
ನವದೆಹಲಿ, ಜುಲೈ 6: ಭಾರತದ ಜಿಡಿಪಿ ಹೆಚ್ಚುತ್ತಿದೆಯಾದರೂ ಅದರ ತಲಾದಾಯ ಬಹಳ ಕಡಿಮೆ ಇದೆ. ಶ್ರೀಮಂತರು ಮತ್ತು ಬಡವರ ಮಧ್ಯೆ ಅಂತರ ಹೆಚ್ಚುತ್ತಿದೆ ಎನ್ನುವ ವಾದಗಳ ಮಧ್ಯೆ ವಿಶ್ವಬ್ಯಾಂಕ್ನ ಗಿನಿ ಇಂಡೆಕ್ಸ್ (World Bank Gini Index) ಅಚ್ಚರಿಯ ಸಂಗತಿಯೊಂದನ್ನು ಹೊರಗೆಡವಿದೆ. ಈ ಇಂಡೆಕ್ಸ್ ಪ್ರಕಾರ ಭಾರತವು ವಿಶ್ವದಲ್ಲೇ ನಾಲ್ಕನೇ ಅತೀ ಸಮ ಸಮಾಜ (equity society) ಎನಿಸಿದೆ. ಅಂದರೆ, ಆದಾಯ ಸಮಾನತೆಯಲ್ಲಿ (income equality) ಭಾರತ ನಾಲ್ಕನೇ ಸ್ಥಾನ ಹೊಂದಿದೆ. ಅಮೆರಿಕ, ಚೀನಾ ಇತ್ಯಾದಿ ಬಹುತೇಕ ಎಲ್ಲಾ ದೇಶಗಳಿಗಿಂತಲೂ ಭಾರತ ಉತ್ತಮ ಎನಿಸಿದೆ.
ವಿಶ್ವಬ್ಯಾಂಕ್ ಬಿಡುಗಡೆ ಮಾಡಿದ ಹೊಸ ದತ್ತಾಂಶದ ಪ್ರಕಾರ ಭಾರತದ ಜಿನಿ ಇಂಡೆಕ್ಸ್ 25.5 ಇದೆ. ಜಿನಿ ಸಂಖ್ಯೆ ಕಡಿಮೆ ಇದ್ದಷ್ಟೂ ಉತ್ತಮ ರ್ಯಾಂಕಿಂಗ್ ಎನಿಸುತ್ತದೆ. ಸ್ಲೊವಾಕ್ ರಿಪಬ್ಲಿಕ್, ಸ್ಲೊವೇನಿಯಾ ಮತ್ತು ಬೆಲಾರಸ್ ದೇಶಗಳು ಈ ಇಂಡೆಕ್ಸ್ನಲ್ಲಿ ಮೊದಲ ಮೂರು ಸ್ಥಾನ ಪಡೆದಿವೆ.
ಜಿ7, ಜಿ20 ಗುಂಪಿನಲ್ಲಿರುವ ಶ್ರೀಮಂತ ದೇಶಗಳ ಗಿನಿ ಇಂಡೆಕ್ಸ್ ಭಾರತದಕ್ಕಿಂತ ಹಿಂದಿದೆ. ಅಮೆರಿಕ ಮತ್ತು ಚೀನಾದ ಗಿನಿ ಇಂಡೆಕ್ಸ್ ಕ್ರಮವಾಗಿ 41.8 ಮತ್ತು 35.7 ಇದೆ. ಭಾರತದ್ದು 25.5 ಇದೆ.
ಇದನ್ನೂ ಓದಿ: Forex Reserves: ಎರಡನೇ ಬಾರಿ 700 ಬಿಲಿಯನ್ ಡಾಲರ್ ಗಡಿ ದಾಟಿದ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ
ವಿಶ್ವಬ್ಯಾಂಕ್ನ 2025ರ ಬಡತನ ಮತ್ತು ಸಮತೆ ವರದಿ ಪ್ರಕಾರ 2011ರಿಂದ 2023ರವರೆಗೆ 12 ವರ್ಷದಲ್ಲಿ ಭಾರತವು ಬಡತನ ನಿವಾರಣೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಈ ಅವಧಿಯಲ್ಲಿ 17.1 ಕೋಟಿ ಜನರು ಕಡುಬಡತನದಿಂದ ಹೊರಬಂದಿದ್ದಾರೆ. 2011ರಲ್ಲಿ ಶೇ. 16.2ರಷ್ಟಿದ್ದ ಬಡತನ ದರ 2023ರಲ್ಲಿ ಶೇ. 2.3ಕ್ಕೆ ಇಳಿದಿದೆ. ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ದಿನಕ್ಕೆ 2.15 ಡಾಲರ್ಗಿಂತ (ಸುಮಾರು 200 ರೂ) ಕಡಿಮೆ ಆದಾಯ ಇದ್ದರೆ ಅದು ಬಡತನ ಎಂದು ಪರಿಗಣಿಸಲಾಗುತ್ತದೆ.
2011ರಲ್ಲಿ ಭಾರತದ ಗಿನಿ ಇಂಡೆಕ್ಸ್ 28.8 ಇತ್ತು. ಒಂದು ದಶಕದಲ್ಲಿ ನಿರಂತರವಾಗಿ ಬೆಳವಣಿಗೆ ಕಾಣುತ್ತಾ ಇರುವುದರ ಜೊತೆಗೆ ಹೆಚ್ಚ ಸಮ ಪ್ರಮಾಣದ ಆದಾಯ ಹಂಚಿಕೆಯೂ ನಡೆಯುತ್ತಿದೆ. ನಿರ್ದಿಷ್ಟ ಗುಂಪುಗಳನ್ನು ಗುರಿ ಮಾಡಿ ನಡೆಸಲಾಗುತ್ತಿರುವ ಸಮಾಜ ಕಲ್ಯಾಣ ಯೋಜನೆಗಳು, ಅವುಗಳ ಫಲವು ನೇರವಾಗಿ ಜನರನ್ನು ತಲುಪಲು ಸಹಾಯವಾಗುವ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್ ಇತ್ಯಾದಿ ಸೌಲಭ್ಯಗಳ ಸಂಯೋಜನೆಯು ಭಾರತದ ಆದಾಯ ಅಸಮಾನತೆಯನ್ನು ತಗ್ಗಿಸಲು ಸಹಾಯವಾಗಿವೆ.
ಇದನ್ನೂ ಓದಿ: ಸಾಲಗಳಿಗೆ ಇರಲ್ಲ ಪ್ರೀಪೇಮೆಂಟ್ ಚಾರ್ಜ್; ಜನವರಿ 1ರಿಂದ ಆರ್ಬಿಐ ಹೊಸ ನಿಯಮ
ಪಿಎಂ ಜನ್ ಧನ್ ಯೋಜನೆ ಅಡಿಯಲ್ಲಿ 55 ಕೋಟಿ ಬ್ಯಾಂಕ್ ಖಾತೆಗಳನ್ನು ಆರಂಭಿಸಲಾಗಿದೆ. ಕೋಟ್ಯಂತರ ಜನರು ಮೊದಲ ಬಾರಿಗೆ ಬ್ಯಾಂಕಿಂಗ್ ವ್ಯವಸ್ಥೆಗೆ ಸೇರ್ಪಡೆಯಾಗಿದ್ದಾರೆ. ಆರ್ಥಿಕವಾಗಿ ದುರ್ಬಲರಾದ ಈ ವರ್ಗದ ಜನರಿಗೆ ವಿವಿಧ ಸರ್ಕಾರಿ ಸ್ಕೀಮ್ಗಳ ಫಲವನ್ನು ನೇರವಾಗಿ ತಲುಪಿಸಲು ಡಿಬಿಟಿಯನ್ನು ಸರ್ಕಾರ ಬಳಸಿದೆ. ಈ ನೇರ ಹಣ ವರ್ಗಾವಣೆಯ ಕೆಲಸವನ್ನು ಸಾಧ್ಯವಾಗುವಂತೆ ಮಾಡಿದ್ದು ಆಧಾರ್ ಅನ್ನು ಒಳಗೊಂಡ ಡಿಜಿಟಲ್ ಇನ್ಫ್ರಾಸ್ಟ್ರಕ್ಚರ್.
ಇದರ ಜೊತೆಗೆ ಹಿರಿಯ ನಾಗರಿಕರು ಸೇರಿದಂತೆ ದುರ್ಬಲ ವರ್ಗದವರಿಗೆ ಉಚಿತ ಹೆಲ್ತ್ ಇನ್ಷೂರೆನ್ಸ್ ನೀಡುವ ಆಯುಷ್ಮಾನ್ ಭಾರತ್ ಯೋಜನೆ, 80 ಕೋಟಿಗೂ ಅಧಿಕ ಜನರಿಗೆ ಆಹಾರ ವಸ್ತು ವಿತರಿಸುವ ಪಿಎಂಜಿಕೆಎವೈ ಯೋಜನೆ, ತಳಮಟ್ಟದಲ್ಲಿ ಉದ್ದಿಮೆದಾರರಿಗೆ ಧನ ಸಹಾಯ ನೀಡಿ ಉತ್ತೇಜಿಸುವ ಸ್ಟ್ಯಾಂಡ್ ಅಪ್ ಇಂಡಿಯಾ, ಇತ್ಯಾದಿ ಯೋಜನೆಗಳು ಭಾರತದ ಬೆಳವಣಿಗೆಗೆ ಸಹಾಯಕವಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ