ನವದೆಹಲಿ, ಜನವರಿ 12: ಬೆಂಗಳೂರಿನ ಏರ್ಪೋರ್ಟ್ ಸಂಸ್ಥೆ ಬಿಎಐಎಲ್ನಲ್ಲಿ ಹೂಡಿಕೆ ಹೆಚ್ಚಿಸಿರುವ ಕೆನಡಾ ಮೂಲದ ಫೇರ್ಫ್ಯಾಕ್ಸ್ ಸಂಸ್ಥೆಯ (Fairfax Financial Holdings) ಮುಖ್ಯಸ್ಥ ಪ್ರೇಮ್ ವತ್ಸ (Prem Watsa) ಅವರು ಭಾರತದ ಆರ್ಥಿಕತೆ ಪರಿಸ್ಥಿತಿ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದ ಆರ್ಥಿಕ ಮುನ್ನಡೆಯ ದಾರಿಯಲ್ಲಿರುವ ಅನುಕೂಲತೆ ಬಗ್ಗೆ ವಿಶದ ಪಡಿಸಿದ್ದಾರೆ.
‘ಭಾರತದ ಮೂರನೇ ಎರಡು ಭಾಗದಷ್ಟು ಆರ್ಥಿಕತೆಯು ಗ್ರಾಹಕ ಕೇಂದ್ರಿತವಾಗಿದೆ (consumer oriented). ಇದು ಈ ದೇಶಕ್ಕಿರುವ ಬಹಳ ದೊಡ್ಡ ಅನುಕೂಲ. ಚೀನಾದಂತಹ ದೇಶಗಳಿಗೆ ಈ ಅನುಕೂಲ ಒದಗಿ ಬರಲು ಬಹಳ ಕಾಲ ಹಿಡಿಯಿತು. ಸೌಕರ್ಯ ಅಭಿವೃದ್ಧಿ, ಸರ್ಕಾರೀ ವೆಚ್ಚ ಎಲ್ಲವೂ ಆಗುತ್ತಿದೆ. ಆರ್ಥಿಕತೆ ಆಗಿಷ್ಟು ಈಗಿಷ್ಟು ಕಡಿಮೆ ಆಗಬಹುದಾದರೂ ಒಟ್ಟಾರೆ ಆರ್ಥಿಕತೆಗೆ ಸ್ಥಿರತೆ ತರುತ್ತದೆ’ ಎಂದು ಪ್ರೇಮ್ ವತ್ಸ ಹೇಳಿದ್ದಾರೆ.
ಇದನ್ನೂ ಓದಿ: Infosys-InSemi: ಬೆಂಗಳೂರಿನ ಸೆಮಿಕಂಡಕ್ಟರ್ ಡಿಸೈನ್ ಕಂಪನಿ ಇನ್ಸೆಮಿಯನ್ನು ಖರೀದಿಸಲು ಮುಂದಾದ ಇನ್ಫೋಸಿಸ್
ಭಾರತದಲ್ಲಿ ಸಮೀಕ್ಷೆಗಳ ಪ್ರಕಾರ ಪ್ರಧಾನಿ ಮೋದಿ ಮೇಲೆ ಶೇ. 70-80ರಷ್ಟು ಜನರಿಗೆ ವಿಶ್ವಾಸ ಇದೆ. ಹೂಡಿಕೆದಾರರಿಗೆ ಮೋದಿ ಬಗ್ಗೆ ವಿಶ್ವಾಸ ಇದೆ. ಮೋದಿ ಇದ್ದರೆ ಆರ್ಥಿಕ ಬೆಳವಣಿಗೆ ಹೀಗೇ ಮುಂದುವರಿಯುತ್ತದೆ. ವ್ಯವಹಾರ ಸ್ನೇಹಿ ನೀತಿಗಳು ಜಾರಿಯಲ್ಲಿರುತ್ತವೆ. ಅಸಮರ್ಪಕ ತೆರಿಗೆ ವಿಧಿಸುವುದಿಲ್ಲ ಎನ್ನುವ ಭಾವನೆ ಇದೆ,’ ಎಂದು ಫೇರ್ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಸಂಸ್ಥೆಯ ಛೇರ್ಮನ್ ಆದ ಅವರು ಅಭಿಪ್ರಾಯಪಟ್ಟಿದ್ದಾರೆ.
‘ಭಾರತ ಮುನ್ನುಗ್ಗುತ್ತಿದೆ. ಅಮೆರಿಕದಲ್ಲಿ ಆರ್ಥಿಕತೆ ಮಂದಗೊಂಡಿರಬಹುದು. ಚೀನಾದಲ್ಲಿ ಸಾಲದ ಪ್ರಮಾಣ ಹೆಚ್ಚಿದೆ. ರಿಯಲ್ ಎಸ್ಟೇಟ್ ಬಿಕ್ಕಟ್ಟು ಇತ್ಯಾದಿ ಸಮಸ್ಯೆಗಳಿವೆ. ಆದರೆ, ಭಾರತಲ್ಲಿ ಇಂತಹ ಸಮಸ್ಯೆಗಳಿಲ್ಲ. ಇಲ್ಲಿ ಷೇರುಪೇಟೆಯಲ್ಲಿ ಬೆಲೆ ಅಧಿಕವಾಗಿರಬಹುದು. 15 ಅಥವಾ 20 ವರ್ಷಗಳ ಹಿಂದೆ ಚೀನಾ ಇದ್ದಂತಹ ಸ್ಥಿತಿಯಲ್ಲಿ ಭಾರತ ಇದೆ. ಹೀಗಾಗಿ, ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಹಾದಿ ಬಹಳ ದೂರ ಹೋಗಬಹುದು,’ ಎಂದು ಪ್ರೇಮ್ ವತ್ಸ ತಿಳಿಸಿದ್ದಾರೆ.
ಟೊರಾಂಟೋದಲ್ಲಿ ಮುಖ್ಯಕಚೇರಿ ಹೊಂದಿರುವ ಫೇರ್ಫ್ಯಾಕ್ಸ್ ಬೆಂಗಳೂರಿನ ಏರ್ಪೋರ್ಟ್ನ ಮಾಲೀಕ ಸಂಸ್ಥೆ ಬಿಐಎಎಲ್ನಲ್ಲಿ ಹೆಚ್ಚಿನ ಷೇರು ಖರೀದಿಸಿದೆ. ಬಿಐಎಎಲ್ನಲ್ಲಿ ಫೇರ್ಫ್ಯಾಕ್ಸ್ ಷೇರು ಪ್ರಮಾಣ ಶೇ. 64ಕ್ಕೆ ಏರಿದೆ. ಬೆಂಗಳೂರು ಏರ್ಪೋರ್ಟ್ನ ಯಶಸ್ಸನ್ನು ಮುಂದಿಟ್ಟುಕೊಂಡು ಭಾರತದಲ್ಲಿ ಇನ್ನಷ್ಟು ಏರ್ಪೋರ್ಟ್ಗಳಿಗೆ ಬಿಡ್ ಸಲ್ಲಿಸಲು ಫೇರ್ಫ್ಯಾಕ್ಸ್ ಆಲೋಚಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ