ಎರಡನೇ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅವಧಿ 5 ವರ್ಷ ಅಲ್ಲ 12 ವರ್ಷ; ಯಾಕಿದು ಮಹತ್ವ ಗೊತ್ತಾ?

India Semiconductor Mission 2.0: ಕೇಂದ್ರದ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 (ISM 2.0) 12 ವರ್ಷಗಳಿಗೆ ವಿಸ್ತರಣೆಯಾಗಿದ್ದು, 1.5 ಲಕ್ಷ ಕೋಟಿ ರೂ. ನಿಧಿ ಮೀಸಲಿಡುವ ಸಾಧ್ಯತೆಯಿದೆ. ಚಿಪ್ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತು ಪೂರೈಸುವ MSME ಗಳಿಗೆ ಆದ್ಯತೆ ನೀಡಿ, ದೇಶೀಯ ಚಿಪ್ ವಿನ್ಯಾಸಕ್ಕೆ ಪ್ರೋತ್ಸಾಹ ನೀಡಲಾಗುವುದು. ಇದು ಭಾರತವನ್ನು ಜಾಗತಿಕ ಚಿಪ್ ತಯಾರಿಕಾ ಕೇಂದ್ರವಾಗಿಸಿ, ಆಮದು ಅವಲಂಬನೆ ಕಡಿಮೆಗೊಳಿಸಿ, 2030 ರೊಳಗೆ $100 ಶತಕೋಟಿ ಚಿಪ್ ಮಾರುಕಟ್ಟೆ ಗುರಿ ಸಾಧಿಸಲು ಸಹಕಾರಿಯಾಗಲಿದೆ.

ಎರಡನೇ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅವಧಿ 5 ವರ್ಷ ಅಲ್ಲ 12 ವರ್ಷ; ಯಾಕಿದು ಮಹತ್ವ ಗೊತ್ತಾ?
ಸೆಮಿಕಂಡಕ್ಟರ್
Image Credit source: iStock

Updated on: May 21, 2026 | 6:50 PM

ನವದೆಹಲಿ, ಮೇ 21: ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ದೇಶದ ಮಹತ್ವಾಕಾಂಕ್ಷೆಯ ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ (ISM- India Semiconductor Mission)) ಯೋಜನೆಯ ಎರಡನೇ ಹಂತವನ್ನು (ISM 2.0) ಬರೋಬ್ಬರಿ 12 ವರ್ಷಗಳ ದೀರ್ಘಾವಧಿಗೆ ವಿಸ್ತರಿಸುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಈ ಹಿಂದೆ ಇಂತಹ ಯೋಜನೆಗಳ ಅವಧಿ ಕೇವಲ 5 ವರ್ಷಗಳಾಗಿರುತ್ತಿದ್ದವು. ಚಿಪ್ ಉತ್ಪಾದನಾ ವಲಯದಲ್ಲಿ ಹೂಡಿಕೆ ಮತ್ತು ಉತ್ಪಾದನೆಗೆ ದೀರ್ಘಾವಧಿ ಬೇಕಾಗುವುದರಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಬೃಹತ್ ಆರ್ಥಿಕ ವೆಚ್ಚಕ್ಕೆ ಸಜ್ಜು

ಸೆಮಿಕಂಡಕ್ಟರ್ ಮಿಷನ್‌ನ ಎರಡನೇ ಹಂತಕ್ಕಾಗಿ ಸರ್ಕಾರ ಸುಮಾರು 1.5 ಲಕ್ಷ ಕೋಟಿ ರೂ ಹಣವನ್ನು ಮೀಸಲಿಡುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ ಕೇವಲ ಬೃಹತ್ ಚಿಪ್ ಉತ್ಪಾದನಾ ಘಟಕಗಳ (Fabs) ಸ್ಥಾಪನೆಗೆ ಆದ್ಯತೆ ನೀಡಲಾಗಿತ್ತು. ಆದರೆ, ISM 2.0 ಅಡಿಯಲ್ಲಿ ಚಿಪ್ ತಯಾರಿಕೆಗೆ ಬೇಕಾಗುವ ಅನಿಲಗಳು (gases), ಇಂಗುಗಳು (ingots) ಹಾಗೂ ಇತರ ಕಚ್ಚಾ ವಸ್ತುಗಳನ್ನು ಪೂರೈಸುವ ದೇಶೀಯ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSMEs) ಜಾಗತಿಕ ಮಟ್ಟಕ್ಕೆ ಬೆಳೆಸಲು ನಿರ್ಧರಿಸಲಾಗಿದೆ.

ಚಿಪ್ ವಿನ್ಯಾಸ (Chip Design): ಭಾರತದಲ್ಲೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು (Intellectual Property Rights) ಉಳಿಸಿಕೊಳ್ಳುವಂತಹ ದೇಶೀಯ ಚಿಪ್ ವಿನ್ಯಾಸ ಕಂಪನಿಗಳಿಗೆ ಸರ್ಕಾರ ವಿಶೇಷ ಪ್ರೋತ್ಸಾಹ ನೀಡಲಿದೆ.

ಸಬ್ಸಿಡಿ ದರದಲ್ಲಿ ಬದಲಾವಣೆ: ಮೊದಲ ಹಂತದಲ್ಲಿ (ISM 1.0) ಚಿಪ್ ಫ್ಯಾಬ್ರಿಕೇಶನ್ ಮತ್ತು ಪ್ಯಾಕೇಜಿಂಗ್ ಘಟಕಗಳಿಗೆ ಸರ್ಕಾರ ಶೇ. 50 ರಷ್ಟು ಧನಸಹಾಯ (Incentive) ನೀಡುತ್ತಿತ್ತು. ಆದರೆ, ಎರಡನೇ ಹಂತದಲ್ಲಿ ಇದನ್ನು ಶೇ. 30 ಕ್ಕೆ ಇಳಿಸಲು ಸರ್ಕಾರ ಯೋಜಿಸುತ್ತಿದೆ.

ಇದನ್ನೂ ಓದಿ: SpaceXAIಗೆ ಜನ ಬೇಕಿದ್ದಾರೆ; ಎಐ ಪರಿಣತಿ ಬೇಕಿಲ್ಲವಂತೆ; ಇಲಾನ್ ಮಸ್ಕ್ ಬಯಸುತ್ತಿರೋದು ಎಂಥವರನ್ನು?

ಡಿಸೆಂಬರ್ 2021 ರಲ್ಲಿ 76,000 ಕೋಟಿ ರೂ ವೆಚ್ಚದಲ್ಲಿ ಈ ಮಿಷನ್ ಪ್ರಾರಂಭವಾಗಿತ್ತು. ಇದುವರೆಗೆ ಗುಜರಾತ್‌ನ ಸಾನಂದ್‌ನಲ್ಲಿ ಮೈಕ್ರಾನ್ ತಂತ್ರಜ್ಞಾನದ 2.75 ಬಿಲಿಯನ್ ಡಾಲರ್ ವೆಚ್ಚದ ಘಟಕ ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ತೈವಾನ್‌ನ PSMC ಜಂಟಿ ಸಹಭಾಗಿತ್ವದ ಧೋಲೇರಾ ಫ್ಯಾಬ್ ಸೇರಿದಂತೆ ಒಟ್ಟು 12 ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ.

12 ವರ್ಷದ ಸೆಮಿಕಂಡಕ್ಟರ್ ಮಿಷನ್​ನಿಂದ ಏನು ಪ್ರಯೋಜನ?

ಮೊದಲ ಸೆಮಿಕಂಡಕ್ಟರ್ ಮಿಷನ್ ಐದು ವರ್ಷದವರೆಗೆ ಮಾತ್ರ ಇರುವುದು. ಈಗ ಎರಡನೇ ಆವೃತ್ತಿಯು 12 ವರ್ಷದವರೆಗೆ ಇರಲಿದೆ. ಈ 12 ವರ್ಷಗಳ ದೀರ್ಘಾವಧಿಯ ನೀತಿಯು ಜಾಗತಿಕ ಚಿಪ್ ತಯಾರಕರಲ್ಲಿ ನಂಬಿಕೆಯನ್ನು ಮೂಡಿಸಲಿದ್ದು, ಭಾರತವು ವಾರ್ಷಿಕವಾಗಿ ಆಮದು ಮಾಡಿಕೊಳ್ಳುವ ಶತಕೋಟಿ ಡಾಲರ್ ಮೌಲ್ಯದ ಸೆಮಿಕಂಡಕ್ಟರ್‌ಗಳನ್ನು ದೇಶದಲ್ಲೇ ತಯಾರಿಸಲು ಮತ್ತು 2030 ರ ವೇಳೆಗೆ ಭಾರತೀಯ ಚಿಪ್ ಮಾರುಕಟ್ಟೆಯನ್ನು $100-$110 ಬಿಲಿಯನ್‌ಗೆ ಕೊಂಡೊಯ್ಯಲು ಇದು ದಾರಿಯಾಗಲಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಫೋನ್ ಖರೀದಿಸಿ, ಇಎಂಐ ಕಟ್ಟೋಕಾಗ್ತಿಲ್ವಾ? ಸಾಲಗಾರರು ನಿಮ್ಮ ಫೋನ್ ಲಾಕ್ ಮಾಡಬಹುದಾ? ಆರ್​ಬಿಐ ಬಳಿ ಪ್ರಸ್ತಾಪ

ಸೆಮಿಕಂಡಕ್ಟರ್ ಚಿಪ್ ಡಿಸೈನ್ ಹಂತದವರೆಗೆ ಭಾರತೀಯರು ಪರಿಣಿತಿ ಮತ್ತು ಕೌಶಲ್ಯ ಹೊಂದಿದ್ದಾರೆ. ಆದರೆ, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಆಳಕ್ಕೆ ಹೋದಂತೆಲ್ಲಾ ಭಾರತದ ಕೊರತೆ ಎದ್ದುಗಾಣುತ್ತಾ ಹೋಗುತ್ತದೆ. ಎಂಜಿನಿಯರಿಂಗ್ ಜೊತೆಗೆ ಹೆಚ್ಚುವರಿ ಕೌಶಲ್ಯ ನೀಡುವ ವ್ಯವಸ್ಥೆಯ ನಿರ್ಮಾಣ, ಫೋಟೋಮಾಸ್ಕ್, ಅಲ್ಟ್ರಾಪ್ಯೂರ್ ಪ್ರೋಸಸ್ ಕೆಮಿಕಲ್ ಫೋಟೋರೆಸಿಸ್ಟ್​ಗಳು, ಎಚೆಂಟ್​ಗಳು ಇತ್ಯಾದಿಗಳನ್ನು ಒದಗಿಸುವ ಒಂದೂ ಭಾರತೀಯ ಕಂಪನಿಗಳಿಲ್ಲ. ಅಲ್ಲದೇ, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಈಗಾಗಲೇ ಪೈಪೋಟಿ ಶುರುವಾಗಿದೆ. ಅಮೆರಿಕ, ಚೀನಾ ಮತ್ತು ತೈವಾನ್ ಪಾರಮ್ಯವೇ ಮುಂದುವರಿದಿದೆಯಾದರೂ, ಯೂರೋಪ್, ಜಪಾನ್, ಸೌತ್ ಕೊರಿಯಾ ದೇಶಗಳೂ ಕೂಡ ದೇಶೀಯವಾಗಿ ಚಿಪ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿವೆ. ಇವುಗಳೊಂದಿಗೆ ಭಾರತ ಪೈಪೋಟಿ ನಡೆಸಬೇಕಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us