ಇಂದು ಅಕ್ಟೋಬರ್ 30 ವಿಶ್ವ ಉಳಿತಾಯ ದಿನವಾಗಿ ಆಚರಿಸಲಾಗುತ್ತದೆ. ಭವಿಷ್ಯದ ಜೀವನಕ್ಕೆ ಇಂದಿನಿಂದಲೇ ಅಡಿಪಾಯ ಹಾಕಬೇಕು. ಅದಕ್ಕೆ ಇರುವ ಪ್ರಮುಖ ಅಸ್ತ್ರಗಳಲ್ಲಿ ಹಣ ಉಳಿತಾಯ (saving money) ಒಂದು. ನಮ್ಮ ಜೀವನದಲ್ಲಿ ಸೇವಿಂಗ್ಸ್ ಎಂಬುದು ಬಹಳ ಮುಖ್ಯ. ಈ ಗುಣ ಇಲ್ಲದಿದ್ದರೆ ಕಷ್ಟ ಕಾರ್ಪಣ್ಯಗಳಿಗೆ ಜೀವನ ನಲುಗಿ ಹೋಗುವುದು ನಿಶ್ಚಿತ. ಅಂತೆಯೇ 1924ರಿಂದಲೂ ವಿಶ್ವ ಉಳಿತಾಯ ದಿನ ಆಚರಿಸಲಾಗುತ್ತಿದೆ. ಈ ವರ್ಷದ್ದು 100ನೇ ಉಳಿತಾಯ ದಿನ ಆಚರಣೆ.
ಜಾಗತಿಕವಾಗಿ ವಿಶ್ವ ಉಳಿತಾಯ ದಿನವನ್ನು ಅಕ್ಟೋಬರ್ 31ರಂದು ಆಚರಿಸಲಾಗುತ್ತದೆ. 1924ರ ಅಕ್ಟೋಬರ್ 24ರಿಂದ 30ರವರೆಗೆ ಇಟಲಿಯ ಮಿಲಾನ್ ನಗರದಲ್ಲಿ ಮೊದಲ ಅಂತಾರಾಷ್ಟ್ರೀಯ ಸೇವಿಂಗ್ಸ್ ಬ್ಯಾಂಕ್ ಸಭೆ ನಡೆಸಲಾಗಿತ್ತು. ಮರುದಿನ ಅಕ್ಟೋಬರ್ 31ರಂದು ವರ್ಲ್ಡ್ ಸೇವಿಂಗ್ಸ್ ಡೇ ಅನ್ನು ಆಚರಿಸಲು ನಿರ್ಧರಿಸಲಾಯಿತು. ಆಗಿನಿಂದಲೂ ಪ್ರತೀ ವರ್ಷ ಸೇವಿಂಗ್ಸ್ ಡೇ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ಭಾರತದಲ್ಲಿ ಅಕ್ಟೋಬರ್ 30ರಂದು ಉಳಿತಾಯ ದಿನವಾಗಿ ಆಚರಿಸಲಾಗುತ್ತದೆ.
ನಾವು ಉಳಿಸುವ ಪ್ರತೀ ರುಪಾಯಿಯೂ ಅಷ್ಟೇ ಗಳಿಕೆಗೆ ಸಮ ಎನ್ನುತ್ತಾರೆ. ಅಂದರೆ ನಾವು ನೂರು ರುಪಾಯಿ ಉಳಿಸಿದರೆ, ಅದು ನೂರು ರುಪಾಯಿ ಸಂಪಾದನೆ ಮಾಡಿದ್ದಕ್ಕೆ ಸಮವಾಗಿರುತ್ತದೆ. ಉಳಿತಾಯ ಪ್ರವೃತ್ತಿ ಬೆಳೆಸಿಕೊಂಡರೆ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವುದು ಸುಲಭವಾಗುತ್ತದೆ.
ಇದನ್ನೂ ಓದಿ: 70 ಗಂಟೆ ಕೆಲಸ ಮಾಡಬೇಕೆಂದು ಹೇಳುವ ನಾರಾಯಣಮೂರ್ತಿ ನಿಜಜೀವನದಲ್ಲಿ ಹೇಗೆ? ಪತ್ನಿ ಸುಧಾಮೂರ್ತಿ ಹೇಳಿದ್ದಿದು
ಒಂದೇ ಆದಾಯ ಮೂಲ ಬದಲು ವಿವಿಧ ಆದಾಯ ಮೂಲಗಳನ್ನು ಸೃಷ್ಟಿಸಿಕೊಳ್ಳಬೇಕು. ನಿಮ್ಮ ವೆಚ್ಚವನ್ನು ಕಡಿಮೆ ಮಾಡಿ ಹಣ ಉಳಿತಾಯ ಹೆಚ್ಚಿಸಬೇಕು. ಉಳಿಸಿದ ಹಣವನ್ನು ಹಾಗೆ ಸುಮ್ಮನೆ ಕೂಡಿ ಹಾಕದೆ ಸೂಕ್ತ ಯೋಜನೆಗಳಲ್ಲಿ ಹೂಡಿಕೆ ಮಾಡಿ ಅದು ಉತ್ತಮ ವೇಗದಲ್ಲಿ ಬೆಳೆಯುವಂತೆ ನೋಡಿಕೊಳ್ಳಬೇಕು.
ನಿಮ್ಮ ಸಂಪಾದನೆ ಅಥವಾ ಆದಾಯದಲ್ಲಿ ಅವಶ್ಯಕತೆಗೆ ಮಾಡುವ ವೆಚ್ಚ ಶೇ. 50ಕ್ಕಿಂತ ಹೆಚ್ಚಿರಬಾರದು. ಶೇ. 30ರಷ್ಟು ಆದಾಯವು ಕಾರು ಖರೀದಿ ಇತ್ಯಾದಿ ಅನವಶ್ಯಕವಾಗಿರುವ ಆಸೆಗಳ ಪೂರೈಕೆಗೆ ಹೋಗಲಿ. ಇನ್ನುಳಿದ ಶೇ. 20ರಷ್ಟಾದರೂ ಆದಾಯವು ಹೂಡಿಕೆಗೆ ಹೋಗಲಿ. ಈ 50-30-20ರ ಸೂತ್ರದಲ್ಲಿ ಕೊನೆಯ ಅಂಶವಾದ ಶೇ. 20ರಷ್ಟು ಹಣ ಹೂಡಿಕೆ ಬಹಳ ಮುಖ್ಯ. ನೀವು ಉಳಿಸುವ ಹೆಚ್ಚುವರಿ ಹಣವೆಲ್ಲವೂ ಹೂಡಿಕೆಗಳಿಗೆ ವಿನಿಯೋಗವಾಗಲಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ