ಈ ವರ್ಷ 1 ಟ್ರಿಲಿಯನ್ ಡಾಲರ್ ರಫ್ತು ಗುರಿ ಅಸಾಧ್ಯ; ಭಾರತಕ್ಕಿರುವ ಪ್ರಮುಖ ತೊಡಕುಗಳಿವು…
India may miss export target of 1 trillion USD this year: 2025-26ಕ್ಕೆ ಭಾರತ ಹೊಂದಿದ್ದ ಒಂದು ಟ್ರಿಲಿಯನ್ ಡಾಲರ್ ಮೌಲ್ಯದ ರಫ್ತು ಗುರಿ ಈಡೇರದೇ ಹೋಗಬಹುದು. ಒಂದು ಅಂದಾಜು ಪ್ರಕಾರ ಈ ಹಣಕಾಸು ವರ್ಷದಲ್ಲಿ 850 ಬಿಲಿಯನ್ ಡಾಲರ್ ಮಾತ್ರವೇ ರಫ್ತು ಸಾಧ್ಯವಾಗಬಹುದು. ಸರಕುಗಳ ರಫ್ತು ಏರಿಕೆ ಆಗದೇ ಇರುವುದು ಒಟ್ಟಾರೆ ರಫ್ತು ಗುರಿಯಲ್ಲಿ ಹಿಂದೆಬೀಳಲು ಕಾರಣ ಎನ್ನಲಾಗಿದೆ.

ನವದೆಹಲಿ, ಡಿಸೆಂಬರ್ 26: ಭಾರತ ಈ ಹಣಕಾಸು ವರ್ಷದಲ್ಲಿ ಒಂದು ಟ್ರಿಲಿಯನ್ ಡಾಲರ್ ಮೊತ್ತದ ಸರಕು ಮತ್ತು ಸೇವೆಗಳನ್ನು ರಫ್ತು (export) ಮಾಡುವ ಗುರಿ ಇಟ್ಟಿತ್ತು. ಆದರೆ, ಈವರೆಗಿನ ರಫ್ತು ಅಂಕಿ ಅಂಶ ಗಮನಿಸಿದಾಗ ಮೇಲಿನ ಒಂದು ಟ್ರಿಲಿಯನ್ ಡಾಲರ್ ಗುರಿ ಮುಟ್ಟುವುದು ಬಹುತೇಕ ಅಸಾಧ್ಯದಂತೆ ಕಾಣುತ್ತಿದೆ. ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ (ಜಿಟಿಆರ್ಐ) ತನ್ನ ವರದಿಯೊಂದರಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ಭಾರತದ ರಫ್ತು ಗುರಿ ವಿಫಲವಾಗಲು ಏನು ಕಾರಣ ಎಂದು ವಿವರಿಸುವ ಪ್ರಯತ್ನ ಮಾಡಿದೆ.
ಭಾರತದಲ್ಲಿ ಈ ವರ್ಷ ಸರಕುಗಳ ರಫ್ತು ಅಷ್ಟೇನೂ ಹೆಚ್ಚಳ ಆಗುವಂತೆ ಕಾಣುವುದಿಲ್ಲ. ಸೇವಾ ರಫ್ತು ಸ್ವಲ್ಪ ಏರಿಕೆಯಾಗಿ 400 ಬಿಲಿಯನ್ ಡಾಲರ್ ಮುಟ್ಟಬಹುದು. ಸರಕು ಮತ್ತು ಸೇವೆ ಸೇರಿ ಈ ವರ್ಷ ಒಟ್ಟು ರಫ್ತು 850 ಬಿಲಿಯನ್ ಡಾಲರ್ ಆಗಬಹುದು. ಸೇವಾ ರಫ್ತು ಏರಿಕೆ ಅಗದೇ ಹೋಗಿದ್ದರೆ ಒಟ್ಟಾರೆ ರಫ್ತು ಇಷ್ಟೂ ಕೂಡ ಸಾಧ್ಯವಾಗುತ್ತಿರಲಿಲ್ಲ. ಸರ್ಕಾರದ ಗುರಿಯಾದ ಒಂದು ಟ್ರಿಲಿಯನ್ ಡಾಲರ್ ಮುಟ್ಟಲು ಇನ್ನೂ 150 ಬಿಲಿಯನ್ ಡಾಲರ್ ಕೊರತೆ ಆಗುತ್ತದೆ ಎಂದು ಜಿಟಿಆರ್ಐನ ಸಂಸ್ಥಾಪಕ ಅಜಯ್ ಶ್ರೀವಾಸ್ತವ ತಿಳಿಸಿದ್ದಾರೆ.
ಇದನ್ನೂ ಓದಿ: ಎಫ್ ಅಂಡ್ ಒ ಕರ್ಮಕಾಂಡ; ಭಾರತದಿಂದ ಅಮೆರಿಕಕ್ಕೆ ಹರಿದುಹೋಗುತ್ತಿದೆಯಾ ವರ್ಷಕ್ಕೆ ಲಕ್ಷ ಕೋಟಿ ರೂ?
ಭಾರತದ ರಫ್ತು ಏರಿಕೆ ಆಗದೇ ಇರಲು ಎರಡು ಪ್ರಮುಖ ಕಾರಣಗಳು
- ಜಾಗತಿಕ ವಾತಾವರಣ ಅಸ್ಥಿರವಾಗಿರುವುದು
- ಅಮೆರಿಕದ ಟ್ಯಾರಿಫ್
ಭಾರತದ ರಫ್ತಿಗೆ ಅತಿದೊಡ್ಡ ಮಾರುಕಟ್ಟೆ ಅಮೆರಿಕ ಆಗಿತ್ತು. ಆದರೆ, ಶೇ. 50ರಷ್ಟು ಟ್ಯಾರಿಫ್ ಇರುವ ಪರಿಣಾಮ ಅಮೆರಿಕಕ್ಕೆ ಭಾರತದ ರಫ್ತು ಶೇ. 21ರಷ್ಟು ಕಡಿಮೆ ಆಗಿದೆ. ಎಲೆಕ್ಟ್ರಾನಿಕ್ಸ್ ರಫ್ತು ಹೆಚ್ಚಾದರೂ ಕೂಡ ಬೇರೆ ರಫ್ತು ತಗ್ಗಿದ ಕಾರಣ ಭಾರತದ ಒಟ್ಟಾರೆ ರಫ್ತು ನಿರೀಕ್ಷಿತ ಮಟ್ಟಕ್ಕಿಂತ ಕೆಳಗಿದೆ.
ಇದನ್ನೂ ಓದಿ: 2025ರಲ್ಲಿ ಭಾರತದ ಬಿಲಿಯನೇರ್ಗಳ ಪಟ್ಟಿ; ಯಾರು ಅತಿ ಶ್ರೀಮಂತರು, ಯಾರ ಶ್ರೀಮಂತಿಕೆ ಹೆಚ್ಚು ಏರಿದ್ದು?
ಭಾರತಕ್ಕೆ ಸಕಾರಾತ್ಮಕವಾಗಿರುವ ಅಂಶಗಳು
ಜಿಟಿಆರ್ಐ ವರದಿಯಲ್ಲಿ ಭಾರತಕ್ಕೆ ಅನುಕೂಲವಾಗಿರುವ ಕೆಲ ಅಂಶಗಳನ್ನೂ ಪ್ರಸ್ತಾಪಿಸಲಾಗಿದೆ. ಕೆಲವು ಇಂತಿವೆ:
- ದೇಶೀಯ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ
- ಅಮೆರಿಕ ಬಿಟ್ಟು ಇತರ ದೇಶಗಳಿಗೆ ಭಾರತದ ರಫ್ತು ಶೇ. 5.5ರಷ್ಟು ಹೆಚ್ಚಾಗಿದೆ. ಈ ಟ್ರೆಂಡ್ ಮುಂದುವರಿಯಬಹುದು.
- ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ಜೊತೆ ವ್ಯಾಪಾರ ಒಪ್ಪದ ಏರ್ಪಡಬಹುದು.
ಭಾರತ ಮುಂದೇನು ಮಾಡಬೇಕು?
ಭಾರತದ ರಫ್ತು ತೀರಾ ಏರಿಕೆ ಆಗದಿದ್ದರೂ ಜಿಡಿಪಿ ತಕ್ಕಮಟ್ಟಿಗೆ ಉತ್ತಮವಾಗಿ ಹಿಗ್ಗಿರುವುದನ್ನು ಜಿಟಿಆರ್ಐ ರಿಪೋರ್ಟ್ನಲ್ಲಿ ಗುರುತಿಸಲಾಗಿದೆ. ದೇಶೀಯ ಆರ್ಥಿಕತೆ ಉತ್ತಮವಾಗಿರುವುದರ ಸಂಕೇತ ಇದು. ಭಾರತ ತನ್ನ ರಫ್ತು ಹೆಚ್ಚಿಸಬೇಕಾದರೆ ಉತ್ಪನ್ನದ ಗುಣಮಟ್ಟ ಸುಧಾರಿಸಬೇಕು. ವ್ಯಾಲ್ಯೂ ಚೈನ್ ಅಥವಾ ಮೌಲ್ಯ ಸರಪಳಿಯಲ್ಲಿ ಮೇಲಿನ ಮಟ್ಟಕ್ಕೆ ಹೋಗಬೇಕು. ಉತ್ಪಾದನಾ ವೆಚ್ಚ ತಗ್ಗಿಸಬೇಕು ಎಂದು ಈ ವರದಿಯಲ್ಲಿ ಸಲಹೆ ಕೊಡಲಾಗಿದೆ.
ಹಾಗೆಯೇ, ಎಲೆಕ್ಟ್ರಾನಿಕ್ಸ್, ಎಂಜಿನಿಯರಿಂಗ್ ಮತ್ತು ಟೆಕ್ಸ್ಟೈಲ್ ಸಎಕ್ಟರ್ಗಳಲ್ಲಿ ಹೆಚ್ಚಿನ ಮೌಲ್ಯ ವರ್ಧನೆಗೆ ಅವಕಾಶ ಇದೆ ಎಂದೂ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




