
ನವದೆಹಲಿ, ಮೇ 23: ಭಾರತಕ್ಕೆ ಪಾಕಿಸ್ತಾನ ಮತ್ತು ಚೀನಾ (China danger to India) ರೂಪದಲ್ಲಿ ಎರಡು ಕಡೆಯಿಂದ ದೊಡ್ಡ ಅಪಾಯ ಸದಾ ಇದ್ದೇ ಇದೆ ಎನ್ನುತ್ತಾರೆ. ಪಾಕಿಸ್ತಾನದಿಂದ ಭಾರತಕ್ಕೆ ಯಾವತ್ತೂ ಅಪಾಯ ತಪ್ಪಿದ್ದಲ್ಲ. ಅಮೆರಿಕಕ್ಕಿಂತ ಯಾವುದರಲ್ಲೂ ಕಡಿಮೆ ಇಲ್ಲದ ಶಕ್ತಿವಂತ ಎನಿಸಿರುವ ಚೀನಾ ಭಾರತಕ್ಕೆ ಇನ್ನೂ ದೊಡ್ಡ ಅಪಾಯಕಾರಿ ಎಂದು ಹೇಳುತ್ತಾರೆ. ಪಾಕಿಸ್ತಾನಕ್ಕೆ ಚೀನಾ ಮಿಲಿಟರಿ ನೆರವು ನೀಡುತ್ತಿರುವುದು ಹೌದು. ಹಾಗಂತ ಚೀನಾ ಭಾರತವನ್ನು ನೇರವಾಗಿ ಎದುರುಹಾಕಿಕೊಳ್ಳಬಲ್ಲುದಾ? ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಗಳಿಗೆ ಚೀನಾ ನೇರವಾಗಿ ಬೆಂಬಲ ಕೊಡಬಲ್ಲುದಾ? ಚೀನಾದ ಧೋರಣೆಯನ್ನು ವಿಶ್ವಾಸದಿಂದ ನೋಡಲು ಸಾಧ್ಯವಿಲ್ಲವಾದರೂ ಸದ್ಯದ ಪರಿಸ್ಥಿತಿಯಲ್ಲಿ ಭಾರತದ ವಿರುದ್ಧ ಚೀನಾ ನೇರವಾಗಿ ನಿಲ್ಲುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಕೆಲ ಕಾರಣಗಳೂ ಇವೆ.
ಭಾರತದ ಆರ್ಥಿಕತೆ ಬಹಳ ಉತ್ತಮ ವೇಗದಲ್ಲಿ ಬೆಳೆಯುತ್ತಿದೆ. ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎನಿಸಿದೆ. ಭಾರತದ ಮಾರುಕಟ್ಟೆಗೆ ಎಲ್ಲಿಲ್ಲದ ಬೇಡಿಕೆ ಇದೆ. ಭಾರತ ಮತ್ತು ಚೀನಾ ಮಧ್ಯೆ ದ್ವಿಪಕ್ಷೀಯ ವ್ಯಾಪಾರ 140 ಬಿಲಿಯನ್ ಡಾಲರ್ ಇದೆ. ಇದರಲ್ಲಿ ಸಿಂಹಪಾಲು ಚೀನಾದ್ದು. ಇದು ಒಂದು ಅಂಶ.
ಮತ್ತೊಂದು ಸಂಗತಿ ಎಂದರೆ, ಅಮೆರಿಕದೊಂದಿಗೆ ಚೀನಾದ ವ್ಯಾಪಾರ ನಂಟು ಯಾವಾಗ ಬೇಕಾದರೂ ಮಗುಚಿಬೀಳಬಹುದು. ಚೀನಾದ ರಫ್ತುಗಳಿಗೆ ದೊಡ್ಡ ಪರ್ಯಾಯ ಮಾರುಕಟ್ಟೆ ಯಾವುದೆಂದರೆ ಅದು ಭಾರತವೇ. ಅಮೆರಿಕದಂತೆ ಭಾರತದ ಮಾರುಕಟ್ಟೆಯೂ ಕೈತಪ್ಪಿಬಿಟ್ಟರೆ ಚೀನಾಗೆ ಉತ್ತಮ ಪರ್ಯಾಯ ಮಾರುಕಟ್ಟೆಗಳಿಲ್ಲ.
ಇದನ್ನೂ ಓದಿ: ಎಮರ್ಜೆನ್ಸಿ ಇದೆ ಅಂದ್ರೂ ತನ್ನ ವಾಯುಪ್ರದೇಶ ಬಳಸಲು ಇಂಡಿಗೋಗೆ ಅನುಮತಿ ಕೊಡದ ಪಾಕಿಸ್ತಾನ
ಒಂದು ವೇಳೆ ಭಾರತದ ಮೇಲೆ ಚೀನಾ ನೇರವಾಗಿ ಹಣಾಹಣಿಗೆ ಇಳಿದುಬಿಟ್ಟರೆ ಬೇರೆಯೇ ತಿರುವು ತೋರಬಹುದು. ಅಮೆರಿಕ ದೇಶವು ಜಪಾನ್ ಅನ್ನು ತಂತ್ರಜ್ಞಾನ ಸಮೃದ್ಧ ದೇಶವನ್ನಾಗಿ ಮಾಡಿದ ರೀತಿಯಲ್ಲಿ ಭಾರತವನ್ನೂ ಬೆಂಬಲಿಸಬಹುದು. ವಿಶ್ವಶ್ರೇಷ್ಠ ತಂತ್ರಜ್ಞಾನಗಳ ಶಕ್ತಿ ಇರುವ ದೇಶವಾಗಿ ಭಾರತ ರೂಪುಗೊಂಡರೆ ಚೀನಾಗೆ ಬಗುಲಲ್ಲಿ ಕೆಂಡ ತುಂಬಿಕೊಂಡಂತೆ ಆಗಬಹುದು.
ಗ್ಲೋಬಲ್ ಸೌತ್ ಎಂದು ಕರೆಯಲಾಗುವ ಅಭಿವೃದ್ಧಿಶೀಲ ದೇಶಗಳ ನಾಯಕತ್ವ ಹಿಡಿಯಲು ಚೀನಾ ಮತ್ತು ಭಾರತ ಪೈಪೋಟಿ ನಡೆಸುತ್ತಿವೆ. ಈ ಅಭಿವೃದ್ಧಿಶೀಲ ದೇಶಗಳಿಗೆ ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿ ನಿರಂತರವಾಗಿರುವುದು ಮುಖ್ಯ. ತಮ್ಮ ನೇತೃತ್ವ ವಹಿಸುವವರು ಸ್ಥಿರತೆಗೆ ಉತ್ತೇಜನ ಕೊಡಬೇಕೆಂದು ನಿರೀಕ್ಷಿಸುತ್ತವೆ ಈ ದೇಶಗಳು. ಪಾಕಿಸ್ತಾನದಂತಹ ಭಯೋತ್ಪಾದಕ ದೇಶವನ್ನು ಬೆಂಬಲಿಸಿ, ಭಾರತದಂತಹ ಸೌಮ್ಯ ದೇಶವನ್ನು ವಿರೋಧಿಸಿದರೆ, ಚೀನಾ ಮೇಲೆ ಹೆಚ್ಚಿನ ದೇಶಗಳು ವಿಶ್ವಾಸ ಇರಿಸುವುದಿಲ್ಲ. ಇದು ಚೀನಾಗೂ ಗೊತ್ತಿದೆ. ಪಾಕಿಸ್ತಾನ ಬೆಂಬಲಿಸುವ ವಿಚಾರದಲ್ಲಿ ಮತ್ತು ಭಾರತವನ್ನು ವಿರೋಧಿಸುವ ವಿಚಾರದಲ್ಲಿ ಚೀನಾ ಹಾಕಿಕೊಂಡ ಗೆರೆ ದಾಟಲಾಗದು.
ಇದನ್ನೂ ಓದಿ: ಪ್ರಾಜೆಕ್ಟ್ ಕುಶ; ಭಾರತದ ಸ್ವಂತ ಡಿಫೆನ್ಸ್ ಸಿಸ್ಟಂ; ಅಮರಿಕದ ಥಾಡ್ ಅನ್ನೂ ಮೀರಿಸುತ್ತೆ ಇದು
ಚೀನಾ ಈಗ ಅಮೆರಿಕಕ್ಕೆ ಎದುರಾಗಿ ನಿಂತು ಸೂಪರ್ ಪವರ್ ಎನಿಸಿಕೊಂಡಿದೆ. ಈ ಹಂತದಲ್ಲಿ ಸುತ್ತಮುತ್ತ ಶತ್ರುಗಳನ್ನು ನಿರ್ಮಾಣ ಮಾಡಿಕೊಳ್ಳುವುದು ಮೂರ್ಖತನದ ಸಂಗತಿಯಾಗುತ್ತದೆ. ಭಾರತದೊಂದಿಗೆ ನೇರವಾಗಿ ಯುದ್ಧ ಮಾಡುವ ಬದಲು, ದುರ್ಬಲಗೊಳಿಸುವ ತಂತ್ರಗಳನ್ನು ಚೀನಾ ಅನುಸರಿಸಬಹುದು. ಭಾರತದೊಂದಿಗೆ ಮೇಲ್ನೋಟಕ್ಕೆ ಚೆನ್ನಾಗಿದ್ದು, ಒಳಗಿಂದೊಳಗೆ ದುರ್ಬಲಗೊಳಿಸುತ್ತಾ ಹೋಗಬಹುದು. ಈ ಪ್ರಕ್ರಿಯೆಯನ್ನು ಚೀನಾ ಯಾವಾಗಲೋ ಶುರು ಮಾಡಿದೆ. ಅದಕ್ಕೆ ಇಂಬುಕೊಡಬಲ್ಲ ಶಕ್ತಿಗಳು ಭಾರತದಲ್ಲಿ ಇಲ್ಲದೇ ಇಲ್ಲ. ಇದು ಕೋಲ್ಡ್ ವಾರ್ ರೀತಿಯ ಗೇಮ್ಪ್ಲಾನ್.
1962ರಲ್ಲಾದಂತೆ ಸುಲಭವಾಗಿ ಸೋಲಪ್ಪುವ ದೇಶವಾಗಿ ಉಳಿದಿಲ್ಲ ಭಾರತ. 2020ರ ಗಾಲ್ವನ್ ಸಂಘರ್ಷ ಘಟನೆಯು ಭಾರತೀಯ ಸೇನೆಯ ಸ್ಥೈರ್ಯತೆಯನ್ನು ಸಾಬೀತುಪಡಿಸಿದೆ. ಆಪರೇಷನ್ ಸಿಂದೂರವು ಭಾರತದ ದೈತ್ಯ ಮಿಲಿಟರಿ ಶಕ್ತಿಯ ಸ್ಯಾಂಪಲ್ ತೋರಿದೆ. ಇಂಥ ಭಾರತವನ್ನು ಎದುರುಹಾಕಿಕೊಳ್ಳುವಷ್ಟು ಮೂರ್ಖನಲ್ಲ ಚೀನಾ. ಆದರೂ ಕೂಡ ಹಿಂದಿ ಚೀನೀ ಭಾಯ್ ಭಾಯ್ ಎನ್ನುವ ಮಟ್ಟಕ್ಕಂತೂ ಹೋಗಲು ಸಾಧ್ಯವಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ