ಲಕ್ಷ ಕೋಟಿ ರೂ ಮೊತ್ತದ ಅನ್​ಕ್ಲೇಮ್ಡ್ ಷೇರುಗಳ ವಿಲೇವಾರಿಗೆ ಹೊಸ ಪೋರ್ಟಲ್

Ministry of Corporate Affairs' IEPFA portal to unlock ₹1 lakh crore in unclaimed shares: ಬೇರೆ ಬೇರೆ ಕಾರಣಗಳಿಗೆ ಕ್ಲೇಮ್ ಆಗದೇ ಇರುವ ಷೇರುಗಳು ಹಾಗು ಡಿವಿಡೆಂಡ್​ಗಳನ್ನು ಪಡೆಯುವುದು ಬಹಳ ಪ್ರಯಾಸದ ಕೆಲಸ. ಸರ್ಕಾರ ಈಗ ಈ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ. ಪ್ರತ್ಯೇಕ ಏಕೀಕೃತ ಪೋರ್ಟಲ್ ಆರಂಭಿಸುತ್ತಿದೆ. ಕಂಪನಿಗಳು ಹಾಗೂ ಹೂಡಿಕೆದಾರರಿಗೆ ಮಾರ್ಗ ಸಲೀಸು ಮಾಡಿಕೊಡುತ್ತದೆ ಈ ಹೊಸ ಪ್ಲಾಟ್​ಫಾರ್ಮ್.

ಲಕ್ಷ ಕೋಟಿ ರೂ ಮೊತ್ತದ ಅನ್​ಕ್ಲೇಮ್ಡ್ ಷೇರುಗಳ ವಿಲೇವಾರಿಗೆ ಹೊಸ ಪೋರ್ಟಲ್
ಷೇರು

Updated on: Aug 05, 2025 | 1:20 PM

ನವದೆಹಲಿ, ಆಗಸ್ಟ್ 5: ಮೂಲ ಹೂಡಿಕೆದಾರರು ಮೃತಪಟ್ಟಿದ್ದೂ ಸೇರಿದಂತೆ ವಿವಿಧ ಕಾರಣಗಳಿಗೆ ಕ್ಲೇಮ್ ಆಗದ ಷೇರುಗಳು, ಡಿವಿಡೆಂಡುಗಳನ್ನು ಅವುಗಳ ವಾರಸುದಾರರಿಗೆ ತಲುಪಿಸುವ ಕಾರ್ಯಕ್ಕೆ ಸರ್ಕಾರ ಗಮನ ಕೊಟ್ಟಿದೆ. ಈ ಸಂಬಂಧ ಏಕೀಕೃತ ಪೋರ್ಟಲ್​ವೊಂದನ್ನು (Integrated Portal) ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಡೆಪಾಸಿಟರಿಗಳು, ಪಬ್ಲಿಕ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ ಸಿಸ್ಟಂ ಇತ್ಯಾದಿ ವಿವಿಧ ಭಾಗಿದಾರರನ್ನು (stakeholders) ಈ ಪೋರ್ಟಲ್​ನಲ್ಲಿ ಮಿಳಿತಗೊಳಿಸಲಾಗುತ್ತದೆ. ಇದರಿಂದ ಹೂಡಿಕೆದಾರರು (investors) ಮತ್ತು ಕಂಪನಿಗಳಿಗೆ ಷೇರುಗಳನ್ನು ಕ್ಲೇಮ್ ಮಾಡುವ ಪ್ರಕ್ರಿಯೆ ಸಲೀಸಾಗುವ ನಿರೀಕ್ಷೆ ಇದೆ.

ಕಳೆದ ವಾರ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನೀಡಿರುವ ಪತ್ರಿಕಾ ಪ್ರಕಟಣೆ ಪ್ರಕಾರ ಐಇಪಿಎಫ್​ಎ ಪ್ರಾಧಿಕಾರವು ಈ ಏಕೀಕೃತ ಪೋರ್ಟಲ್​ನ ಕೊನೆಯ ಹಂತದ ಪರೀಕ್ಷೆ ನಡೆಸುತ್ತಿದೆ.

ಐಇಪಿಎಫ್​ಎ ಬಳಿ ಕ್ಲೇಮ್ ಆಗದೇ ಇರುವ ಷೇರುಗಳು ಮತ್ತು ಡಿವಿಡೆಂಡ್​ಗಳ ಮೌಲ್ಯ ಒಂದು ಲಕ್ಷ ಕೋಟಿ ರೂಗೂ ಅಧಿಕ ಎನ್ನಲಾಗಿದೆ. ಡಾಕ್ಯುಮೆಂಟೇಶನ್ ಇಲ್ಲದಿರುವುದು, ಕಂಪನಿಗಳು ಸರಿಯಾದ ವಿವರ ತುಂಬದಿರುವುದು ಇವೇ ಮುಂತಾದ ಕಾರಣಕ್ಕೆ ಈ ಷೇರುಗಳು ಹೂಡಿಕೆದಾರರಿಗೆ ತಲುಪದೇ ಐಇಪಿಎಫ್ ಕಾರ್ಪಸ್​ನಲ್ಲೇ ಶೇಖರಣೆ ಆಗಿ ಉಳಿದಿವೆ ಎನ್ನಲಾಗಿದೆ.

ಇದನ್ನೂ ಓದಿ: ಫ್ರಂಟ್ ರನ್ನಿಂಗ್ ಮಾಡುತ್ತಿದ್ದ ಮಾಜಿ ಎಕ್ಸಿಸ್ ಎಂಎಫ್ ಮ್ಯಾನೇಜರ್ ವೀರೇಶ್ ಜೋಶಿ ಬಂಧನ; ಏನಿದು ಫ್ರಂಟ್ ರನ್ನಿಂಗ್?

ಈ ನಿಟ್ಟಿನಲ್ಲಿ ವಿವಿಧ ಸರ್ವಿಸ್ ರಿಕ್ವೆಸ್ಟ್ ನಂಬರ್​ಗಳನ್ನು (ಎಸ್​ಆರ್​ಎನ್) ನಿಗದಿತ ಎಕ್ಸೆಲ್ ಟೆಂಪ್ಲೇಟ್​ಗಳೊಂದಿಗೆ ತಡಮಾಡದೆ ಅಪ್​ಲೋಡ್ ಮಾಡಬೇಕೆಂದು ಕಂಪನಿಗಳಿಗೆ ಸೂಚನೆ ನೀಡಲಾಗಿದೆ.

ಸುಲಭಗೊಳ್ಳುತ್ತಿರುವ ಕ್ಲೇಮ್ ಪ್ರಕ್ರಿಯೆ

ಈಗ ಕ್ಲೇಮ್ ಆಗದೇ ಉಳಿದಿರುವ ಷೇರು ಮತ್ತು ಡಿವಿಡೆಂಡ್​ಗಳನ್ನು ಪಡೆಯುವ ಪ್ರಕ್ರಿಯೆ ಸರಳಗೊಳಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಇರುವ ಎಲ್ಲಾ ಮಾರ್ಗಗಳನ್ನೂ ಒಂದೇ ಸಾಲಿಗೆ ತರಲಾಗುತ್ತಿದೆ. ವಿವಿಧ ಕಡೆ ಅಲೆದಾಡುವ ಬದಲು ಒಂದೇ ಪ್ಲಾಟ್​ಫಾರ್ಮ್ನಲ್ಲಿ ಪ್ರಕ್ರಿಯೆ ಇರುತ್ತದೆ.

ಐಇಪಿಎಫ್​ಎ ಅಥವಾ ಎಂಸಿಎ21 ಪ್ಲಾಟ್​ಫಾರ್ಮ್​ನಲ್ಲಿ ನೊಂದಾಯಿಸಿಕೊಂಡು ಆ ಪೋರ್ಟಲ್​ನಲ್ಲಿ ಲಾಗಿನ್ ಆಗಬೇಕು. ನಂತರದ ಪ್ರಕ್ರಿಯೆಗಳು ಸುಲಭವೇ ಇರುತ್ತದೆ. ಹೂಡಿಕೆದಾರರು ಮತ್ತು ಕಂಪನಿಗಳಿಗೆ ಈ ಕಾರ್ಯದಲ್ಲಿ ನೆರವಾಗಲು ಒಂದು ಪ್ರತ್ಯೇಕ ಕಾಲ್ ಸೆಂಟರ್ ಅನ್ನೂ ಆರಂಭಿಸಲಾಗುತ್ತಿದೆ.

ಇದನ್ನೂ ಓದಿ: ಭಾರತದಲ್ಲಿ ಅನುಮೋದಿತ ಸೆಮಿಕಂಡಕ್ಟರ್ ಯೋಜನೆಗಳಿಂದ 2,400 ಕೋಟಿ ಚಿಪ್ ತಯಾರಿಕೆ ಸಾಧ್ಯ; ಬೇರೆ ದೇಶಗಳಿಗೆ ಹೋಲಿಸಿದರೆ?

ಅನ್​ಕ್ಲೇಮ್ಡ್ ಷೇರುಗಳನ್ನು ಪಡೆಯಲು ಈ ಹಿಂದೆ ಇದ್ದ ಪ್ರಕ್ರಿಯೆ ಹೇಗೆ?

ಈ ಮುಂಚೆ ಒಂದು ಸಣ್ಣ ಮೊತ್ತದ ಅನ್​ಕ್ಲೇಮ್ಡ್ ಷೇರುಗಳನ್ನು ಪಡೆಯಲು ಸಾಕಷ್ಟು ಪ್ರಯಾಸ ಪಡಬೇಕಿತ್ತು. ದಾಖಲೆಗಳ ಸಲ್ಲಿಕೆಯಿಂದ ಹಿಡಿದು ನಾನಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿತ್ತು. ಕಂಪನಿಯ ಆರ್​ಟಿಎಯನ್ನು ಸಂಪರ್ಕಿಸಿ ಷೇರುಗಳ ಮಾಹಿತಿಯನ್ನು ದೃಢಪಡಿಸುವುದು ಇತ್ಯಾದಿ ವಿವಿಧ ಪ್ರಕ್ರಿಯೆಗಳಿಗೆ ಬಹಳ ಸಮಯ ಹಿಡಿಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ