
ನವದೆಹಲಿ, ಡಿಸೆಂಬರ್ 26: ಭಾರತ ಹಾಗೂ ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕಾಗಿ (India US trade deal) ನಡೆಯುತ್ತಿರುವ ಮಾತುಕತೆ ಮತ್ತು ಸಂಧಾನಗಳು ಫಲಪ್ರದವಾಗುವಂತೆ ಕಾಣುತ್ತಿವೆ. ಸರ್ವಸಮ್ಮತವಾದ ಮತ್ತು ನ್ಯಾಯಯುತವಾದ ಒಪ್ಪಂದದತ್ತ ಸಾಗುತ್ತಿದ್ದೇವೆ ಎಂದು ಸಂಧಾನದ ನೇತೃತ್ವದ ವಹಿಸಿರುವ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಹೇಳಿದ್ದಾರೆ. ಭಾರವು ತನ್ನ ಒಪ್ಪಂದ ಅಂತಿಮ ಪ್ರಸ್ತಾಪವನ್ನು ಅಮೆರಿಕದ ಮುಂದಿಟ್ಟಿದೆಯಂತೆ. ಟ್ಯಾರಿಫ್ ಕಡಿತಗೊಳಿಸಬೇಕು, ಕೃಷಿ ಸಂಬಂಧಿತ ಉತ್ಪನ್ನಗಳನ್ನು ಈ ಒಪ್ಪಂದದಿಂದ ಹೊರಗಿಡಬೇಕು ಎಂಬುದು ಭಾರತ ಸಲ್ಲಿಸಿರುವ ಪ್ರಸ್ತಾವದಲ್ಲಿರುವ ಪ್ರಮುಖ ಅಂಶ.
ರಷ್ಯನ್ ತೈಲವನ್ನು ಖರೀದಿಸುತ್ತಿರುವುದಕ್ಕೆ ಶಿಕ್ಷೆಯಾಗಿ ಭಾರತದ ಮೇಲೆ ಅಮೆರಿಕ ಶೇ. 25ರಷ್ಟು ಹೆಚ್ಚು ಸುಂಕ ಹಾಕುತ್ತಿದೆ. ಇದನ್ನು ತೆಗೆದುಹಾಕುವಂತೆ ಭಾರತವು ತನ್ನ ಟ್ರೇಡ್ ಡೀಲ್ ಪ್ರಸ್ತಾಪದಲ್ಲಿ ಕೋರಿಕೊಂಡಿದೆ. ದಂಡ ರೂಪದ ಶೇ. 25 ಸುಂಕವೂ ಸೇರಿದಂತೆ ಒಟ್ಟು ಶೇ. 50ರಷ್ಟು ಸುಂಕವನ್ನು ಅಮೆರಿಕ ಹಾಕುತ್ತಿದೆ. ಇದನ್ನು ಶೇ. 15ಕ್ಕೆ ಇಳಿಸಬೇಕೆಂದು ಭಾರತ ಡಿಮ್ಯಾಂಡ್ ಮಾಡಿರುವುದು ತಿಳಿದುಬಂದಿದೆ. ಅಮೆರಿಕ ಸಕಾರಾತ್ಮಕವಾಗಿ ಸ್ಪಂದಿಸಿದರೆ 2026ರಲ್ಲಿ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳಬಹುದು.
ಇದನ್ನೂ ಓದಿ: ಈ ವರ್ಷ 1 ಟ್ರಿಲಿಯನ್ ಡಾಲರ್ ರಫ್ತು ಗುರಿ ಅಸಾಧ್ಯ; ಭಾರತಕ್ಕಿರುವ ಪ್ರಮುಖ ತೊಡಕುಗಳಿವು…
ಅಮೆರಿಕದೊಂದಿಗಿನ ಟ್ರೇಡ್ ಡೀಲ್ಗೆ ಭಾರತ ಸಲ್ಲಿಸಿದ ಪ್ರಸ್ತಾಪದಲ್ಲಿ ಮತ್ತೊಂದು ಪ್ರಮುಖ ಅಂಶ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ್ದು. ಅಮೆರಿಕದ ಡೈರಿ ಉತ್ಪನ್ನಗಳು ಹಾಗೂ ಕುಲಾಂತರಿ ಬೆಳೆ ಉತ್ಪನ್ನಗಳು (GM crops- Genetically modified crops) ಭಾರತಕ್ಕೆ ಬೇಡ ಎಂಬುದು ಭಾರತದ ಗಟ್ಟಿ ನಿಲುವು. ಕೋಟ್ಯಂತರ ಭಾರತೀಯ ರೈತರನ್ನು ರಕ್ಷಿಸುವ ದೃಷ್ಟಿಯಿಂದ ಸರ್ಕಾರ ಈ ನಿಲುವು ತೆಗೆದುಕೊಂಡಿದೆ.
ಭಾರತದ ಈ ಪ್ರಸ್ತಾಪಕ್ಕೆ ಅಮೆರಿಕದಿಂದ ಇನ್ನೂ ಪ್ರತಿಕ್ರಿಯೆ ಸಿಕ್ಕಿಲ್ಲ. ಎರಡೂ ದೇಶಗಳ ನಡುವೆ ಸುದೀರ್ಘ ಕಾಲದಿಂದ ಒಪ್ಪಂದಕ್ಕಾಗಿ ಮಾತುಕತೆಗಳು ನಡೆಯುತ್ತಿವೆಯಾದರೂ ಕೃಷಿ ಉತ್ಪನ್ನಗಳ ವಿಚಾರವು ಪ್ರಮುಖ ತೊಡಕಾಗಿದೆ. ಭಾರತ ಈಗ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಅಮೆರಿಕದ ಮುಂದಿನ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಎಫ್ ಅಂಡ್ ಒ ಕರ್ಮಕಾಂಡ; ಭಾರತದಿಂದ ಅಮೆರಿಕಕ್ಕೆ ಹರಿದುಹೋಗುತ್ತಿದೆಯಾ ವರ್ಷಕ್ಕೆ ಲಕ್ಷ ಕೋಟಿ ರೂ?
ಭಾರತ ಈ ಒಂದೇ ವರ್ಷದಲ್ಲಿ ಮೂರು ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಕಳೆದ ಕೆಲ ವರ್ಷಗಳಲ್ಲಿ ಏಳು ಎಫ್ಟಿಎಗಳು ಕೈಗೂಡಿವೆ. ಈ ಒಪ್ಪಂದಗಳು ಭಾರತದ ರಫ್ತಿಗೆ ಹೆಚ್ಚಿನ ವೈವಿಧ್ಯತೆ ಮತ್ತು ಆಯ್ಕೆಗಳನ್ನು ನೀಡುತ್ತವೆ. ಭಾರತಕ್ಕೆ ಅಮೆರಿಕ ಅತಿದೊಡ್ಡ ಮಾರುಕಟ್ಟೆಯಾಗಿರುವುದರಿಂದ ಆ ದೇಶದೊಂದಿಗೆ ಎಫ್ಟಿಎ ಆಗಿಬಿಟ್ಟರೆ ರಫ್ತಿಗೆ ಮತ್ತಷ್ಟು ಉತ್ತೇಜನ ಸಿಕ್ಕಂತಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ