
ಜಾಗತಿಕವಾಗಿ ವಿವಿಧ ದೇಶಗಳನ್ನು ವಿವಿಧ ರೀತಿಯಲ್ಲಿ ಅಳೆಯಲು ಬೇರೆ ಬೇರೆ ಸೂಚ್ಯಂಕಗಳಿವೆ. ಇವೆಲ್ಲವನ್ನೂ ರಚಿಸುವ ಏಜೆನ್ಸಿಗಳೆಲ್ಲವೂ ಪಾಶ್ಚಿಮಾತ್ಯರದ್ದೇ ಆಗಿವೆ. ಬಡತನ, ಪ್ರಜಾತಂತ್ರ, ಸಾಮಾಜಿಕ ಭದ್ರತೆ, ಭ್ರೂಣಹತ್ಯೆ, ಅಲ್ಪಸಂಖ್ಯಾತ ರಕ್ಷಣೆ ಇತ್ಯಾದಿ ನಾನಾ ವಿಷಯಗಳಿಗೆ ಗ್ಲೋಬಲ್ ಇಂಡೆಕ್ಸ್ಗಳಿವೆ. ಇವುಗಳಲ್ಲಿ ಭಾರತಕ್ಕೆ ಸಿಗುವ ಸ್ಥಾನಮಾನ ಅಷ್ಟಕಷ್ಟೇ. ಭಾರತದಲ್ಲಿ ಪ್ರಜಾತಂತ್ರಾತ್ಮಕ ವ್ಯವಸ್ಥೆ ಶಿಥಿಲವಾಗಿದೆ ಎಂದು ಕೆಲ ಏಜೆನ್ಸಿಗಳು ವರದಿ ಮಾಡುವುದಿದೆ. ಯಾವ ಮಾನದಂಡ ಅಥವಾ ಅಳತೆಗೋಲು ಇಟ್ಟುಕೊಂಡು ದೇಶಗಳ ಪರಿಸ್ಥಿತಿಯನ್ನು ಅಂದಾಜಿಸುತ್ತಾರೆ ಎಂಬುದು ಸಂಶಯಕ್ಕೆ ಎಡೆ ಮಾಡುವಂತಿರುತ್ತದೆ. ಭಾರತದಂತಹ ವಿಸ್ತಾರವಾದ, ವೈವಿಧ್ಯಮಯವಾದ ದೇಶದಲ್ಲಿ ಅಂಕಿ ಅಂಶಗಳನ್ನು ಪಡೆಯುವುದು ಸರಳವಲ್ಲ. ಹೀಗಾಗಿ, ಹೆಚ್ಚಿನ ಸೂಚ್ಯಂಕಗಳಲ್ಲಿ ಭಾರತದ ಬಗ್ಗೆ ಮಾಡುವ ಅಂದಾಜು ಸತ್ಯಕ್ಕೆ ದೂರವೇ ಇರುತ್ತದೆ.
ಇಷ್ಟು ವರ್ಷ ಈ ಗ್ಲೋಬಲ್ ಏಜೆನ್ಸಿಗಳ ಶ್ರೇಯಾಂಕ ಕ್ರಮವನ್ನು ಭಾರತ ಸಹಿಸಿಕೊಂಡಿದ್ದು ಹೌದು. ಈಗ ಅದನ್ನು ಪ್ರಶ್ನಿಸಲು ಆರಂಭಿಸಿದೆ. ಆಡಳಿತ, ಪ್ರಜಾಪ್ರಭುತ್ವ, ರಾಷ್ಟ್ರೀಯ ಜವಾಬ್ದಾರಿಗಳನ್ನು ಜಾಗತಿಕವಾಗಿ ಅಳೆಯುವಂತಹ ಮಾನದಂಡಗಳ ಬಗ್ಗೆಯೇ ಭಾರತ ಧ್ವನಿ ಎತ್ತತೊಡಗಿದೆ.
ಇದರ ಒಂದು ಪರಿಣಾಮವೇ ರೆಸ್ಪಾನ್ಸಿಬಲ್ ನೇಶನ್ಸ್ ಇಂಡೆಕ್ಸ್ ಅಥವಾ ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ (RNI- Responsible Nations Index). ಪೂರ್ವಗ್ರಹದಿಂದ ಕೂಡಿದ, ಮತ್ತು ಬಾಹ್ಯ ಪ್ರಭಾವಿತ ಗ್ಲೋಬಲ್ ರ್ಯಾಂಕಿಂಗ್ಗಳಿಗೆ ಪರ್ಯಾಯವಾಗಿ ರೆಸ್ಪಾನ್ಸಿಬಲ್ ನೇಶನ್ಸ್ ಇಂಡೆಕ್ಸ್ ಅಥವಾ ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕದಲ್ಲಿ ಪಾರದರ್ಶಕವಾದ ಮತ್ತು ದತ್ತಾಂಶ ಆಧಾರಿತವಾದ ವ್ಯವಸ್ಥೆ ಇದೆ.
ಈ ಬದಲಾವಣೆಗೆ ಬೌದ್ಧಿಕ ತಳಹದಿ ನಿರ್ಮಾಣವಾಗಿದ್ದು 2022ರಲ್ಲಿ. ಆರ್ಥಿಕ ತಜ್ಞರಾದ ಸಂಜೀವ್ ಸಾನ್ಯಾಲ್ ಅವರು ಭಾರತದಂತಹ ದೇಶಗಳ ಮೌಲ್ಯಮಾಪನ ಮಾಡುವ ಜಾಗತಿಕ ಸೂಚ್ಯಂಕಗಳ ವಿಶ್ವಾಸಾರ್ಹತೆ ಹಾಗೂ ಕ್ರಮಬದ್ಧತೆಯನ್ನು ಸಾರ್ವಜನಿಕವಾಗಿ ಪ್ರಶ್ನಿಸುವುದರೊಂದಿಗೆ ಪರ್ಯಾಯ ಸಿಸ್ಟಂ ರೂಪುಗೊಳ್ಳಲು ಆರಂಭಿಸಿತು.
ಈ ಹಲವು ಸೂಚ್ಯಂಕಗಳು ಅಸ್ಪಷ್ಟ ಪ್ರಶ್ನೆಗಳಿಂದ ಕೂಡಿದ, ಪೂರ್ವಗ್ರಹ ಪೀಡಿತ ಮಾಧ್ಯಮ ದೃಷ್ಟಿಕೋನಗಳನ್ನು ಹೊಂದಿರುವ ಮತ್ತು ಪಾರದರ್ಶಕವಲ್ಲದ ಸಣ್ಣ ಸಮೀಕ್ಷೆಗಳನ್ನು ಆಧರಿಸಿರುತ್ತವೆ. 2014ರ ನಂತರದ ಭಾರತದ ಬಗ್ಗೆ ಈ ಸೂಚ್ಯಂಕಗಳು ಕಳಪೆ ಸ್ಥಾನ ಕೊಡುತ್ತಲೇ ಬಂದಿವೆ. ಮತದಾನ ಪ್ರಮಾಣ, ಅಲ್ಪಸಂಖ್ಯಾತರ ರಾಜಕೀಯ ಪ್ರಾತಿನಿಧ್ಯ ಮತ್ತು ಕಲ್ಯಾಣ ಕಾರ್ಯಕ್ರಮಗಳಂತಹ ಸಾಕ್ಷ್ಯಗಳನ್ನು ಈ ಸಮೀಕ್ಷೆಗಳಲ್ಲಿ ಉಪೇಕ್ಷಿಸಲಾಗಿರುವುದು ಕಂಡು ಬರುತ್ತದೆ.
ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?
ಸಂಜೀವ್ ಸಾನ್ಯಾಲ್ ಅವರು ಈ ವೈರುದ್ಧ್ಯವನ್ನು ಎತ್ತಿ ತೋರಿಸಲು ಆರಂಭಿಸಿದರು. ಈ ರ್ಯಾಂಕಿಂಗ್ಗಳಲ್ಲಿ ಕಾಣುವ ಅತಾರ್ಕಿಕ ಹೋಲಿಕೆಗಳನ್ನು ಬೆತ್ತಲುಗೊಳಿಸತೊಡಗಿದರು. ಬಹಳ ದುರ್ಬಲ ಪ್ರಜಾತಂತ್ರ ವ್ಯವಸ್ಥೆ ಹೊಂದಿರುವ ಸಣ್ಣ ದೇಶಗಳಿಗಿಂತ ಕಳಪೆ ಸ್ಥಾನವನ್ನು ಭಾರತಕ್ಕೆ ನೀಡಲಾಗುತ್ತಿರುವುದನ್ನು ಪ್ರಶ್ನೆ ಮಾಡಿದರು.
ಗ್ಲೋಬಲ್ ರ್ಯಾಂಕಿಂಗ್ಗಳಲ್ಲಿ ದೇಶಗಳ ಬಗ್ಗೆ ಮಾಡಲಾಗುವ ಮೌಲ್ಯಮಾಪನದಿಂದ ಹಾನಿ ಆಗೋದಿಲ್ಲ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ, ಸಂಜೀವ್ ಸಾನ್ಯಾಲ್ ಅವರು ಈ ರೀತಿಯ ರ್ಯಾಂಕಿಂಗ್ಗಳು ಹೇಗೆ ಬೇರೆ ಬೇರೆ ರೀತಿಯಲ್ಲಿ ದೇಶಕ್ಕೆ ಪರೋಕ್ಷವಾಗಿ ಹಾನಿ ಮಾಡುತ್ತದೆ ಎಂಬುದನ್ನು ವಿವರಿಸುತ್ತಾರೆ. ಭಾರತದ ಆರ್ಥಿಕತೆ ಹಾಗೂ ಘನತೆಗೆ ಹಾನಿ ಉಂಟು ಮಾಡಬಹುದಾದಂತಹ ವಿಶ್ವ ಬ್ಯಾಂಕ್ ಸೂಚಕಗಳು, ಸಾವರಿನ್ ಕ್ರೆಡಿಟ್ ರೇಟಿಂಗ್ಸ್, ಇಎಸ್ಜಿ ಹೂಡಿಕೆ ನಿರ್ಧಾರಗಳು, ಜಾಗತಿಕ ಮಾಧ್ಯಮ ದೃಷ್ಟಿಕೋನ ಇತ್ಯಾದಿಯ ಮೇಲೆ ಇವುಗಳು ಪ್ರಭಾವ ಬೀರುವ ಸಾಧ್ಯತೆ ಇರುವುದನ್ನು ಸಾನ್ಯಾಲ್ ಗುರುತಿಸಿದರು.
ಅಸಮರ್ಪಕ ರ್ಯಾಂಕಿಂಗ್ಗಳನ್ನು ಬಾರಿ ಬಾರಿ ಪ್ರಶ್ನಿಸುವುದರ ಬದಲು ಭಾರತ ತಾನೇ ಸ್ವಂತವಾಗಿ ರೂಪಿಸಿದ ಪಾರದರ್ಶಕವಾದ, ದತ್ತಾಂಶ ಆಧಾರಿತವಾದ ಸೂಚ್ಯಂಕಗಳನ್ನು ರೂಪಿಸಿ, ಆ ಮೂಲಕ ಜಾಗತಿಕ ಮೌಲ್ಯಮಾಪನದಲ್ಲಿ ಪಾಶ್ಚಿಮಾತ್ಯ ದೇಶಗಳ ಪ್ರಾಬಲ್ಯವನ್ನು ಮೆಟ್ಟಿ ನಿಲ್ಲುವುದು ಅವಶ್ಯ ಎನಿಸಿತು.
ಈ ಒಂದು ಐಡಿಯಾಗೆ ನಿರ್ದಿಷ್ಟ ಸ್ವರೂಪ ಸಿಕ್ಕಿದ್ದು 2026ರ ಜನವರಿ 19ರಂದು. ಅಂದು ಭಾರತದಿಂದ ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕ ಬಿಡುಗಡೆ ಆಯಿತು. ಭಾರತ ಹಾಗೂ ತೃತೀಯ ಜಗತ್ತಿನ ನೇತೃತ್ವದಲ್ಲಿ ರೂಪುಗೊಂಡ ಮೊದಲ ಗ್ಲೋಬಲ್ ಇಂಡೆಕ್ಸ್ ಇದೆನಿಸಿದೆ.
ಜೆಎನ್ಯು ಯೂನಿವರ್ಸಿಟಿ, ಐಐಎಂ ಮುಂಬೈ, ಡಾ. ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ ಜೊತೆ ಸಹಯೋಗದಲ್ಲಿ ವರ್ಲ್ಡ್ ಇಂಟೆಲೆಕ್ಚುವಲ್ ಫೌಂಡೇಶನ್ ಈ ಸೂಚ್ಯಂಕ ರೂಪಿಸಲು ಶ್ರಮ ಹಾಕಿದೆ. 2026ರ ಜನವರಿ 19ರಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೆಹಲಿಯಲ್ಲಿ ಇದನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: G-RAM-G: ಜಿ ರಾಮ್ ಜಿ ಕಾಯ್ದೆ- ಮತ್ತಷ್ಟು ಉದ್ಯೋಗ, ಮತ್ತಷ್ಟು ಭದ್ರತೆ
ರೆಸ್ಪಾನ್ಸಿಬಿಲಿಟಿ ನೇಶನ್ಸ್ ಇಂಡೆಕ್ಸ್ ಮೂಲಕ ಭಾರತವು ಪಾಶ್ಚಿಮಾತ್ಯ ನಿಯಂತ್ರಿತ ರ್ಯಾಂಕಿಂಗ್ಗಳಿಗೆ ಸವಾಲೊಡ್ಡುವಂತಿದೆ. ಭಾರತದ ಶೈಕ್ಷಣಿಕ ಮತ್ತು ನೀತಿ ಸಂಸ್ಥೆಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿರುವುದು ಮತ್ತು ಅವು ಜಾಗತಿಕವಾಗಿ ಮಾದರಿ ನಿರ್ಮಿಸುತ್ತಿರುವುದು ಎದ್ದು ಕಾಣುತ್ತಿದೆ.
ಜಾಗತಿಕವಾಗಿ ಈ ಸೂಚ್ಯಂಕವು ಪ್ರಸ್ತುತ ಎನಿಸುತ್ತದೆ. ಆಫ್ರಿಕಾ, ಲ್ಯಾಟಿನ್ ಅಮೆರಿಕ, ಆಗ್ನೇಯ ಏಷ್ಯ ಮತ್ತು ಪಶ್ಚಿಮ ಏಷ್ಯಾದ ರಾಷ್ಟ್ರಗಳಿಗೆ ಈ ಸೂಚ್ಯಂಕವು ಪಾಶ್ಚಿಮಾತ್ಯ ದೃಷ್ಟಿಕೋನಕ್ಕೆ ಉತ್ತಮ ಪರ್ಯಾಯ ಎಂದನಿಸುತ್ತದೆ.
ಮುಖ್ಯವಾದ ಸಂಗತಿ ಎಂದರೆ, ಈ ಪರಿವರ್ತನೆಯು ಸಂಘರ್ಷದಿಂದ ಕೂಡಿಲ್ಲ. ಪರ್ಯಾಯಗಳನ್ನು ನೀಡುವ ಮೂಲಕ ಭಾರತವು ಪಾಶ್ಚಿಮಾತ್ಯ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕ್ರಮೇಣವಾಗಿ ಕಡಿಮೆ ಮಾಡುತ್ತಾ ಬರುತ್ತಿದೆ. ಸಮತೋಲಿತವಾದ ಜಾಗತಿಕ ಕ್ರಮಾಂಕಕ್ಕೆ ಕೊಡುಗೆ ನೀಡುತ್ತಾ ಬರುತ್ತಿದೆ. ರಾಜತಾಂತ್ರಿಕವಾಗಿ ಹೇಳುವುದಾದರೆ, ಈ ಸೂಚ್ಯಂಕವು ತನ್ನ ಸ್ಟ್ರಕ್ಚರ್ಡ್ ಡಾಟಾ ಮೂಲಕ ಹೂಡಿಕೆ ಹರಿವು, ಕ್ರೆಡಿಟ್ ರೇಟಿಂಗ್, ಇಎಸ್ಜಿ ಸ್ಕೋರ್, ಮೀಡಿಯಾ ದೃಷ್ಟಿಕೋನದ ಮೇಲೆ ಪ್ರಭಾವ ಬೀರಬಲ್ಲುದು.
ಜವಾಬ್ದಾರಿಯು ರಾಷ್ಟ್ರಗಳ ಸೂಚ್ಯಂಕ ರೂಪಿಸುವ ಮೂಲಕ ಭಾರತವು ಗ್ಲೋಬಲ್ ಸೌತ್ ಅಥವಾ ಅಭಿವೃದ್ಧಿಶೀಲ ದೇಶಗಳ ನಾಯಕತ್ವವನ್ನು ಸ್ವಾಭಾವಿಕವಾಗಿ ಪಡೆಯುವಂತೆ ಮಾಡುತ್ತದೆ. ನ್ಯಾಯಯುತ ಜವಾಬ್ದಾರಿ ಮತ್ತು ಸಮಗ್ರ ಅಭಿವೃದ್ಧಿ ಸೇರಿದಂತೆ ಜಿ20ಯಲ್ಲಿನ ಭಾರತದ ಆದ್ಯತೆಗಳೊಂದಿಗೆ ಈ ಸೂಚ್ಯಂಕ ತಾಳೆಯಾಗುತ್ತದೆ.
ಇದನ್ನೂ ಓದಿ: 2025ರಲ್ಲಿ ಸರ್ಕಾರ ತೆಗೆದುಕೊಂಡ ಪ್ರಮುಖ ಸುಧಾರಣೆಗಳಿವು…
ಇನ್ನೂ ಸೂಕ್ಷ್ಮವಾಗಿ ಗಮನಿಸಿದಾಗ, ಜವಾಬ್ದಾರಿಯುತ ರಾಷ್ಟ್ರಗಳ ಸೂಚ್ಯಂಕವು ಏನು ಪರಿವರ್ತನೆ ತಂದಿದೆ ಎಂಬುದು ಕಾಣುತ್ತದೆ. ಈ ಮುಂಚೆ ಭಾರತವು ಇತರರಿಂದ ಮೌಲ್ಯಮಾಪನ ಪಡೆಯುತ್ತಿತ್ತು. ಈಗ ಜಾಗತಿಕ ಪ್ರಮಾಣಗಳು ಹೇಗಿರಬೇಕೆಂದು ವ್ಯಾಖ್ಯಾನ ಮಾಡಲು ಭಾರತ ಸಹಾಯ ಮಾಡುತ್ತಿದೆ. ಆ ಮಟ್ಟಿಗೆ ಪರಿವರ್ತನೆ ಕಾಣಬಹುದು. ಜ್ಞಾನ ಒಂದೇ ಗುಂಪಿಗೆ ಸೀಮಿತವಲ್ಲ ಎಂಬುದನ್ನು ಭಾರತ ತೋರಿಸಿದೆ.
ಈ ರೆಸ್ಪಾನ್ಸಿಬಲ್ ನೇಶನ್ಸ್ ಇಂಡೆಕ್ಸ್ನಿಂದ ಪ್ರೇರಿತವಾಗಿ, ಭಾರತದ ನಾಯಕತ್ವದಲ್ಲಿ ಮತ್ತಷ್ಟು ಗ್ಲೋಬಲ್ ಇಂಡೆಕ್ಸ್ಗಳು ಹೊರಹೊಮ್ಮಬಹುದು. ಡಿಜಿಟಲ್ ಗವರ್ನೆನ್ಸ್, ಇನ್ಪ್ರಾಸ್ಟ್ರಕ್ಚರ್ ಸಸ್ಟೈನಬಿಲಿಟಿ, ಇನ್ನೋವೇಶನ್ ಇತ್ಯಾದಿ ಕ್ಷೇತ್ರಗಳಲ್ಲಿ ಪಾಶ್ಚಿಮಾತ್ಯರ ಕಣ್ಣಿಗೆ ನಿಲುಕದ ವೈವಿಧ್ಯ ಜಗತ್ತಿನ ಶಕ್ತಿಯನ್ನು ಬಿಂಬಿಸುವ ಬೇರೆ ಬೇರೆ ಗ್ಲೋಬಲ್ ಇಂಡೆಕ್ಸ್ಗಳನ್ನು ಭಾರತದಿಂದ ಬರಬಹುದು.
ಕೊನೆಯದಾಗಿ ಹೇಳುವುದಾದರೆ ಈ ಸೂಚ್ಯಂಕವು ಸಾಂಕೇತಿಕಕ್ಕೆ ಸೀಮಿತವಾಗಿರುವುದಿಲ್ಲ. ದೀರ್ಘಕಾಲದ ವಿಮರ್ಶೆಯನ್ನು ಜಾಗತಿಕ ಚರ್ಚೆಗಳಿಗೆ ಅನುವು ಮಾಡಿಕೊಡಬಲ್ಲ ಸಾಂಸ್ಥಿಕ ರಚನೆಯಾಗಿ ಭಾರತ ಪರಿವರ್ತನೆ ಮಾಡಿರುವುದನ್ನು ಗಮನಿಸಬಹುದು. ಭಾರತವು ಸೂಚ್ಯಂಕಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದಕ್ಕಷ್ಟೇ ಸೀಮಿತವಾಗದೆ, ನಿಯಮಗಳ ರಚನೆಯ ಕೈಂಕರ್ಯ ಮಾಡಲು ಆರಂಭಿಸಿದೆ. ನೈತಿಕತೆ, ಸುಸ್ಥಿರತೆ ಮತ್ತು ಸಮಾನತೆಯ ತಳಹದಿಯಲ್ಲಿ ಜಾಗತಿಕ ಆಡಳಿತದಲ್ಲಿ ಭಾರತವು ಅಜೆಂಡಾ ರೂಪಿಸಲು ಆರಂಭಿಸಿದೆ. ಇದು ಭಾರತದ ಸಾಫ್ಟ್ ಪವರ್ನ ಅನಾವರಣ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ