ಟಿಸಿಎಸ್‌ನಲ್ಲಿ 3 ವರ್ಷದಲ್ಲಿ ಎಐ ಏಜೆಂಟ್ಗಳು ಉದ್ಯೋಗಿಗಳ ಸಮಕ್ಕೆ ಬರಲಿವೆಯಂತೆ
TCS's AI Future: ಟಿಸಿಎಸ್ ಭವಿಷ್ಯದ ಕಾರ್ಮಿಕ ನೀತಿ: ಮುಂದಿನ 3 ವರ್ಷಗಳಲ್ಲಿ 5 ಲಕ್ಷ ಎಐ ಏಜೆಂಟ್‌ಗಳನ್ನು ಹೊಂದಲು ಟಿಸಿಎಸ್ ಸಿದ್ಧವಾಗಿದ್ದು, ಮಾನವ ಉದ್ಯೋಗಿಗಳಿಗೆ ಸಮಾನ ಸಂಖ್ಯೆಯಲ್ಲಿ ಎಐ ಕಾರ್ಯನಿರ್ವಹಿಸಲಿದೆ. ನೇಮಕಾತಿ ಕುಸಿತವಾದರೂ, ಲೇ-ಆಫ್ ಇಲ್ಲ, ಆದರೆ ಎಐ ಕೌಶಲ್ಯ ಅತ್ಯಗತ್ಯ. ಎಐ ಮೂಲಕ ಟಿಸಿಎಸ್ $2.5 ಬಿಲಿಯನ್ ಆದಾಯ ಗಳಿಸುತ್ತಿದ್ದು, ಇದು ಕಂಪನಿಯ ಮುಂದಿನ ಬೆಳವಣಿಗೆಗೆ ಪ್ರಮುಖ ಕಾರಣವಾಗಲಿದೆ ಎಂದು ಅಧ್ಯಕ್ಷ ಎನ್. ಚಂದ್ರಶೇಖರನ್ ತಿಳಿಸಿದ್ದಾರೆ.

ನವದೆಹಲಿ, ಜೂನ್ 10: ಭಾರತದ ಐಟಿ ಕಂಪನಿಗಳು ಎಐ ಅಬ್ಬರಕ್ಕೆ ಬೇಗ ಹೊಂದಿಕೊಳ್ಳುತ್ತಿರುವಂತಿವೆ. ಭಾರತದ ಅತಿದೊಡ್ಡ ಐಟಿ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನಲ್ಲಿ (TCS- Tata Consultancy Services) ಮುಂದಿನ ವರ್ಷದಲ್ಲಿ ಇರುವ ಒಟ್ಟು ಉದ್ಯೋಗಿಗಳ ಸಂಖ್ಯೆಗೆ ಸಮವಾಗಿ ಎಐ ಏಜೆಂಟ್‌ಗಳ ಸಂಖ್ಯೆ ಇರುತ್ತದಂತೆ. ಹಾಗಂತ, ಸಂಸ್ಥೆಯ ಛೇರ್ಮನ್ ಅವರೇ ಖುದ್ದಾಗಿ ಈ ಮಾಹಿತಿ ನೀಡಿದ್ದಾರೆ. ಟಿಸಿಎಸ್ನ ವಾರ್ಷಿಕ ಮಹಾಸಭೆಯಲ್ಲಿ (AGM) ಚೇರ್ಮನ್ ಎನ್. ಚಂದ್ರಶೇಖರನ್ ಅವರು ಎಐ ಏಜೆಂಟ್‌ಗಳ ನಿಯುಕ್ತಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ ಟಿಸಿಎಸ್‌ನಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಕಂಪನಿಯು ಅಷ್ಟೇ ಸಂಖ್ಯೆಯ, ಅಂದರೆ 5 ಲಕ್ಷ ಎಐ ಏಜೆಂಟ್‌ಗಳನ್ನು ಹೊಂದಿರಲಿದೆ. “ಆ ದಿನ ತೀರಾ ದೂರವಿಲ್ಲ. ಟಿಸಿಎಸ್‌ನಲ್ಲಿ ಭೌತಿಕ ಕಾರ್ಮಿಕರಷ್ಟೇ ಎಐ ಕಾರ್ಮಿಕರೂ ಇರಲಿದ್ದಾರೆ. ಭವಿಷ್ಯದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಲಿದ್ದಾರೆ,” ಎಂದು ಚಂದ್ರಶೇಖರನ್ ಷೇರುದಾರರಿಗೆ ತಿಳಿಸಿದ್ದಾರೆ.
ಉದ್ಯೋಗ ನೇಮಕಾತಿಯಲ್ಲಿ ಕುಸಿತ
ಟಿಸಿಎಸ್ ಎಂದರೆ ನೇಮಕಾತಿಗಳಿಗೆ ಹೆಸರುವಾಸಿ. ಅತಿಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಐಟಿ ಸಂಸ್ಥೆಯದು. ಭಾರತದಲ್ಲಿ ಅತಿಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳ ಪೈಕಿ ಒಂದು. ಆದರೆ, ಈಗ ಎಐ ಏಜೆಂಟ್‌ಗಳ ಆಗಮನದಿಂದಾಗಿ ಕಂಪನಿಯು ಈ ಹಿಂದೆ ಮಾಡಿಕೊಳ್ಳುತ್ತಿದ್ದ ಬೃಹತ್ ಪ್ರಮಾಣದ ಉದ್ಯೋಗ ನೇಮಕಾತಿಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ಇದನ್ನೂ ಓದಿ: ವಿಶ್ವದಾಖಲೆ ಸನಿಹದಲ್ಲಿ 23 ವರ್ಷದ ಆದಿತ್ ಪಲಿಚಾ; ಲಿಸ್ಟೆಡ್ ಕಂಪನಿಯ ಅತಿ ಕಿರಿಯ ಸಿಇಒ ಎನಿಸಲಿದ್ದಾರೆ ಝೆಪ್ಟೋ ಸಂಸ್ಥಾಪಕ
ಎಚ್‌ಆರ್ ಮೆಟ್ರಿಕ್ ಬದಲಾವಣೆ: “ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಎಚ್‌ಆರ್ (HR) ವಿಭಾಗದ ಹಳೆಯ ಪದ್ಧತಿ ಇನ್ಮುಂದೆ ಇರುವುದಿಲ್ಲ” ಎಂದು ಎನ್ ಚಂದ್ರಶೇಖರನ್ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಸಂಪೂರ್ಣವಾಗಿ ನೇಮಕಾತಿ ನಿಲ್ಲುವುದಿಲ್ಲ; ಎಐ ತಂತ್ರಜ್ಞಾನಕ್ಕೆ ತಕ್ಕಂತೆ ಹೊಂದಿಕೊಳ್ಳಬಲ್ಲ ನುರಿತ ಪ್ರತಿಭೆಗಳ ಹುಡುಕಾಟ ಮುಂದುವರಿಯಲಿದೆಯಂತೆ.
ಲೇ-ಆಫ್ ಇಲ್ಲ, ಆದರೆ ಕೌಶಲ್ಯ ಅತ್ಯಗತ್ಯ
ಎಐ ಬಳಕೆಯಿಂದಾಗಿ ಈಗಿರುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ (Downsizing) ಯಾವುದೇ ಉದ್ದೇಶ ಕಂಪನಿಗೆ ಇಲ್ಲ. ಭವಿಷ್ಯದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಉಳಿಯಬೇಕಾದರೆ ಉದ್ಯೋಗಿಗಳು ಕಡ್ಡಾಯವಾಗಿ ಎಐ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಎಐ ವ್ಯವಸ್ಥೆಗಳೊಂದಿಗೆ ಒಟ್ಟಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ.
ಎಐ ಮೂಲಕ ಹೆಚ್ಚುತ್ತಿರುವ ಆದಾಯ
ಟಿಸಿಎಸ್ ಸಂಸ್ಥೆಯು ಎಐ ತಂತ್ರಜ್ಞಾನದಿಂದ ಭಾರೀ ಆದಾಯ ಗಳಿಸುತ್ತಿದೆ. ಕಳೆದ ಆರ್ಥಿಕ ವರ್ಷದ (FY26) ಕೊನೆಯ ತ್ರೈಮಾಸಿಕದಲ್ಲಿ ಕಂಪನಿಯ ವಾರ್ಷಿಕ ಎಐ ಆದಾಯವು ಸುಮಾರು 2.5 ಬಿಲಿಯನ್ ಡಾಲರ್ (ಅಂದಾಜು ₹20,000 ಕೋಟಿಗೂ ಅಧಿಕ) ತಲುಪಿದೆ. ಇದು ಪ್ರತಿ ತ್ರೈಮಾಸಿಕದಲ್ಲಿ ಶೇ. 22 ಕ್ಕಿಂತಲೂ ಹೆಚ್ಚು ಪ್ರಗತಿ ಕಾಣುತ್ತಿದೆ.
2028 ರಿಂದ 2030ರ ವೇಳೆಗೆ ಕಂಪನಿಯ ಶೇಕಡಾ 100ರಷ್ಟು ಆದಾಯವು ಯಾವುದಾದರೂ ಒಂದು ರೂಪದಲ್ಲಿ ಎಐ ತಂತ್ರಜ್ಞಾನದ ಅಂಶವನ್ನು ಒಳಗೊಂಡಿರುತ್ತದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಆನ್ಲೈನ್ನಲ್ಲಿ ಶಾಪಿಂಗ್ ಮಾಡುವ ಹೆಚ್ಚಿನವರಿಗೆ ಟೊಪ್ಪಿಹಾಕುತ್ತಿವೆ ಡಾರ್ಕ್ ಪ್ಯಾಟರ್ನ್ಸ್; ಬೆಚ್ಚಿಬೀಳಿಸುತ್ತಿದೆ ಈ ವರದಿ
ಚಂದ್ರಶೇಖರನ್ ಅವರು ಗುರುತಿಸಿದ 5 ಪ್ರಮುಖ ಎಐ ಅವಕಾಶಗಳು
ಐಟಿ ವಲಯಕ್ಕೆ ಎಐ ಕೇವಲ ಒಂದು ಸವಾಲಲ್ಲ, ಬದಲಾಗಿ ಅದೊಂದು ಬಹುದೊಡ್ಡ ವ್ಯವಹಾರಿಕ ಅವಕಾಶ ಎಂದು ಚಂದ್ರಶೇಖರನ್ ವಾದಿಸಿದ್ದಾರೆ. ಅವರು ಪ್ರಮುಖವಾಗಿ 5 ಕ್ಷೇತ್ರಗಳನ್ನು ಪಟ್ಟಿ ಮಾಡಿದ್ದಾರೆ:
- ಲೆಗಸಿ ಸಿಸ್ಟಮ್ಸ್ ಆಧುನೀಕರಣ: ಹಳೆಯ ಐಟಿ ಮೂಲಸೌಕರ್ಯ ಮತ್ತು ಚದುರಿಹೋಗಿರುವ ಡೇಟಾ ವ್ಯವಸ್ಥೆಗಳನ್ನು ಎಐ ಮೂಲಕ ಆಧುನೀಕರಿಸುವುದು.
- ಬಿಸಿನೆಸ್ ಪ್ರೊಸೆಸ್ ಮರುವಿನ್ಯಾಸ: ಕಂಪನಿಗಳ ಸಪ್ಲೈ ಚೈನ್ ಮತ್ತು ಗ್ರಾಹಕರ ಸಂಪರ್ಕ ಪ್ರಕ್ರಿಯೆಗಳನ್ನು ಎಐ ತಂತ್ರಜ್ಞಾನದ ಮೂಲಕ ಸುಧಾರಿಸುವುದು.
- ಎಐ ಗವರ್ನೆನ್ಸ್ ಮತ್ತು ಮ್ಯಾನೇಜ್‌ಮೆಂಟ್: ಎಐ ಏಜೆಂಟ್‌ಗಳ ಸುರಕ್ಷತೆ, ವೆಚ್ಚ ಮತ್ತು ನಿಯಮಾವಳಿಗಳ ಉಸ್ತುವಾರಿ ವಹಿಸುವುದು.
- ಸೊವರೀನ್ ಎಐ (Sovereign AI): ಸರ್ಕಾರಗಳು ಮತ್ತು ಕಟ್ಟುನಿಟ್ಟಾದ ನಿಯಂತ್ರಣ ಹೊಂದಿರುವ ಸಂಸ್ಥೆಗಳಿಗಾಗಿ ಡೇಟಾ ಭದ್ರತೆಯುಳ್ಳ ಪ್ರತ್ಯೇಕ ಎಐ ಮೂಲಸೌಕರ್ಯ ನಿರ್ಮಿಸುವುದು. ಟಿಸಿಎಸ್ ಈಗಾಗಲೇ ಭಾರತ ಮತ್ತು ಯುರೋಪ್‌ನಲ್ಲಿ ಇಂತಹ ಯೋಜನೆಗಳನ್ನು ಆರಂಭಿಸಿದೆ.
- ಫಿಸಿಕಲ್ ಎಐ (Physical AI): ಕಾರ್ಖಾನೆಗಳು, ಗೋದಾಮುಗಳು ಮತ್ತು ವಾಹನಗಳಲ್ಲಿ ರೋಬೋಟಿಕ್ಸ್ ಹಾಗೂ ಎಐ ತಂತ್ರಜ್ಞಾನವನ್ನು ಸಮಿಶ್ರಗೊಳಿಸುವುದು.
ಟಿಸಿಎಸ್ ಸಿಇಒ ಕೆ. ಕೃತಿವಾಸನ್ ಅವರ ಪ್ರಕಾರ, ಕಂಪನಿಯು ಜಗತ್ತಿನ ಅತಿ ದೊಡ್ಡ ‘ಎಐ ಆಧಾರಿತ ತಂತ್ರಜ್ಞಾನ ಸೇವಾ ಸಂಸ್ಥೆ’ಯಾಗುವ ಗುರಿ ಹೊಂದಿದೆ. ಐಟಿ ಉದ್ಯಮದಲ್ಲಿ ಮಾನವ ಶ್ರಮ ಮತ್ತು ಕೃತಕ ಬುದ್ಧಿಮತ್ತೆ (AI) ಒಟ್ಟಾಗಿ ಸಾಗುವ ಹೊಸ ಯುಗಕ್ಕೆ ಟಿಸಿಎಸ್ ಮುನ್ನುಡಿ ಬರೆಯುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




