India Gold Reserves: ಭಾರತದ ಫಾರೆಕ್ಸ್ ನಿಧಿಯಲ್ಲಿ ಚಿನ್ನದ ಸಂಗ್ರಹ 799 ಟನ್; ಬೇರೆ ದೇಶಗಳಲ್ಲಿ ಎಷ್ಟಿವೆ ಚಿನ್ನ?

|

Updated on: Oct 30, 2023 | 11:20 AM

RBI Increases gold Purchase: ಈ ಆಗಸ್ಟ್ ತಿಂಗಳಲ್ಲಿ ಭಾರತದ ಫಾರೆಕ್ಸ್​ನಲ್ಲಿನ ಚಿನ್ನದ ಸಂಗ್ರಹ 799.6 ಟನ್​ನಷ್ಟು ಇದೆ. ಅತಿಹೆಚ್ಚು ಚಿನ್ನ ಸಂಗ್ರಹ ಹೊಂದಿರುವ ದೇಶಗಳ ಪೈಕಿ ಭಾರತ 9ನೇ ಸ್ಥಾನದಲ್ಲಿದೆ. ಕಳೆದ ಕೆಲ ತಿಂಗಳಿಂದಲೂ ಆರ್​ಬಿಐನಿಂದ ಚಿನ್ನದ ಶೇಖರಣೆ ಸತತವಾಗಿ ಹೆಚ್ಚುತ್ತಿದೆ. ಭಾರತದ ಆರ್​ಬಿಐ ಮಾತ್ರವಲ್ಲ, ವಿಶ್ವದ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಕಳೆದ ನಾಲ್ಕೈದು ವರ್ಷಗಳಿಂದ ತಮ್ಮ ಫಾರೆಕ್ಸ್ ನಿಧಿಗೆ ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತಿವೆ.

India Gold Reserves: ಭಾರತದ ಫಾರೆಕ್ಸ್ ನಿಧಿಯಲ್ಲಿ ಚಿನ್ನದ ಸಂಗ್ರಹ 799 ಟನ್; ಬೇರೆ ದೇಶಗಳಲ್ಲಿ ಎಷ್ಟಿವೆ ಚಿನ್ನ?
ಚಿನ್ನ
Follow us on

ನವದೆಹಲಿ, ಅಕ್ಟೋಬರ್ 30: ಭಾರತದ ಫಾರೆಕ್ಸ್ ರಿಸರ್ವ್ಸ್​ನ (forex) ಭಾಗವಾಗಿರುವ ಚಿನ್ನದ ಸಂಗ್ರಹವನ್ನು ಆರ್​ಬಿಐ ಹೆಚ್ಚಿಸಿದೆ. ಈ ಆಗಸ್ಟ್ ತಿಂಗಳಲ್ಲಿ ಭಾರತದ ಫಾರೆಕ್ಸ್​ನಲ್ಲಿನ ಚಿನ್ನದ ಸಂಗ್ರಹ 799.6 ಟನ್​ನಷ್ಟು ಇದೆ. ಅತಿಹೆಚ್ಚು ಚಿನ್ನ ಸಂಗ್ರಹ (gold reserves) ಹೊಂದಿರುವ ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಪೈಕಿ ಭಾರತ 10ನೇ ಸ್ಥಾನದಲ್ಲಿದೆ. ಕಳೆದ ಕೆಲ ತಿಂಗಳಿಂದಲೂ ಆರ್​ಬಿಐನಿಂದ ಚಿನ್ನದ ಶೇಖರಣೆ ಸತತವಾಗಿ ಹೆಚ್ಚುತ್ತಿದೆ.

ಈ ರೀತಿ ರಿಸರ್ವ್ ಬ್ಯಾಂಕ್ ಚಿನ್ನವನ್ನು ಹೆಚ್ಚು ಖರೀದಿಸುತ್ತಿರುವುದಕ್ಕೆ ಸ್ಪಷ್ಟ ಕಾರಣಗಳಿಲ್ಲ. 2015ರಲ್ಲಿ ವಿತರಿಸಲಾಗಿದ್ದ ಸೋವರೀನ್ ಗೋಲ್ಡ್ ಬಾಂಡ್ ಸ್ಕೀಮ್​ಗಳ ಮೆಚ್ಯೂರಿಟಿ ಸಮೀಪಿಸಿದ್ದರಿಂದ ಅದಕ್ಕೆ ಪೂರಕವಾಗಿ ಆರ್​ಬಿಐ ಚಿನ್ನವನ್ನು ಶೇಖರಿಸುತ್ತಿರಬಹುದು ಎಂಬುದು ತಜ್ಞರ ಅಂದಾಜು.

2009ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟು ಉದ್ಭವಿಸಿದ ಸಂದರ್ಭದಲ್ಲಿ ಆರ್​ಬಿಐ 200 ಟನ್​ಗಳಷ್ಟು ಚಿನ್ನವನ್ನು ಖರೀದಿಸಿತ್ತು. ಅದಾದ ಬಳಿಕ ರಿಸರ್ವ್ ಬ್ಯಾಂಕ್​ನಿಂದ ಚಿನ್ನ ಖರೀದಿ ಶುರುವಾಗಿದ್ದು 2018ರಲ್ಲಿ. 2018ರಿಂದಲೂ ಆರ್​ಬಿಐ ಒಟ್ಟು 242 ಟನ್​ಗಳಷ್ಟು ಚಿನ್ನವನ್ನು ಶೇಖರಿಸಿದೆ. ಈ ವರ್ಷ ಜನವರಿಯಿಂದ ಆಗಸ್ಟ್​ವರೆಗಿನ ಅವಧಿಯಲ್ಲಿ ಆರ್​ಬಿಐ 12.2 ಟನ್​ಗಳಷ್ಟು ಚಿನ್ನವನ್ನು ಸಂಗ್ರಹಿಸಿದೆ.

ಇದನ್ನೂ ಓದಿ: KPMG Report: ಮುಂದಿನ 5 ವರ್ಷದಲ್ಲಿ ಸೆಮಿಕಂಡಕ್ಟರ್ ಸೇರಿ ಈ ಮೂರು ಕ್ಷೇತ್ರಗಳಿಂದ ಭಾರತೀಯ ಆರ್ಥಿಕತೆಗೆ 240 ಬಿಲಿಯನ್ ಡಾಲರ್ ಕೊಡುಗೆ: ಕೆಪಿಎಂಜಿ ವರದಿ

ಭಾರತದ ಆರ್​ಬಿಐ ಮಾತ್ರವಲ್ಲ, ವಿಶ್ವದ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕುಗಳು ಕಳೆದ ನಾಲ್ಕೈದು ವರ್ಷಗಳಿಂದ ತಮ್ಮ ಫಾರೆಕ್ಸ್ ನಿಧಿಗೆ ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತಿವೆ. ವಿದೇಶೀ ಕರೆನ್ಸಿ ಸಂಗ್ರಹ ಕುಸಿತದ ಪರಿಣಾಮವನ್ನು ಕಡಿಮೆಗೊಳಿಸಲು ಚಿನ್ನವನ್ನು ಖರೀದಿಸುವುದು ಸೆಂಟ್ರಲ್ ಬ್ಯಾಂಕುಗಳ ತಂತ್ರಗಾರಿಕೆಯಾಗಿರುತ್ತದೆ.

ಭಾರತದ ಫಾರೆಕ್ಸ್ ನಿಧಿಯಲ್ಲಿ ಚಿನ್ನದ ಪಾಲು ಶೇ. 8.3ರಷ್ಟಿದೆ. ಚೀನಾದ ಚಿನ್ನದ ಸಂಗ್ರಹದ ಪ್ರಮಾಣ ಭಾರತಕ್ಕಿಂತಲೂ ಹೆಚ್ಚಿದೆಯಾದರೂ ಫಾರೆಕ್ಸ್ ನಿಧಿಯಲ್ಲಿರುವ ಪ್ರತಿಶತ ಲೆಕ್ಕಾಚಾರದಲ್ಲಿ ಭಾರತದಕ್ಕಿಂತ ಕಡಿಮೆ ಇದೆ. ಅಮೆರಿಕ, ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ದೇಶಗಳಲ್ಲಿ ಫಾರೆಕ್ಸ್ ನಿಧಿಯಲ್ಲಿ ಚಿನ್ನದ ಪಾಲು ಶೇ. 66ಕ್ಕಿಂತಲೂ ಹೆಚ್ಚಿದೆ.

ಅಮೆರಿಕದ ಸೆಂಟ್ರಲ್ ಬ್ಯಾಂಕ್ ಅಥವಾ ಫೆಡರಲ್ ರಿಸರ್ವ್ 8,133.6 ಟನ್ ಚಿನ್ನದ ಸಂಗ್ರಹ ಹೊಂದಿದೆ. ಅತಿಹೆಚ್ಚು ಚಿನ್ನ ಶೇಖರಿಸಿರುವ ದೇಶ ಅಮೆರಿಕವಾಗಿದೆ.

ಇದನ್ನೂ ಓದಿ: ಇ ರುಪಾಯಿ ವಹಿವಾಟು ನಡೆಸಿದರೆ ಸಿಗುತ್ತವೆ ಕ್ಯಾಷ್​ಬ್ಯಾಕ್, ರಿವಾರ್ಡ್​ಗಳು..! ಬ್ಯಾಂಕುಗಳಿಂದ ಭರ್ಜರಿ ಆಫರ್

ಫಾರೆಕ್ಸ್ ನಿಧಿಯಲ್ಲಿ ಅತಿಹೆಚ್ಚು ಚಿನ್ನ ಹೊಂದಿರುವ ದೇಶಗಳು

  1. ಅಮೆರಿಕ: 8,133.5 ಟನ್ ಚಿನ್ನ
  2. ಜರ್ಮನಿ: 3,352.6 ಟನ್ ಚಿನ್ನ
  3. ಇಟಲಿ: 2,451.8 ಟನ್ ಚಿನ್ನ
  4. ಫ್ರಾನ್ಸ್: 2,436.9 ಟನ್ ಚಿನ್ನ
  5. ರಷ್ಯಾ: 2,332.7 ಟನ್ ಚಿನ್ನ
  6. ಚೀನಾ: 2,165.4 ಟನ್ ಚಿನ್ನ
  7. ಸ್ವಿಟ್ಜರ್​ಲ್ಯಾಂಡ್: 1,040 ಟನ್ ಚಿನ್ನ
  8. ಜಪಾನ್: 846 ಟನ್ ಚಿನ್ನ
  9. ಭಾರತ: 799.6 ಟನ್ ಚಿನ್ನ
  10. ನೆದರ್​ಲ್ಯಾಂಡ್ಸ್: 614 ಟನ್ ಚಿನ್ನ

ಇಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಾಗಿರುವ ಐಎಂಎಫ್ ಕೂಡ ಚಿನ್ನದ ಸಂಗ್ರಹ ಹೊಂದಿರುತ್ತದೆ. ಆಗಸ್ಟ್ ತಿಂಗಳಲ್ಲಿ ಐಎಂಎಫ್ 2,814 ಟನ್​ನಷ್ಟು ಚಿನ್ನದ ದಾಸ್ತಾನು ಮಾಡಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ