Infosys Moonlighting: ಬೇರೆ ಕಂಪನಿಗಳ ಪರ ಕೆಲಸ ಮಾಡಲು ಇನ್ಫೋಸಿಸ್ ಷರತ್ತುಬದ್ಧ ಅನುಮತಿ
ಬೇರೆ ಕಂಪನಿಗಳ ಪರ ಉದ್ಯೋಗ ಮಾಡಲು (ಫ್ರೀಲ್ಯಾನ್ಸಿಂಗ್) ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಷರತ್ತುಬದ್ಧ ಅನುಮತಿ ನೀಡಿದೆ.
ನವದೆಹಲಿ: ಮೂನ್ಲೈಟಿಂಗ್ (Moonlighting) ಆರೋಪದಲ್ಲಿ ಹಲವು ಉದ್ಯೋಗಿಗಳನ್ನು ಟೆಕ್ ಕಂಪನಿ ವಿಪ್ರೋ (Wipro) ಇತ್ತೀಚೆಗೆ ವಜಾ ಮಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಮೂನ್ಲೈಟಿಂಗ್ ಪರ, ವಿರೋಧ ಚರ್ಚೆಗಳೂ ನಡೆದಿದ್ದವು. ಈ ಬೆಳವಣಿಗೆಗಳ ಮಧ್ಯೆಯೇ ಬೇರೆ ಕಂಪನಿಗಳ ಪರ ಉದ್ಯೋಗ ಮಾಡಲು (gig work ಅಥವಾ ಫ್ರೀಲ್ಯಾನ್ಸಿಂಗ್) ಇನ್ಫೋಸಿಸ್ (Infosys) ತನ್ನ ಉದ್ಯೋಗಿಗಳಿಗೆ ಷರತ್ತುಬದ್ಧ ಅನುಮತಿ ನೀಡಿದೆ.
ಕೆಲಸದ ಅವಧಿಯ ಬಳಿಕ ಬೇರೆ ಕಂಪನಿಗಳ ಪರ ಕೆಲಸ ಮಾಡಲು ಇಚ್ಛಿಸುವ ಉದ್ಯೋಗಿಗಳು ತಮ್ಮ ಮ್ಯಾನೇಜರ್ಗಳಿಂದ ಮುಂಚಿತವಾಗಿ ಅನುಮತಿ ಪಡೆದಿರಬೇಕು. ಹೀಗೆ ಮಾಡುವ ಕೆಲಸವು ಕಂಪನಿ ಅಥವಾ ಕಂಪನಿಯ ಗ್ರಾಹಕರ ಹಿತಾಸಕ್ತಿಗೆ ವಿರುದ್ಧವಾಗಿರಬಾರದು ಎಂದು ಇನ್ಫೋಸಿಸ್ ಷರತ್ತು ವಿಧಿಸಿದೆ. ಬೇರೆ ಕಂಪನಿ ಪರ ಕೆಲಸ ನಿರ್ವಹಿಸಲು ಆಸಕ್ತಿಯುಳ್ಳ ಉದ್ಯೋಗಿಗಳಿಗೆ ವಿಧಿಸಲಾಗಿರುವ ಷರತ್ತುಗಳು ಮತ್ತಿ ನಿಬಂಧನೆಗಳ ವಿಸ್ತೃತ ವಿವರಗಳನ್ನೊಳಗೊಂಡ ಸಂದೇಶವನ್ನು ಉದ್ಯೋಗಿಗಳಿಗೆ ಕಳುಸಹಿದೆ.
ಇದನ್ನೂ ಓದಿ: Wipro: ಕೇವಲ 10 ನಿಮಿಷಗಳಲ್ಲಿ ವಿಪ್ರೋದ 20 ಮಂದಿ ಉನ್ನತ ಸಿಬ್ಬಂದಿ ವಜಾ: ರಿಷದ್ ಪ್ರೇಮ್ ಜಿ
ಈ ಕ್ರಮವು ಕೆಲವು ಸವಾಲುಗಳನ್ನು ಎದುರಿಸಲು ಕಂಪನಿಗೆ ಸಹಾಯ ಮಾಡಲಿದೆ. ಯಾಕೆಂದರೆ, ಇದು ಉದ್ಯೋಗಿಗಳಿಗೆ ಹೆಚ್ಚುವರಿ ಗಳಿಕೆಯ ಮೂಲವನ್ನು ಬಳಸಿಕೊಳ್ಳಲು ಅವಕಾಶ ನೀಡುವುದರ ಜತೆಗೆ ತಂತ್ರಜ್ಞಾನಕ್ಕೆ ಸಂಬಂಧಿಸಿ ತಮ್ಮಿಷ್ಟದ ಕೆಲಸ ಮಾಡಲು ಅವರಿಗೆ ಅನುವು ಮಾಡಿಕೊಡಲಿದೆ. ಇದರಿಂದ ಕಂಪನಿಗೂ ಪ್ರಯೋಜನವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಆದಾಗ್ಯೂ, ಬೇರೆ ಕಂಪನಿಗಳ ಪರ ಕೆಲಸ ಮಾಡಲು ನೀಡಿರುವ ಈ ಅನುಮತಿಯು ಮೂನ್ಲೈಟಿಂಗ್ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬ ಬಗ್ಗೆ ಇನ್ಫೋಸಿಸ್ ಹೆಚ್ಚಿನ ವಿವರ ನೀಡಿಲ್ಲ.
300 ಉದ್ಯೋಗಿಗಳನ್ನು ವಜಾ ಮಾಡಿದ್ದ ವಿಪ್ರೋ:
ಮೂನ್ಲೈಟಿಂಗ್ ಹಿನ್ನೆಲೆಯಲ್ಲಿ 300 ಉದ್ಯೋಗಿಗಳನ್ನು ಸೆಪ್ಟೆಂಬರ್ನಲ್ಲಿ ವಿಪ್ರೋ ವಜಾಗೊಳಿಸಿತ್ತು. ಕೆಲವು ತಿಂಗಳುಗಳಿಂದ ಈ ಉದ್ಯೋಗಿಗಳು ತಮ್ಮ ಕಂಪನಿ ಜತೆಗೆ ಇತರೆ ಕಂಪನಿಗಳಿಗಾಗಿ ಕೆಲಸ ಮಾಡುತ್ತಿರುವ ವಿಷಯ ಬೆಳಕಿಗೆ ಬಂದ ಕಾರಣ ಕ್ರಮ ಕೈಗೊಂಡಿರುವುದಾಗಿ ವಿಪ್ರೋ ಹೇಳಿತ್ತು. ಅಪ್ರಾಮಾಣಿಕ ನಡವಳಿಕೆ ತೋರಿದ 20 ಮಂದಿ ಉನ್ನತ ಸಿಬ್ಬಂದಿಯನ್ನು ಕಂಪನಿಯಿಂದ ವಜಾ ಮಾಡುವ ಬಗ್ಗೆ ಕೇವಲ 10 ನಿಮಿಷಗಳಲ್ಲಿ ನಿರ್ಧಾರ ಕೈಗೊಂಡಿದ್ದೆವು ಎಂದು ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್ ಜಿ ಗುರುವಾರವಷ್ಟೇ ಬಹಿರಂಗಪಡಿಸಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ