ಎಡಿಬಿ ವರದಿ: ಭಾರತದ ಜಿಡಿಪಿ ಬೆಳವಣಿಗೆ 2025ರಲ್ಲಿ ಶೇ. 6.9, 2027ರಲ್ಲಿ ಶೇ. 7.3 ಅಂದಾಜು

Asian Development Outlook report 2026 April, projects India and Asia's growth rate: ಪ್ರಸಕ್ತ ಬಿಕ್ಕಟ್ಟಿನ ಕಾರಣಕ್ಕೆ ಏಷ್ಯಾ ಪೆಸಿಫಿಕ್ ಪ್ರದೇಶದ ಆರ್ಥಿಕ ಅಭಿವೃದ್ಧಿ 2026ರಲ್ಲಿ ಶೇ. 5.1ಕ್ಕೆ ಸೀಮಿತಗೊಳ್ಳಬಹುದು ಎಂದು ಎಡಿಬಿ ವರದಿಯಲ್ಲಿ ಹೇಳಲಾಗಿದೆ. ಈ ಅವಧಿಯಲ್ಲಿ ಭಾರತವು ಶೇ. 6.9 ಅಭಿವೃದ್ಧಿ ದಾಖಲಿಸಬಹುದು ಎಂಬುದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್​ನ ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.

ಎಡಿಬಿ ವರದಿ: ಭಾರತದ ಜಿಡಿಪಿ ಬೆಳವಣಿಗೆ 2025ರಲ್ಲಿ ಶೇ. 6.9, 2027ರಲ್ಲಿ ಶೇ. 7.3 ಅಂದಾಜು
ಭಾರತದ ಜಿಡಿಪಿ
Image Credit source: iStock

Updated on: Apr 10, 2026 | 12:50 PM

ನವದೆಹಲಿ, ಏಪ್ರಿಲ್ 10: ಜಾಗತಿಕ ತುಮುಲಗಳು, ಬಿಕ್ಕಟ್ಟುಗಳ ಮಧ್ಯೆ ಭಾರತದ ಆರ್ಥಿಕತೆ (Indian Economy) ಉತ್ತಮ ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ. ಈ ವರ್ಷ ನಿರೀಕ್ಷಿತ ಅಭಿವೃದ್ಧಿ ಕಾಣದಿದ್ದರೂ ಒಟ್ಟಾರೆಯಾಗಿ ಸಮಾಧಾನಕರ ಬೆಳವಣಿಗೆ ಪಡೆಯಬಹುದು ಎಂದು ಅನೇಕ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್​ನ (ಎಡಿಬಿ) ಇತ್ತೀಚಿನ ವರದಿಯಲ್ಲಿ 2026 ಮತ್ತು 2027ರ ವರ್ಷಕ್ಕೆ ಭಾರತದ ಜಿಡಿಪಿ ಎಷ್ಟು ಬೆಳೆಯಬಹುದು ಎಂದು ಅಂದಾಜಿಸಿದೆ.

ಏಪ್ರಿಲ್ ತಿಂಗಳ ಏಷ್ಯನ್ ಡೆವಲಪ್ಮೆಂಟ್ ಔಟ್​ಲುಕ್ (ಎಡಿಒ) ವರದಿ ಪ್ರಕಾರ, 2026ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 6.9ಕ್ಕೆ ಮಿತಿಗೊಳ್ಳಬಹುದು. ಆದರೆ, 2027ರಲ್ಲಿ ಚೇತರಿಕೆ ಕಂಡು ಶೇ. 7.3 ಬೆಳವಣಿಗೆ ದಾಖಲಿಸಬಹುದು ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ. 2025ರ ಕ್ಯಾಲಂಡರ್ ವರ್ಷದಲ್ಲಿ ಭಾರತ ಶೇ. 7.6ರಷ್ಟು ಜಿಡಿಪಿ ಬೆಳವಣಿಗೆ ಕಂಡಿತ್ತು.

ಇದನ್ನೂ ಓದಿ: ಭಾರತ ಶೇ 7.8, ಅಮೆರಿಕ ಶೇ. 0.5; ಆರ್ಥಿಕ ಬೆಳವಣಿಗೆ ವೇಗದಲ್ಲಿ ಅಜಗಜಾಂತರ

ಏಷ್ಯಾದ ಒಟ್ಟಾರೆ ಬೆಳವಣಿಗೆ ಹೇಗಿರಬಹುದು?

ಎಡಿಬಿ ವರದಿ ಪ್ರಕಾರ ಏಷ್ಯಾ ಪೆಸಿಫಿಕ್ ಪ್ರದೇಶದ ಒಟ್ಟಾರೆ ಬೆಳವಣಿಗೆ 2026ರಲ್ಲಿ ಶೇ. 5.1ಕ್ಕೆ ನಿಲ್ಲಬಹುದು. 2025ರಲ್ಲಿ ಶೇ. 5.4 ಬೆಳವಣಿಗೆ ಹೋಲಿಸಿದರೆ ಈ ವರ್ಷ ಏಷ್ಯಾದ ಒಟ್ಟಾರೆ ಅಭಿವೃದ್ಧಿ ಸ್ವಲ್ಪ ನಿಧಾನಗೊಳ್ಳಲಿದೆ. 2027ರಲ್ಲೂ ಈ ಪ್ರದೇಶವು ಶೇ. 5.1ರಷ್ಟು ಮಾತ್ರವೇ ಬೆಳವಣಿಗೆ ದಾಖಲಿಸಲಿದೆ ಎಂದು ಎಡಿಬಿ ಹೇಳಿದೆ. ಈ ಮಧ್ಯೆ ಭಾರತದಂತಹ ಕೆಲ ಏಷ್ಯನ್ ದೇಶಗಳು ಸರಾಸರಿಗಿಂತ ಹೆಚ್ಚು ಪ್ರಗತಿ ಹೊಂದುವ ಸಾಧ್ಯತೆ ಇದೆ.

ಕುತೂಹಲವೆಂದರೆ ಮಾರ್ಚ್ 10ರವರೆಗಿನ ವಾತಾವರಣದ ಆಧಾರದ ಮೇಲೆ ಎಡಿಬಿ ಈ ಭವಿಷ್ಯ ನುಡಿದಿದೆ. ಇರಾನ್ ಯುದ್ಧ ಫೆಬ್ರುವರಿ 28ರಂದು ಶುರುವಾಗಿತ್ತು. ಯುದ್ಧ ತೀರಾ ಮುಂದುವರಿಯಬಹುದು ಎನ್ನುವ ಕಲ್ಪನೆ ಇಲ್ಲದೇ 2026 ಮತ್ತು 2027ರ ಆರ್ಥಿಕ ಬೆಳವಣಿಗೆಯನ್ನು ಎಡಿಬಿಯ ಆರ್ಥಿಕ ತಜ್ಞರು ಅಂದಾಜು ಮಾಡಿದ್ದಾರೆ. ಆದರೆ, ಯುದ್ದ ದೀರ್ಘಾವಧಿ ಮುಂದುವರಿದರೆ ಅಪಾಯ ಇದೆ ಎನ್ನುವ ಎಚ್ಚರಿಕೆಯನ್ನು ಈ ವರದಿಯಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಭಾರತಕ್ಕೆ ಪೆಟ್ರೋಲ್, ಡೀಸಲ್ ಸಮಸ್ಯೆ ವಕ್ಕರಿಸಲಿಲ್ಲ ಯಾಕೆ? ಸರ್ಕಾರದ ಈ ಕೆಲ ಕ್ರಮಗಳೇ ಕಾರಣವಾ?

ಇರಾನ್ ಯುದ್ಧವು ಒಂದು ತಿಂಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದು ಜಾಗತಿಕವಾಗಿ ತಲ್ಲಣಗೊಳಿಸಿದೆ. ಅದರಲ್ಲೂ ಗಲ್ಫ್ ತೈಲದ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಏಷ್ಯನ್ ದೇಶಗಳಿಗೆ ಈ ಒಂದು ತಿಂಗಳು ಬಹಳ ಹೊಡೆತ ಕೊಟ್ಟಿದೆ. ಭಾರತದ ತೈಲ ಮತ್ತು ಅನಿಲ ಪೂರೈಕೆ ಜಾಲ ಹೆಚ್ಚಿಸಿಕೊಂಡಿದ್ದರಿಂದ ತಕ್ಕಮಟ್ಟಿಗೆ ಪರಿಸ್ಥಿತಿ ನಿಭಾಯಿಸಲು ಯಶಸ್ವಿಯಾಗಿದೆ. ಒಂದು ವೇಳೆ 15 ದಿನಗಳ ಕದನವಿರಾಮದ ಬಳಿಕ ಮತ್ತೆ ಯುದ್ಧ ಶುರುವಾದರೆ ಪರಿಸ್ಥಿತಿ ನಿಜಕ್ಕೂ ಬಿಗಡಾಯಿಸಬಹುದು ಎಂದು ಅನೇಕ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us