AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಐ ಅಬ್ಬರದಲ್ಲಿ ಮುಂದೋಡಿದ್ದ ದೇಶಗಳಿಗೆ ಅದೇ ಎಐ ಹೊಡೆತ; ಭಾರತದಕ್ಕಿಂತ ಕೆಳಗೆ ಕುಸಿದ ತೈವಾನ್, ಕೊರಿಯನ್ ಮಾರುಕಟ್ಟೆ

India Stock Market Reclaims 6th Spot: ಕಳೆದ ವಾರ AI ಬೂಮ್‌ನಿಂದ ಏರಿದ್ದ ತೈವಾನ್ ಮತ್ತು ದಕ್ಷಿಣ ಕೊರಿಯಾ ಷೇರು ಮಾರುಕಟ್ಟೆಗಳು AI ಕುಸಿತದಿಂದಾಗಿ ಮತ್ತೆ ಇಳಿದಿವೆ. ಇದರ ಪರಿಣಾಮವಾಗಿ ಭಾರತದ ಷೇರು ಮಾರುಕಟ್ಟೆ ಜಾಗತಿಕವಾಗಿ 6ನೇ ಸ್ಥಾನಕ್ಕೆ ಮರಳಿದೆ. ತಂತ್ರಜ್ಞಾನ ವಲಯದ ಮೇಲೆ ಹೆಚ್ಚು ಅವಲಂಬಿತವಾಗಿರುವ ಆ ದೇಶಗಳಿಗಿಂತ, ಭಾರತದ ಬ್ಯಾಂಕಿಂಗ್, ಇಂಧನ, ಐಟಿ, FMCG ಒಳಗೊಂಡ ವೈವಿಧ್ಯಮಯ ಮಾರುಕಟ್ಟೆ ಹೆಚ್ಚು ಸ್ಥಿರವಾಗಿದೆ ಎಂದು ಈ ಬೆಳವಣಿಗೆ ತೋರಿಸಿದೆ.

ಎಐ ಅಬ್ಬರದಲ್ಲಿ ಮುಂದೋಡಿದ್ದ ದೇಶಗಳಿಗೆ ಅದೇ ಎಐ ಹೊಡೆತ; ಭಾರತದಕ್ಕಿಂತ ಕೆಳಗೆ ಕುಸಿದ ತೈವಾನ್, ಕೊರಿಯನ್ ಮಾರುಕಟ್ಟೆ
ಷೇರು ಮಾರುಕಟ್ಟೆImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 08, 2026 | 3:33 PM

Share

ನವದೆಹಲಿ, ಜೂನ್ 8: ಕಳೆದ ವಾರ ಭಾರತದ ಷೇರು ಮಾರುಕಟ್ಟೆಯನ್ನು (Stock Market) ಮೀರಿಸಿ ಹಿಗ್ಗಿದ್ದ ತೈವಾನ್ ಮತ್ತು ಸೌತ್ ಕೊರಿಯನ್ ಮಾರುಕಟ್ಟೆಗಳು ಇದೀಗ ಸ್ವಸ್ಥಾನಕ್ಕೆ ಮರಳಿವೆ. ಇವೆರಡು ಮಾರುಕಟ್ಟೆಗಳು ಏಳು ಮತ್ತು ಎಂಟನೇ ಸ್ಥಾನಕ್ಕೆ ಇಳಿದಿವೆ. ಭಾರತದ ಷೇರು ಬಜಾರು ಆರನೇ ಸ್ಥಾನಕ್ಕೆ ಮರಳಿದೆ. ಒಂದು ವಾರದಲ್ಲಿ ಈ ವ್ಯತ್ಯಯಗಳಿಗೆ ಕಾರಣವಾಗಿದ್ದು ಎಐ ಬೂಮ್ ಮತ್ತು ಎಐ ಕುಸಿತ. ಎಐ ಕ್ಷೇತ್ರದ ಮೇಲೆ ಕಳೆದ ವಾರ ಹೂಡಿಕೆದಾರರು ಹಣ ಹಾಕಿದ ಪರಿಣಾಮ ಕೊರಿಯ ಮತ್ತು ತೈವಾನ್ ಮಾರುಕಟ್ಟೆ ಹಿಗ್ಗಿತ್ತು. ಈಗ ಎಐ ಕ್ಷೇತ್ರದಲ್ಲಿ ಹೂಡಿಕೆ ತಗ್ಗಿದ ಪರಿಣಾಮ ಮತ್ತೊಮ್ಮೆ ಇವೆರಡು ಮಾರುಕಟ್ಟೆಗಳು ಕುಸಿದಿವೆ.

ಮೇ ತಿಂಗಳ ಕೊನೆಯಲ್ಲಿ ಹಾಗೂ ಜೂನ್ ಆರಂಭದಲ್ಲಿ ಜಾಗತಿಕ ಮಟ್ಟದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಹವಾ ಭಾರಿ ಜೋರಾಗಿತ್ತು. ಎಐ ಚಿಪ್‌ಗಳನ್ನು ತಯಾರಿಸುವ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್, ಎಸ್‌ಕೆ ಹೈನಿಕ್ಸ್ ಹಾಗೂ ತೈವಾನ್‌ನ ಟಿಎಸ್‌ಎಂಸಿ (TSMC) ಕಂಪನಿಗಳ ಷೇರುಗಳು ಭಾರಿ ಏರಿಕೆ ಕಂಡಿದ್ದವು. ಇದರಿಂದಾಗಿ ದಕ್ಷಿಣ ಕೊರಿಯಾ ಭಾರತವನ್ನು ಹಿಂದಿಕ್ಕಿ ವಿಶ್ವದ 6ನೇ ಅತಿ ದೊಡ್ಡ ಷೇರು ಮಾರುಕಟ್ಟೆಯಾಗಿ ಹೊರಹೊಮ್ಮಿತ್ತು.

ಆದರೆ, ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ತಂತ್ರಜ್ಞಾನ (Tech Stocks) ಮತ್ತು ಸೆಮಿಕಂಡಕ್ಟರ್ ಕಂಪನಿಗಳ ಷೇರುಗಳ ಮೌಲ್ಯ ದಿಡೀರನೆ ಕುಸಿದಿದೆ. ಹೂಡಿಕೆದಾರರು ಎಐ ವಲಯದಲ್ಲಿದ್ದ ತಮ್ಮ ಹಣವನ್ನು ಹಿಂಪಡೆಯಲು ತೊಡಗಿದ್ದರಿಂದ ತೈವಾನ್ ಮತ್ತು ದಕ್ಷಿಣ ಕೊರಿಯಾದ ಮಾರುಕಟ್ಟೆಗಳು ತೀವ್ರ ಕುಸಿತ ಕಂಡವು.

ಇದನ್ನೂ ಓದಿ: ದೇವನಹಳ್ಳಿಯಲ್ಲಿ ಸದ್ಯದಲ್ಲೇ ಗಿಗಾ ಫ್ಯಾಕ್ಟರಿ; ಸೋಲಾರ್ ಇಂಗಾಟ್ಸ್, ಸಿಲಿಕಾನ್ ವೇಫರ್ಸ್ ತಯಾರಿಸಲಿರುವ ಎಮ್ಮೀ ಗ್ರೂಪ್

ಭಾರತಕ್ಕೆ ಲಾಭ: ತೈವಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಟೆಕ್ ಷೇರುಗಳು ನೆಲಕಚ್ಚಿದಾಗ, ಜಾಗತಿಕ ಹೂಡಿಕೆದಾರರು ಮತ್ತೆ ಸುರಕ್ಷಿತ ಮತ್ತು ವೈವಿಧ್ಯಮಯ ಮಾರುಕಟ್ಟೆಯಾದ ಭಾರತದ ಕಡೆಗೆ ಮುಖ ಮಾಡಿದ್ದಾರೆ. ಇದರಿಂದಾಗಿ ಭಾರತೀಯ ಷೇರು ಮಾರುಕಟ್ಟೆಯ ಒಟ್ಟು ಮೌಲ್ಯ (Market Capitalization) ಮತ್ತೆ ತೈವಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳಿಗಿಂತ ಮೇಲಕ್ಕೆ ಜಿಗಿದಿದೆ. ಈ ಬೆಳವಣಿಗೆಯಿಂದಾಗಿ ಭಾರತವು ಜಾಗತಿಕ ಷೇರು ಮಾರುಕಟ್ಟೆಗಳ ಪಟ್ಟಿಯಲ್ಲಿ ತನ್ನ ಬಲಿಷ್ಠ ಸ್ಥಾನವನ್ನು ಮರಳಿ ಪಡೆದಿದೆ.

ತೈವಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಕೇವಲ ತಂತ್ರಜ್ಞಾನ ಮತ್ತು ಹಾರ್ಡ್‌ವೇರ್/ಸೆಮಿಕಂಡಕ್ಟರ್ ಕ್ಷೇತ್ರಗಳ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿವೆ. ಹೀಗಾಗಿ ಅಲ್ಲಿನ ಟೆಕ್ ವಲಯದಲ್ಲಿ ಸಣ್ಣ ಏರುಪೇರಾದರೂ ಇಡೀ ದೇಶದ ಮಾರುಕಟ್ಟೆ ತಲ್ಲಣಿಸುತ್ತದೆ. ಆದರೆ ಭಾರತೀಯ ಮಾರುಕಟ್ಟೆಯು ಬ್ಯಾಂಕಿಂಗ್, ಇಂಧನ, ಆಟೋಮೊಬೈಲ್, ಗ್ರಾಹಕ ಉತ್ಪನ್ನಗಳು (FMCG) ಮತ್ತು ಐಟಿ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಒಳಗೊಂಡಿರುವುದರಿಂದ ಹೆಚ್ಚು ಸ್ಥಿರವಾಗಿದೆ ಮತ್ತು ಜಾಗತಿಕ ಆಘಾತಗಳನ್ನು ತಡೆದುಕೊಳ್ಳುವ ಶಕ್ತಿ ಹೊಂದಿದೆ ಎಂಬುದು ವೇದ್ಯವಾಗಿದೆ.

ಇದನ್ನೂ ಓದಿ: ಮಾನವ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್, ಇದು ಇಲಾನ್ ಮಸ್ಕ್ ಮ್ಯಾಜಿಕ್; ಇವರಿಗಿರುವ ಸಂಪತ್ತು ಎಷ್ಟು ಅಗಾಧ ಗೊತ್ತಾ?

ಜಗತ್ತಿನ ಅತಿದೊಡ್ಡ ಷೇರುಮಾರುಕಟ್ಟೆ ಹೊಂದಿರುವ ದೇಶಗಳು

  1. ಅಮೆರಿಕ: 7,224 ಲಕ್ಷ ಕೋಟಿ ರೂ
  2. ಚೀನಾ: 1,023 ಲಕ್ಷ ಕೋಟಿ ರೂ
  3. ಜಪಾನ್: 687 ಲಕ್ಷ ಕೋಟಿ ರೂ
  4. ಯುಕೆ: 440 ಲಕ್ಷ ಕೋಟಿ ರೂ
  5. ಕೆನಡಾ: 389 ಲಕ್ಷ ಕೋಟಿ ರೂ
  6. ಭಾರತ: 374 ಲಕ್ಷ ಕೋಟಿ ರೂ
  7. ತೈವಾನ್: 372 ಲಕ್ಷ ಕೋಟಿ ರೂ
  8. ಸೌತ್ ಕೊರಿಯಾ: 351 ಲಕ್ಷ ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More