ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ನಿಮ್ಮ ಜೇಬಿಗೂ ಬೀಳುತ್ತಾ ಕತ್ತರಿ? ಪರಿಣಾಮಗಳೇನು ಎಂಬ ಮಾಹಿತಿ ಇಲ್ಲಿದೆ

ಮಧ್ಯಪ್ರಾಚ್ಯ ಯುದ್ಧ ಮತ್ತು ಕಚ್ಚಾತೈಲ ಬೆಲೆ ಏರಿಕೆಯಿಂದ ಭಾರತೀಯ ರೂಪಾಯಿ ಮೌಲ್ಯ ಡಾಲರ್ ಎದುರು ಸಾರ್ವಕಾಲಿಕ ಕುಸಿತ (93ಕ್ಕಿಂತಲೂ ಕೆಳಗೆ) ಕಂಡಿದೆ. ಇದು ಪ್ರತಿಯೊಬ್ಬ ಭಾರತೀಯನ ಅಡುಗೆ ಮನೆಯಿಂದ ಹಿಡಿದು ವಿದೇಶಿ ಶಿಕ್ಷಣದವರೆಗೆ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ. ರೂಪಾಯಿ ಮೌಲ್ಯ ಕುಸಿತದಿಂದ ನಮ್ಮ ಜೇಬಿಗೆ ನೇರ ಹೊರೆಯಾಗಬಹುದೇ? ಯಾವೆಲ್ಲ ವಸ್ತುಗಳು ದುಬಾರಿಯಾಗಬಹುದು? ಇಲ್ಲಿದೆ ಮಾಹಿತಿ.

ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ನಿಮ್ಮ ಜೇಬಿಗೂ ಬೀಳುತ್ತಾ ಕತ್ತರಿ? ಪರಿಣಾಮಗಳೇನು ಎಂಬ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Image Credit source: TV9 Network

Updated on: Mar 20, 2026 | 12:56 PM

ನವದೆಹಲಿ, ಮಾರ್ಚ್ 20: ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಯುದ್ಧ ಮತ್ತು ಅದರ ಆರ್ಥಿಕ ಪರಿಣಾಮಗಳಿಂದಾಗಿ ಭಾರತೀಯ ರೂಪಾಯಿ ಮೌಲ್ಯ (Rupee value) ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಸದ್ಯದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 93 ರ ಗಡಿ ದಾಟಿದೆ. ಕಚ್ಚಾತೈಲ ಬೆಲೆ ಗಗನಕ್ಕೇರಿಕೆ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಕಚ್ಚಾತೈಲ ಬೆಲೆ ಈಗಾಗಲೇ ಪ್ರತಿ ಬ್ಯಾರೆಲ್‌ಗೆ 110 ಡಾಲರ್ ದಾಟಿದ್ದು, ಯುದ್ಧ ಹೀಗೆಯೇ ಮುಂದುವರಿದರೆ 180-200 ಡಾಲರ್ ತಲುಪುವ ಸಾಧ್ಯತೆ ಇದೆ ಎಂದು ಸೌದಿ ಅರೇಬಿಯಾ ಮತ್ತು ಇರಾನ್‌ನಂತಹ ದೇಶಗಳು ಎಚ್ಚರಿಕೆ ನೀಡಿವೆ.

ಮತ್ತೊಂದೆಡೆ, ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡು 93ರ ಗಡಿ ದಾಟಿರುವುದು ದೇಶದ ಆರ್ಥಿಕತೆಯಲ್ಲಿ ಸಂಚಲನ ಮೂಡಿಸಿದೆ. ರೂಪಾಯಿ ಮೌಲ್ಯ ಕುಸಿದಾಗ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಏರಿಕೆಯಾಗುವುದು ಸಹಜ.

ಯಾವೆಲ್ಲಾ ವಸ್ತುಗಳು ದುಬಾರಿಯಾಗಬಹುದು?

  • ಭಾರತವು ಶೇ 80 ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ರೂಪಾಯಿ ಮೌಲ್ಯ ಕುಸಿದಾಗ, ತೈಲ ಕಂಪನಿಗಳು ಹೆಚ್ಚು ಹಣ ಪಾವತಿಸಬೇಕಾಗುತ್ತದೆ, ಇದರಿಂದ ಪೆಟ್ರೋಲ್ ದರ ಏರಿಕೆಯಾಬಹುದು.
  • ಪಾಮ್ ಆಯಿಲ್ ಸೇರಿದಂತೆ ಅನೇಕ ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಅಡುಗೆ ಎಣ್ಣೆ ಬೆಲೆ ಏರಿಕೆಯಾಗಲಿದೆ.
  • ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟಿವಿ ಮತ್ತು ರೆಫ್ರಿಜರೇಟರ್‌ಗಳ ಬಿಡಿಭಾಗಗಳು ವಿದೇಶದಿಂದ ಬರುವುದರಿಂದ ಇವುಗಳ ಬೆಲೆ ಶೇ 5-10 ರಷ್ಟು ಹೆಚ್ಚಾಗಬಹುದು.
  • ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನವನ್ನು ಡಾಲರ್‌ನಲ್ಲಿ ವ್ಯವಹಾರ ಮಾಡುವುದರಿಂದ ರೂಪಾಯಿ ಕುಸಿತವಾದಾಗ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತದೆ.
  • ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಫೀಸ್ ಮತ್ತು ಪ್ರವಾಸದ ಖರ್ಚು ಡಾಲರ್ ಲೆಕ್ಕದಲ್ಲಿರುವುದರಿಂದ ಪೋಷಕರಿಗೆ ಹೆಚ್ಚಿನ ಹೊರೆಯಾಗಲಿದೆ.

ರೂಪಾಯಿ ಮೌಲ್ಯ ಕುಸಿತದ ಸಕಾರಾತ್ಮಕ, ನಕಾರಾತ್ಮಕ ಪರಿಣಾಮಗಳೇನು?

ರೂಪಾಯಿ ಮೌಲ್ಯ ಕುಸಿತದಿಂದ ಸಾರಿಗೆ ವೆಚ್ಚ (ಡೀಸೆಲ್ ಬೆಲೆ) ಏರುವುದರಿಂದ ತರಕಾರಿ, ಬೇಳೆಕಾಳು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿ ಸಾಮಾನ್ಯ ಜನರ ಬಜೆಟ್ ಏರುಪೇರಾಗುತ್ತದೆ. ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಉತ್ಪಾದನಾ ವಲಯದ ಕಂಪನಿಗಳ ಲಾಭ ಕಡಿಮೆಯಾಗುತ್ತದೆ. ವಿದೇಶಿ ಬ್ಯಾಂಕ್‌ಗಳಿಂದ ಸಾಲ ಪಡೆದ ಕಂಪನಿಗಳಿಗೆ ಬಡ್ಡಿ ಪಾವತಿಸುವುದು ದುಬಾರಿಯಾಗುತ್ತದೆ.

ಇದನ್ನೂ ಓದಿ: ರೂಪಾಯಿಗೆ ಬಿಗ್ ಶಾಕ್, ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು 93ರ ಗಡಿ ದಾಟಿದ ಭಾರತೀಯ ಕರೆನ್ಸಿ ಮೌಲ್ಯ!

ಮತ್ತೊಂದೆಡೆ, ವಿದೇಶಕ್ಕೆ ರಫ್ತು ಮಾಡಿ ಡಾಲರ್‌ ರೂಪದಲ್ಲಿ ಹಣ ಪಡೆಯುವುದರಿಂದ ಐಟಿ ಕಂಪನಿಗಳು, ಫಾರ್ಮಾ (ಔಷಧ) ಮತ್ತು ಜವಳಿ ಉದ್ಯಮದವರಿಗೆ ಹೆಚ್ಚಿನ ಲಾಭ ಸಿಗಬಹುದು. ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರು ತವರಿಗೆ ಹಣ ಕಳುಹಿಸಿದಾಗ, ಹೆಚ್ಚಿನ ರೂಪಾಯಿಗಳು ಕೈಸೇರಲಿವೆ. ವಿದೇಶಿ ಪ್ರವಾಸ ದುಬಾರಿಯಾದಾಗ ಜನರು ದೇಶದೊಳಗಿನ ಪ್ರವಾಸಿ ತಾಣಗಳಿಗೆ ಆದ್ಯತೆ ನೀಡಿದರೆ, ಇದರಿಂದ ಸ್ಥಳೀಯ ಪ್ರವಾಸೋದ್ಯಮ ಚೇತರಿಸಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us