ವಿಶ್ವದ ದೊಡ್ಡ ಆರ್ಥಿಕತೆ: 5ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದ ಭಾರತ; ಕಾರಣ ಏನು ಗೊತ್ತಾ?
India slips to sixth place among large economies: ಭಾರತ ಅತಿವೇಗವಾಗಿ ಬೆಳವಣಿಗೆ ಹೊಂದುತ್ತಿದ್ದರೂ 2025ರಲ್ಲಿ ಅಗ್ರಮಾನ್ಯ ಆರ್ಥಿಕತೆಗಳ ಪಟ್ಟಿಯಲ್ಲಿ ಒಂದು ಸ್ಥಾನ ಕೆಳಗೆ ಇಳಿದಿದೆ. ಐಎಂಎಫ್ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಬ್ರಿಟನ್ಗಿಂತಲೂ ಭಾರತದ ಜಿಡಿಪಿ 2025ರಲ್ಲಿ ಕಡಿಮೆ ಇದೆ. ಬ್ರಿಟನ್, ಜಪಾನ್, ಜರ್ಮನಿ, ಚೀನಾ ಮತ್ತು ಅಮೆರಿಕ ದೇಶಗಳು ಭಾರತದಕ್ಕಿಂತ ಹೆಚ್ಚು ಜಿಡಿಪಿ ಹೊಂದಿವೆ.

ನವದೆಹಲಿ, ಏಪ್ರಿಲ್ 15: ಭಾರತ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು (Indian economy) ಹೊಂದಿರುವ ದೇಶ. ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಮತ್ತು ಜಪಾನ್ ಅನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ದೌಡಾಯಿಸಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಐಎಂಎಫ್ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಭಾರತ ಅತಿದೊಡ್ಡ ಆರ್ಥಿಕತೆಗಳ ಸಾಲಿನಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಪ್ರಕಾರ 2025ರಲ್ಲಿ ಭಾರತದ ಆರ್ಥಿಕತೆ 3.92 ಟ್ರಿಲಿಯನ್ ಡಾಲರ್ ಗಾತ್ರದ್ದಾಗಿರುತ್ತದೆ. ಆ ವರ್ಷ ಯುಕೆ ಅಥವಾ ಬ್ರಿಟನ್ನದ್ದು 4 ಟ್ರಿಲಿಯನ್ ಡಾಲರ್ ಜಿಡಿಪಿ ಇದೆ. ಜಪಾನ್ 4.44 ಟ್ರಿಲಿಯನ್ ಡಾಲರ್ ಗಾತ್ರದ ಜಿಡಿಪಿ ಹೊಂದಿದೆ.
ಹಿಂದಿನ ವರ್ಷದಲ್ಲಿ (2024) ಭಾರತದ ಜಿಡಿಪಿಯು ಬ್ರಿಟನ್ನದಕ್ಕಿಂತ ಹೆಚ್ಚಿತ್ತು. ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿತ್ತು. ಆದರೆ, 2025ರಲ್ಲಿ ಭಾರತ ಒಂದು ಸ್ಥಾನ ಕುಸಿದಿದ್ದು ಹೇಗೆ? ಈ ಒಂದು ವರ್ಷದಲ್ಲಿ ಭಾರತದ ಬೆಳವಣಿಗೆ ವೇಗವೇನೂ ಕಡಿಮೆ ಆಗಲಿಲ್ಲ. ಬ್ರಿಟನ್ನ ವೇಗವೇನೂ ಭಾರತದ ಸಮಕ್ಕೂ ಇರಲಿಲ್ಲ. ಆದರೂ ಕೂಡ ಭಾರತ ಒಂದು ಸ್ಥಾನ ಕಡಿಮೆಗೊಂಡಿದೆ. ಅದಕ್ಕೆ ಸಕಾರಣಗಳೂ ಇವೆ.
ಇದನ್ನೂ ಓದಿ: ಕಳೆದ ವರ್ಷ ಭಾರತದಿಂದ 860 ಬಿಲಿಯನ್ ಡಾಲರ್ ರಫ್ತು; ಇದು ಹೊಸ ದಾಖಲೆ
2025ರ ವರ್ಷದಲ್ಲಿ ಭಾರತ ರುಪಾಯಿ ಲೆಕ್ಕದಲ್ಲಿ ಶೇ. 9ರಷ್ಟು ನಾಮಿನಲ್ ಗ್ರೋತ್ ದಾಖಲಿಸಿದೆ. ಆದರೆ, ಜಿಡಿಪಿ ಲೆಕ್ಕಾಚಾರಕ್ಕೆ ಹೊಸ ಸರಣಿಯನ್ನು ಆಧಾರವಾಗಿರಿಸಲಾಗಿದೆ. ಇದರಿಂದ ಜಿಡಿಜಿ ಲೆಕ್ಕಾಚಾರದಲ್ಲಿ ಬದಲಾವಣೆಗಳಾಗಿ, ಜಿಡಿಪಿ ಕಡಿಮೆಗೊಂಡಿದೆ. ಇದು ಒಂದು ಕಾರಣ. ಹಾಗೆಯೇ, ಡಾಲರ್ ಎದುರು ರುಪಾಯಿ ಮೌಲ್ಯ ಬಹಳಷ್ಟು ಕಡಿಮೆಗೊಂಡಿದ್ದೂ ಜಿಡಿಪಿಗೆ ಹಿನ್ನಡೆ ತಂದಿದೆ. 2024ರಲ್ಲಿ ಒಂದು ಡಾಲರ್ಗೆ 84.6 ರುಪಾಯಿ ಇತ್ತು. 2025ರಲ್ಲಿ ಅದು 88.5ಕ್ಕೆ ಇಳಿಯಿತು. ಜಿಡಿಪಿಯು ಡಾಲರ್ ಲೆಕ್ಕದಲ್ಲಿ ಇರುವುದರಿಂದ ಒಟ್ಟಾರೆ ಜಿಡಿಪಿ ಗಾತ್ರ ಕುಸಿದಿದೆ.
2026ರಲ್ಲಿ ಭಾರತದ ಸ್ಥಾನ ಏರುತ್ತಾ?
ಐಎಂಎಫ್ ಅಂದಾಜು ಪ್ರಕಾರ 2026ರಲ್ಲೂ ಭಾರತದ ಸ್ಥಾನದಲ್ಲಿ ಬದಲಾವಣೆ ಆಗುವುದಿಲ್ಲ. ಅತಿದೊಡ್ಡ ಆರ್ಥಿಕತೆಯ ದೇಶಗಳ ಸಾಲಿನಲ್ಲಿ ಭಾರತ 6ನೇ ಸ್ಥಾನದಲ್ಲೇ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ 2027ರಲ್ಲಿ ಭಾರತ ಐದನೇ ಸ್ಥಾಕ್ಕೆ ಏರಬಹುದು. 2028ಕ್ಕೆ ಜಪಾನ್ ಅನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಏರಬಹುದು.
ಇದನ್ನೂ ಓದಿ: ಜಾಗತಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಉತ್ತಮ ಆರ್ಥಿಕ ಬೆಳವಣಿಗೆ ಸಾಧ್ಯತೆ: ಐಎಂಎಫ್ ಅಂದಾಜು
2027ರಲ್ಲಿ ಬ್ರಿಟನ್ನ ಜಿಡಿಪಿ 4.47 ಟ್ರಿಲಿಯನ್ ಡಾಲರ್ ಇರಲಿದ್ದು, ಭಾರತದ ಜಿಡಿಪಿ 4.58 ಟ್ರಿಲಿಯನ್ ಡಾಲರ್ಗೆ ಏರಬಹುದು. 2028ರಲ್ಲಿ ಜಪಾನ್ ಜಿಡಿಪಿ 4.75 ಟ್ರಿಲಿಯನ್ ಡಾಲರ್ ಇದ್ದರೆ, ಭಾರತದ ಜಿಡಿಪಿ 5 ಟ್ರಿಲಿಯನ್ ಡಾಲರ್ ಗಡಿ ದಾಟಬಹುದು.
ಅಮೆರಿಕ, ಚೀನಾ ಮತ್ತು ಜರ್ಮನಿ ದೇಶಗಳು ಟಾಪ್-3ಯಲ್ಲಿ ಮುಂದುವರಿಯಲಿವೆ. 2030ಕ್ಕೆ ಭಾರತದ ಜಿಡಿಪಿ 6 ಟ್ರಿಲಿಯನ್ ಡಾಲರ್ ಗಡಿದಾಟಲಿದ್ದು, ಜರ್ಮನಿಯ ಆರ್ಥಿಕತೆಯ ಗಾತ್ರಕ್ಕೆ ಸಮೀಪ ಹೋಗಬಹುದು. 2030ರ ನಂತರ ಭಾರತ ಜರ್ಮನಿಯನ್ನು ಮೀರಿಸಿ ಬೆಳೆಯುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




