Corporate Bond: ಆರು ವರ್ಷದಲ್ಲಿ ದ್ವಿಗುಣಗೊಳ್ಳಲಿದೆ ಭಾರತದ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ; ಏನಿದು ಬಾಂಡ್?

|

Updated on: Dec 05, 2023 | 10:14 AM

Crisil ratings Report: ಕ್ರಿಸಿಲ್ ರೇಟಿಂಗ್ಸ್ ಸಂಸ್ಥೆ ಪ್ರಕಾರ 43 ಲಕ್ಷ ಕೋಟಿ ರೂ ಇರುವ ಭಾರತದ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ 2030ರಷ್ಟರಲ್ಲಿ 100 ಲಕ್ಷಕೋಟಿ ಗಡಿದಾಟಬಹುದು. ಭಾರತದ ರೀಟೇಲ್ ಸಾಲಗಳು ಹೆಚ್ಚಾಗುತ್ತಿರುವುದೂ ಸೇರಿದಂತೆ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ ಹುಲುಸಾಗಿ ಬೆಳೆಯಲು ನಾನಾ ಕಾರಣಗಳಿವೆ. ಕಾರ್ಪೊರೇಟ್ ಬಾಂಡ್ ಎಂಬುದು ಒಂದು ಕಂಪನಿ ಸಾರ್ವಜನಿಕವಾಗಿ ಪಡೆಯುವ ಸಾಲ. ಹೂಡಿಕೆದಾರರಿಗೆ ನಿರ್ದಿಷ್ಟ ಬಡ್ಡಿ ಸಿಗುತ್ತದೆ.

Corporate Bond: ಆರು ವರ್ಷದಲ್ಲಿ ದ್ವಿಗುಣಗೊಳ್ಳಲಿದೆ ಭಾರತದ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ; ಏನಿದು ಬಾಂಡ್?
ಕಾರ್ಪೊರೇಟ್ ಬಾಂಡ್
Follow us on

ನವದೆಹಲಿ, ಡಿಸೆಂಬರ್ 5: ಭಾರತೀಯ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ (Corporate Bond Market) 2030ರಷ್ಟರಲ್ಲಿ ಈಗಿರುವುದಕ್ಕಿಂತ ಎರಡು ಪಟ್ಟು ಹೆಚ್ಚು ಬೆಳೆಯಲಿದೆ ಎಂದು ಕ್ರಿಸಿಲ್ ರೇಟಿಂಗ್ಸ್ ಸಂಸ್ಥೆ (Crisil Ratings) ವಿಶ್ಲೇಷಣೆ ಮಾಡಿದೆ. ಕಳೆದ ಐದು ವರ್ಷದಲ್ಲಿ ಶೇ. 9ರ ಸರಾಸರಿ ವಾರ್ಷಿಕ ದರದಲ್ಲಿ (CAGR) ಈ ಮಾರುಕಟ್ಟೆ ಬೆಳೆಯುತ್ತಿದೆಯಾದರೂ ಮುಂದಿನ ವರ್ಷಗಳಲ್ಲಿ ಅದ್ವಿತೀಯ ವೇಗ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ 43 ಲಕ್ಷ ಕೋಟಿ ರೂ ಗಾತ್ರದಿತ್ತು. 2030ರಷ್ಟರಲ್ಲಿ ಇದು 100ರಿಂದ 120 ಲಕ್ಷ ಕೋಟಿ ರೂನಷ್ಟಾಗಲಿದೆ ಎಂದು ಕ್ರಿಸಿಲ್ ರೇಟಿಂಗ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಏನಿದು ಕಾರ್ಪೊರೇಟ್ ಬಾಂಡ್?

ಬಾಂಡ್ ಎಂಬುದು ಸಾಲಪತ್ರ. ಸರ್ಕಾರಗಳು, ಕಾರ್ಪೊರೇಟ್ ಕಂಪನಿಗಳು ಬಾಂಡ್​ಗಳನ್ನು ನೀಡುತ್ತವೆ. ಇದು ಸಾರ್ವಜನಿಕವಾಗಿ ಸಾಲ ಪಡೆಯುವ ಒಂದು ವಿಧಾನ. ಕಾರ್ಪೊರೇಟ್ ಸಂಸ್ಥೆಗಳಿಗೆ ಬಂಡವಾಳದ ಅಗತ್ಯ ಇದ್ದಾಗ ಬಾಂಡ್​ಗಳನ್ನು ವಿತರಿಸುತ್ತವೆ. ಇವು ನಿರ್ದಿಷ್ಟ ಅವಧಿಗೆ ಮೆಚ್ಯೂರ್ ಆಗುತ್ತವೆ. ಬಡ್ಡಿದರವನ್ನು ಕಂಪನಿಯೇ ನಿಗದಿ ಮಾಡುತ್ತದೆ. ಬಾಂಡ್ ಪಡೆದವರಿಗೆ ನಿಯಮಿತವಾಗಿ ಬಡ್ಡಿ ಪಾವತಿಸಲಾಗುತ್ತದೆ. ಮೆಚ್ಯೂರ್ ಆದ ಬಳಿ ಮೂಲ ಹಣವನ್ನು ಹೂಡಿಕೆದಾರರಿಗೆ ಮರಳಿಸಲಾಗುತ್ತದೆ.

ಇದನ್ನೂ ಓದಿ: Indian Economy: ಅಮೃತ ಘಳಿಗೆಯಲ್ಲಿ 5 ಟ್ರಿಲಿಯನ್ ಡಾಲರ್ ಆಗಲಿದೆ ಭಾರತದ ಆರ್ಥಿಕತೆ: ಪಂಕಜ್ ಚೌಧರಿ

ಷೇರಿಗೂ ಬಾಂಡ್​ಗೂ ಏನು ವ್ಯತ್ಯಾಸ?

ಒಂದು ಕಂಪನಿಯ ಷೇರನ್ನು ಖರೀದಿಸಿದರೆ ಆ ಕಂಪನಿಯ ಒಂದು ಪಾಲು ಪಡೆದಂತೆ. ಆದರೆ, ಬಾಂಡ್ ಹಾಗಲ್ಲ. ಕಂಪನಿಗೂ ಹೂಡಿಕೆದಾರನಿಗೂ ಕೇವಲ ಹಣಕಾಸು ಒಪ್ಪಂದ ಮಾತ್ರವೇ ಆಗುವುದು.

  • ಭಾರತದಲ್ಲಿ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ ಬೆಳೆಯಲು ಏನು ಕಾರಣ?
  • ಕ್ರಿಸಿಲ್ ರೇಟಿಂಗ್ಸ್ ಹೇಳಿಕೆ ಪ್ರಕಾರ ಭಾರತದಲ್ಲಿ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆ ಮುಂದಿನ ದಿನಗಳಲ್ಲಿ ಬೆಳೆಯಲು ಹಲವು ಕಾರಣಗಳಿವೆ.
  • ಇನ್​ಫ್ರಾಸ್ಟ್ರಕ್ಚರ್ ಮತ್ತು ಕಾರ್ಪೊರೇಟ್ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಬಂಡವಾಳ ವೆಚ್ಚ ಆಗುತ್ತಿರುವುದು.
  • ಇನ್​ಫ್ರಾಸ್ಟ್ರಕ್ಚರ್ ವಲಯವು ಸಾಕಷ್ಟು ಹೂಡಿಕೆದಾರರನ್ನು ಆಕರ್ಷಿಸುತ್ತಿರುವುದು.
  • ರೀಟೇಲ್ ಸಾಲ ಹುಲುಸಾಗಿ ಬೆಳೆಯುತ್ತಿರುವುದು.
  • ಜನಸಾಮಾನ್ಯರ ಉಳಿತಾಯದ ಹಣ ಹೆಚ್ಚೆಚ್ಚು ಹೂಡಿಕೆ ಆಗುತ್ತಿರುವುದು.
  • ಸರ್ಕಾರದ ಕ್ರಮಗಳು.

ಇದನ್ನೂ ಓದಿ: ಭಾರತದ ಜಿಡಿಪಿ ಎಲ್ಲರ ಲೆಕ್ಕಾಚಾರ ಮೀರಿಸಿದ್ದು ಹೇಗೆ? ಇಲ್ಲಿದೆ ಕೆಲ ಪ್ರಮುಖ ಕಾರಣಗಳು

ಇನ್​ಫ್ರಾಸ್ಟ್ರಕ್ಚರ್ ಬಾಂಡ್​ಗಳು ಹೂಡಿಕೆದಾರರಿಗೆ ಆಕರ್ಷಕ ಆಯ್ಕೆಯಾಗುತ್ತಿವೆ. ಸದ್ಯ ಕಾರ್ಪೊರೇಟ್ ಬಾಂಡ್​ಗಳಲ್ಲಿ ಇನ್​ಫ್ರಾಸ್ಟ್ರಕ್ಚರ್ ವಲಯದ ಪಾಲು ಶೇ. 15ರಷ್ಟು ಮಾತ್ರ ಇದೆ. ಆದರೆ, ಮುಂದಿನ ದಿನಗಳಲ್ಲಿ ಇದು ಬಹಳ ಹೆಚ್ಚಾಗಬಹುದು. ದೇಶದ ಒಟ್ಟಾರೆ ಬಂಡವಾಳ ವೆಚ್ಚದಲ್ಲಿ ಕಾರ್ಪೊರೇಟ್ ಬಾಂಡ್ ಮಾರುಕಟ್ಟೆಯ ಪಾಲು ಆರನೇ ಒಂದು ಭಾಗದಷ್ಟಾಗುವ ನಿರೀಕ್ಷೆ ಇದೆ ಎಂದು ಕ್ರಿಸಿಲ್ ರೇಟಿಂಗ್ಸ್​ನ ಹಿರಿಯ ನಿರ್ದೇಶಕ ಸೋಮಶೇಖರ್ ವೇಮೂರಿ ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ