ಡಾಲರ್ ಎದುರು ರುಪಾಯಿ ಮೌಲ್ಯ 91.70ಕ್ಕೆ ಕುಸಿತ; ಇದೇ ಟ್ರೆಂಡ್ ಇದ್ದರೆ 93ಕ್ಕೆ ಇಳಿಯಬಹುದು ಎಂದ ತಜ್ಞರು
Rupee fell to new low of 91.70 against Dollar: ಡಾಲರ್ ಎದುರು ರುಪಾಯಿ ಮೌಲ್ಯ ಬುಧವಾರ ಒಂದು ಹಂತದಲ್ಲಿ 91.74ಕ್ಕೆ ಕುಸಿದಿತ್ತು. ದಿನಾಂತ್ಯದಲ್ಲಿ 91.70 ರುಪಾಯಿ ಬೆಲೆಗೆ ನಿಂತಿದೆ. ಸತತ ಐದು ಸೆಷನ್ಗಳಿಂದ ಡಾಲರ್ ಎದುರು ರುಪಾಯಿ ಹಿನ್ನಡೆ ಅನುಭವಿಸಿದೆ. ವಿದೇಶೀ ಹೂಡಿಕೆಗಳ ಹೊರಹರಿವು ಹೆಚ್ಚಿರುವುದು ರುಪಾಯಿ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ನವದೆಹಲಿ, ಜನವರಿ 21: ಭಾರತದ ರುಪಾಯಿ ಕರೆನ್ಸಿಯ ದುರ್ಬಲ ಪ್ರದರ್ಶನ (Dollar vs Rupee) ಮುಂದುವರಿದಿದೆ. ಬೇರೆ ಬೇರೆ ಕಾರಣಗಳಿಗೆ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಮುಂದುವರಿದಿದೆ. ನಿನ್ನೆ 90.98 ಇದ್ದ ರುಪಾಯಿ ಮೌಲ್ಯ ಇವತ್ತು 91 ದಾಟಿ ಹೋಗಿದೆ. ಬುಧವಾರ ಒಂದು ಹಂತದಲ್ಲಿ 76 ಪೈಸೆ ಕುಸಿತಗೊಂಡು 91.74ಕ್ಕೆ ಹೋಗಿದ್ದ ರುಪಾಯಿ, ಅಂತಿಮವಾಗಿ 91.70ಗೆ ನಿಂತಿದೆ. ಇದು ಡಾಲರ್ ಎದುರು ರುಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯ ಎನಿಸಿದೆ.
ಡಾಲರ್ ಎದುರು ರುಪಾಯಿ ದುರ್ಬಲ ಪ್ರದರ್ಶನಕ್ಕೆ ಕಾರಣಗಳಿವು..
ವಿದೇಶೀ ಹೂಡಿಕೆಗಳು ಹೊರಹೋಗುವುದು ಮುಂದುವರಿಯುತ್ತಲೇ ಇದೆ; ಆಮದು ಅವಶ್ಯಕತೆ ಹೆಚ್ಚುತ್ತಿದೆ; ಡಾಲರ್ ಕರೆನ್ಸಿ ಪ್ರಬಲಗೊಳ್ಳುತ್ತಿದೆ. ರುಪಾಯಿ ಮೌಲ್ಯ ಕುಸಿಯಲು ಕಾರಣವಾಗಿರುವ ಅಂಶಗಳಲ್ಲಿ ಈ ಮೂರು ಇವೆ. ಅಮೆರಿಕದ ಟ್ಯಾರಿಫ್ ಬೆದರಿಕೆಯೂ ಹೂಡಿಕೆಗಳ ಹೊರಹರಿವಿಗೆ ಕಾರಣವಾಗಿರಬಹುದು.
ಡಾಲರ್ ಎದುರು ರುಪಾಯಿ ಕರೆನ್ಸಿ ಮೌಲ್ಯ ಡಿಸೆಂಬರ್ನಲ್ಲಿ ಕನಿಷ್ಠ ಮಟ್ಟಕ್ಕೆ ಹೋಗಿತ್ತು. ಜನವರಿಯಲ್ಲಿ ಚೇತರಿಸಿಕೊಂಡಿತ್ತು. ಆದರೆ, ಕಳೆದ ಐದಾರು ಸೆಷನ್ಗಳಿಂದ ರುಪಾಯಿ ಸತತವಾಗಿ ಹಿನ್ನಡೆ ಕಾಣುತ್ತಿದೆ.
ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?
ಡಾಲರ್ ಎದುರು 93ಕ್ಕೆ ಕುಸಿಯುತ್ತಾ ರುಪಾಯಿ?
ಈಗಿರುವ ಒತ್ತಡಗಳು ಹೀಗೇ ಮುಂದುವರಿದಲ್ಲಿ ರುಪಾಯಿ ಮೌಲ್ಯವು 92.5ರಿಂದ 93ರವರೆಗೆ ಕುಸಿಯಬಹುದು ಎಂದು ಎಎನ್ಝಡ್ ರಿಸರ್ಚ್ನ ಧೀರಜ್ ನಿಮ್ ಹೇಳುತ್ತಾರೆ. ಆದರೆ, ಜಿಡಿಪಿ ಉತ್ತಮವಾಗಿ ವೃದ್ಧಿಸಿದರೆ, ಕಾರ್ಪೊರೇಟ್ ಗಳಿಕೆಗಳು ಉತ್ತಮವಾಗಿದ್ದರೆ, ಎಫ್ಡಿಐ ಒಳಹರಿವು ಹೆಚ್ಚಿದರೆ ರುಪಾಯಿ ಕರೆನ್ಸಿ ಮತ್ತೆ ಬಲಗೊಳ್ಳಬಹುದು ಎನ್ನುವುದು ಇವರ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




