ನವದೆಹಲಿ, ಫೆಬ್ರುವರಿ 5: ದಕ್ಷಿಣ ಕೊರಿಯಾ ಮೂಲದ ಕಾರ್ ಕಂಪನಿಯಾದ ಹ್ಯೂಂಡಾಯ್ ಮೋಟಾರ್ಸ್ (Hyundai Motor Co) ಭಾರತದ ಷೇರು ಮಾರುಕಟ್ಟೆ ಪ್ರವೇಶಿಸಲು ಯೋಜಿಸಿದೆ. ಹ್ಯುಂಡೈ ಸಂಸ್ಥೆ ಐಪಿಒ (Hyundai IPO) ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಈ ವರದಿ ಪ್ರಕಾರ ಹ್ಯೂಂಡಾಯ್ ಐಪಿಒ ಅತಿದೊಡ್ಡದಿರಲಿದೆ. 21,000 ಕೋಟಿ ರೂ ಗಾತ್ರದ ಎಲ್ಐಸಿ ಐಪಿಒಗಿಂತಲೂ ಹ್ಯುಂಡೈ ಬಂಡವಾಳ ಗುರಿ ದೊಡ್ಡದಿರಲಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಐಪಿಒ ಆಫರ್ ಕೊಡಬಹುದು ಎನ್ನಲಾಗಿದೆ.
ಹ್ಯೂಂಡಾಯ್ ಭಾರತದ ಮಾರುಕಟ್ಟೆಗೆ ಬಂದು ಮೂರು ದಶಕಗಳಾಗಿವೆ. ಈಗ ಷೇರುಪೇಟೆಯಲ್ಲಿ ಲಿಸ್ಟ್ ಆಗಲು ಯೋಜಿಸಿರುವುದು ಗಮನಾರ್ಹ. ಸೌತ್ ಕೊರಿಯಾದ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದ್ದು, ಅದರ ಷೇರುಸಂಪತ್ತು ಅಥವಾ ಮಾರ್ಕೆಟ್ ಕ್ಯಾಪ್ 39 ಬಿಲಿಯನ್ ಡಾಲರ್ ಇದೆ. ಭಾರತದಲ್ಲಿ ಮಾರುತಿ ಸುಜುಕಿ ಬಿಟ್ಟರೆ ಹ್ಯುಂಡೈ ಮೋಟಾರ್ಸ್ ಕಂಪನಿ ಅತಿದೊಡ್ಡದು. ಇದರ ಮೌಲ್ಯವನ್ನು 22ರಿಂದ 28 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಹ್ಯೂಂಡಾಯ್ ಮೋಟಾರ್ಸ್ ಸಂಸ್ಥೆ ಭಾರತದಲ್ಲಿ ಷೇರುಪೇಟೆಗೆ ಪದಾರ್ಪಣೆ ಮಾಡುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಹಲವು ಇನ್ವೆಸ್ಟ್ಮೆಂಟ್ ಬ್ಯಾಂಕುಗಳ ಅಧಿಕಾರಿಗಳು ದಕ್ಷಿಣ ಕೊರಿಯಾ ರಾಜಧಾನಿ ಸೋಲ್ ನಗರಕ್ಕೆ ಭೇಟಿ ನೀಡಿದ್ದಾರೆ. ಹ್ಯುಂಡೈ ಐಪಿಒ ಯೋಜನೆ ಕುರಿತು ಮಾತುಕತೆ ನಡೆದಿರಬಹುದು ಎಂದು ಹೇಳಲಾಗಿದೆ.
ದೇಶದ ಕಾರ್ಪೊರೇಟ್ ಕಂಪನಿಗಳು ಕಾಲ ಕಾಲಕ್ಕೆ ಸುಧಾರಣೆ ಮಾಡಿಕೊಳ್ಳಬೇಕು, ಅಪ್ಡೇಟ್ ಆಗುತ್ತಿರಬೇಕು ಎಂಬುದು ಸೌತ್ ಕೊರಿಯಾ ಆಡಳಿತದ ಆಗ್ರಹವಾಗಿದೆ. ಜಪಾನ್ ಕಾರ್ಪೊರೇಟ್ ಸುಧಾರಣೆಗಳ ಮಾದರಿಯಲ್ಲಿ ಕೊರಿಯಾ ಸರ್ಕಾರ ಕೂಡ ತನ್ನ ಕಳಪೆ ಕಾರ್ಪೊರೇಟ್ ಕಂಪನಿಗಳನ್ನು ಬಹಿರಂಗವಾಗಿ ಹೆಸರಿಸುವ ಕೆಲಸಕ್ಕೆ ಕೈಹಾಕಲು ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಹ್ಯುಂಡೈ ಸಂಸ್ಥೆ ಒಂದಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ.
ಇದನ್ನೂ ಓದಿ: ತಂಬಾಕು ಉತ್ಪನ್ನ ತಯಾರಿಸುವ ಯಂತ್ರಗಳ ನೊಂದಣಿ ಆಗದಿದ್ದರೆ ಲಕ್ಷ ರೂ ದಂಡ: ಆದಾಯ ಸೋರಿಕೆ ತಡೆಗೆ ಸರ್ಕಾರ ಕ್ರಮ
ಈ ವರ್ಷ ಹಾಗೂ ಮುಂದಿನ ವರ್ಷ ಲಕ್ಷಾಂತರ ಕೋಟಿ ಹಣದ ಹೂಡಿಕೆ ಮಾಡಲು ಹ್ಯುಂಡೈ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆ ಮೂಲಕ ಒಂದಷ್ಟು ಬಂಡವಾಳ ಸಂಗ್ರಹಿಸುವುದು ಅದರ ಚಿಂತನೆ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ