ನವದೆಹಲಿ, ಅಕ್ಟೋಬರ್ 13: ಭಾರತದ ಪ್ರಮುಖ ಐಟಿ ಕಂಪನಿಗಳಾದ ಇನ್ಫೋಸಿಸ್ ಮತ್ತು ಎಚ್ಸಿಎಲ್ ಟೆಕ್ನಾಲಜೀಸ್ ಸಂಸ್ಥೆಗಳು ತಮ್ಮ ಲಾಭದ ವರದಿ (quarterly statement) ಪ್ರಕಟಿಸಿವೆ. ಶಿವ್ ನಾದರ್ ಮಾಲಕತ್ವದ ಎಚ್ಸಿಎಲ್ ಟೆಕ್ನಾಲಜೀಸ್ ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ನಲ್ಲಿ (2023-24ರ ಜುಲೈನಿಂದ ಸೆಪ್ಟೆಂಬರ್ ಅವಧಿ) 3,832 ಕೋಟಿ ರೂ ನಿವ್ವಳ ಲಾಭ ತೋರಿಸಿದೆ. ಇದು ಕಳೆದ ವರ್ಷದ ಇದೇ ಕ್ವಾರ್ಟರ್ನಲ್ಲಿ ಗಳಿಸಿದ್ದಕ್ಕಿಂತ ಶೇ. 9.8ರಷ್ಟು ನಿವ್ವಳ ಲಾಭ ಹೆಚ್ಚಳ ಕಂಡಿದೆ. ಇನ್ನು, ಇನ್ಫೋಸಿಸ್ ಸಂಸ್ಥೆಯ ನಿವ್ವಳ ಲಾಭದಲ್ಲಿ ಶೇ. 3.2ರಷ್ಟು ಆಗಿದೆ. ಇದರ ಪರಿಣಾಮವಾಗಿ ಷೇರುಪೇಟೆಯಲ್ಲಿ ಎಚ್ಸಿಎಲ್ ಷೇರುಗಳಿಗೆ ಬೇಡಿಕೆ ಹೆಚ್ಚಿದರೆ, ಇನ್ಫೋಸಿಸ್ ಷೇರುಕುಸಿತ ಇನ್ನಷ್ಟು ವೇಗ ಪಡೆದುಕೊಂಡಿದೆ.
ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಎನಿಸಿರುವ ಇನ್ಫೋಸಿಸ್ ಜುಲೈನಿಂದ ಸೆಪ್ಟೆಂಬರ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ 6,212 ಕೋಟಿ ರೂ ನಿವ್ವಳ ಲಾಭ ಪಡೆದಿದೆ. ಕಳೆದ ವರ್ಷದ ಇದೇ ಕ್ವಾರ್ಟರ್ನಲ್ಲಿ ಅದರ ನಿವ್ವಳ ಲಾಭ 6,021 ಕೋಟಿ ರೂ ಇತ್ತು. ಈ ಬಾರಿ ಶೇ. 3.2ರಷ್ಟು ಹೆಚ್ಚಾಗಿದೆ. ಆದರೆ, ಇನ್ಫೋಸಿಸ್ಗೆ ನಿವ್ವಳ ಲಾಭಕ್ಕಿಂತ ಆದಾಯದಲ್ಲಿ ಹೆಚ್ಚು ವೃದ್ಧಿ ಕಂಡಿದೆ.
ಇದನ್ನೂ ಓದಿ: ಸೆಪ್ಟೆಂಬರ್ನಲ್ಲಿ ಭಾರತದ ರೀಟೇಲ್ ಹಣದುಬ್ಬರ ಶೇ. 5.02ಕ್ಕೆ ಇಳಿಕೆ; 3 ತಿಂಗಳಲ್ಲೇ ಕನಿಷ್ಠ ದರ
ಕಳೆದ ವರ್ಷದ ಕ್ವಾರ್ಟರ್ನಲ್ಲಿ 36,538 ಕೋಟಿ ರೂ ಆದಾಯ ಹೊಂದಿದ್ದ ಇನ್ಫೋಸಿಸ್ ಈ ವರ್ಷ ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ 38,994 ಕೋಟಿ ರೂ ಗಿಟ್ಟಿಸಿದೆ. ಅಂದರೆ ಆದಾಯದಲ್ಲಿ ಶೇ. 6.7 ರಷ್ಟು ಹೆಚ್ಚಳವಾಗಿದೆ.
ತ್ರೈಮಾಸಿಕ ವರದಿ ಪ್ರಕಟದ ಜೊತೆಗೆ ಇನ್ಫೋಸಿಸ್ ತನ್ನ ಷೇರುದಾರರಿಗೆ ಮಧ್ಯಂತರ ಲಾಭಾಂಶವನ್ನೂ ಘೋಷಿಸಿದೆ. ಒಂದು ಈಕ್ವಿಟಿ ಷೇರಿಗೆ 18 ರೂ ಇಂಟೆರಿಮ್ ಡಿವಿಡೆಂಡ್ ಎಂದು ನಿಗದಿ ಮಾಡಿದೆ. ಇದರ ರೆಕಾರ್ಡ್ ದಿನ ಅಕ್ಟೋಬರ್ 25 ಎಂದಿದ್ದು, ನವೆಂಬರ್ 6ಕ್ಕೆ ಪಾವತಿ ಮಾಡಲಾಗುತ್ತದೆ.
ಕಳೆದ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಲಾಭದಂತೆ ಆದಾಯದಲ್ಲೂ ಎಚ್ಸಿಎಲ್ ಟೆಕ್ನಾಲಜೀಸ್ ಭರ್ಜರಿ ಏರಿಕೆ ಕಂಡಿದೆ. ಇದರ ಬೆನ್ನಲ್ಲೇ ಪ್ರತೀ ಈಕ್ವಿಟಿ ಷೇರಿಗೆ 12 ರೂ ಮಧ್ಯಂತರ ಡಿವಿಡೆಂಡ್ ಘೋಷಿಸಿದೆ.
ಇದನ್ನೂ ಓದಿ: Pranjali Awasthi: 16 ವರ್ಷದ ಬಾಲಕಿ ಪ್ರಾಂಜಲಿ ಅವಸ್ಥಿ ಬಳಿ 100 ಕೋಟಿ ರೂ ಮೌಲ್ಯದ ಕಂಪನಿ
ನಿನ್ನೆ ತ್ರೈಮಾಸಿಕ ವರದಿ ಪ್ರಕಟವಾದ ಬೆನ್ನಲ್ಲೇ ಇಂದು (ಅ. 13) ಷೇರುಪೇಟೆಯಲ್ಲಿ ಎಚ್ಸಿಎಲ್ ಟೆಕ್ನಾಲಜೀಸ್ ಷೇರಿಗೆ ಭರ್ಜರಿ ಡಿಮ್ಯಾಂಡ್ ಬಂದಿದೆ. ಇವತ್ತು ಬೆಳಗ್ಗೆಯಿಂದ ಅದರ ಷೇರುಬೆಲೆ ಶೇ. 3ರಷ್ಟು ಹೆಚ್ಚಳ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಅದರ ಷೇರು 1,258 ರೂಗೆ ಬಿಕರಿಯಾಗುತ್ತಿತ್ತು. ಕಳೆದ ಒಂದು ವರ್ಷದಿಂದಲೂ ಎಚ್ಸಿಎಲ್ ಷೇರು ಭರ್ಜರಿ ಏರಿಕೆ ಕಾಣುತ್ತಿದೆ. ಈಗ ಅದು ಇನ್ನೂ ವೇಗ ಪಡೆದುಕೊಳ್ಳಬಹುದು.
ಅತ್ತ, ಇನ್ಫೋಸಿಸ್ನ ನಿವ್ವಳ ಆದಾಯದಲ್ಲಿ ಗಮನಾರ್ಹ ಹೆಚ್ಚಳವಾಗದ ಹಿನ್ನೆಲೆಯಲ್ಲಿ ಅದರ ಷೇರಿಗೆ ಬೇಡಿಕೆ ಕುಗ್ಗಿದಂತೆ ಕಾಣುತ್ತಿದೆ. ಇವತ್ತು ಬೆಳಗಿನ ವಹಿವಾಟಿನಲ್ಲಿ ಇನ್ಫೋಸಿಸ್ ಷೇರುಬೆಲೆ 40 ರೂಗಿಂತ ಹೆಚ್ಚು ಮೊತ್ತದಷ್ಟು ಕುಸಿತ ಕಂಡಿದೆ. ಈಗ ಅದರ ಷೇರುಬೆಲೆ 1,422ರೂಗೆ ಬಂದಿಳಿದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ