ಅಮೆರಿಕ, ಯೂರೋಪ್ ಜೊತೆ ಭಾರತದ ವ್ಯಾಪಾರ ಸಂಬಂಧ, 1991ರ ಉದಾರ ನೀತಿಗಿಂತಲೂ ದೊಡ್ಡದು: ಅರವಿಂದ್ ಪಣಗರಿಯಾ

India's trade deal with EU and US is bigger moment than 1991, says Arvind Panagariya: ಯೂರೋಪಿಯನ್ ಯೂನಿಯನ್ ಮತ್ತು ಅಮೆರಿಕದ ಜೊತೆಗೆ ಭಾರತ ಮಾಡಿಕೊಂಡಿರುವ ಟ್ರೇಡ್ ಡೀಲ್​ಗಳು ಬಹಳ ದೊಡ್ಡ ಬೆಳವಣಿಗೆ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ್ ಪಣಗರಿಯಾ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ತೆಗೆದುಕೊಂಡಿರುವ ಸುಧಾರಣಾ ಕ್ರಮಗಳು ಹಾಗೂ ಈ ಎರಡು ವ್ಯಾಪಾರ ಒಪ್ಪಂದಗಳು ಭಾರತದ ಪಾಲಿಗೆ ಮಹತ್ವ ಎಂಬುದು ಅವರ ಅನಿಸಿಕೆ.

ಅಮೆರಿಕ, ಯೂರೋಪ್ ಜೊತೆ ಭಾರತದ ವ್ಯಾಪಾರ ಸಂಬಂಧ, 1991ರ ಉದಾರ ನೀತಿಗಿಂತಲೂ ದೊಡ್ಡದು: ಅರವಿಂದ್ ಪಣಗರಿಯಾ
ಅರವಿಂದ್ ಪಣಗರಿಯಾ

Updated on: Feb 05, 2026 | 2:35 PM

ನವದೆಹಲಿ, ಫೆಬ್ರುವರಿ 5: ಭಾರತ ಮತ್ತು ಅಮೆರಿಕ ನಡುವೆ ಏರ್ಪಡುತ್ತಿರುವ ಮುಕ್ತ ವ್ಯಾಪಾರ ಒಪ್ಪಂದವನ್ನು (Free Trade Agreement) ಆರ್ಥಿಕ ತಜ್ಞ ಅರವಿಂದ್ ಪಣಗರಿಯಾ (Arvind Panagariya) ಶ್ಲಾಘಿಸಿದ್ದಾರೆ. ಯೂರೋಪಿಯನ್ ಒಕ್ಕೂಟ ಮತ್ತು ಅಮೆರಿಕದ ಜೊತೆ ಭಾರತ ಮಾಡಿಕೊಂಡಿರುವ ಒಪ್ಪಂದಗಳು ಎಲ್ಲಾ ಒಪ್ಪಂದಗಳಿಗಿಂತ ಮಿಗಿಲಾಗಿರುವಂಥವು ಎಂದು 16ನೇ ಹಣಕಾಸು ಆಯೋಗದ ಛೇರ್ಮನ್ ಆದ ಡಾ. ಅರವಿಂದ್ ಪಣಗರಿಯಾ ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯಾ ಟುಡೇ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಅರವಿಂದ್ ಪಣಗರಿಯಾ, ಇಯು ಮತ್ತು ಅಮೆರಿಕದೊಂದಿಗೆ ಭಾರತ ಮಾಡಿಕೊಂಡಿರುವ ಒಪ್ಪಂದವು 1991ರ ಉದಾರ ನೀತಿಗಿಂತಲೂ (Liberalization) ದೊಡ್ಡದು ಎಂದಿದ್ದಾರೆ. 2025ರಲ್ಲಿ ಸರ್ಕಾರ ಮಾಡಿರುವ ಸುಧಾರಣೆಗಳು ಹಾಗೂ ವ್ಯಾಪಾರ ಒಪ್ಪಂದಗಳನ್ನು ಸೇರಿಸಿದರೆ ಭಾರತಕ್ಕೆ ಇದು ಬಹಳ ದೊಡ್ಡ ತಿರುವು ಕೊಟ್ಟಿರುವ ಬೆಳವಣಿಗೆ ಎಂದಿದ್ದಾರೆ.

ಇದನ್ನೂ ಓದಿ: ಭಾರತ-ಅಮೆರಿಕ ಟ್ರೇಡ್ ಡೀಲ್ ಸಲೀಸಾಗಿ ಕುದುರಿದ್ದು ಹೇಗೆ? ಅಜಿತ್ ದೋವಲ್ ಅಮೆರಿಕ ಭೇಟಿಯಲ್ಲಿ ಆಗಿದ್ದೇನು?

ಅಮೆರಿಕದ ಉತ್ಪನ್ನಗಳಿಗೆ ಶೂನ್ಯ ಟ್ಯಾರಿಫ್ ತಡೆ ಇರುವುದು ಭಾರತಕ್ಕೆ ಹಿನ್ನಡೆಯಾಗುವುದಿಲ್ಲವಾ ಎನ್ನುವ ಪ್ರಶ್ನೆಯನ್ನು ನೀತಿ ಆಯೋಗ್​ನ ಮಾಜಿ ವೈಸ್ ಛೇರ್ಮನ್ ಆದ ಡಾ. ಅರವಿಂದ್ ಪಣಗರಿಯಾ ತಳ್ಳಿಹಾಕಿದ್ದಾರೆ. ಮುಕ್ತ ವ್ಯಾಪಾರ ವಾತಾವರಣದಿಂದ ಗ್ರಾಹಕರಿಗೆ ಬಹಳ ಲಾಭವಾಗುತ್ತದೆ. ಜಾಗತಿಕ ಮಟ್ಟದ ಅತ್ಯುತ್ತಮ ಉತ್ಪನ್ನಗಳು ಭಾರತೀಯರಿಗೆ ಸುಲಭವಾಗಿ ಸಿಗಬಹುದು. ಭಾರತೀಯ ಉದ್ಯಮಗಳೂ ಕೂಡ ತಮ್ಮ ಕ್ಷಮತೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅರವಿಂದ್ ಪಣಗರಿಯಾ ಹೇಳಿದ್ದಾರೆ.

1991ರ ಹಿಂದೆ ಭಾರತದಲ್ಲಿ ಇದ್ದ ಉದ್ಯಮಗಳ ಸ್ಥಿತಿಗೂ, ಈಗ ಇರುವ ಉದ್ಯಮಗಳ ಸ್ಥಿತಿಗೂ ಎಷ್ಟು ಸುಧಾರಣೆ ಆಗಿದೆ ಎನ್ನುವ ಸಂಗತಿಯನ್ನೂ ಆರ್ಥಿಕ ತಜ್ಞರು ಎತ್ತಿ ತೋರಿಸಿದ್ದಾರೆ. ವಿಶ್ವದ ಎರಡು ಅತಿದೊಡ್ಡ ಆರ್ಥಿಕ ಶಕ್ತಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವುದು ಮತ್ತು ಭಾರತದಲ್ಲಿರುವ ಅಸಂಖ್ಯೆ ಕಾರ್ಮಿಕ ವರ್ಗ, ಇವೆರಡು ಅಂಶಗಳು 2047ರ ವಿಕಸಿತ ಭಾರತದ ಗುರಿಗೆ ದೇಶವನ್ನು ಕರೆದೊಯ್ಯಬಲ್ಲುವು ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ದಾರಿ ತಪ್ಪಿಸುತ್ತಿರುವ ರಾಹುಲ್ ಗಾಂಧಿ: ವಾಣಿಜ್ಯ ಸಚಿವರ ಟೀಕೆ

ಇತ್ತೀಚೆಗಷ್ಟೇ ಭಾರತವು 27 ರಾಷ್ಟ್ರಗಳ ಗುಂಪಾದ ಯೂರೋಪಿಯನ್ ಯೂನಿಯನ್ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಈ ಡೀಲ್​ನಲ್ಲಿ ಹೆಚ್ಚಿನ ಭಾರತೀಯ ಸರಕುಗಳಿಗೆ ಇಯು ಶೂನ್ಯ ಟ್ಯಾರಿಫ್ ಆಫರ್ ಮಾಡುತ್ತದೆ. ಇನ್ನು, ಅಮೆರಿಕದ ಜೊತೆ ಭಾರತದ ಒಪ್ಪಂದಕ್ಕೆ ಇನ್ನೂ ಸಹಿ ಬಿದ್ದಿಲ್ಲ. ಆದರೆ, ಟ್ರಂಪ್ ಮತ್ತು ಮೋದಿ ಈ ಒಪ್ಪಂದವನ್ನು ಘೋಷಿಸಿದ್ದಾರೆ. ಇದರಲ್ಲಿ ಅಮೆರಿಕವು ಭಾರತದ ಸರಕುಗಳಿಗೆ ಟ್ಯಾರಿಫ್ ಅನ್ನು ಶೇ. 50ರಿಂದ ಶೇ 18ಕ್ಕೆ ಇಳಿಸುತ್ತದೆ. ಅಮೆರಿಕದ ಹೆಚ್ಚಿನ ಸರಕುಗಳಿಗೆ ಭಾರತ ಶೂನ್ಯ ಟ್ಯಾರಿಫ್ ಹಾಕುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ