
ನವದೆಹಲಿ, ಏಪ್ರಿಲ್ 9: ಭಾರತ ಒಂದು ವರ್ಷದಲ್ಲಿ 2 ಲಕ್ಷ ಕೋಟಿ ರೂ ಮೌಲ್ಯದ ಸ್ಮಾರ್ಟ್ಫೋನ್ಗಳನ್ನು ರಫ್ತು ಮಾಡಿದೆ. 2024-25ರ ವರ್ಷದಲ್ಲಿ ಈ ಮೈಲಿಗಲ್ಲು ಮುಟ್ಟಲಾಗಿದೆ. ಯಾವುದೇ ವರ್ಷದಲ್ಲಿ ಎರಡು ಲಕ್ಷ ಕೋಟಿ ರೂ ಸ್ಮಾರ್ಟ್ಫೋನ್ ರಫ್ತು ಮಾಡಲಾಗಿರುವುದು ಇದೇ ಮೊದಲು ಎನ್ನಲಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವನಿ ವೈಷ್ಣವ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಕೇಂದ್ರ ಸರ್ಕಾರಿ ಜಾರಿಗೆ ತಂದಿರುವ ಪಿಎಲ್ಐ ಸ್ಕೀಮ್ನ ಫಲವಾಗಿ ಈ ಐತಿಹಾಸಿಕ ಕ್ಷಣ ದೊರಕಿದೆ ಎಂದು ಅವರು ಹೇಳಿದ್ದಾರೆ.
ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕೆ ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲೂ ಸ್ಮಾರ್ಟ್ಫೋನ್ಗಳ ತಯಾರಿಕೆ ಸಖತ್ ಏರಿಕೆ ಆಗುತ್ತಿದೆ. 2023-24ರಲ್ಲಿ ಭಾರತದಿಂದ ರಫ್ತಾದ ಸ್ಮಾರ್ಟ್ಫೋನ್ಗೆ ಹೋಲಿಸಿದರೆ 2024-25ರಲ್ಲಿ ರಫ್ತಿನಲ್ಲಿ ಶೇ. 54ರಷ್ಟು ಹೆಚ್ಚಳ ಆಗಿದೆ.
ಇದನ್ನೂ ಓದಿ: ವೆಚ್ಚ ಹೆಚ್ಚಳದಲ್ಲೂ ಲಾಭ ಹೆಚ್ಚಳದ ನಿರೀಕ್ಷೆಯಲ್ಲಿ ಭಾರತದ ಎಂಎಸ್ಎಂಇಗಳು: ಸಿಡ್ಬಿ ವರದಿ
ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತ ಗಾಢವಾಗಿ ಬೆಸೆದುಕೊಳ್ಳುತ್ತಿರುವುದಕ್ಕೆ ಈ ಸ್ಮಾರ್ಟ್ಫೋನ್ ರಫ್ತು ಹೆಚ್ಚಳವೇ ಕನ್ನಡಿ ಹಿಡಿದಿದೆ. ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಭಾರತದ ಎಂಎಸ್ಎಂಇಗಳು ಪ್ರಮುಖ ಕೊಂಡಿಗಳಾಗುತ್ತಿವೆ. ಉದ್ಯೋಗಸೃಷ್ಟಿಯೂ ಹೆಚ್ಚಾಗುತ್ತಿದೆ. ದೇಶದೊಳಗೆ ಆಂತರಿಕ ಎಲೆಕ್ಟ್ರಾನಿಕ್ಸ್ ತಯಾರಿಕೆಯ ವ್ಯವಸ್ಥೆ ಬಹಳ ವೇಗದಲ್ಲಿ ವಿಸ್ತಾರಗೊಳ್ಳುತ್ತಿದೆ ಎಂದು ಕೇಂದ್ರ ಸಚಿವರು ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಭಾರತದಿಂದ 2024-25ರಲ್ಲಿ ರಫ್ತಾದ ಸ್ಮಾರ್ಟ್ಫೋನ್ನಲ್ಲಿ ಐಫೋನ್ ಪಾಲು ಶೇ. 70ರಷ್ಟಿದೆ. ಭಾರತದಿಂದ ರಫ್ತಾದ ಐಫೋನ್ನಲ್ಲಿ ತಮಿಳುನಾಡಿನ ಫಾಕ್ಸ್ಕಾನ್ ಘಟಕದಲ್ಲಿ ತಯಾರಾದ ಐಫೋನ್ಗಳೇ ಅರ್ಧದಷ್ಟಿವೆ.
ಆ್ಯಪಲ್ನ ಐಫೋನ್ ಮತ್ತಿತರ ಉತ್ಪನ್ನಗಳನ್ನು ತಯಾರಿಸುವ ಕಂಪನಿಗಳಲ್ಲಿ ಫಾಕ್ಸ್ಕಾನ್ ಪ್ರಮುಖವಾದುದು. ಭಾರತದಲ್ಲಿ ಫಾಕ್ಸ್ಕಾನ್ ಅಲ್ಲದೇ ಪೆಗಾಟ್ರಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳು ಆ್ಯಪಲ್ ಉತ್ಪನ್ನಗಳನ್ನು ತಯಾರಿಸುತ್ತವೆ.
ಇದನ್ನೂ ಓದಿ: ಸೌರಶಕ್ತಿ ಮತ್ತು ವಾಯುಶಕ್ತಿ ಉತ್ಪಾದನೆಯಲ್ಲಿ ಜರ್ಮನಿಯನ್ನು ಹಿಂದಿಕ್ಕಿದ ಭಾರತ; ಈಗ ನಾವೇ ವಿಶ್ವದ ನಂ. 3
ಕರ್ನಾಟಕದ ಕೋಲಾರದಲ್ಲಿರುವ ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಸಾಕಷ್ಟು ಐಫೋನ್ ಅಸೆಂಬ್ಲಿಂಗ್ ನಡೆಯುತ್ತಿದೆ. ಮುಂಚೆ ಇದು ವಿಸ್ಟ್ರಾನ್ ಕಂಪನಿಯ ಫ್ಯಾಕ್ಟರಿಯಾಗಿತ್ತು. ಅದನ್ನು ಟಾಟಾ ಎಲೆಕ್ಟ್ರಾನಿಕ್ಸ್ ಖರೀದಿ ಮಾಡಿತು. ತಮಿಳುನಾಡಿನಲ್ಲಿರುವ ಪೆಗಾಟ್ರಾನ್ ಘಟಕದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಶೇ. 60ರಷ್ಟು ಪಾಲು ಹೊಂದಿದೆ. ಹೀಗಾಗಿ, ಫಾಕ್ಸ್ಕಾನ್ ಬಳಿಕ ಟಾಟಾ ಎಲೆಟ್ರಾನಿಕ್ಸ್ ಪ್ರಮುಖ ಸ್ಮಾರ್ಟ್ಫೋನ್ ಅಸೆಂಬ್ಲಿಂಗ್ ಕಂಪನಿ ಎನಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ