ಭಾರತ-ಇಸ್ರೇಲ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವೇದಿಕೆ ಸಜ್ಜು; ಮಾರ್ಗಸೂಚಿಗೆ ಎರಡೂ ದೇಶಗಳಿಂದ ಸಹಿ
India and Israel sign Terms of Reference for FTA: ಭಾರತ ಮತ್ತು ಇಸ್ರೇಲ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಾನದಂಡವಾಗಿ ರೂಪಿಸಲಾಗಿರುವ ಟರ್ಮ್ಸ್ ಆಫ್ ರೆಫರೆನ್ಸ್ಗೆ ಎರಡೂ ದೇಶಗಳು ಸಹಿ ಹಾಕಿವೆ. ಈ ಟಿಒಆರ್ ಆಧಾರವಾಗಿ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಮಾತುಕತೆಗಳು ನಡೆಯಲಿವೆ. ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಹಾಗೂ ಭಾರತೀಯ ಉದ್ಯಮಿಗಳಿರುವ ಒಂದು ನಿಯೋಗ ಪ್ರಸಕ್ತ ಇಸ್ರೇಲ್ಗೆ ಭೇಟಿ ನೀಡಿದೆ.

ನವದೆಹಲಿ, ನವೆಂಬರ್ 20: ಭಾರತ ಮತ್ತು ಇಸ್ರೇಲ್ (India Israel) ನಡುವೆ ಮುಕ್ತ ವ್ಯಾಪಾರ ಒಪ್ಪಂದ (FTA- Free Trade Agreement) ಕುದುರಿಸಲು ಸದ್ಯದಲ್ಲೇ ಮಾತುಕತೆ ಶುರುವಾಗಲಿದೆ. ಈ ನಿಟ್ಟಿನಲ್ಲಿ ಎರಡೂ ದೇಶಗಳು ಟರ್ಮ್ಸ್ ಆಫ್ ರೆಫರೆನ್ಸ್ ಅಥವಾ ಮಾರ್ಗಸೂಚಿಗೆ (ToR- Terms of Reference) ಸಹಿ ಹಾಕಿವೆ. ಮಾರುಕಟ್ಟೆ ಪ್ರವೇಶ, ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಡುವ ಸಂಗತಿಗಳಿವೆ. ಟ್ಯಾರಿಫ್ಗಳ ನಿರ್ಬಂಧ ನಿರ್ಮೂಲನಗೊಳಿಸುವುದು, ಟ್ಯಾರಿಫೇತರ ನಿರ್ಬಂಧಗಳನ್ನು (non-tariff barriers) ಕಡಿಮೆಗೊಳಿಸುವುದು ಇತ್ಯಾದಿ ಅಂಶಗಳು ಪ್ರಸ್ತಾಪಿತ ಒಪ್ಪಂದದಲ್ಲಿ ಇದೆ.
ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಹಾಗೂ 60ಕ್ಕೂ ಅಧಿಕ ಉದ್ಯಮಿಗಳಿರುವ ಭಾರತೀಯ ನಿಯೋಗವೊಂದು ಇಸ್ರೇಲ್ನಲ್ಲಿದೆ. ಮುಕ್ತ ವ್ಯಾಪಾರ ಒಪ್ಪಂದ ಯಾವ ರೀತಿ ಇರಬೇಕು, ಆ ಸಂಬಂಧ ಮಾತುಕತೆಗಳ ದಿಕ್ಕು ಯಾವ ಕಡೆ ಇರಬೇಕು ಎಂಬಿತ್ಯಾದಿ ಅಂಶಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಎರಡೂ ದೇಶಗಳ ತಜ್ಞರು ಅಂತಿಮಗೊಳಿಸಿದ್ದಾರೆ. ಈ ಟಿಒಆರ್ ಅಥವಾ ಮಾರ್ಗಸೂಚಿ ಪ್ರಕಾರ ಮಾತುಕತೆಗಳು ನಡೆಯುತ್ತವೆ.
ಇದನ್ನೂ ಓದಿ: ಇನ್ನು 10-20 ವರ್ಷದಲ್ಲಿ ಜಗತ್ತಲ್ಲಿ ಬಡತನವೇ ಇರಲ್ಲ; ಜನರು ಕೆಲಸ ಮಾಡಲೇಬೇಕಿಲ್ಲ: ಇಲಾನ್ ಮಸ್ಕ್ ಭವಿಷ್ಯ
ಹೂಡಿಕೆ, ಸುಂಕ ವಿಧಾನಗಳ ಸರಳೀಕರಣ, ತಂತ್ರಜ್ಞಾನ ವರ್ಗಾವಣೆ, ರಕ್ಷಣಾ ಕ್ಷೇತ್ರ, ಬಾಹ್ಯಾಕಾಶ ಕ್ಷೇತ್ರ, ಫಿನ್ಟೆಕ್, ಆಗ್ರಿಟೆಕ್, ಎಐ, ಸೈಬರ್ ಸೆಕ್ಯೂರಿಟಿ, ಆರ್ ಅಂಡ್ ಡಿ, ಇನ್ನೋವೇಶನ್, ಡ್ರಿಪ್ ಇರಿಗೇಶನ್ ಇತ್ಯಾದಿ ವಿಚಾರಗಳ ಬಗ್ಗೆ ಭಾರತೀಯ ನಿಯೋಗ ಮತ್ತು ಇಸ್ರೇಲೀ ತಂಡದ ಮಧ್ಯೆ ಚರ್ಚೆಗಳಾದವು ಎನ್ನಲಾಗಿದೆ.
ಇಸ್ರೇಲ್ ರಾಯಭಾರಿ ಅವರ ಎಕ್ಸ್ ಪೋಸ್ಟ್
Congratulations for signing the TOR for a trade agreement btw 🇮🇱&🇮🇳 Ministers @PiyushGoyal @NirBarkat ! pic.twitter.com/80NymtmTr8
— 🇮🇱 Reuven Azar (@ReuvenAzar) November 20, 2025
ಭಾರತ ಹಾಗೂ ಇಸ್ರೇಲ್ ಮಧ್ಯೆ ಎಫ್ಟಿಎ ಏರ್ಪಟ್ಟರೆ ಭಾರತದಿಂದ ವೃತ್ತಿಪರ ಕೆಲಸಗಾರರಿಗೆ ಇಸ್ರೇಲ್ನಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ. ಇಸ್ರೇಲ್ ರಾಜಧಾನಿ ಟೆಲ್ ಅವಿವ್ನಲ್ಲಿ ನಡೆಯುವ 4.5 ಲಕ್ಷ ಕೋಟಿ ರೂ ಮೊತ್ತದ ಮೆಟ್ರೋ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡಲು ಭಾರತದ 8-10 ಕಂಪನಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ ಎಂದು ಸಚಿವ ಪೀಯೂಶ್ ಗೋಯಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೂಡಿಕೆದಾರರಿಗೆ Escrow ಅಕೌಂಟ್; ಸರ್ಕಾರದಿಂದ ಹಣ ಗ್ಯಾರಂಟಿ; ಆಂಧ್ರ ಸಿಎಂ ಕ್ರಮಕ್ಕೆ ಉದ್ಯಮ ವಲಯ ಶ್ಲಾಘನೆ
ಅಮೆರಿಕದಂತೆ ಹಠ ಹಿಡಿಯದ ಇಸ್ರೇಲ್
ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕೆ ಹಲವು ಕಾಲದಿಂದ ಮಾತುಕತೆಗಳು ನಡೆಯುತ್ತಿದ್ದರೂ ಅಂತಿಮಗೊಳ್ಳುತ್ತಿಲ್ಲ. ಕೃಷಿ ಹಾಗೂ ಡೈರಿ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯನ್ನು ಮುಕ್ತವಾಗಿ ತೆರೆಯಬೇಕು ಎನ್ನುವುದು ಅಮೆರಿಕದ ಹಠ. ಆದರೆ, ಭಾರತ ಇದಕ್ಕೆ ಒಪ್ಪುತ್ತಿಲ್ಲ. ಇಸ್ರೇಲ್ ಕೂಡ ಡೈರಿ, ಕೃಷಿ, ಮೀನುಗಾರಿಕೆ ಉತ್ಪನ್ನಗಳನ್ನು ರಫ್ತು ಮಾಡುತ್ತದಾದರೂ ಭಾರತದ ಮೇಲೆ ಒತ್ತಡ ಹೇರುತ್ತಿಲ್ಲ. ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರು ಈ ವಿಚಾರವನ್ನು ಸ್ವಾಗತಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:09 pm, Thu, 20 November 25




