
ನವದೆಹಲಿ, ಮೇ 21: ಅಮೆರಿಕಕ್ಕೆ ರೇಟಿಂಗ್ ಅನ್ನು AAAಯಿಂದ AA1ಗೆ ಒಂದು ಹಂತ ಕೆಳಗೆ ಇಳಿಸಿದ್ದ ಮೂಡೀಸ್ ಸಂಸ್ಥೆ (Moody’s rating agency) ಭಾರತದ ಆರ್ಥಿಕತೆ (Indian economy) ಬಗ್ಗೆ ವಿಶ್ವಾಸ ಇರಿಸಿದೆ. ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಅತಿವೇಗದಲ್ಲಿ ಬೆಳೆಯುತ್ತಿರುವ ದೇಶವೆನಿಸಿದ ಭಾರತಕ್ಕೆ ಜಾಗತಿಕ ಬಿಕ್ಕಟ್ಟು ಗಳು ಹೆಚ್ಚಿನ ಹಿನ್ನಡೆ ತರುವ ಸಂಭವ ಕಡಿಮೆ ಎಂಬುದು ಮೂಡೀಸ್ ಅನಿಸಿಕೆ. ಇದಕ್ಕೆ ಕಾರಣ, ಭಾರತದ ಆರ್ಥಿಕತೆಯು ರಫ್ತಿನ ಮೇಲೆ ಹೆಚ್ಚಿನ ಅವಲಂಬನೆ ಹೊಂದಿಲ್ಲದೇ ಇರುವುದು, ಹಾಗು ಸ್ಥಳೀಯವಾಗಿ ಸಮೃದ್ಧ ಮಾರುಕಟ್ಟೆ ಲಭ್ಯ ಇರುವುದು ಭಾರತಕ್ಕೆ ಅನುಕೂಲ ಆಗಿದೆ.
ಅಮೆರಿಕ ಸರ್ಕಾರ ಭಾರತದ ಸರಕುಗಳಿಗೆ ಆಮದು ಸುಂಕ ವಿಧಿಸಲಿ, ಪಾಕಿಸ್ತಾನದೊಂದಿಗೆ ಭಾರತ ದೀರ್ಘಕಾಲ ಯುದ್ಧ ಮಾಡಬೇಕಾದ ಪರಿಸ್ಥಿತಿ ಬರಲಿ, ಮೂಡೀಸ್ ಪ್ರಕಾರ ಇವು ಭಾರತಕ್ಕೆ ಹೆಚ್ಚಿನ ಹಿನ್ನಡೆ ತರುವ ಸಾಧ್ಯತೆ ಕಡಿಮೆ.
ಇದನ್ನೂ ಓದಿ: ಆಪರೇಷನ್ ಸಿಂದೂರದ ಬಳಿಕ ಭಾರತದ ಡಿಫೆನ್ಸ್ ಶಕ್ತಿ ಮೇಲೆ ಜಗತ್ತಿನ ಕಣ್ಣು; ಯುದ್ಧವಿಮಾನ ತಯಾರಿಕೆಯಲ್ಲೂ ಪಳಗುತ್ತಿದೆ ಭಾರತ
ಜಾಗತಿಕವಾಗಿ ಬೇಡಿಕೆ (ವ್ಯಾಪಾರ ಕುಂಠಿತ) ಕಡಿಮೆ ಆಗುತ್ತಿರುವುದೂ ಕೂಡ ಭಾರತದ ಆರ್ಥಿಕತೆಗೆ ಹೆಚ್ಚಿನ ಬಾಧಕವಾಗದು ಎಂದು ಮೂಡೀಸ್ ಇಂದು ಬುಧವಾರ ಬಿಡುಗಡೆ ಮಾಡಿದ ವರದಿಯೊಂದರಲ್ಲಿ ಹೇಳಿದೆ. ಅದರ ಪ್ರಕಾರ, ‘ಖಾಸಗಿ ಅನುಭೋಗ ಹೆಚ್ಚಿಸುವ ಕ್ರಮ, ತಯಾರಿಕೆ ಹೆಚ್ಚಿಸುವ ಕ್ರಮ ಸೇರಿದಂತೆ ಇನ್ಫ್ರಾಸ್ಟ್ರಕ್ಚರ್ಗೆ ಹೆಚ್ಚಿನ ವೆಚ್ಚ ಮಾಡುವವರೆಗೂ ಸರ್ಕಾರದ ಯೋಜನೆಗಳು ಭಾರತದ ಆರ್ಥಿಕತೆಗೆ ಶಕ್ತಿ ತುಂಬಲಿವೆ. ಹಣದುಬ್ಬರ ಕಡಿಮೆ ಆಗುವುದರಿಂದ ಬಡ್ಡಿದರಗಳೂ ಕಡಿಮೆ ಆಗುತ್ತವೆ. ಬ್ಯಾಂಕಿಂಗ್ ಸೆಕ್ಟರ್ನಲ್ಲಿರುವ ಹಣದ ಹರಿವು ಕೂಡ ಆರ್ಥಿಕತೆಯಲ್ಲಿ ಹೆಚ್ಚಿನ ಹಣ ಸಂಚಾರಕ್ಕೆ ಆಸ್ಪದ ಮಾಡಿಕೊಡುತ್ತದೆ’ ಎಂದು ಮೂಡೀಸ್ ವಿಶ್ಲೇಷಣೆ ಮಾಡಿದೆ.
ಅಮೆರಿಕದ ಟ್ಯಾರಿಫ್ ಬೆದರಿಕೆ ಮತ್ತು ಜಾಗತಿಕ ವ್ಯಾಪಾರ ಹಿನ್ನಡೆಯ ಪರಿಸ್ಥಿತಿಯನ್ನು ಎದುರಿಸಬಲ್ಲ ಶಕ್ತಿ ಇರುವ ಉದಯೋನ್ಮುಖ ಆರ್ಥಿಕಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಆಂತರಿಕ ಬೆಳವಣಿಗೆ ಉತ್ತೇಜಕಗಳು ಉತ್ತಮವಾಗಿವೆ. ಆಂತರಿಕ ಆರ್ಥಿಕತೆಯ ಗಾತ್ರವೂ ದೊಡ್ಡದಿದೆ. ಸರಕುಗಳ ರಫ್ತಿನ ಮೇಲೆ ಕಡಿಮೆ ಅವಲಂಬನೆ ಇದೆ ಎಂದು ಮೂಡೀಸ್ ಹೇಳಿದೆ.
ಪಾಕಿಸ್ತಾನದೊಂದಿಗೆ ಭಾರತ ಒಂದು ವೇಳೆ ದೀರ್ಘಕಾಲ ಘರ್ಷಣೆಗೆ ಇಳಿಯಬೇಕಾದ ಸ್ಥಿತಿ ಬಂದಲ್ಲಿ ಭಾರತದ ಆರ್ಥಿಕತ ಚಟುವಟಿಕೆ ಮೇಲೆ ಹೆಚ್ಚಿನ ಪರಿಣಾಮವಾಗದು ಎಂದು ಮೂಡೀಸ್ ತಿಳಿಸಿದೆ.
ಇದನ್ನೂ ಓದಿ: ರೆಮಿಟೆನ್ಸ್ ಟ್ಯಾಕ್ಸ್ ಹೇರಲು ಹೊರಟ ಟ್ರಂಪ್ ಸರ್ಕಾರ; ಭಾರತಕ್ಕೆ ಭಾರೀ ಹೊಡೆತ; ಪಾಕಿಸ್ತಾನಕ್ಕೆ ಮತ್ತೂ ಸಂಕಟ
ಪಾಕಿಸ್ತಾನದೊಂದಿಗೆ ಭಾರತದ ವ್ಯಾಪಾರ ವಹಿವಾಟು ನಗಣ್ಯವಾಗಿದೆ. ಭಾರತದ ಪ್ರಮುಖ ಕೃಷಿ ಮತ್ತು ಔದ್ಯಮಿಕ ಉತ್ಪಾದನೆಯು ಬಹುತೇಕ ಘರ್ಷಣೆ ಮುಕ್ತ ಪ್ರದೇಶಗಳಲ್ಲಿಯೇ ಆಗುತ್ತದೆ ಎಂಬುದು ಅದರ ವಾದ.
ಭಾರತವು ರಕ್ಷಣಾ ಕ್ಷೇತ್ರಕ್ಕೆ ಮಾಡುವ ವೆಚ್ಚವನ್ನು ಹೆಚ್ಚಿಸಿದಲ್ಲಿ ಮಾತ್ರ ಅದರ ಹಣಕಾಸು ಸಾಮರ್ಥ್ಯಕ್ಕೆ ಹಿನ್ನಡೆಯಾಗಬಹುದು ಎಂದು ಅದು ಎಚ್ಚರಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Wed, 21 May 25