AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPI transaction Fee: ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಆರಂಭಿಸಿದ ಐಸಿಐಸಿಐ ಬ್ಯಾಂಕ್

ICICI bank charging phonepe, google pay on UPI transactions: ಐಸಿಐಸಿಐ ಬ್ಯಾಂಕು ಪ್ರತೀ ಯುಪಿಐ ವಹಿವಾಟಿಗೆ 10 ರೂವರೆಗೆ ಶುಲ್ಕ ವಿಧಿಸಲು ಆರಂಭಿಸಿದೆ. ಗೂಗಲ್ ಪೇ, ಫೋನ್​ಪೇ ಇತ್ಯಾದಿ ಪೇಮೆಂಟ್ ಅಗ್ರಿಗೇಟರ್​ಗಳಿಗೆ ಈ ಶುಲ್ಕ ಹಾಕಲಾಗುತ್ತಿದೆ. ಐಸಿಐಸಿಐ ಬ್ಯಾಂಕಲ್ಲಿ ಎಸ್​ಕ್ರೋ ಅಕೌಂಟ್ ಇದ್ದರೆ ನೂರು ರೂಗೆ 2 ರೂ ಶುಲ್ಕ ಹಾಕುತ್ತದೆ. ಎಸ್​ಕ್ರೋ ಅಕೌಂಟ್ ಇಲ್ಲದಿದ್ದರೆ 4 ಮೂಲಾಂಕಗಳಷ್ಟು ಶುಲ್ಕ ಇರುತ್ತದೆ.

UPI transaction Fee: ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಆರಂಭಿಸಿದ ಐಸಿಐಸಿಐ ಬ್ಯಾಂಕ್
ಯುಪಿಐ ವಹಿವಾಟು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 05, 2025 | 7:47 PM

Share

ನವದೆಹಲಿ, ಆಗಸ್ಟ್ 5: ದೇಶಾದ್ಯಂತ ಯುಪಿಐ ವಹಿವಾಟು (UPI transaction) ವ್ಯಾಪಕವಾಗಿ ನಡೆಯುತ್ತಿರುವಂತೆಯೇ ಈಗ ತಮ್ಮ ಹೊರೆ ತಗ್ಗಿಸಲು ಬ್ಯಾಂಕುಗಳು ಒಂದೊಂದಾಗಿ ಶುಲ್ಕ ಹೇರಲು ಆರಂಭಿಸುತ್ತಿವೆ. ಯೆಸ್ ಬ್ಯಾಂಕ್ ಮತ್ತು ಎಕ್ಸಿಸ್ ಬ್ಯಾಂಕ್ ಬಳಿಕ ಈಗ ಐಸಿಐಸಿಐ ಬ್ಯಾಂಕು ಪ್ರತೀ ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುತ್ತಿದೆ. ಸದ್ಯ ಇದು ಪೇಟಿಎಂ, ಗೂಗಲ್ ಪೇ, ಫೋನ್​ಪೇನಂತಹ ಪೇಮೆಂಟ್ ಅಗ್ರಿಗೇಟರ್​​ಗಳಿಗೆ ವಿಧಿಸುತ್ತಿರುವ ಶುಲ್ಕವಾಗಿದೆ. ಮುಂದಿನ ದಿನಗಳಲ್ಲಿ ಪೇಮೆಂಟ್ ಅಗ್ರಿಗೇಟರ್​ಗಳು ಈ ಹೊರೆಯನ್ನು ಗ್ರಾಹಕರಿಗೆ ಹಾಕುವ ಸಂಭವ ಇಲ್ಲದಿಲ್ಲ.

ಐಸಿಐಸಿಐ ಬ್ಯಾಂಕ್​ನಿಂದ ಎಷ್ಟು ಶುಲ್ಕ?

ವರ್ತಕರ ಯುಪಿಐ ವಹಿವಾಟುಗಳನ್ನು ನಿರ್ವಹಿಸುವ ಪೇಮೆಂಟ್ ಅಗ್ರಿಗೇಟರ್​ಗಳಿಗೆ ಐಸಿಐಸಿಐ ಬ್ಯಾಂಕ್ ಆಗಸ್ಟ್ 2ರಿಂದ ಶುಲ್ಕ ವಿಧಿಸುತ್ತಿದೆ. ಒಂದು ವಹಿವಾಟಿಗೆ 2ರಿಂದ 4 ಮೂಲಾಂಕಗಳಷ್ಟು ಶುಲ್ಕ ವಿಧಿಸುತ್ತದೆ. ಐಸಿಐಸಿಐ ಬ್ಯಾಂಕ್​ನಲ್ಲಿ ವಿಶೇಷ ಎಸ್​​ಕ್ರೋ ಅಕೌಂಟ್ (Escrow account) ಹೊಂದಿರುವ ಅಗ್ರಿಗೇಟರ್​ಗಳಿಗೆ 2 ಮೂಲಾಂಕಗಳಷ್ಟು ಶುಲ್ಕ ಹಾಕಲಾಗುತ್ತಿದೆ. ಅಂದರೆ, ಪ್ರತೀ 100 ರೂ ಹಣ ಪಾವತಿಗೆ 2 ರೂ ಶುಲ್ಕ ಇರುತ್ತದೆ. ಶುಲ್ಕ ಮಿತಿ 6 ರೂ ಇದೆ.

ಇದನ್ನೂ ಓದಿ: ಲಕ್ಷ ಕೋಟಿ ರೂ ಮೊತ್ತದ ಅನ್​ಕ್ಲೇಮ್ಡ್ ಷೇರುಗಳ ವಿಲೇವಾರಿಗೆ ಹೊಸ ಪೋರ್ಟಲ್

ಇನ್ನು, ಎಸ್​ಕ್ರೋ ಅಕೌಂಟ್ ಹೊಂದಿಲ್ಲದ ಪೇಮೆಂಟ್ ಅಗ್ರಿಗೇಟರ್​ಗಳಿಗೆ 4 ಮೂಲಾಂಕಗಳಷ್ಟು ಶುಲ್ಕ ಹಾಕುತ್ತಿದೆ ಐಸಿಐಸಿಐ ಬ್ಯಾಂಕ್. ಇಲ್ಲಿ ಶುಲ್ಕ ಮಿತಿ 10 ರೂ ಇದೆ. ಅಂದರೆ, ಎಸ್ಕ್ರೋ ಅಕೌಂಟ್ ಇಲ್ಲದ ಪೇಮೆಂಟ್ ಅಗ್ರಿಗೇಟರ್​ಗಳು ಪ್ರತೀ ವಹಿವಾಟಿಗೆ 10 ರೂವರೆಗೆ ಶುಲ್ಕ ತೆರಬೇಕಾಗುತ್ತದೆ.

ಗಮನಿಸಬೇಕಾದ ಸಂಗತಿ ಎಂದರೆ, ಯುಪಿಐ ಪೇಮೆಂಟ್ ಸ್ವೀಕರಿಸುವ ವರ್ತಕರು ಐಸಿಐಸಿಐ ಬ್ಯಾಂಕ್​ನಲ್ಲಿ ಅಕೌಂಟ್ ಹೊಂದಿದ್ದು, ಅ ಖಾತೆಗೆ ಸೆಟಲ್ಮೆಂಟ್ ಸ್ವೀಕರಿಸುತ್ತಿದ್ದರೆ ಆಗ ಈ ಶುಲ್ಕದಿಂದ ವಿನಾಯಿತಿ ಸಿಗುತ್ತದೆ.

ಬ್ಯಾಂಕುಗಳು ಯಾಕೆ ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸುತ್ತಿವೆ?

ಯುಪಿಐ ವಹಿವಾಟು ಒಂದು ತಿಂಗಳಲ್ಲಿ 25 ಲಕ್ಷ ಕೋಟಿ ರೂ ಮೊತ್ತದಷ್ಟಾಗಿದೆ. ಜುಲೈನಲ್ಲಿ ದಾಖಲೆಯ 1,947 ಕೋಟಿ ವಹಿವಾಟು ನಡೆದಿವೆ. ಒಂದು ದಿನದಲ್ಲಿ 70 ಕೋಟಿ ಸಂಖ್ಯೆಯಷ್ಟು ವಹಿವಾಟು ಆಗುತ್ತಿದೆ. ಇಷ್ಟು ಪ್ರಮಾಣದ ಯುಪಿಐ ವಹಿವಾಟುಗಳಿಗೆ ಅನುವು ಮಾಡಿಕೊಡುವಂತಹ ಇನ್​ಫ್ರಾಸ್ಟ್ರಕ್ಚರ್ ಅನ್ನು ನಿರ್ಮಿಸುವುದಕ್ಕೆ ವೆಚ್ಚವಾಗುತ್ತದೆ. ಜೊತೆಗೆ ಎನ್​ಪಿಸಿಐನ ಯುಪಿಐ ಸ್ವಿಚ್ ಸೌಕರ್ಯ ಪಡೆಯಲು ಶುಲ್ಕ ನೀಡಬೇಕಾಗುತ್ತದೆ.

ಇದನ್ನೂ ಓದಿ: ಜುಲೈನಲ್ಲಿ ಒಟ್ಟು ಜಿಎಸ್​ಟಿ 1.96 ಲಕ್ಷ ಕೋಟಿ ರೂ, ನಿವ್ವಳ ಸಂಗ್ರಹ 1.69 ಲಕ್ಷ ಕೋಟಿ ರೂ

ಈ ವೆಚ್ಚಗಳನ್ನು ಪೇಮೆಂಟ್ ಅಗ್ರಿಗೇಟರ್​ಗಳು ಅಥವಾ ಫಿನ್​ಟಕೆಕ್ ಕಂಪನಿಗಳು ಮತ್ತು ಬ್ಯಾಂಕುಗಳು ಭರಿಸುತ್ತಿವೆ. ಈಗ ಬ್ಯಾಂಕುಗಳು ತಮ್ಮ ಹೊರೆಯನ್ನು ಪೇಮೆಂಟ್ ಅಗ್ರಿಗೇಟರ್​ಗಳಿಗೆ ವರ್ಗಾಯಿಸಲು ಯತ್ನಿಸುತ್ತಿವೆ. ಈಗ ಈ ಅಗ್ರಿಗೇಟರ್​ಗಳು ಈ ಹೊರೆಯನ್ನು ಹೇಗೆ ನಿಭಾಯಿಸುತ್ತವೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ