ನವದೆಹಲಿ, ಜನವರಿ 26: ಭಾರತದ ಉತ್ಪಾದನಾ ವಲಯಕ್ಕೆ ಹೊಸ ವರ್ಷದಲ್ಲಿ ಶುಭಾರಂಭ ಸಿಕ್ಕಿದೆ. ಜನವರಿ ತಿಂಗಳಲ್ಲಿ ಈ ಕ್ಷೇತ್ರದ ಅಮೋಘವಾಗಿ ಬೆಳವಣಿಗೆ ಹೊಂದುತ್ತಿದೆ. ಎಚ್ಎಸ್ಬಿಸಿ ಫ್ಲ್ಯಾಷ್ ಪಿಎಂಐ ವರದಿ ಪ್ರಕಾರ ಭಾರತಕ್ಕೆ ಹೊಸ ರಫ್ತು ಡೀಲ್ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಿರುವುದು, ಮತ್ತು ಜಾಗತಿಕವಾಗಿ ಸರಕುಗಳ ಸಂಗ್ರಹಣೆ ಹೆಚ್ಚುತ್ತಿರುವುದು ಭಾರತದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ಗೆ ಪುಷ್ಟಿ ಕೊಟ್ಟಿದೆ ಎಂದು ಈ ವರದಿ ಹೇಳುತ್ತಿದೆ.
ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೈಮಾಸಿಕದಲ್ಲಿ 100 ಚಟುವಟಿಕೆಯ ಸೂಚಕಗಳನ್ನು ವಿಶ್ಲೇಷಿಸಲಾಗಿದೆ. ಈ ಪೈಕಿ ಶೇ. 65ರಷ್ಟು ಇಂಡಿಕೇಟರ್ಗಳು ಸಕಾರಾತ್ಮಕವಾಗಿವೆ. ಹಿಂದಿನ ಕ್ವಾರ್ಟರ್ನಲ್ಲಿ ಶೇ. 55ರಷ್ಟು ಆಕ್ಟಿವಿಟಿ ಇಂಡಿಕೇಟರ್ಗಳು ಸಕಾರಾತ್ಮಕವಾಗಿದ್ದವು. ಡಿಸೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ ಹೆಚ್ಚು ಸಕಾರಾತ್ಮಕ ಅಂಶಗಳಿರುವುದನ್ನು ವರದಿಯಲ್ಲಿ ಗುರುತಿಸಲಾಗಿದೆ.
ಡಿಸೆಂಬರ್ಗೆ ಹೋಲಿಸಿದರೆ ಜನವರಿ ತಿಂಗಳಲ್ಲಿ ಸರ್ವಿಸಸ್ ಪಿಎಂಐ ಸ್ವಲ್ಪ ಮಂದಗೊಂಡಿದೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸ್ ಸೆಕ್ಟರ್ಗಳಲ್ಲಿ ಈ ಅಂತರ ಹೆಚ್ಚಳಕ್ಕೆ ಪ್ರಾಯಶಃ ತೆರಿಗೆ ಭಯ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಒಳ್ಳೆಯ ಬಿಸಿನೆಸ್ ಸಿಕ್ಕುತ್ತಿದೆ. ದೇಶೀಯವಾಗಿ ಸಿಗುತ್ತಿರುವ ಆರ್ಡರ್ಗಳಿಗೆ ಹೋಲಿಸಿದರೆ ಹೊರದೇಶಗಳಿಂದ ಬರುತ್ತಿರುವ ಆರ್ಡರ್ಗಳ ಪ್ರಮಾಣದಲ್ಲಿ ಹೆಚ್ಚು ಏರಿಕೆ ಆಗಿದೆ. ಅಮೆರಿಕದಲ್ಲಿ ಹಾಗೂ ಜಾಗತಿಕವಾಗಿ ಆಮದು ತೆರಿಗೆ ಹೆಚ್ಚಳ ಆಗುವ ಸಾಧ್ಯತೆ ಇರುವುದರಿಂದ ಹೆಚ್ಚೆಚ್ಚು ಕಂಪನಿಗಳು ಸರಕುಗಳ ದಾಸ್ತಾನು ಮಾಡುತ್ತಿರಬಹುದು. ಹೀಗಾಗಿ, ಭಾರತದ ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳಿಗೆ ಹೆಚ್ಚು ಎಕ್ಸ್ಪೋರ್ಟ್ ಆರ್ಡರ್ಗಳು ಬರುತ್ತಿವೆ ಎನ್ನಲಾಗಿದೆ.
ಇದನ್ನೂ ಓದಿ: 2019ರಲ್ಲಿ ಭಾರತದಲ್ಲಿ ಮಾರಾಟವಾದ ಕಾರುಗಳಲ್ಲಿ ಇವಿಗಳ ಸಂಖ್ಯೆ ಶೇ. 1; 2030ರಲ್ಲಿ ಶೇ. 30ಕ್ಕೇರುವ ನಿರೀಕ್ಷೆ: ವರದಿ
ಭಾರತದಲ್ಲಿ ಸರ್ಕಾರಕ್ಕೆ ಮತ್ತು ಜನರಿಗೆ ತಲೆನೋವಾಗಿರುವ ಹಣದುಬ್ಬರ ದರ ಮುಂದಿನ ದಿನಗಳಲ್ಲಿ ಹೆಚ್ಚು ನಿಯಂತ್ರಣಕ್ಕೆ ಸಿಗಬಹುದು ಎಂದು ಎಚ್ಎಸ್ಬಿಸಿ ಸಂಸ್ಥೆಯ ಈ ವರದಿಯಲ್ಲಿ ಅಂದಾಜಿಸಲಾಗಿದೆ. ಜನವರಿಯಲ್ಲಿ ಹಣದುಬ್ಬರ ಶೇ. 4.2ಕ್ಕೆ ಇಳಿಯಬಹುದು ಎಂದು ಅದು ಅಂದಾಜು ಮಾಡಿದೆ. ಇದೇನಾದರೂ ಆದಲ್ಲಿ, ಆರ್ಬಿಐ ತನ್ನ ದರಗಳನ್ನು ಇಳಿಸಲು ಮನಸು ಮಾಡಬಹುದು. ಎಚ್ಎಸ್ಬಿಸಿ ವರದಿ ಪ್ರಕಾರ ಫೆಬ್ರುವರಿ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆಯುವ ಆರ್ಬಿಐ ಎಂಪಿಸಿ ಸಭೆಗಳಲ್ಲಿ ತಲಾ 25 ಮೂಲಾಂಕಗಳಷ್ಟು ರಿಪೋ ದರ ಕಡಿತ ಮಾಡಬಹುದು. ಸದ್ಯ ಶೇ. 6.50ರಷ್ಟಿರುವ ರಿಪೋ ದರ ಏಪ್ರಿಲ್ ತಿಂಗಳಲ್ಲಿ ಶೇ. 6ಕ್ಕೆ ಇಳಿಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ