ಭಾರತದ ಷೇರು ಮಾರುಕಟ್ಟೆಯ ಈ ಸ್ಫೋಟಕ ಬೆಳವಣಿಗೆ ಯಾಕಾಗುತ್ತಿದೆ, ಹೇಗಾಗುತ್ತಿದೆ?

|

Updated on: May 26, 2024 | 1:51 PM

Indian Share Market Growing Exponentially: ಭಾರತದ ಷೇರು ಮಾರುಕಟ್ಟೆ ಮೊದಲ ಬಾರಿಗೆ 5 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯದ ಗಡಿ ಮುಟ್ಟಿದೆ. ಒಂದೊಂದು ಟ್ರಿಲಿಯನ್ ಡಾಲರ್ ಗಡಿ ಮುಟ್ಟಲು ತೆಗೆದುಕೊಳ್ಳಲಾಗುತ್ತಿರುವ ಅವಧಿ ಹೆಚ್ಚೆಚ್ಚು ವೇಗದಲ್ಲಿ ಕಡಿಮೆ ಆಗುತ್ತಿದೆ. ಒಂದರಿಂದ ಎರಡು ಟ್ರಿಲಿಯನ್ ಡಾಲರ್ ಗಡಿ ತಲುಪಲು 3,697 ದಿನಗಳು ಬೇಕಾಗಿದ್ದವು. ನಾಲ್ಕರಿಂದ ಐದು ಟ್ರಿಲಿಯನ್ ಡಾಲರ್ ಮೈಲಿಗಲ್ಲು ತಲುಪಲು ಆದ ಅವಧಿ ಕೇವಲ 174 ದಿನ ಮಾತ್ರ.

ಭಾರತದ ಷೇರು ಮಾರುಕಟ್ಟೆಯ ಈ ಸ್ಫೋಟಕ ಬೆಳವಣಿಗೆ ಯಾಕಾಗುತ್ತಿದೆ, ಹೇಗಾಗುತ್ತಿದೆ?
ಷೇರು ಮಾರುಕಟ್ಟೆ
Follow us on

ಮುಂಬೈ, ಮೇ 26: ಭಾರತದ ಷೇರು ಮಾರುಕಟ್ಟೆ (stock market) ಇತ್ತೀಚೆಗೆ ಬಹಳ ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್ ಆಗಿರುವ ಎಲ್ಲಾ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳ (market capital) ಮೊದಲ ಬಾರಿಗೆ 5 ಟ್ರಿಲಿಯನ್ ಡಾಲರ್ ಗಡಿ ದಾಟಿ ಹೋಗಿದೆ. ಮಾರುಕಟ್ಟೆ ಬಂಡವಾಳ ಎಂದರೆ ಒಟ್ಟೂ ಷೇರುಗಳ ಒಟ್ಟೂ ಮೌಲ್ಯ. ಐದು ಲಕ್ಷ ಕೋಟಿ ರೂ ಮಾರುಕಟ್ಟೆ ಮೌಲ್ಯ ಹೊಂದಿರುವ ಷೇರುಪೇಟೆ ಭಾರತ ಸೇರಿ ಐದು ದೇಶಗಳಲ್ಲಿ ಮಾತ್ರವೇ ಇರುವುದು. ಅಮೆರಿಕ, ಚೀನಾ, ಜಪಾನ್ ಮತ್ತು ಹಾಂಕಾಂಗ್ ದೇಶಗಳಲ್ಲಿನ ಷೇರು ಮಾರುಕಟ್ಟೆ ಮಾತ್ರವೇ ಐದು ಟ್ರಿಲಿಯನ್ ಡಾಲರ್​ಗಿಂತ ಹೆಚ್ಚಿನ ಗಾತ್ರದಲ್ಲಿರುವುದು.

ಇನ್ನೂ ಕುತೂಹಲ ಎಂದರೆ ಭಾರತದಲ್ಲಿ ಷೇರು ಮಾರುಕಟ್ಟೆ ಬೆಳವಣಿಗೆ ಘಾತೀಯ ದರದಲ್ಲಿ (exponential growth) ಹೆಚ್ಚುತ್ತಿದೆ. 19ನೇ ಶತಮಾನದಲ್ಲಿ ಶುರುವಾದ ಬಿಎಸ್​ಇ ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂ ಮಾರುಕಟ್ಟೆ ಬಂಡವಾಳದ ಮೈಲಿಗಲ್ಲು ಮುಟ್ಟಿದ್ದು 2007ರ ಮೇ 29ರಂದು.

ಎರಡು ಟ್ರಿಲಿಯನ್ ಡಾಲರ್ ಗಡಿ ದಾಟಲು ಇನ್ನಷ್ಟು 10 ವರ್ಷ ಬೇಕಾಯಿತು. ಮೂರು ಟ್ರಿಲಿಯನ್ ಮೈಲಿಗಲ್ಲು ಮುಟ್ಟಲು 4 ವರ್ಷ, ನಾಲ್ಕು ಟ್ರಿಲಿಯನ್ ಡಾಲರ್ ಮೈಲಿಗಲ್ಲಿಗೆ ಎರಡು ವರ್ಷ, ಐದು ಟ್ರಿಲಿಯನ್ ಡಾಲರ್​ಗೆ ಏಳು ತಿಂಗಳು ಮಾತ್ರವೇ ಆಗಿದೆ.

ಇದನ್ನೂ ಓದಿ: ಹೊಸ ದಾಖಲೆ ಮಟ್ಟಕ್ಕೆ ಏರಿದ ಸೆನ್ಸೆಕ್ಸ್, ನಿಫ್ಟಿ; ಷೇರುಪೇಟೆ ಜಂಪ್​ಗೆ ಇಲ್ಲಿದೆ ಕಾರಣ

ಷೇರು ಮಾರುಕಟ್ಟೆ ಬೆಳವಣಿಗೆಯ ವೇಗಕ್ಕೆ ಕಾರಣವೇನು?

  • ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಕಂಪನಿಗಳು ಷೇರು ಮಾರುಕಟ್ಟೆಗೆ ಪ್ರವೇಶ ಮಾಡಿವೆ. ಇದು ಮಾರುಕಟ್ಟೆ ಆಕರ್ಷಣೆಗೆ ಒಂದು ಕಾರಣ.
  • ಬಹಳಷ್ಟು ಜನರು ಡೀಮ್ಯಾಟ್ ಅಕೌಂಟ್ ತೆರೆದು ಷೇರು ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ರೀಟೇಲ್ ಹೂಡಿಕೆದಾರರಿಂದ ಹೆಚ್ಚಿನ ಬಂಡವಾಳ ಹರಿದುಬರುತ್ತಿದೆ.
  • ವಿದೇಶೀ ಹೂಡಿಕೆ ಸಾಕಷ್ಟು ಬರುತ್ತಿದೆ. ಇಟಿಎಫ್ ಮೂಲಕ ಫಾರೀನ್ ಇನ್ವೆಸ್ಟ್​​ಮೆಂಟ್ ಹೆಚ್ಚುತ್ತಿದೆ.

ಚೀನಾಗೆ ಪೈಪೋಟಿ ನೀಡುತ್ತಿರುವ ಭಾರತ

ಅಮೆರಿಕದ ಹಣಕಾಸು ವಿಶ್ಲೇಷಣಾ ಸಂಸ್ಥೆಯಾದ ಎಂಎಸ್​ಸಿಐನ ಎಮರ್ಜಿಂಗ್ ಮಾರ್ಕೆಟ್ಸ್ ಇಂಡೆಕ್ಸ್ ಅಥವಾ ಉದಯೋನ್ಮುಖ ಮಾರುಕಟ್ಟೆಗಳ ಸೂಚಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಎಸ್​ಐಪಿಯಲ್ಲಿ ನೀವು ಒಂದು ತಿಂಗಳು ಕಂತು ಕಟ್ಟದಿದ್ದರೆ ಏನಾಗುತ್ತೆ?

ಈ ಇಂಡೆಕ್ಸ್​ನಲ್ಲಿ ಭಾರತದ ಮಾರುಕಟ್ಟೆ ಪಾಲು 2018ರಲ್ಲಿ ಶೇ. 8.2ರಷ್ಟಿತ್ತು. ಈಗ ಅದು 19ಕ್ಕೆ ಏರಿದೆ. ಹಾಗೆಯೇ, 10 ಬಿಲಿಯನ್ ಡಾಲರ್​ಗಿಂತ ಹೆಚ್ಚು ಮಾರುಕಟ್ಟೆ ಮೌಲ್ಯ ಇರುವ ಕಂಪನಿಗಳು ಕೋವಿಡ್ ಪೂರ್ವದಲ್ಲಿ 30 ಇದ್ದವು. ಈಗ ಅದು ನೂರಕ್ಕೆ ಏರಿವೆ.

ಮಾರುಕಟ್ಟೆ ಗಾತ್ರದಲ್ಲಿ ಭಾರತದಕ್ಕಿಂತ ಎರಡು ಪಟ್ಟು ಹೆಚ್ಚು ಇರುವ ಚೀನಾದಲ್ಲಿ ಇಂಥ ಕಂಪನಿಗಳ ಸಂಖ್ಯೆ 130 ಮಾತ್ರ. ಅಂದರೆ ಭಾರತದಲ್ಲಿ ದೊಡ್ಡ ಕಂಪನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:50 pm, Sun, 26 May 24