಯೂ ಅನ್ನು ಶೇ. 10ಕ್ಕೆ ಇಳಿಸಲಾಗಿತ್ತು. ಈಗ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪರದಾರದಾಡುತ್ತಿರುವ ಸರ್ಕಾರ ಅನಿವಾರ್ಯವಾಗಿ ಸ್ಥಿರಾಸ್ತಿ ಮಾರ್ಗಸೂಚಿ ದರ ಏರಿಸುತ್ತಿದೆ.
ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳಿದ್ದರೆ ಎಲ್ಲಕ್ಕೂ ಸರ್ಕಾರದ ಕೊಡುಗೆ ಸಿಗುತ್ತಾ? ನೀವು ತಿಳಿಯಬೇಕಾದ ಸಂಗತಿಗಳು
ಕೆಎಸ್ಸಾರ್ಟಿಸಿ ಗುತ್ತಿಗೆ ದರ ಹೆಚ್ಚಳ
ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆ ಒದಗಿಸುವ ಕೆಎಸ್ಸಾರ್ಟಿಸಿ, ತನ್ನ ನಷ್ಟ ಸರಿದೂಗಿಸಲು ಈಗ ಬೇರೆ ದರಗಳನ್ನು ಹೆಚ್ಚಿಸುತ್ತಿದೆ. ಖಾಸಗಿ ಕಂಪನಿಗಳಿಗೆ ಬಸ್ಸುಗಳ ಎರವಲು ಸೇವೆ ಕೊಡುವ ಕೆಎಸ್ಆರ್ಟಿಸಿ, ಈಗ ಅದರ ದರ ಹೆಚ್ಚಿಸಿದೆ. ಈ ಕಾಂಟ್ರಾಕ್ಟ್ ಬಸ್ಸುಗಳಲ್ಲಿ ಒಂದು ಕಿಮೀಗೆ 2ರಿಂದ 5 ರೂವರೆಗೂ ದರ ಹೆಚ್ಚಿಸಲಾಗಿದೆ. ಆಗಸ್ಟ್ 1ರಿಂದ ಇದು ಜಾರಿಗೆ ಬರುತ್ತದೆ.
ಬೆಲೆ ಹೆಚ್ಚಳವಾಗುವ ಇತರ ವಸ್ತುಗಳು
ಗಣಿಗಾರಿಕೆಯಲ್ಲಿ ರಾಜಧನ ಹೆಚ್ಚಳವಾಗುತ್ತಿದೆ. ಇದರಿಂದ ಮರಳು ಇತ್ಯಾದಿ ಕಟ್ಟಡ ನಿರ್ಮಾಣ ವಸ್ತುಗಳು ದುಬಾರಿ ಆಗುತ್ತವೆ.
ಶಾಲಾ ವಾಹನ, ಕ್ಯಾಬ್ ಟ್ರಕ್ಗಳ ಮೇಲೆ ಮೋಟಾರು ವಾಹನ ತೆರಿಗೆ ಹೆಚ್ಚಿಸಲಾಗಿದೆ. ಇದರಿಂದ ಸರಕು ಸಾಗಣಿ, ಪ್ರಯಾಣ ದರಗಳು ಹೆಚ್ಚುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ